ಮಹಿಳಾ ಪ್ರೀಮಿಯರ್ ಲೀಗ್ನ ನಾಲ್ಕನೇ ಆವೃತ್ತಿ ಜನವರಿ 9 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 05 ರಂದು ಕೊನೆಗೊಳ್ಳಲಿದೆ. ಈ ಆವೃತ್ತಿಯ ಪಂದ್ಯಗಳಿಗೆ ಕೇವಲ ಎರಡು ನಗರಗಳು ಆತಿಥ್ಯ ವಹಿಸುತ್ತಿದ್ದು, ನವಿ ಮುಂಬೈ ಹಾಗೂ ವಡೋದರಾದಲ್ಲಿ ಪಂದ್ಯಾವಳಿ ನಡೆಯಲಿದೆ.
ಆರ್ ಸಿಬಿ ಟೂರ್ನಿಯ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಜನವರಿ 09 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ನಡೆಯಲಿದೆ. ನಂತರ ಎರಡನೇ ಪಂದ್ಯ ಜನವರಿ 12 ರಂದು ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯಕ್ಕೂ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯ ನೀಡಲಿದೆ.
ಮೂರನೇ ಪಂದ್ಯವನ್ನು ಜನವರಿ 16 ರಂದು ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸಲಿದೆ. ಜನವರಿ 17 ರಂದು ನಡೆಯಲ್ಲಿರುವ ನಾಲ್ಕನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್, ಆರ್ಸಿಬಿಗೆ ಎದುರಾಳಿಯಾಗಲಿದೆ. ಈ ಪಂದ್ಯವೂ ಕೂಡ ಮುಂಬೈನಲ್ಲಿ ನಡೆಯಲ್ಲಿದೆ.
ಎರಡು ದಿನಗಳ ಬಳಿಕ ಅಂದರೆ ಜನವರಿ 19 ರಂದು ತನ್ನ 5ನೇ ಪಂದ್ಯವನ್ನಾಡಲಿರುವ ಆರ್ಸಿಬಿ ಈ ಪಂದ್ಯದಲ್ಲಿ ಎರಡನೇ ಬಾರಿಗೆ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ನಂತರ ಜನವರಿ 24 ರಂದು ಡೆಲ್ಲಿ ಕ್ಯಾಪಿಟಲ್ಸ್ಗೆ ಆರ್ಸಿಬಿ ಎರಡನೇ ಬಾರಿಗೆ ಮುಖಾಮುಖಿಯಾಗಲಿದೆ. ಈ ಎರಡು ಪಂದ್ಯಗಳು ವಡೋದರಲ್ಲಿ ನಡೆಯಲಿವೆ. ಉಳಿದೆರಡು ಪಂದ್ಯಗಳು ಸಹ ಇದೇ ವಡೋದರದಲ್ಲಿ ನಡೆಯಲಿದ್ದು, ಇದರಲ್ಲಿ ಆರ್ಸಿಬಿ ಕ್ರಮವಾಗಿ ಜನವರಿ 26 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಜನವರಿ 29 ರಂದು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಆರ್ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರ್ರಿ ಬದಲಿಗೆ)
ವರದಿ : ಜಿಲಾನಸಾಬ್ ಬಡಿಗೇರ್




















