ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಮಂಡಿಸಿದ 2026-27ರ ಬಜೆಟ್ ಕರ್ನಾಟಕದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ. ಕಳೆದ ವರ್ಷದ ರಾಜಸ್ವ ಸಂಗ್ರಹದಲ್ಲೇ ₹15,000 ಕೋಟಿಗಳಷ್ಟು ಭಾರೀ ಹಿನ್ನಡೆ ಅನುಭವಿಸಿರುವ ಈ ಸರ್ಕಾರ, ಈಗ ಯಾವ ನೈತಿಕ ಆಧಾರದ ಮೇಲೆ ₹3.15 ಲಕ್ಷ ಕೋಟಿಯ ಅತಿರೇಕದ ಆದಾಯದ ಗುರಿ ಇಟ್ಟುಕೊಂಡಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ವಾಸ್ತವದಲ್ಲಿ ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದ ಕರ್ನಾಟಕವನ್ನು ಇಂದು ಕೇವಲ ಒಂದು ನಿರ್ದಿಷ್ಟ ಸಮುದಾಯದ (ಮುಸಲ್ಮಾನರ) ಓಲೈಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ತಮ್ಮ ರಾಜಕೀಯ ಉಳಿವಿಗಾಗಿ ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿರುವ ಈ ‘ಬ್ರದರ್ಸ್ ಬಜೆಟ್’ ಜನವಿರೋಧಿಯಾಗಿದೆ.
ಈ ಬಜೆಟ್‌ನ ಭೀಕರತೆಯೆಂದರೆ, ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಯ ಶೇ. 88 ರಷ್ಟು ಭಾಗ ಕೇವಲ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸಲೇ ವ್ಯಯವಾಗುತ್ತಿದೆ. ಅಂದರೆ ಹೊಸ ರಸ್ತೆ, ನೀರಾವರಿ ಅಥವಾ ಮೂಲಸೌಕರ್ಯದಂತಹ ಆಸ್ತಿ ಸೃಜನೆಗೆ ಸರ್ಕಾರದ ಬಳಿ ಬಿಡಿಗಾಸೂ ಇಲ್ಲದಂತಾಗಿದೆ. ಅಚ್ಚರಿಯ ವಿಷಯವೆಂದರೆ, ಸರ್ಕಾರ ₹1.32 ಲಕ್ಷ ಕೋಟಿ ಸಾಲ ಮಾಡಲು ಹೊರಟಿದ್ದರೂ ಸಹ, ಆಸ್ತಿ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವುದು ಕೇವಲ ₹71,924 ಕೋಟಿ ಮಾತ್ರ! ಅಂದರೆ ಮಾಡಿದ ಸಾಲದ ಅರ್ಧದಷ್ಟು ಹಣವನ್ನು ಆಸ್ತಿ ಸೃಜನೆಗೆ ಬಳಸದೆ ದೈನಂದಿನ ಖರ್ಚುಗಳಿಗೆ ಪೋಲು ಮಾಡುತ್ತಿರುವುದು ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಕರಾಳ ಮುನ್ಸೂಚನೆಯಾಗಿದೆ.
ದೇಶಾದ್ಯಂತ ಆರ್ಥಿಕ ನಿರ್ವಹಣೆಯ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಕರ್ನಾಟಕದ ಈ ಹದಗೆಟ್ಟ ಸ್ಥಿತಿಯನ್ನು ನೋಡಲಿ. ಜವಾಬ್ದಾರಿಯುತ ಸರ್ಕಾರವು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಆಸ್ತಿ ನಿರ್ಮಾಣಕ್ಕಾಗಿ ಸಾಲ ಮಾಡುತ್ತದೆ, ಆದರೆ ಈ ಸರ್ಕಾರ ಕೇವಲ ಅಧಿಕಾರ ಉಳಿಸಿಕೊಳ್ಳಲು ಸಾಲ ಮಾಡಿ ಮುಂದಿನ ಪೀಳಿಗೆಯ ತೆರಿಗೆದಾರರ ಮೇಲೆ ಭರಿಸಲಾಗದ ಹೊರೆ ಹೊರಿಸುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯವನ್ನು ‘ಆರ್ಥಿಕ ಸಾಹಸ ಪ್ರವೃತ್ತಿ’ಯ ಮೂಲಕ ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಈ ಬಜೆಟ್ ಅನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ.
ಸಾಲ ಮಾಡಿ ಆಡಳಿತ ನಡೆಸುವುದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ‘ಕರ್ನಾಟಕ ಮಾಡೆಲ್’ ಸಾಧನೆ! ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು.




















