ತಪಾಸಣೆ ನೆಪದಲ್ಲಿ ದರ್ಪ ಬೇಡ | ಸವಾರರ ಹಕ್ಕು ಗೌರವಿಸಲು ತಾಕೀತು
ಕಂಪ್ಲಿ : ವಾಹನ ತಪಾಸಣೆ, ಪರಿಶೀಲನೆ ಸಮಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಹನ ಚಾಲಕರಿಗೆ ಕಿರುಕುಳ ಕೊಡುತ್ತಿರುವುದಲ್ಲದೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ದುರ್ನಡತೆ ತೋರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದರೆ ಅಂತಹ ಪೊಲೀಸ್ ಅಧಿಕಾರಿ. ದೂರು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪ್ರಾಧಿಕಾರದ ಸದಸ್ಯರ ಪತ್ರ ಹಿನ್ನೆಲೆ ಕ್ರಮಕ್ಕೆ ಮುಂದಾದ ಪೊಲೀಸ್
ಚಾಲನಾ ಪರವಾನಗಿ, ವಾಹನಗಳ ದಾಖಲೆ, ಇನ್ನೂರೆನ್ಸ್, ಹೆಲೈಟ್ ಇಲ್ಲದಿರುವುದು ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ದಂಡ ಪಾವತಿಸಿರುವ ಬಗ್ಗೆ ರಶೀದಿ ಇಲ್ಲದೆ ಸವಾರರನ್ನು ಕಳುಹಿಸುವುದು, ಬೈಕ್ ಸವಾರರ ಮೇಲೆ ಹಲ್ಲೆಯಂತಹ ಘಟನೆಗಳು ಸಾಮಾನ್ಯ ಎಂಬಂತಾಗಿವೆ. ಈ ರೀತಿಯ ವರ್ತನೆಗೆ ಕಡಿವಾಣ ಹಾಕಲು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರ ಲಿಖಿತ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಡಿ. 2ರಂದು ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ರಾಜ್ಯ ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಕೆಲವು ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಜನಸಾಮಾನ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಇಲಾಖೆಯ ಗೌರವಕ್ಕೆ ಧಕ್ಕೆಯಾಗುತ್ತಿದೆ. ಕಾಲಕಾಲಕ್ಕೆ ಇಲಾಖೆಯಿಂದ ಹಲವು ಸುತ್ತೋಲೆ.
ಡಿಜಿಪಿ ಮಾರ್ಗಸೂಚಿ
ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯದ ವೇಳೆ ಪಾರದರ್ಶಕತೆ, ಸಾರ್ವಜನಿಕರೊಂದಿಗೆ ಸೌಜನ್ಯದ ವರ್ತನೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಮಾರ್ಗಸೂಚಿ ಹೊರಡಿಸಿದ್ದರು. ಸಮಾಜದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಪರಿಣಾಮಕಾರಿ ಕಾನೂನು ಜಾರಿ ಮತ್ತು ಸಮುದಾಯದ ಜತೆಗಿನ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸುವಾಗ ನಾಗರಿಕರೊಂದಿಗೆ ಸೌಜನ್ಯ ಮತ್ತು ಗೌರವದಿಂದ ವರ್ತಿಸಬೇಕು. ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು. ಸಕಾರಾತ್ಮಕ ಮತ್ತು ವೃತ್ತಿಪರ ನಡವಳಿಕೆಯು ಇಲಾಖೆಯ ಮೇಲಿನ ನಂಬಿಕೆ, ಸಹಕಾರವನ್ನು ಹೆಚ್ಚಿಸುತ್ತದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ದರ್ಪ ತೋರುವುದು ಸರಿಯಲ್ಲ. ನಾಗರಿಕರ ಹಕ್ಕುಗಳಿಗೆ ಗೌರವವನ್ನು ನೀಡುವುದು, ಸಂಯಮದ ವರ್ತನೆ ಅಗತ್ಯವಾಗಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.
ಜ್ಞಾಪನಗಳನ್ನು ಹೊರಡಿಸಿದ್ದರೂ ಕೆಲವು ಪೊಲೀಸ್ ಸಿಬ್ಬಂದಿ ದೌರ್ಜನ್ಯ ತೋರುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿದು ಅವಮಾನ ಮಾಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಕೆಲ ಕಿರುಕುಳ, ಹಲ್ಲೆ ಒಂದೆರಡಲ್ಲ, ಮಂಡ್ಯ ಜಿಲ್ಲೆಯಲ್ಲಿ ಸಂಚಾರ ಪೊಲೀಸರು ವಾಹನ ತಪಾಸಣೆ ಸಂದರ್ಭದಲ್ಲಿ ಮಗುವೊಂದು ಮೃತಪಟ್ಟ ಪ್ರಕರಣ.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ನಡೆದ ಹಲ್ಲೆ ವೈರಲ್ ಆಗಿತ್ತು. ಈ ಬಗ್ಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ವಾರದ ಹಿಂದೆ ಚಿತ್ರದುರ್ಗದಲ್ಲಿ ವಾಹನ ಪರಿಶೀಲನೆ ವೇಳೆ ಆಟೋ ಚಾಲಕನಿಗೆ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಮನನೊಂದ ಚಾಲಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಸಂಡೂರಿನಲ್ಲಿ ಲಾರಿ ಚಾಲಕನ ಮೇಲೆ ಪೊಲೀಸ್ ಪೇದೆಯೊಬ್ಬ ದೌರ್ಜನ್ಯವೆಸಗಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೀಗೆ ಹಲವು ಘಟನೆಗಳನ್ನು ಉದಾರಣೆಯಾಗಿ ನೀಡಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯರು ಪತ್ರ ಬರೆದಿದ್ದರು.
ಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡು ತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮೋಹನ್ ಕುಮಾರ್ ದಾನಪ್ಪ ಪತ್ರದಲ್ಲಿ ಮನವಿ ಮಾಡಿದ್ದರು. ಇದನ್ನಾಧರಿಸಿ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















