ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆಯಲ್ಲಿರುವ 162 ಆಶಾ ಕಾರ್ಯಕರ್ತೆಯರ ಪೈಕಿ 120 ಕಾರ್ಯಕರ್ತೆಯರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಕಾರಣ ಈ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದೀಗ ತಮ್ಮ ಉದ್ಯೋಗ ಉಳಿಸಿಕೊಡುವಂತೆ ಅವರು ಸರಕಾರದ ಮೊರೆ ಹೋಗಿದ್ದಾರೆ.
2009 ರಿಂದ ಅಸ್ತಿತ್ವದಲ್ಲಿರುವ ಆಶಾ ಕಾರ್ಯಕರ್ತೆಯರ ಹುದ್ದೆಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಶರ್ತಬದ್ಧಗೊಳಿಸಬೇಕೆಂದು ಕೇಂದ್ರ ಸರಕಾರ ಕಳೆದ ವರ್ಷ ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಪ್ರತೀ ಒಂದು ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆ ಹುದ್ದೆ ನಿಗದಿ ಮಾಡಲಾಗಿದೆ. ಇದಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶದ ಕಾರ್ಯಕರ್ತೆಯರನ್ನು ಹುದ್ದೆಯಿಂದ ತೆರವು ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯಕರ್ತೆಯರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ನಮ್ಮನ್ನು ಉಳಿಸಿಕೊಡಿ :
ಕಂಪ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರು ಬುಧವಾರ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಅವರನ್ನು ಭೇಟಿ ಮಾಡಿ ನಮ್ಮ ಉದ್ಯೋಗ ಉಳಿಸಿಕೊಡಿ ಎಂದು ಮನವಿ ಮಾಡಿದರು. ನಿಮ್ಮಿಂದ ಮಾತ್ರ ಇದು ಸಾಧ್ಯ. ನಮ್ಮಲ್ಲಿ ನಿವೃತ್ತಿಯಾಗುತ್ತಿರುವಂತೆ ಮಾರ್ಗಸೂಚಿಗೆ ಸರಿಯಾಗಿ ಹೊಂದಾಣಿಕೆ ಮಾಡಲಿ. ಆದರೆ ಈಗಲೇ ರಿಲೀವ್ ಮಾಡಬೇಡಿ. ಎಲ್ಲಾ ಪಿಎಚ್ಸಿಗಳಲ್ಲಿ ಗ್ರೂಪ್ ಡಿ ಹುದ್ದೆ ಖಾಲಿ ಇಲ್ಲದ ಕಾರಣ ಜಿಲ್ಲೆಯ ಮೂಲೆ ಮೂಲೆಗೆ ಹೋಗಬೇಕಾಗಬಹುದು. ಕೇವಲ ಗೌರವಧನಕ್ಕೆ ದುಡಿಯುವ ನಮಗೆ ಇದು ಅಸಾಧ್ಯ ಎಂದವರು ಅಲವತ್ತುಕೊಂಡರು.
ಶಾಸಕ ಜೆ.ಎನ್. ಗಣೇಶ್ ಮಾತನಾಡಿ ಸಿಎಂ ರವರ ಜತೆ ಚರ್ಚಿಸುವೆ, ಆಶಾ ಕಾರ್ಯಕರ್ತೆಯರಲ್ಲಿ ಯಾರೂ ಶ್ರೀಮಂತರಿಲ್ಲ. ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ. ಇವತ್ತೇ ಆರೋಗ್ಯ ಇಲಾಖೆ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆದು ಸಚಿವರು ಮತ್ತು ಮುಖ್ಯಮಂತ್ರಿ ಭೇಟಿ ಮಾಡಿ ಚರ್ಚಿಸುವೆ ಎಂದು ಶಾಸಕರು ಹೇಳಿದರು.
ವರದಿ : ಜಿಲಾನಸಾಬ್ ಬಡಿಗೇರ್




















