ಕಂಪ್ಲಿ : ಸಮಾಜದ ಅಂಕು- ಡೊಂಕುಗಳನ್ನು ತಿದ್ದಲು ಪ್ರಮುಖ ಅಸ್ತ್ರ ಶಿಕ್ಷಣ ಎಂಬುದನ್ನು ಅರಿತಿದ್ದ ಸಾವಿತ್ರಿ ಬಾಯಿ ಫುಲೆ ಅವರು ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟ ಮೊದಲ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕರು ಎಂದು ಮುಖ್ಯಗುರು ಹನುಮಂತಪ್ಪ ಹೇಳಿದರು.
ತಾಲೂಕಿನ ನಂ. 10 ಮುದ್ದಾಪುರ ಗ್ರಾಪಂ ವ್ಯಾಪ್ತಿ (ಸಕ್ಕರೆ ಕಾರ್ಖಾನೆ ಬಳಿ) ಯ ಪ್ರಭು ಕ್ಯಾಂಪಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಷಕರ ಸಭೆ ಹಾಗೂ ಸಾವಿತ್ರಿ ಬಾಯಿಪುಲೆ ಜಯಂತ್ಯೋತ್ಸವದಲ್ಲಿ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರು ಅಂದೇ ಭದ್ರ ಬುನಾದಿ ಹಾಕಿದವರು. ಅವರ ಶ್ರಮವೇ ಇಂದು ಹೆಣ್ಣಮಕ್ಕಳು ಉನ್ನತ ವ್ಯಾಸಂಗ ಪಡೆದು, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಇದರ ಜೊತೆಗೆ ಸಾವಿತ್ರಿಬಾಯಿಪುಲೆ ಸೇರಿದಂತೆ ಇತರೆ ಸಾಧಕರ ಜೀವನ ಚರಿತ್ರೆಯನ್ನು ಅರಿತುಕೊಳ್ಳಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ, ಸಹ ಶಿಕ್ಷಕ ಪಿ. ವೀರಕುಮಾರ, ಪೋಷಕರಾದ ಜಗದೀಶ, ನಂದಿನಿ, ಲಿಂಗಮ್ಮ, ತನುಜಾ, ಲಕ್ಷ್ಮೀ, ಅಂಜಿನಮ್ಮ, ಖಂಡೆ ಜಡೆಪ್ಪ, ಮೋಹನರಾವ್, ಕೋಳೂರು ಬಸವ, ಬಾಬು ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















