ಬೀದರ್/ ಬಸವಕಲ್ಯಾಣ:
ಶರಣೆ ದಾನಮ್ಮನ ತಪೋ ಕ್ಷೇತ್ರ ಕಲ್ಯಾಣ ಕದಳಿ ಗುಣತೀರ್ಥವಾಡಿ-ಬಸವಕಲ್ಯಾಣದಲ್ಲಿ
ದಿನಾಂಕ: ಏಪ್ರಿಲ್ 04 ಮತ್ತು 05-2026ರಂದು ಶರಣೆ ದಾನಮ್ಮ ಉತ್ಸವ, 4ನೇ ಶರಣ ಸಮಾಗಮ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ನಡೆಯಲಿದೆ ಎಂದು ಗುಣತೀರ್ಥವಾಡಿ ಮಾಹಾಮನೆ ಪೀಠಾಧ್ಯಕ್ಷ ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಗುಣತೀರ್ಥವಾಡಿ ಮಾಹಾಮನೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ದಾನಮ್ಮ ಉತ್ಸವ, 4ನೇ ಶರಣ ಸಮಾಗಮ ಕಾರ್ಯಕ್ರಮದ ಉದ್ಘಾಟನೆಗಾಗಿ ದಾನಮ್ಮ ಜ್ಯೋತಿಯನ್ನು ಹೊತ್ತಿಸಿಕೊಂಡು ಬರಲಾಗುತ್ತಿದ್ದು. ದಿನಾಂಕ 7-03-2026 ರಂದು ಬೆಳಿಗ್ಗೆ 6:30ಕ್ಕೆ ಪರುಷ ಕಟ್ಟೆಯಲ್ಲಿ ಬಸವ ಸ್ತೋತ್ರ ತ್ರಿವಿಧಿ ಓದಿ ಜ್ಯೋತಿಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಬಸವಣ್ಣನವರ ಕಲ್ಯಾಣದಲ್ಲಿ ನಡೆದ ಸಮಾನತೆ ಚಳುವಳಿಯಲ್ಲಿ ಪಾಲ್ಗೊಂಡು
ಸ್ತ್ರೀ ಸಮಾನತೆ, ಮೌಢ್ಯ ನಿರ್ಮೂಲನೆ ಮತ್ತು ದೀನ-ದಲಿತರ, ನಿರ್ಗತಿಕರ ಉದ್ಧಾರಕ್ಕಾಗಿ ಹಗಲಿರಳು ಶ್ರಮಿಸಿದ ದಾನಮ್ಮ ತಾಯಿ ಸಮಾಜಕ್ಕೆ ಕಂಟಕವಾಗಿದ್ದ ಮೌಢ್ಯವನ್ನು ಹೋಗಲಾಡಿಸುವಲ್ಲಿ ಶ್ರಮ ವಹಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂತೆಯೇ
ಶರಣ ಪರಂಪರೆಯಲ್ಲಿ ಅತಿ ಹೆಚ್ಚು ಲಿಂಗ ಧಾರಣೆ ಮಾಡಿದ ಕೀರ್ತಿ ದಾನಮ್ಮ ಶರಣೆಗೆ ಸಲ್ಲುತ್ತದೆ. ಇಂತಹ ಶಿವಶರಣೆ ಧಾನಮ್ಮ ತಾಯಿಯವರ ಉತ್ಸವ ಬಸವಕಲ್ಯಾಣದ ಗುಣತೀರ್ಥವಾಡಿ ಮಾಹಾಮನೆಯಲ್ಲಿ ಮಾಡುತ್ತಿರುವುದು ಬಸವ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ,ಸಂತಸ ತಂದಿದೆ. ಜೊತೆಗೆ ಈ ಕಾರ್ಯಕ್ರಮವು ಬಸವಾಭಿಮಾನಿಗಳಿಗೆ ಸೂಜಿಗಲಿನಂತೆ ಸೆಳೆಯುತ್ತಿದೆ.
ಶರಣ ಬಂಧುಗಳು, ಬಸವ ಭಕ್ತರು, ಸಾಹಿತಿಗಳು, ಕಲಾವಿದರು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡು, ಶುಭ ಹಾರೈಸಬೇಕು ಜೊತೆಗೆ ಉತ್ಸವದಲ್ಲಿ ಸರ್ವರೂ ಭಾಗವಹಿಸಬೇಕೆಂದು ಪೂಜ್ಯ ಬಸವಪ್ರಭು ಸ್ವಾಮೀಜಿಗಳು ವಿನಂತಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















