
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಶ್ರೀಅಮ್ಮಾಜಿ ವೀರನಾಗಮ್ಮ ತಾಯಿ ದೇವಸ್ಥಾನದಲ್ಲಿ ಭಾರೀ ಕಳ್ಳತನ
30 ಕೆ.ಜಿ.ಗೂ ಅಧಿಕ ಬೆಳ್ಳಿ, 10 ಗ್ರಾಂ ಬಂಗಾರ ಸೇರಿ ಕೋಟಿಗೂ ಅಧಿಕ ಮೌಲ್ಯದ ಒಡವೆಗಳು ಕಳವು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ವಡ್ಡಗೆರೆ ಶ್ರೀ ಕ್ಷೇತ್ರ ವರಪುರದ ಶ್ರೀ ಅಮ್ಮಾಜಿ ವೀರನಾಗಮ್ಮ ತಾಯಿ ದೇವಸ್ಥಾನದಲ್ಲಿ ಖತರ್ನಾಕ್ ಕಳ್ಳರು ಮಂಗಳವಾರ ರಾತ್ರಿ ಸಿನಿಮಾದಂತೆಯೇ ಕಳ್ಳತನ ನಡೆಸಿದ್ದು, ಸುಮಾರು 30 ಕೆ.ಜಿ.ಗೂ ಅಧಿಕ ಬೆಳ್ಳಿ, 10 ಗ್ರಾಂ ಬಂಗಾರ ಸೇರಿದಂತೆ ಕೋಟಿಗೂ ಅಧಿಕ ಮೌಲ್ಯದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಸಂಭವಿಸಿದೆ .
ಕಳ್ಳರು ವಿದ್ಯುತ್ ಸಂಪರ್ಕವನ್ನು ಮೊದಲೇ ಕಡಿತಗೊಳಿಸಿ ಬಳಿಕ ಗ್ಯಾಸ್ ಕಟರ್ ಬಳಸಿ ದೇವಸ್ಥಾನದ ಬಾಗಿಲನ್ನು ಕತ್ತರಿಸಿ ಒಳನುಗ್ಗಿ ದೇವಿಯ ಒಡವೆಗಳನ್ನು ದೋಚಿದ್ದಾರೆ ಅಲ್ಲದೆ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾದ ಡಿವಿಆರ್ನ್ನೂ ಸಹ ಹೊತ್ತೊಯ್ದು ಸಾಕ್ಷ್ಯಗಳನ್ನು ಅಳಿಸುವ ಯತ್ನ ಮಾಡಿದ್ದಾರೆ.
ಕಳ್ಳರು ನಡೆಸಿರುವ ಈ ಸಾಹಸಮಯ ಕೃತ್ಯವು ಸಿನಿಮೀಯ ರೀತಿಯಲ್ಲಿ ನಡೆದ ಕಳ್ಳತನದಂತೆ ಕಾಣುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಎಂದಿನoತೆ ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕರು ದೇವಸ್ಥಾನದ ಬಾಗಿಲು ಕತ್ತರಿಸಿರುವುದನ್ನು ಹಾಗೂ ಒಡವೆಗಳು ಕಾಣೆಯಾಗಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ಕೊರಟಗೆರೆ ತಾಲೂಕಿನ ಪ್ರಸಿದ್ಧ ದೇವಾಲಯವಾಗಿದ್ದು, ಪ್ರತಿವರ್ಷ ಯುಗಾದಿ ಹಬ್ಬದಂದು ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ, ದೇವಸ್ಥಾನದಲ್ಲಿ ನಡೆದ ಕಳ್ಳತನದ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳೀಯರು ಹಾಗೂ ಭಕ್ತರು ದೇವಸ್ಥಾನದ ಸುತ್ತಮುತ್ತ ಸೇರಿ ಕುತೂಹಲದಿಂದ ವೀಕ್ಷಣೆ ಮಾಡಿದ್ದು ಸ್ಥಳಿಯವಾಗಿ ಆತಂಕ ಮೂಡಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವಸ್ಥಾನದ ಸುತ್ತಮುತ್ತ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ತುಮಕೂರಿನ ಅಡಿಷನಲ್ ಎಸ್ಪಿ ಪುರುಷೋತ್ತಮ್, ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಕೊರಟಗೆರೆ ತಹಸೀಲ್ದಾರ್ ಮಂಜುನಾಥ್, ಪಿಎಸ್ಐ ತೀರ್ಥೇಶ್, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಕೊರಟಗೆರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಭಾರೀ ಕಳ್ಳತನದ ಪ್ರಕರಣವು ಇದೀಗ ಕೊರಟಗೆರೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳೊoದಿಗೆ ತನಿಖೆ ಆರಂಭಿಸಿದ್ದಾರೆ.
ವರದಿ. ಪ್ರಸನ್ನಕುಮಾರ್. ಎಸ್., ಕೊರಟಗೆರೆ




















