
ಬಳ್ಳಾರಿ: ಈಗಿನ ಯುವ ಪೀಳಿಗೆಯು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿ ಸಿಕೊಂಡಾಗ ಮಾತ್ರ ಮುಂಚೂಣಿಗೆ ಬರಲು ಸಾಧ್ಯ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಡ್ಡರಬಂಡೆಯ ಬಲಿಜ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗಿ ನಾರೇಯಣ ಯತೀಂದ್ರ ಶ್ರೀ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿ ಸುತ್ತಿರುವುದು ಅರ್ಥಪೂರ್ಣವಾಗಿದ್ದು, ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳ ಬೇಕು. ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವ ಜಯಂತಿ ಕಾರ್ಯಕ್ರಮಗಳಿಗಾಗಿ ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನು ಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ ಬಲಿಜ ಜನಾಂಗದವರು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ದಾನ-ಧರ್ಮಕ್ಕೆ ಆದ್ಯತೆ ನೀಡುವವರಾಗಿದ್ದಾರೆ. ಇನ್ನೂ ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು. ಬಳ್ಳಾರಿಯ ನಿವೃತ್ತ ಶಿಕ್ಷಕ ಕೆ.ಬಿ.ಸಿದ್ದ ಲಿಂಗಪ್ಪ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ದಲ್ಲಿ ಮಾತನಾಡಿ, ಕೈವಾರದ ಯೋಗಿ ನಾರೇಯಣ ಯತೀಂದ್ರ (ತಾತಯ್ಯ) ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಸಂತ, ಕವಿ ಮತ್ತು ಕಾಲಜ್ಞಾನಿ. ಇವರು ಕೈವಾರದ ಅಮರನಾರಾ ಯಣನ ಭಕ್ತರಾಗಿದ್ದು, ಭಕ್ತಿ ಮಾರ್ಗ, ವೇದಾಂತ ಮತ್ತು ಸಾಮಾಜಿಕ ಸಮಾನತೆಯನ್ನು ಬೋಧಿಸಿದರು. ಇವರ ಕೀರ್ತನೆಗಳು ಮತ್ತು ತತ್ವಪದಗಳು (ತಾತಯ್ಯನ ತತ್ವಗಳು) ಕನ್ನಡ ಮತ್ತು ತೆಲುಗು ಸಾಹಿತ್ಯದಲ್ಲಿ ಜನಪ್ರಿಯವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಅನುಕೃಸ ರೌಡರು ತಂಡದಿಂದ ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅದ್ದೂರಿ ಮೆರವಣಿಗೆ: ಯೋಗಿ ನಾರೇಯಣ ಯತೀಂದ್ರ ಶ್ರೀ ಕೈವಾರ ತಾತಯ್ಯ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಂಡು ಮೆರವಣಿಗೆಯು ಬಲಿಜ ಭವನದಿಂದ ಆರಂಭವಾಗಿ ರಾಘವೇಂದ್ರ ಚಿತ್ರಮಂದಿರ-ಇಂದಿರಾ ವೃತ್ತ- ಗಡಿಗಿ ಚೆನ್ನಪ್ಪ ವೃತ್ತ- ಮೀನಾಕ್ಷಿ ವೃತ್ತ- ಮರಳಿ ಬಲಿಜ ಭವನದ ವರೆಗೆ ಸಾಗಿ ಬಂದಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ.ರಮೇಶ್ ಬುಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















