( ಜಾತಿ – ಧರ್ಮದ ಭ್ರಮೆಯನ್ನು ಭಂಗಗೊಳಿಸವ ಒಂದು ವಿಶಿಷ್ಟವಾದ ವೈಚಾರಿಕ ಕಥೆ )
“ನೋಡಿ ಡಾಕ್ಟರೇ, ಇದು ಖಂಡಿತ ನಮ್ಮ ಮೇಲ್ಜಾತಿಯ ಹಿರಿಯರ ಅಸ್ಥಿಪಂಜರವಿರಬೇಕು, ಈ ಜಾಗದಲ್ಲಿ ಅವರದೇ ಪ್ರಾಬಲ್ಯವಿತ್ತು. ದಯವಿಟ್ಟು ಇದನ್ನು ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲು ನಮಗೆ ಬಿಟ್ಟುಕೊಡಿ.”
”ಸೋಮಣ್ಣನವರೇ, ಸ್ವಲ್ಪ ತಾಳಿ. ವಿಜ್ಞಾನಕ್ಕೆ ಇಂತಹ ಭಾವನೆಗಳಿಗಿಂತ ಸತ್ಯ ಮುಖ್ಯ.”
”ಸತ್ಯ ಎಂದರೆ? ನಿಮ್ಮ ವಿಜ್ಞಾನಕ್ಕೆ ಈ ಮೂಳೆಗಳು ಯಾರದ್ದು ಎಂದು ಹೇಳಲು ಸಾಧ್ಯವಿಲ್ಲವೇ? ಇವರು ನಮ್ಮ ಧರ್ಮದವರೇ ಅಲ್ವಾ?”
”ಖಂಡಿತ ಹೇಳಬಹುದು. ಈ ಅಸ್ಥಿಪಂಜರದ ಸೊಂಟದ ಮೂಳೆ ಮತ್ತು ಹಲ್ಲುಗಳನ್ನು ನೋಡಿದರೆ, ಇದು ಸುಮಾರು 25 ವರ್ಷದ ಒಬ್ಬ ಯುವಕನದ್ದು ಎಂದು ತಿಳಿಯುತ್ತದೆ. ಅವನ ಎತ್ತರ ಮತ್ತು ಮೂಳೆಯ ರಚನೆಯಿಂದ ಅವನು ಯಾವ ಜನಾಂಗಕ್ಕೆ ಸೇರಿದವನೆಂದು ಪತ್ತೆ ಹಚ್ಚಬಹುದು. ಆದರೆ…”
”ಆದರೆ ಏನು? ಅವನು ಹಿಂದೂವೋ ಅಥವಾ ಮುಸ್ಲಿಮನೋ? ಬ್ರಾಹ್ಮಣನೋ ಅಥವಾ ಶೂದ್ರನೋ ಎಂದು ಹೇಳಲು ಸಾಧ್ಯವಿಲ್ಲವೇ?”
”ಇಲ್ಲ ಸೋಮಣ್ಣನವರೇ, ವಿಜ್ಞಾನಕ್ಕೆ ಅದು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ, ಪ್ರಕೃತಿ ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿ ಮಾತ್ರ ಸೃಷ್ಟಿಸಿದೆ. ಈ ಜಾತಿ, ಧರ್ಮಗಳೆಲ್ಲವೂ ಮನುಷ್ಯ ಬದುಕಿರುವಾಗ ತಾನೇ ಸೃಷ್ಟಿಸಿಕೊಂಡ ನಂಬಿಕೆಗಳು ಅಷ್ಟೇ. ಸತ್ತ ಮೇಲೆ ಪ್ರಕೃತಿ ಉಳಿಸಿಕೊಳ್ಳುವುದು ಕೇವಲ ಜೈವಿಕ ಕುರುಹುಗಳನ್ನು ಮಾತ್ರ.”
”ಅಂದರೆ ನೀವು ಹೇಳುವುದು, ನಾವು ಬದುಕಿರುವಾಗ ಇಷ್ಟೊಂದು ಭೇದಭಾವ ಮಾಡುವ ಈ ಜಾತಿಗಳಿಗೆ ಅಸ್ಥಿಪಂಜರದಲ್ಲಿ ಬೆಲೆ ಇಲ್ಲವೆಂದೇ?”
”ಹೌದು ಸೋಮಣ್ಣ. ವಿಜ್ಞಾನವು ಸಾಕ್ಷ್ಯಗಳನ್ನು ‘ತಿಳಿಯುವ’ ಪ್ರಯತ್ನ ಮಾಡುತ್ತದೆ ಹೊರತು, ಯಾರೋ ಮಾಡಿದ ನಂಬಿಕೆಗಳನ್ನು ಒಪ್ಪುವುದಿಲ್ಲ. ಈ ಅಸ್ಥಿಪಂಜರ ನಮಗೆ ಪಾಠ ಕಲಿಸುತ್ತಿದೆ – ನಾವೆಲ್ಲರೂ ಒಳಗಿನಿಂದ ಒಂದೇ, ನಾವೇ ಹಚ್ಚಿಕೊಂಡ ಬಣ್ಣಗಳು ಮಾತ್ರ ಬೇರೆ ಬೇರೆ.”
”ನಿಜ ಹೇಳಿದಿರಿ ಡಾಕ್ಟರೇ. ಮನುಷ್ಯ ತನ್ನ ನಂಬಿಕೆಗಳಿಂದ ಗೋಡೆಗಳನ್ನು ಕಟ್ಟಿಕೊಂಡಿದ್ದಾನೆ, ಆದರೆ ಸಾವಿನ ನಂತರ ಆ ಗೋಡೆಗಳಿಗೆ ಅರ್ಥವೇ ಇಲ್ಲ.”
ಸೋಮಣ್ಣ ಅಸ್ಥಿಪಂಜರಕ್ಕೆ ಗೌರವ ಸಲ್ಲಿಸಿದನು.
ಡಾ. ಸುರೇಂದ್ರ ತನ್ನ ಸಂಶೋಧನೆಯನ್ನು ಮುಂದುವರಿಸಿದರು.
“ಇದು ನಮ್ಮ ಪೂರ್ವಜರ ಪುಣ್ಯಭೂಮಿ. ಈ ಅಸ್ಥಿಪಂಜರ ಖಂಡಿತ ನಮ್ಮ ಕುಲದ ದೈವಭಕ್ತನದ್ದೇ ಇರಬೇಕು!”
”ಇಲ್ಲ, ಇಲ್ಲ! ಈ ಜಾಗ ಹಿಂದೆ ಯುದ್ಧ ಭೂಮಿಯಾಗಿತ್ತು. ಇದು ಶತ್ರು ಸೈನಿಕನದ್ದೂ ಆಗಿರಬಹುದು. ಇದನ್ನು ಇಲ್ಲಿ ಇಡುವುದು ಅಪಶಕುನ.”
”ಡಾಕ್ಟರೇ, ಜನರಲ್ಲಿ ಗೊಂದಲ ಹೆಚ್ಚಾಗಿದೆ. ನೀವು ನಿನ್ನೆ ಹೇಳಿದ ‘ವಿಜ್ಞಾನದ ಸತ್ಯ’ವನ್ನು ಇವರಿಗೆ ಮನವರಿಕೆ ಮಾಡಿಕೊಡಿ. ಇಲ್ಲದಿದ್ದರೆ ಇದು ಇಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಬಹುದು.”
ಡಾಕ್ಟರ್ ಸುರೇಂದ್ರ ಜನರನ್ನು ಉದ್ದೇಶಿಸಿ – “ಬಂಧುಗಳೇ, ಶಾಂತರಾಗಿ. ನಿನ್ನೆ ನಾನು ಸೋಮಣ್ಣನವರಿಗೆ ಹೇಳಿದಂತೆ, ಈ ಅಸ್ಥಿಪಂಜರವನ್ನು ನಾನು ಕೂಲಂಕಷವಾಗಿ ಪರೀಕ್ಷಿಸಿದ್ದೇನೆ. ಈ ಮೂಳೆಗಳು ನಮಗೆ ಒಂದು ಅದ್ಭುತವಾದ ಸತ್ಯವನ್ನು ಹೇಳುತ್ತಿವೆ. ವಿಜ್ಞಾನದ ಪ್ರಕಾರ, ಈ ವ್ಯಕ್ತಿ ಬದುಕಿದ್ದಾಗ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಅವನ ಮೂಳೆಗಳಲ್ಲಿನ ಸವೆತವು ಅವನು ಶ್ರಮಜೀವಿ ಎಂದು ತೋರಿಸುತ್ತಿದೆ.”
”ಅದನ್ನು ಬಿಡಿ ಡಾಕ್ಟರೇ, ಇವನು ಯಾವ ಜಾತಿಗೆ ಸೇರಿದವನು ಎಂದು ಹೇಳಿ?”
ಡಾಕ್ಟರ್ –
“ನೋಡಿ, ಈ ಅಸ್ಥಿಪಂಜರದ ಡಿಎನ್‌ಎ ಪರೀಕ್ಷೆ ಮಾಡಿದರೆ ಅವನು ಯಾವ ಪ್ರದೇಶದವನು, ಅವನ ಪೂರ್ವಜರು ಯಾರು ಎಂದು ತಿಳಿಯಬಹುದು. ಆದರೆ ಅವನು ಹಣೆಯ ಮೇಲೆ ಯಾವ ತಿಲಕ ಇಟ್ಟಿದ್ದ, ಯಾವ ದೇವರನ್ನು ಪ್ರಾರ್ಥಿಸುತ್ತಿದ್ದ ಅಥವಾ ಸಮಾಜ ಅವನನ್ನು ಯಾವ ಜಾತಿಯ ಹೆಸರಿನಿಂದ ಕರೆಯುತ್ತಿತ್ತು ಎಂಬುದು ಈ ಮೂಳೆಗಳಲ್ಲಿ ಎಲ್ಲಿಯೂ ಬರೆದಿಲ್ಲ. ವಿಜ್ಞಾನಕ್ಕೆ ತಿಳಿದಿರುವುದು ಒಂದೇ – ಇವನು ಒಬ್ಬ ‘ಮನುಷ್ಯ’.”
ಸೋಮಣ್ಣ ಮುಂದೆ ಬಂದು –
“ನೋಡಿದ್ರಾ? ನಾವು ಬದುಕಿರುವಾಗ ಒಬ್ಬರನ್ನೊಬ್ಬರು ದ್ವೇಷಿಸಲು ಜಾತಿ-ಧರ್ಮದ ಗೋಡೆಗಳನ್ನು ಕಟ್ಟಿಕೊಳ್ಳುತ್ತೇವೆ. ಆದರೆ ಆ ವಿಧಾತ ಅಥವಾ ಪ್ರಕೃತಿ ನಮ್ಮನ್ನು ಸೃಷ್ಟಿಸುವಾಗ ಅಂತಹ ಯಾವುದೇ ಮುದ್ರೆ ಒತ್ತಿಲ್ಲ. ವಿಜ್ಞಾನವು ಸಾಕ್ಷ್ಯಗಳನ್ನು ನಂಬುತ್ತದೆ, ನಮ್ಮ ಕಲ್ಪಿತ ನಂಬಿಕೆಗಳನ್ನಲ್ಲ “ಎಂದು ಹೇಳಿದಾಗ,ಗ್ರಾಮಸ್ಥರು ಮೌನವಾದರು.
ಅವರಲ್ಲಿದ್ದ ಕೋಪ ಮತ್ತು ಹಠ ನಿಧಾನವಾಗಿ ಕರಗತೊಡಗಿತು.
ಡಾ. ಸುರೇಂದ್ರ –
“ನಾವು ಮಾಡುವ ಸಾಧನೆ, ನಾವು ತೋರುವ ಪ್ರೀತಿ ಮಾತ್ರ ಮಣ್ಣಾದ ಮೇಲೆ ನೆನಪಿನಲ್ಲಿ ಉಳಿಯುತ್ತದೆ. ಈ ಮೂಳೆಗಳು ನಮಗೆ ಕಲಿಸುತ್ತಿರುವ ಪಾಠವೇನೆಂದರೆ – ಮಾನವತ್ವವೇ ಶ್ರೇಷ್ಠ ಧರ್ಮ”ಎಂದು ಹೇಳಿದರು.
ಜನರು ನಿಧಾನವಾಗಿ ಚದುರಿದರು.
ಸೋಮಣ್ಣ ಮತ್ತು ಸುರೇಂದ್ರ ಒಬ್ಬರನ್ನೊಬ್ಬರು ನೋಡಿ ಮುಗುಳ್ನಕ್ಕರು.
ಆ ಅಸ್ಥಿಪಂಜರವು ಮೌನವಾಗಿದ್ದರೂ, ಇಡೀ ಗ್ರಾಮಕ್ಕೆ ಅತಿದೊಡ್ಡ ಜೀವನ ಪಾಠವನ್ನು ಕಲಿಸಿತ್ತು.

- ಜಿ ಎಲ್ ನಾಗೇಶ್
ಧನ್ನೂರ ಆರ್. – ೫೮೫೩೩೦
ಬಸವಕಲ್ಯಾಣ ತಾಲೂಕು
ಬೀದರ ಜಿಲ್ಲೆ.
ಮೊಬೈಲ್ ನಂ. ೯೯೪೫೬೮೬೨೩೪




















