ಕನ್ನಡ ಸಾಹಿತ್ಯ ಚರಿತ್ರೆಯ ಭವ್ಯ ಪರಂಪರೆಯಲ್ಲಿ ಸಾಮಾನ್ಯರಾಡುವ ಮಾತಿನ ಮೂಲಕ ಜನಪ್ರಿಯತೆ ಗಳಿಸಿದ ಶ್ರೇಷ್ಠ ವ್ಯಕ್ತಿತ್ವ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಸರ್ವಜ್ಞನೆಂಬುದು ಹೆಮ್ಮೆಯ ವಿಚಾರ. ಈತನ ಕಾಲದ ಬಗ್ಗೆ ಸಮಪರ್ಕವಾದ ದಾಖಲೆಗಳ ಕೊರತೆಯಿಂದ ಈತನ ವೈಯಕ್ತಿಕ ಬದುಕು ಕೂಡಾ ಅಸ್ಪಷ್ಟವಾಗಿದೆ. ಆದರೆ ಬಹುಜನ ವಿದ್ವಾಂಸರ ತರ್ಕಬದ್ದ ವಿಚಾರ ಸರಣಿಗಳಿಂದ ಗಟ್ಟಿ ಅಭಿಪ್ರಾಯದಿಂದ ಈತನ ಕಾಲವನ್ನು ಕ್ರಿ.ಶ.ಸುಮಾರು ೧೫೫೦-೧೬೦೦ ಎಂದು ತಿಳಿಯಲಾಗಿದೆ. ಈತನ ತಾಯಿ ಅಬಲೂರಿನ ಕುಂಬಾರ ಮಾಳಿ ಅಥವಾ ಮಾಳವ್ವ. ತಂದೆ ಮಾಸೂರ ಬಸವರಸ ಎಂದು ಗುರುತಿಸಲಾಗಿದೆ. ಸರ್ವಜ್ಞನ ವಚನಗಳು ಓದು-ಬರಹ ಬಾರದ ವ್ಯಕ್ತಿಗಳಿಗೂ ಅರ್ಥವಾಗಿ ಮನಸ್ಸಿನಲ್ಲಿ ಉಳಿದು ಹೃದಯಾಂತರಾಳದಲ್ಲಿ ಉಳಿಯುತ್ತವೆ. ತಮಿಳುನಾಡಿನ ತಿರುವಳ್ಳುವರ್, ತೆಲುಗಿನ–ವೇಮನರಂತೆ ಕರ್ನಾಟಕದಲ್ಲಿ ಸರ್ವಜ್ಞ. ಸರ್ವಜ್ಞ ಕನ್ನಡ ನಾಡು, ಭಾರತ ದೇಶ ಕಂಡ ಅಪರೂಪದ ಮಹಾಕವಿ, ಸಂತ. ಇಂದಿಗೂ ಅವನ ವಚನಗಳಿಲ್ಲದೆ ಜನರು ಮಾತನಾಡಲಾರರು. ಅವನ ವಚನಗಳನ್ನು ತಮ್ಮ ಬದುಕಿನ ಎಲ್ಲ ಕ್ಷಣಗಳಲ್ಲಿ ಅನುದಿನವೂ ನೆನೆಯುತ್ತಾರೆ. ಅವನ ವಚನಗಳು ಜೀವನ ವಿವೇಕದ ಕನ್ನಡಿಯಾಗಿವೆ, ಈ ದೃಷ್ಟಿಯಿಂದ ಆತ ಸಾರ್ವಕಾಲಿಕ. ಸರ್ವಜ್ಞನು ಕಾಲ ಮಾತ್ರದಿಂದ ಅಂದಿನವನಾದರೂ ಮನೋಧರ್ಮ ಯುಗಧರ್ಮಗಳ ದೃಷ್ಟಿಯಿಂದ ಇಂದಿನವನಾಗಿದ್ದಾನೆ. ಲೌಕಿಕದಲ್ಲಿ ಸಮಾಜವಾದಿಯಾದ ಈತ ಅಂತರಂಗದಲ್ಲಿ ಅನುಭಾವಿ, ದಾರ್ಶನಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ರಾಂತಿಕಾರಿ. ಬಂಡಾಯ ಮನೋಧರ್ಮ ಹೊಂದಿರುವ ಈತ ಸಮಾಜದಲ್ಲಿ ಕಣ್ಣಿಗೆ ಕಂಡದ್ದನ್ನು ಸಮುದಾಯದ ಜಾಗೃತಿಗಾಗಿ ಮಾತಿನ ಚಾಟಿ ಏಟು ಬೀಸಿದವನು. ಜನಪದ ಸತ್ವದ ತ್ರಿಪದಿ ಬಳಸುವುದರ ಮೂಲಕ ಕನ್ನಡದ ಪ್ರಜ್ಞೆ ಹಾಗೂ ಭಾಷೆಯ ಅನಂತ ಸಾಧ್ಯತೆಗಳನ್ನು ವಿಸ್ತರಿಸಿದವನು. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಅವನೊಂದು ಮುಕುಟಪ್ರಾಯ. ಆದರ್ಶ ಸಮಾಜ ಹೇಗಿರಬೇಕೆಂದು ತೋರಿಸಿಕೊಟ್ಟ ಸರ್ವಜ್ಞ ಸಮುದಾಯ ಹಾಗೂ ಕನ್ನಡ ಪ್ರಜ್ಞೆ ಮೂಡಿಸಿ ವಿಶ್ವ ಕವಿಯೆನಿಸಿ ವಿಶ್ವಮಾನ್ಯವಾದ ಬದುಕನ್ನು ಪ್ರೀತಿಸುವ, ಟೀಕಿಸುವ ಆ ಮೂಲಕವೇ ಆದರ್ಶ ಸಮಾಜ ನಿರ್ಮಾಣಕ್ಕೆ ದಾರಿ ಹುಡುಕುವುದನ್ನು ತೋರಿಸಿ ಕೊಟ್ಟ ಸರ್ವಜ್ಞ ಹಿಂಡನಗಲಿದ ಮದಗಜದಂತೆ ಒಂಟಿಯಾದರೂ ಕ್ರಿಯಾಶೀಲವಾಗಿ ಹೊಸದನ್ನೆ ಕಟ್ಟಲು ಬಯಸಿದವನು. ಸರ್ವಜ್ಞ ಲೋಕಸಂಚಾರಿಯಾಗಿ ಬರಿ ಅನ್ಯಾಯದ ವಿರುದ್ದ ಬಂಡೆದ್ದು ನಿಲ್ಲದೆ ಸಮಾಜದ ಪ್ರತಿಯೊಂದು ವಿಷಯಗಳ ಬಗ್ಗೆ ಗಮನವಿಟ್ಟು ಅಲ್ಲಿರುವ ಓರೆ ಕೋರೆಗಳನ್ನು ಅನಾಚಾರ ಅತ್ಯಾಚಾರಗಳನ್ನು ಕೂಲಂಕಷವಾಗಿ ಅರಿತುಕೊಂಡು ಎಚ್ಚರಿಕೆ ನೀಡುವುದರ ಜೊತೆ-ಜೊತೆಗೆ ತಿಳಿವಳಿಕೆಯನ್ನು ನೀಡುತ್ತಾನೆ. ನಾಡಿನ ಉದ್ದಗಲಕ್ಕೂ ಹಳ್ಳಿ ಹಳ್ಳಿಗಳನ್ನು ಸುತ್ತಿ ಹಳ್ಳಿಯ ಬಾಳು ಬದುಕಿನಲ್ಲಿ ಬೆರೆತು ಸಮಕಾಲೀನ ಸಮಾಜದ ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತಾನೆ. ಆ ಮೂಲಕ ಸಮಾಜದ ಮುಖವಾಡಗಳನ್ನೆಲ್ಲ ಹರಿದು ಹಾಕಿ ನಿಜ ಸ್ವರೂಪ ತೋರಿಸಿಕೊಡುವುದರೆಡೆಗೆ ಮುಖಮಾಡುತ್ತಾನೆ. ದೇವರು ಧರ್ಮ ಧಾರ್ಮಿಕ ವಿಧಿ ವಿಧಾನಗಳು ಅಲ್ಲದೆ ಅಧರ್ಮ, ಅನೀತಿ ಬಾಹ್ಯಾಡಂಬರ ಮೂಢನಂಬಿಕೆ, ಪಕ್ಷಪಾತ, ಬೂಟಾಟಿಕೆ, ಮೋಸಗಾರಿಕೆ, ದುರ್ವರ್ತನೆ, ಮೊದಲಾದವು ಸಮಾಜದಲ್ಲಿ ತಾಂಡವವಾಡುತ್ತಿರುವಾಗ ಕಂಡದ್ದನ್ನು ಕೆಂಡದAತೆ ಸರ್ವಜ್ಞನ ಅಂತರಂಗದ ವಚನಗಳು ಅಭಿವ್ಯಕ್ತಗೊಂಡವು. ಆ ವಚನಗಳ ಮೂಲಕ ಲೋಕಾನುಭವದೊಡನೆ ಜನರ ಮನಸ್ಸನ್ನು ಪರಿವರ್ತಿಸುತ್ತ, ಅವರಲ್ಲಿರುವ ಅಂಧಕಾರದ ಮೌಢ್ಯವನ್ನು ವಿರೋಧಿಸಿ ಖಂಡನೆಯ ಧ್ವನಿಯಿಂದ ಪ್ರತಿಭಟಿಸುತ್ತಾನೆ. ಕನ್ನಡ ಸಾಹಿತ್ಯ ನಭೋ ಮಂಡಲದಲ್ಲಿ ಪಂಪ ರನ್ನರಂತಹ ಮಹಾ ಕವಿಗಳನ್ನು, ನೇಮಿ ಷಡಕ್ಷರರಂತಹ ರಸ ಕವಿಗಳನ್ನು, ಲಕ್ಷ್ಮೀಶ ಕುಮಾರವ್ಯಾಸರಂತಹ ಕವಿಕೋಗಿಲೆಗಳನ್ನು, ನಿಜಗುಣ ಪುರಂದರರಂತಹ ಋಷಿ ಕವಿಗಳನ್ನು, ನಾವು ಪ್ರಕಾಶಮಯವಾದ ತಾರೆಗಳೆಂದು ಭಾವಿಸಿದರೆ ಸರ್ವಜ್ಞ ಮೂರ್ತಿಯನ್ನು ಧ್ರುವ ನಕ್ಷತ್ರವೆಂದೇ ಕರೆಯಬೇಕಾಗುತ್ತದೆ. ಸಮಾಜ ಪರಿವರ್ತನೆಗಾಗಿಯೇ ಹುಟ್ಟಿದವನೆಂಬಂತೆ ಸರ್ವಜ್ಞ ಹುಟ್ಟಿದ ಕಾಲಕ್ಕೆ ದೇವರು ಧರ್ಮ ಹಾಗೂ ಧಾರ್ಮಿಕ ವಿಧಿ-ವಿಧಾನಗಳ ನಿಜವಾದ ಅರ್ಥಸ್ವರೂಪ ಹೊರಟು ಹೋಗಿ, ಸಮಾಜದಲ್ಲಿ ಅಧರ್ಮ, ಅನೀತಿ ಬಾಹ್ಯಾಡಂಬರಗಳು ತಲೆಯೆತ್ತಿ, ಸಮಾಜವೆಂಬುದು ಬೂಟಾಟಿಕೆಯ ಮೋಸಗಾರಿಕೆಯ ತಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಯಾವುದೇ ಜಾತಿ ಧರ್ಮ ಮತಗಳಿಗಂಟಿಕೊಳ್ಳದ ಮಹಾ ಸಮಾಜ ಸುಧಾರಕನ ಅಗತ್ಯತೆಯ ಕೂಗಿನ ಕರೆಗೆ ಅವತರಿಸಿದವನಂತೆ ಈ ಪುಣ್ಯಭೂಮಿ ಕರುನಾಡಿನಲ್ಲಿ ಸರ್ವಜ್ಞ ಹುಟ್ಟಿ ಬಂದದ್ದು ಕನ್ನಡ ನಾಡಿನ ಭಾಗ್ಯವೇ ಸರಿ. ಸರ್ವಜ್ಞ ಕವಿ ನಾಡಿನ ಮನೆಯ ಕವಿ, ಜಾನಪದ ಚಕ್ರವರ್ತಿ ಮಧ್ಯಕಾಲೀನ ದೇಸಿ ಸಂಭ್ರಮದ ಸಾರ್ವಭೌಮ ಸರ್ವಜ್ಞ. ಜನಸಾಮಾನ್ಯರೊಂದಿಗೆ ಬೆರೆತು ಅವರ ಸರಳವಾದ ಭಾಷೆ ನುಡಿಗಟ್ಟುಗಳಲ್ಲಿಯೇ ತ್ರಿಪದಿಗಳನ್ನು ರಚಿಸುವುದರ ಮೂಲಕ ಜನತೆಯ ಕವಿ ಎನಿಸಿಕೊಂಡಿದ್ದಾನೆ. ಸಾಹಿತ್ಯವೆಂದರೆ ಜನಜೀವನದ ಪ್ರತಿಬಿಂಬ ಎನ್ನುವುದನ್ನು ಅಕ್ಷರಶಃ ತೋರಿಸಿದ್ದಾನೆ. ತನ್ನ ವಚನಗಳ ಮೂಲಕ ವಿವೇಕ ಮತ್ತು ವ್ಯವಹಾರ ಜ್ಞಾನಗಳೆರಡನ್ನು ಬೋಧಿಸಿದ ಸರ್ವಜ್ಞ ಒಪ್ಪುವ ಮೌಲ್ಯಗಳನ್ನು ಪ್ರಶಂಸಿಸುತ್ತ, ಅಪಮೌಲ್ಯಗಳನ್ನು ಟೀಕಿಸುತ್ತ ಲೋಕಕ್ಕೆ ಗುರುವಾಗುತ್ತಾನೆ. ತಾನು ಕಂಡ ಸಮಾಜವು ಹೇಗಿತ್ತು? ಆ ಸಮಾಜ ಹೇಗಿರಬೇಕೆಂಬುದರ ವಿವೇಕ ಆತನ ವಚನಗಳಲ್ಲಿದೆ. ಈ ದೃಷ್ಟಿಯಿಂದ ಆತನೊಬ್ಬ ಸಾಮಾಜಿಕ ವೈದ್ಯನಾಗಿದ್ದಾನೆ. ಹಾಗಾಗಿ ಸರ್ವಜ್ಞನನ್ನು ಕೇವಲ ಕವಿಯೆಂದು ತಿಳಿಯುವ ಹಾಗಿಲ್ಲ.
ಕರದಿ ಕಪ್ಪರವುಂಟು | ಹಿರಿದೊಂದು ನಾಡುಂಟು |
ಹರನೆಂಬ ದೈವವೆಮಗುಂಟು ತಿರಿವರಿಂ
ಸಿರಿವಂತರಾರು ಸರ್ವಜ್ಞ. ||
ಒಂದು ಕೈಯಲ್ಲಿ ಕೋಲು ಇನ್ನೊಂದು ಕೈಯಲ್ಲಿ (ಕಪ್ಪರ) ಭಿಕ್ಷಾ ಪಾತ್ರೆ, ಹಿಡಿದು ಸಿಕ್ಕರೂ ಸರಿ ಸಿಗದಿದ್ದರೂ ಸರಿ ಎಂದು, ಸಿಗದಿದ್ದಾಗ “ಹರನೆಂಬ ದೈವ ಎನಗುಂಟು” ಎನ್ನುತ್ತಾ ಜಂಗಮನಂತೆ ಸಿಕ್ಕ ಕಡೆಯೆಲ್ಲ ತಿರಿಯುತ್ತ, ನನಗಿಂತ ಸಿರಿವಂತರಾರು ಎಂಬ ಆತ್ಮವಿಶ್ವಾಸ ಹೊಂದಿ ನಾಲ್ಕು ದಿಕ್ಕುಗಳಿಗೂ ಸಂಚರಿಸುತ್ತಾನೆ. ಲೋಕಪರ್ಯಟನೆ ಮಾಡುತ್ತ ಸಮಾಜ ಪರಿವರ್ತನೆಯತ್ತ ಮುಖ ಮಾಡುತ್ತಾನೆ. ೧೨ನೇ ಶತಮಾನದ ಶರಣರಿಂದ ಪ್ರೇರಣೆಗೊಂಡ ಈತ ಅವರ ವಿಚಾರಗಳನ್ನು ತನ್ನ ವಚನಗಳಲ್ಲಿ ಪಡೆ ಮೂಡಿಸಿದ್ದುಂಟು. ಶರಣರ ಏಕದೇವೋಪಾಸನ ಪದ್ಧತಿ, ಮೂರ್ತಿ ಪೂಜೆ, ಅವಿವೇಕ, ನಿರಸನ, ಅಹಿಂಸಾ ಪ್ರತಿಪಾದನೆ, ಜಾತಿಭೇದ ನಿರಾಕರಣೆ, ರಾಜತ್ವ ದಿಕ್ಕಾರ ಖಂಡಿತವಾದಿತನ, ನಡೆ ನುಡಿಯಲ್ಲಿ ಮೂಢನಂಬಿಕೆ, ಕಂದಾಚಾರ ಇಂತಹ ಅನೇಕ ವಿಚಾರಗಳು ಶರಣರಿಂದಲೇ ಪ್ರೇರಣೆಗೊಂಡು ಆ ಶರಣರಿಗಿಂತಲೂ ಸಹಜ ಸುಂದರ ಮತ್ತು ರಸಮಯವಾದ ತ್ರಿಪದಿಗಳಲ್ಲಿ ನಿರೂಪಿಸುತ್ತಾನೆ. ಈ ನೆಲೆಯಲ್ಲಿ ಡಾ.ವಿ.ಕೃ.ಗೋಕಾಕರವರು ಹೇಳುವಂತೆ ಅವನು ಅನಂತದ ದರ್ಶನವನ್ನು ಮುಂದುವರೆಸಿಕೊಂಡು ಅತೀತದ ಸ್ವಂತ ಶ್ರೀಮಂತಾನುಭವಗಳನ್ನು ಹಾಡುತ್ತ ಯೋಗಿಯಾಗಿ ರಚಿಸಿದ ಕಾವ್ಯವಿದೆ. ಆಕಸ್ಮಿಕವಾಗಿ ಯಾವುದೋ ಒಂದು ಜಾತಿಯಲ್ಲಿ ಆತ ಹುಟ್ಟಿದ್ದರೂ ಜಾತಿ, ಭಾಷೆ, ಗಡಿಗಳನ್ನು ಮೀರಿನಿಂತ ಸೀಮಾತೀತ ವ್ಯಕ್ತಿತ್ವ ಆತನದು. ನಿಜ ಹೇಳಬೇಕೆಂದರೆ ಸರ್ವಜ್ಞ ಕನಕ, ಶರೀಫರಂಥವರಿಗೆ ಜಾತಿ, ಧರ್ಮಗಳ ಬಂಧನಗಳೇ ಇಲ್ಲ. ಹಾಗಾಗಿಯೇ ಇವರೆಲ್ಲ ಸರ್ವಾಧರಣೀಯರು. ಹಾಗಾಗಿ ಅವರೆಲ್ಲ ಸಾರ್ವಕಾಲಿಕ ದಾರ್ಶನಿಕರಾಗಿ ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಲೌಕಿಕ ಸಮಾಜವಾದಿಯಾದ ಸರ್ವಜ್ಞ ಅಂತಃಚಕ್ಷು ಹೊಂದಿದ ಅನುಭಾವಿ, ದಾರ್ಶನಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಾಂತಿಯನ್ನುಂಟು ಮಾಡಿದವನು. ಬಂಡಾಯ ಮನೋಧರ್ಮದ ಈತ ಸಮಾಜದಲ್ಲಿ ಕಂಡದ್ದನ್ನು ಕಂಡ ಹಾಗೆ ಹೇಳಿ ಜನರ ಮನಸ್ಸಿನ ಕಾಯಿಲೆಗಳಿಗೆ ತ್ರಿಪದಿ ಸಾಹಿತ್ಯದ ಮೂಲಕ ದಿವ್ಯೌಷಧಿ ನೀಡಿದ ವೈದ್ಯನಾಗಿದ್ದಾನೆ. ಸಮುದಾಯದ ಜಾಗೃತಿಗಾಗಿ ಮಾತಿನ ಚಾಟಿ ಬೀಸಿದವನು. ಜನಪದ ಸತ್ವದ ತ್ರಿಪದಿ ಬಳಸುವುದರ ಮೂಲಕ ಕನ್ನಡದ ಪ್ರಜ್ಞೆ, ದೇಸಿಯ ಶೈಲಿಯ ರಚನೆ ಹೆಚ್ಚಿಸಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸರ್ವಜ್ಞ ಚಿರಸ್ಥಾಯಿಯಾಗಿ ನಿಲ್ಲುತ್ತಾನೆ. ಸರ್ವಜ್ಞ ಸಾಮಾನ್ಯರಂತೆ ಈ ನೆಲದ ಮೇಲೆ ಬದುಕಿ ಹೋಗಿರುವವನು, ಆದ್ದರಿಂದ ಸರ್ವಜ್ಞನನ್ನು ಇತರ ಮಹಾಕವಿಗಳಂತೆ ಸಮತೂಕದಲ್ಲಿಯೇ ಗುರುತಿಸಬೇಕಾಗುತ್ತದೆ. ಊರೂರು ತಿರುಗಿ ಸಹಸ್ರ ಸತ್ಯಗಳನ್ನು ಕಂಡು ಕೇಳಿ ಅದನ್ನೆ ಜಗತ್ತಿಗೆ ಧಾರೆಯೆರೆದಿರುವುದು ಆತನ ಸಾಹಿತ್ಯದ ವಿಶೇಷವಾಗಿದೆ. ಸರ್ವಜ್ಞ ಹೊಸ ಪರಂಪರೆಯ ನಿರ್ಮಾಣ ಮಾಡಲು ಹೊರಟವನಲ್ಲ. ಸಮಾಜ ವಿರೋಧಿ ಶಕ್ತಿಗಳ ವಿರುದ್ದ ಸೆಣಸಾಡಿ ಸಮಕಾಲೀನ ಮೌಲ್ಯಗಳನ್ನು ಅರ್ಥೈಸಿಕೊಂಡು ಯಾವ ನಿರ್ಭಿಡೆಯು ಇಲ್ಲದೆ ಯಾರ ಜೊತೆಯು ರಾಜೀಮಾಡಿಕೊಳ್ಳದೆ, ಯಾರ ದಯೆ, ದಾಕ್ಷಿಣ್ಯಗಳಿಗೆ ಒಳಗಾಗದೇ ನಿಷ್ಠೂರ ಸತ್ಯಗಳನ್ನೇ ತನ್ನ ಸಾಹಿತ್ಯಕ್ಕೆ ಆಕರ ಸಾಮಗ್ರಿಗಳಾಗಿ ತೆಗೆದುಕೊಳ್ಳುತ್ತಾನೆ. ಅವನ ವಚನಗಳಲ್ಲಿ ಅಂತರಂಗದ ತುಡಿತವನ್ನು, ಮಿಡಿತವನ್ನು ಅವಲೋಕಿಸಿದರೆ ಆತನ ಕವಿತ್ವದ ಸಾಮರ್ಥ್ಯ ಗೊತ್ತಾಗುತ್ತದೆ. ನುಡಿಯಲ್ಲಿ ನಡೆಯಲ್ಲಿ ಅಪ್ಪಟನಾಗಿ ಯಾವ ಬೂಟಾಟಿಕೆಗಳಿಗೂ ಒಳಗಾಗದೇ ಸಮಾಜದ ಸೋಗಲಾಡಿತನಗಳಿಗೆ ಚಡಿಏಟು ಕೊಡುತ್ತಾನೆ. ಮೂಢನಂಬಿಕೆ ಡಂಭಾಚಾರದ ಮುಸುಕನ್ನು ತೆಗೆದು ಸತ್ಯದೊಂದಿಗೆ ಸಮೀಕರಿಸಲು ಪ್ರಯತ್ನಿಸುತ್ತಾನೆ. ದೇಶಭಕ್ತನಾಗಿ ಸಮಾಜ ವಿಮರ್ಶಕನಾಗಿ ಗುರು, ತತ್ವಜ್ಞಾನಿ, ವ್ಯವಹಾರ ನಿಪುಣನಾಗಿ ಮಿತ್ರನಾಗಿ ಮಾತೃ ಸ್ವರೂಪದ ಉಪದೇಶ ನೀಡುತ್ತಾನೆ. ಮಾನವನ ಜೀವನವನ್ನು ಸಮಗ್ರವಾಗಿ ನೋಡುತ್ತಾನೆ. ಸಮಾಜದ ಎಲ್ಲ ದ್ವಂದ್ವಗಳನ್ನು ಧೈರ್ಯದಿಂದ ಸಮನ್ವಯಗೊಳಿಸುವ ವಿಶಿಷ್ಟ ದೂರದೃಷ್ಟಿ ಈತನ ವಚನಗಳಲ್ಲಿದೆ. ಈತನ ತ್ರಿಪದಿಗಳಲ್ಲೇನಿದೆ? ಎನ್ನುವುದಕ್ಕಿಂತ ಏನಿಲ್ಲ ಎಂಬಂತೆ ರಚಿತವಾಗಿವೆ. ಸಾಮಾಜಿಕ ಕಳಕಳಿ ಬದುಕಿನ ಮೌಲ್ಯಗಳು, ಧರ್ಮ ಸಮನ್ವಯತೆ, ಕೌಟುಂಬಿಕ ಜೀವನದ ಸಾಮರಸ್ಯತೆ, ಹೇಡಿಗೆ ಆತ್ಮಸ್ಥೈರ್ಯ ತುಂಬುವ, ನಿರಾಶಾವಾದಿಗಳನ್ನು ಆಶಾವಾದಿಗಳನ್ನಾಗಿ ಮಾಡಬಲ್ಲ ಜೀವನ ಮೌಲ್ಯಗಳನ್ನು ಭರವಸೆಗಳನ್ನು ಮೂಡಿಸುವ ಇವನ ಕವಿತಾ ಶಕ್ತಿ ವಿಶಾಲ ವಿಶ್ವಭಾವನೆಯ ಬಾಗಿಲು ತೆರೆಸಿದ್ದು ಸಾರ್ವಕಾಲಿಕ ಸತ್ಯ.

- ಡಾ.ಎಸ್.ಬಿ.ಚನ್ನಗೌಡ್ರ. ಎಂ.ಎ ಪಿಹೆಚ್.ಡಿ
ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ
ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ
ಜಂಗಮವಾಣಿ : ೯೪೪೮೭೮೯೩೯೦/ ೮೪೩೧೨೧೪೮೬೧.




















