ಚಿತ್ತಾಪುರ: ರಾಷ್ಟ್ರಮಟ್ಟದಲ್ಲಿ ಬೃಹತ್ ಜಾಲವನ್ನು ಹೊಂದಿರುವ ಪ್ರತಿಷ್ಠಿತ ‘ಅಖಿಲ ಭಾರತ ಕುಂಬಾರರ ಮಹಾಸಭಾದ’ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಚಿತ್ತಾಪುರದ ಜಗದೇವ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ನಿತ್ಯಾಭರಣ ಅವರು ಅಧಿಕೃತ ಆದೇಶ ಪತ್ರವನ್ನು ಹೊರಡಿಸಿದ್ದಾರೆ.
ಸಮಾಜದ ಅಭಿವೃದ್ಧಿಗಾಗಿ ಜಗದೇವ ಅವರು ನೀಡುತ್ತಿರುವ ನಿರಂತರ ಸೇವೆ ಹಾಗೂ ಸಂಘಟನೆಯ ಉದ್ದೇಶಗಳ ಮೇಲಿರುವ ಅವರ ಬದ್ಧತೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಈ ಸಂಘಟನೆಯ ಮಹತ್ವದ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಘಟಕದ ಅಧೀನದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮುನ್ನಡೆಸುವ ಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಪ್ರಮುಖವಾಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಯುವ ಸಬಲೀಕರಣ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ತಮ್ಮ ಹುದ್ದೆಯ ವ್ಯಾಪ್ತಿಯಲ್ಲಿ ಬರುವ ವಿಭಾಗೀಯ ಸಮಿತಿಗಳನ್ನು ರಚಿಸುವ ಹಾಗೂ ಅಗತ್ಯ ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಜಗದೇವ ಅವರಿಗೆ ನೀಡಲಾಗಿದೆ. ವಿಭಾಗ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಸಂಘಟನೆಗೆ ಬದ್ಧರಾಗಿರುವ, ಸೂಕ್ತ ಅನುಭವ ಹೊಂದಿರುವ ಸದಸ್ಯರನ್ನು ಗುರುತಿಸುವುದು. ಅಲ್ಲದೆ, ರಾಜ್ಯಾಧ್ಯಕ್ಷರು ಹಾಗೂ ಆಯಾ ಭಾಗದ ಹಿರಿಯ ನಾಯಕರೊಂದಿಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆ ನಡೆಸುವುದು. ಅಖಿಲ ಭಾರತ ಕುಂಬಾರರ ಮಹಾಸಭಾದ ನೋಂದಾಯಿತ ನಿಯಮಗಳು ಹಾಗೂ ಶಿಸ್ತಿಗೆ ಒಳಪಟ್ಟು, ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸುವುದು.
“ಜಗದೇವ ಕುಂಬಾರ ಅವರ ಸೇವೆಯು ನಮ್ಮ ಮಹಾಸಭೆಗೆ ಮತ್ತಷ್ಟು ಶಕ್ತಿ ಮತ್ತು ಗೌರವವನ್ನು ತಂದುಕೊಡಲಿದೆ ಎಂಬ ದೃಢ ವಿಶ್ವಾಸ ನಮ್ಮದಾಗಿದೆ. ಸಮಾಜದ ಹಿತಕ್ಕಾಗಿ ಅವರು ಕೈಗೊಳ್ಳುವ ಎಲ್ಲಾ ಯಶಸ್ವಿ ಕಾರ್ಯಗಳಿಗೆ ಸಂಘಟನೆಯ ಸಂಪೂರ್ಣ ಬೆಂಬಲವಿರುತ್ತದೆ” ಎಂದು ರಾಜ್ಯಾಧ್ಯಕ್ಷ ನಿತ್ಯಾಭರಣ ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















