
ರಾಯಚೂರು/ ಸಿಂಧನೂರು ಜ.23 :
ನಮ್ಮ ಪ್ರಜಾಪ್ರಭುತ್ವದಲ್ಲಿ ತಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಪ್ರತಿಯೊಬ್ಬರೂ ತಮ್ಮ ಮತವನ್ನು ಚಲಾಯಿಸಬೇಕು ಎಂದು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರೂಪಾ ಸಿ. ವಗ್ಗಾ ಕರೆ ನೀಡಿದರು.
ಅವರು ಶುಕ್ರವಾರದಂದು ನಗರದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕ ಪಂಚಾಯಿತ ವತಿಯಿಂದ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ , ಚುನಾವಣಾ ಆಯೋಗದ ಆಶಯದಂತೆ ನಿರ್ಭೀತಿಯಿಂದ ಚುನಾವಣೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ತಮ್ಮ ಕುಟುಂಬದ ಸದಸ್ಯರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಯುವ ಮತದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಹಶೀಲ್ದಾರ್ ಅರುಣ್ ಎಚ್ ದೇಸಾಯಿ ಮಾತನಾಡಿ, ಅರ್ಹ ವಯಸ್ಸಿನ ಎಲ್ಲಾ ವಿದ್ಯಾರ್ಥಿಗಳು, ಯುವಕರು ಯುವತಿಯರು ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಂಡ ಮತದಾರರು ತಮ್ಮ ಗುರುತಿನ ಚೀಟಿಯನ್ನು ಪಡೆದು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳುತ್ತಾ , ರಾಷ್ಟ್ರೀಯ ಮತದಾರ ದಿನಾಚರಣೆ ನಡೆದು ಬಂದ ಇತಿಹಾಸ, ಚುನಾವಣೆಗಳ ಪ್ರಕ್ರಿಯೆ ಕುರಿತು ಹಾಗೂ ಚುನಾವಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಮಾತನಾಡುತ್ತಾ, ಚುನಾವಣೆಯ ಸಂದರ್ಭದಲ್ಲಿ ರಜೆ ನೀಡಿದಾಗ ತಮ್ಮ ಹೆಸರು ಇರುವ ಕ್ಷೇತ್ರಗಳಿಗೆ ತೆರಳಿ ಮತದಾನ ಮಾಡಬೇಕು. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತ ಚಲಾವಣೆ ಪ್ರಮಾಣ ಕಡಿಮೆ ಇದ್ದು, ಇದನ್ನು ಸುಧಾರಿಸಲು ಪ್ರತಿಯೊಬ್ಬ ಮತದಾರರು ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಪಾಂಡುರಂಗ ಇಟಗಿ, ಸರ್ಕಾರಿ ಅಭಿಯೋಜಕರಾದ ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಕೆ ಭೀಮನಗೌಡ ಮಾತನಾಡಿದರು. ದೈಹಿಕ ಶಿಕ್ಷಣ ವಿಷಯ ಪರೀಕ್ಷಕ ಸೋಮಲಿಂಗಪ್ಪ, ಸಿ ಡಿ ಪಿ ಓ ಲಿಂಗನಗೌಡ, ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳಾದ ಎಇಇ ಪ್ರಕಾಶ, ಲಿಂಗಪ್ಪ ಅಂಗಡಿ, ವಿಜಯಲಕ್ಷ್ಮಿ, ಮಲ್ಕಾಜಮ್ಮ, ಅಬಕಾರಿ ನಿರೀಕ್ಷಕರು, ಮತದಾರರ ಸಾಕ್ಷರತಾ ಕ್ಲಬ್ (ಈ.ಎಲ್.ಸಿ)ಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೀರೇಶ ಗೋನವಾರ, ನ್ಯಾಯಾಂಗ ಇಲಾಖೆಯ ದೇವರಾಜ, ತಹಶೀಲ್ದಾರ್ ಕಚೇರಿಯ ಉಮಾಪತಿ, ಬಸವರಾಜ, ರಾಜಾಭಕ್ಷಿ, ಶಿಕ್ಷಣ ಸಂಯೋಜಕರಾದ ಕುಮಾರಸ್ವಾಮಿ ಸೇರಿದಂತೆ ವಿವಿಧ ಶಾಲಾ -ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರತಿಜ್ಞಾವಿಧಿ ಬೋಧನೆ:
ಇದೇ ಸಂದರ್ಭದಲ್ಲಿ ನೆರದಿದ್ದ ಅಧಿಕಾರಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ವಿತರಣೆ:
ಇದೇ ಸಮಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದ ನಗರಸಭೆಯ ಗಿರಿಗೌಡರನ್ನು ಸನ್ಮಾನಿಸಲಾಯಿತು ಹಾಗೂ ಹೊಸದಾಗಿ ನೋಂದಣಿ ಮಾಡಿಕೊಂಡ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
- ಕರುನಾಡ ಕಂದ ಪತ್ರಿಕೆ




















