ಶಿರಸಿ: ವೈದ್ಯ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ ವೈದ್ಯಕೀಯ ಮಾಹಿತಿಯನ್ನು ನೀಡುವ ಸಾಹಿತ್ಯಕ್ಕೆ ವೈದ್ಯಕೀಯ ಸಾಹಿತ್ಯ ಎನ್ನಬಹುದು ಎಂದು ವೈದ್ಯ ಹಾಗೂ ಸಾಹಿತಿ ಡಾ. ಅಜಿತ ಹರೀಶಿ ಹೇಳಿದರು.
ಶನಿವಾರ ನಗರದ ಗಾಯಿತ್ರಿ ಗೆಳೆಯರ ಬಳಗದಲ್ಲಿ ಆಯೋಜಿಸಿದ್ದ ಜಸ್ಟಿಸ್ ಜಿ ಎನ್ ಸಭಾಹಿತ- ಜಸ್ಟೀಸ್ ವಿಷ್ಣು ಸಭಾಹಿತ ಸ್ಮರಣೆ ಕಾರ್ಯಕ್ರಮದಲ್ಲಿ ವೈದ್ಯ ಸಾಹಿತ್ಯ ಮತ್ತು ಸೃಜನಶೀಲತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ವೈದ್ಯ ಸಾಹಿತ್ಯಕ್ಕೆ 20 ಶತಮಾನಗಳ ಇತಿಹಾಸವಿದೆ ಕ್ರಿ.ಶ. 1 ರಲ್ಲೇ ವೈದ್ಯಕೀಯ ಸಾಹಿತ್ಯ ಬರೆದರು ಎಂಬ ಇತಿಹಾಸವಿದೆ. ವೈದ್ಯಕೀಯ ಮಾಹಿತಿಯನ್ನು ನೀಡುವ ಸಾಹಿತ್ಯಕ್ಕೆ ವೈದ್ಯಕೀಯ ಸಾಹಿತ್ಯ ಎನ್ನಬಹುದು. ವೈದ್ಯಕೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಾಹಿತ್ಯಕ್ಕೂ ವೈದ್ಯಕೀಯ ಸಾಹಿತ್ಯ ಎನ್ನಲಾಗುತ್ತಿದೆ. ವೈದ್ಯ ವಿದ್ಯಾರ್ಥಿಗಳಿಗಾಗಿ ರಚಿಸಿದ ಕೃತಿ ವೈದ್ಯಕೀಯ ಸಾಹಿತ್ಯದ ಕೃತಿ ಎನ್ನಿಸಿಕೊಳ್ಳುತ್ತದೆ.
ವೈದ್ಯ ಸಾಹಿತ್ಯಕ್ಕೆ ಮೊದಲಿನಿಂದಲೂ ಜನಮನ್ನಣೆ ಸಿಕ್ಕಿರಲಿಲ್ಲ. ಆದರೆ ದಿನ ಬದಲಾದಂತೆ ಇದೀಗ ವೈದ್ಯಕೀಯ ಸಾಹಿತ್ಯಕ್ಕೆ ಜನಮನ್ನಣೆ ಸಿಗುತ್ತಿದೆ. ಕನ್ನಡ ವೈದ್ಯಕೀಯ ಸಾಹಿತ್ಯ ಅನುವಾದದ ಮೂಲಕವೇ ರೂಪುಗೊಂಡಿದೆ. ವೈದ್ಯಕೀಯ ಸಾಹಿತ್ಯದ ಕುರಿತು ಸಾಕಷ್ಟು ಲೇಖಕರು ಕೃತಿಗಳನ್ನು, ಅಂಕಣಗಳನ್ನು ಬರೆದಿದ್ದಾರೆ. ವೈದ್ಯಕೀಯ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ಸಾಕಷ್ಟು ವೈದ್ಯರು ನೀಡಿದ್ದಾರೆ. ವೈದ್ಯರು ಬರೆದ ಸಾಕಷ್ಟು ಕಥೆಗಳು ಚಲನಚಿತ್ರವೂ ಆಗಿರುವುದು ವಿಶೇಷ. ಶಿರಸಿಯ ಗಜಾನನ ಭಟ್ ಅವರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ವೈದ್ಯಕೀಯ ವಿಷಯದ ಕುರಿತು ಲೇಖನಗಳನ್ನು ಬರೆದಿದ್ದಾರೆ. ವೈದ್ಯಕೀಯ ಸಾಹಿತ್ಯದಲ್ಲಿ ಸಣ್ಣ ತಪ್ಪಾದರೂ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ. ಜನರಿಗೆ ಸುಲಭವಾಗಿ ಅರ್ಥವಾಗುವಂತಿದ್ದರೆ ಕೃತಿಗಳಿಗೆ ಮಾನ್ಯತೆ ಸಿಗುತ್ತದೆ ಎಂಬ ಅನಿಸಿಕೆ ನನ್ನದು ಎಂದರು.
ವೈದ್ಯ ಸಾಹಿತ್ಯಕ್ಕೆ ಒಂದು ನಿಖರತೆ ಬೇಕು. ಸೃಜನಶೀಲತೆ ಹೊಸದನ್ನು ಕಟ್ಟುವ ಕೆಲಸ ಮಾಡುತ್ತದೆ. ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ಸಾಧ್ಯತೆ ಸೃಜನಶೀಲತೆಯಲ್ಲಿರುತ್ತದೆ. ಸಂಸ್ಕೃತಿ ಸಂರಕ್ಷಣೆ ಸೃಜನಶೀಲತೆಯಿಂದಾಗುತ್ತದೆ. ವೈದ್ಯ ಸಾಹಿತ್ಯ ಒಬ್ಬ ವೈದ್ಯನ ಸಾಮಾಜಿಕ ಬದ್ಧತೆ. ಜನರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯ ಸಾಹಿತ್ಯ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಶಿರಸಿ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಿ.ಎಸ್. ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಎಸ್ ನಾಯ್ಕ , ಜೀವನದಲ್ಲಿ ಉತ್ಸಾಹ ಇರಬೇಕು. ಉತ್ಸಾಹದಿಂದ ಮಾಡಿದ ಎಲ್ಲಾ ಕೆಲಸವೂ ಯಶಸ್ವಿಯಾಗುತ್ತದೆ. ನಮ್ಮ ಬದುಕೇ ಸಾಹಿತ್ಯ. ನಮ್ಮ ಅನುಭವವನ್ನು ಬರೇಯುತ್ತಾ ಹೋದರೆ ಒಂದು ಉತ್ತಮ ಕೃತಿ ಯಾಗುತ್ತದೆ ಎಂದರು.
ಡಾ. ಆರ್ ಎನ್ ಹೆಗಡೆ ಬಂಡಿಮನೆ ಆಶಯ ನುಡಿಗಳನ್ನಾಡಿದರು. ಮುಕ್ತಕ ಕವಿ ಕೃಷ್ಣ ಪದಕಿ ಅವರ ಅವರನ್ನು ಗಣ್ಯರ ಪರಿಚಯ ನೆರವೇರಿಸಿದರು. ವಾಣಿ ಹೆಗಡೆ ಪ್ರಾರ್ಥಿಸಿದರು. ಪತ್ರಕರ್ತ ಶಿವಪ್ರಸಾದ ಹಿರೇಕೈ ಸ್ವಾಗತಿಸಿ, ನಿರ್ವಹಿಸಿದರು. ಗಾಯತ್ರಿ ಗೆಳೆಯರ ಬಳಗ ಪ್ರಮುಖ ಎಂ ಎಸ್ ಹೆಗಡೆ ಗೌರವಾರ್ಪಣೆ ಸಲ್ಲಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಆರ್ ಡಿ ಹೆಗಡೆ, ತಾರಾ ಹೆಗಡೆ, ಲಕ್ಷ್ಮಣ ಶಾನಭಾಗ್, ಭವ್ಯ ಹಳಿಯೂರ ಹಾಗೂ ಕೃಷ್ಣವೇಣಿ ಹೆಗಡೆ, ಇಂದಿರಾ ಬೈಲಕೇರಿ, ಆಶಾ ಸಭಾಹಿತ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್




















