ಹನೂರು : ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ನಮ್ಮ ಹನೂರು ಕ್ಷೇತ್ರಕ್ಕೆ ಆಂಬುಲೆನ್ಸ್ ಗಳ ಸೇವೆ ಅವಶ್ಯಕತೆ ಇದ್ದು ಇದೀಗ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಉತ್ತಮ ವಾಹನ ಕೊಡುತ್ತಿದ್ದು ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನೂತನ ಆಂಬುಲೆನ್ಸ್ ವಾಹನವನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಿ ನಂತರ ಮಾತನಾಡಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಗಳ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಹಾಗಾಗಿಯೇ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ ಗಳ ಜೊತೆಗೆ ಯಾವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಗಳ ಅನಿವಾರ್ಯತೆ ಇದೆ ಎಂಬುದನ್ನು ಅರಿತು ಇದೀಗ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನ ಆಂಬುಲೆನ್ಸ್ ಅನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಒಳ್ಳೆಯ ಸೇವೆ ಇದರಿಂದ ಸಿಗಲಿ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ಇದರ ಸದುಪಯೋಗವಾಗಲಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೂ ಸಹ ಸ್ವಂತ ಆಂಬುಲೆನ್ಸ್ ನೀಡುವ ಕುರಿತು ಈಗಾಗಲೇ ಚಿಂತನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಸಹ ಸ್ವಂತ ಆಂಬುಲೆನ್ಸ್ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಆರೋಗ್ಯದ ಹಿತ ದೃಷ್ಟಿಯಿಂದ ಅಪಘಾತದ ಸಂದರ್ಭದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಅವರಿಗೆ ಅನುಕೂಲವಾಗುವಂತಹ ವಾಹನ ವ್ಯವಸ್ಥೆ ಕಲ್ಪಿಸಲು ಸದಾ ಸಿದ್ಧನಿದ್ದೇನೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಮಾತನಾಡಿ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ರಾಮಾಪುರ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ನೀಡಿರುವುದು ತುಂಬಾ ಉಪಯೋಗವಾಗಲಿದೆ ಆಂಬುಲೆನ್ಸ್ ಕೊರತೆ ಬಗ್ಗೆ ನಾವು ಈಗಾಗಲೇ ಹಿರಿಯ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ಸಹಾ ತಂದಿದ್ದೆವು. ಹಂತ ಹಂತವಾಗಿ ಆಂಬುಲೆನ್ಸ್ ಕೊರತೆ ನೀಗಿಸಲು ಶಾಸಕರು ಮತ್ತೆ ಹಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಚೈತ್ರ, ತಾಲೂಕು ಪಂಚಾಯಿತಿ ಇ.ಓ ಉಮೇಶ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ , ಡಾII ಪ್ರಕಾಶ್ , ರಾಮಾಪುರ ವೈದ್ಯಧಿಕಾರಿ ಡಾII ಮನು , ಆಶಾ ಕಾರ್ಯಕರ್ತೆಯರು, ಹಾಗೂ ಇತರರು ಇದ್ದರು.
ವರದಿ :ಉಸ್ಮಾನ್ ಖಾನ್




















