ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅವು ಹಾನಿಕಾರಕವಾಗಬಹುದು. ಬೇಸಿಗೆಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.
ಸೂರ್ಯನು ಸುಡುತ್ತಾ ಬಹುಮುಖಿ ದೇಹದ ತೊಂದರೆಗಳನ್ನು ಎದುರಿಸುತ್ತಿರುವಾಗ, ಬೇಸಿಗೆಯ ತಿಂಗಳುಗಳಲ್ಲಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಕೆಲವು ಸಲಹೆಗಳು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ರಾಜ್ಯಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅದರಲ್ಲಿಯೂ ಬೀದರ್ ಮತ್ತು ಕಲಬುರ್ಗಿ
ಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿನಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ತಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳಷ್ಟು ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು. ಸರ್ಕಾರದಿಂದ ಸಾರ್ವಜನಿಕರಿಗೆ ಅನೇಕ ಸಲಹೆಗಳನ್ನು ನೀಡಿರುತ್ತಾರೆ. ಅವುಗಳನ್ನು ಖಂಡಿತವಾಗಿಯೂ ಪಾಲಿಸಬೇಕು. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸುವುದು ಅಷ್ಟೇ ಸುರಕ್ಷಿತ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.
ಅಲ್ಲದೆ ವಿಶೇಷವಾಗಿ ಹೇಳಬೇಕೆಂದರೆ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ ಅಥವಾ ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆದಷ್ಟು ಒಳ್ಳೆಯದು. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವುದು ಸೂಕ್ತ ಮತ್ತು ಅವಶ್ಯಕವಾಗಿದೆ.
ಇನ್ನು ಆಹಾರವನ್ನು ತೆಗೆದುಕೊಳ್ಳುವಾಗ, ಯಾವಾಗಲೂ ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಕಲುಷಿತ ಆಹಾರ ಮತ್ತು ನೀರಿನಿಂದ ಸೋಂಕು ತಗುಲುವುದನ್ನು ತಪ್ಪುತ್ತದೆ.
ಪ್ರಯಾಣಿಸುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಸೂರ್ಯನ ಶಾಖದಿಂದ ಕಡ್ಡಾಯವಾಗಿ ರಕ್ಷಿಸಿಕೊಳ್ಳಲು ಕ್ಯಾಪ್ ಮತ್ತು ಸನ್ ಗ್ಲಾಸ್ ಧರಿಸಿ. ಟೋಪಿ ಮತ್ತು ಸನ್ ಗ್ಲಾಸ್ ಧರಿಸುವುದರಿಂದ ಸೂಕ್ಷ್ಮ ಪ್ರದೇಶಗಳು UV ಕಿರಣಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.
ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ :
ಏನು ತಿನ್ನುತ್ತೀರಿ ಮತ್ತು ದೇಹವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಬೇಸಿಗೆಯು ಮಾನವರ ಶಕ್ತಿಯ ಮಟ್ಟಗಳು, ಚರ್ಮ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆ
ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡುವುದು ಸೂಕ್ತ.
ಕೊನೆಯದಾಗಿ ಹೇಳುವುದಾದರೆ :
ಬೇಸಿಗೆಯಲ್ಲಿ ಆರೋಗ್ಯವಾಗಿರಲು, ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು, ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶವಿರುವ ಆಹಾರ ಸೇವಿಸುವುದು, ಮತ್ತು ಮಧ್ಯಾಹ್ನ 11 ರಿಂದ 4 ರವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು ಮುಖ್ಯ. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಸನ್ಸ್ಕ್ರೀನ್ ಬಳಸಿ ಮತ್ತು ತಾಜಾ ಆಹಾರ ಸೇವಿಸುವ ಮೂಲಕ ನಿರ್ಜಲೀಕರಣ ಹಾಗೂ ಶಾಖದ ಹೊಡೆತವನ್ನು ತಪ್ಪಿಸಬಹುದು.
ವಿಶೇಷವಾಗಿ ದಿನವಿಡೀ ಸಾಕಷ್ಟು ನೀರು, ಎಳನೀರು, ನಿಂಬೆ ಪಾನಕ, ಮತ್ತು ಮಜ್ಜಿಗೆ ಕುಡಿಯುವುದು. ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ, ಮತ್ತು ಮಾವಿನಹಣ್ಣಿನಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ.
ಅಲ್ಲದೆ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದು ಒಳ್ಳೆಯದು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.
ಜೊತೆಗೆ ನಿಂಬೆ ನೀರು ಸಹ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಅಂದಹಾಗೆ ಬೇಸಿಗೆಯು ವರ್ಷದ ಅದ್ಭುತ ಸಮಯ, ಆದರೆ ಸಂಭಾವ್ಯ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಮ್ಮನ್ನು ನಾವು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ದೊರೆಯಬಹುದಾದ ಎಲ್ಲವನ್ನೂ ಆನಂದಿಸುತ್ತಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಕಾಳಜಿಗಳಿದ್ದರೆ, ಸಮೀಪದ ಆರೋಗ್ಯ ಕೇಂದ್ರಗಳನ್ನು ದಯವಿಟ್ಟು ಸಂಪರ್ಕಿಸಿ.

- ಸಂಗಮೇಶ ಎನ್. ಜವಾದಿ
ಬರಹಗಾರರು, ಪರಿಸರವಾದಿ, ಬೀದರ ಜಿಲ್ಲೆ.




















