ಕಂಪ್ಲಿ: ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಜ್ಞಾನ ಮತ್ತು ಕೌಶಲ ವೃದ್ಧಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪಿಡಿಒ ಹಾರ‍್ವಿ ಶೇಷಗಿರಿ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದಲ್ಲಿ ಗ್ರಾ. ಪಂ. ಹಾಗೂ ವೀರಭದ್ರೇಶ್ವರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಹಯೋಗದಲ್ಲಿ ಶನಿವಾರ ನಡೆದ ಏರ್ಪಡಿಸಿದ್ದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರಕಾರ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ವೃತ್ತಿ ತರಬೇತಿ ನೀಡುವ ಜತೆಗೆ ಆರ್ಥಿಕ ನೆರವು ನೀಡುತ್ತದೆ. ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟವು ಗ್ರಾಮದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಜೀವಿನಿಯಾಗಿದೆ ಎಂದರು.
ವೀರಭದ್ರೇಶ್ವರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಲತಾ ರೆಡ್ಡಿ ಮಾತನಾಡಿ, ಸಂಜೀವಿನಿ ಯೋಜನೆಯೂ ಮಹಿಳೆಯರ ಬದುಕಿಗೆ ದಾರಿ ದೀಪವಾಗಿದೆ. ಈ ಯೋಜನೆಗಳ ಸದುಪಯೋಗದೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಗ್ರಾ. ಪಂ. ಅಧ್ಯಕ್ಷ ರಮಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಈಶ್ವರಿ, ಸಂಪನ್ಮೂಲ ವ್ಯಕ್ತಿ ಶ್ರೀಗೌರಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಬಸಮ್ಮ, ವರಲಕ್ಷ್ಮಿ, ಬಿಆರ್‌ಪಿ ಅಶ್ವಿನಿ, ಪಶುಸಕಿ ರೇಖಾ, ಕೃಷಿಸಖಿ ವಸಂತಿ, ನಾರಿಸಖಿ ವೀಣಾ, ಒಕ್ಕೂಟದ ಸಿಬ್ಬಂದಿಗಳಾದ ಉಮಾ ಶಂಕರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















