ಬೆಳಗಾವಿ/ಬೈಲಹೊಂಗಲ :
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ವಸತಿ ಮತ್ತು ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ೮ನೇ ಮಾರ್ಚ್ ೨೦೨೬ ರಿಂದ ೧೪ನೇ ಮಾರ್ಚ್ ೨೦೨೬ ರವರೆಗೆ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಾರಿಯಿಂದ ಸ್ವಚ್ಛತೆಗೆ ಮುನ್ನುಡಿ ಎಂಬ ಘೋಷವಾಕ್ಯದೊಂದಿಗೆ ಬೈಲಹೊಂಗಲ ನಗರಸಭೆಯಲ್ಲಿ ಮಹಿಳಾ ಪೌರ ಕಾರ್ಮಿಕರ ಸನ್ಮಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಹಿಳಾ ಸ್ವ –ಸಹಾಯ ಸಂಘಗಳ ಸದಸ್ಯರಿಗೆ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರ ಯಶಸ್ವಿಯಾಗಿ ಜರುಗಿತು.
ಈ ವೇಳೆ ಮಾತನಾಡಿದ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ರಾಮಚಂದ್ರ ಹುಗ್ಗಿರವರು ಬೈಲಹೊಂಗಲ ನಗರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿಡುವಲ್ಲಿ ವಿಶೇಷವಾಗಿ ನೈರ್ಮಲ್ಯ ಕಾಪಾಡುವಲ್ಲಿ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ನಮ್ಮ ಮಹಿಳಾ ಪೌರಕಾರ್ಮಿಕರ ಶ್ರಮ ಅನನ್ಯವಾದದ್ದು. ಅವರ ನಿರಂತರ ಸೇವೆಯಿಂದಾಗಿ ನಗರದಲ್ಲಿ ನೈರ್ಮಲ್ಯ ಕಾಪಾಡಲು ಸಾಧ್ಯವಾಗಿದೆ ಎಂದು ಶ್ಲಾಘಿಸಿ ನೈರ್ಮಲ್ಯ ಕಾರ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ಪೌರಕರ‍್ಮಿಕರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಿದರು.
ಇದೇ ವೇಳೆ ಬೈಲಹೊಂಗಲ ನಗರಸಭೆಗೆ ಪ್ರಪ್ರಥಮವಾಗಿ ಮಹಿಳಾ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಯುಕ್ತ ಶ್ರೀಮತಿ ಭಾಗ್ಯಶ್ರೀ ರಾಮಚಂದ್ರ ಹುಗ್ಗಿ ರವರನ್ನು ಮಹಿಳಾ ದಿನಾಚರಣೆ ಅಂಗವಾಗಿ ನಗರಸಭೆಯ ಸಿಬ್ಬಂದಿಗಳು ಸನ್ಮಾನಿಸಿದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿ ನಗರದ ಸ್ವಚ್ಛತೆಯ ಬೆನ್ನೆಲುಬಾಗಿರುವ ಎಲ್ಲಾ ಪೌರಕಾರ್ಮಿಕರಿಗಾಗಿ ಬೃಹತ್ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿತ್ತು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಶ್ರೀ ರಾಯಣ್ಣ ನಾಯ್ಕರ ಹಾಗೂ ವೈಭವಿ ಮೇಟಿ ಇವರ ತಂಡ ಪೌರಕಾರ್ಮಿಕರ ರಕ್ತದೊತ್ತಡ, ಮಧುಮೇಹ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಡೆಸಿದರು.
ಜೊತೆಗೆ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಸೋಮಶೇಖರ ಮುತ್ನಾಳ ರವರು ಪೌರಕಾರ್ಮಿಕರಿಗೆ ವಿಶೇಷ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತ್ಯಾಜ್ಯ ವಿಲೇವಾರಿ ಮಾಡುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ವೈಯಕ್ತಿಕ ನೈರ್ಮಲ್ಯ ಮತ್ತು ದೈನಂದಿನ ಪೌಷ್ಟಿಕ ಆಹಾರದ ಮಹತ್ವದ ಕುರಿತು ಕಾರ್ಮಿಕರಲ್ಲಿ ಅರಿವು ಮೂಡಿಸಲಾಯಿತು.
ಇದೇ ವೇಳೆ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ದೃಷ್ಟಿಯಿಂದ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಅಮೃತ್ ೨.೦’ ಯೋಜನೆಯಡಿ ನೀರಿನ ಗುಣಮಟ್ಟತಾ ಪರೀಕ್ಷೆ ನಿರ್ವಹಿಸಲು ಆಯ್ಕೆಯಾದ ಮಹಿಳಾ ಸ್ವಹಾಯ ಸಂಘಗಳ ಸದಸ್ಯರಿಗೆ ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಶಿಯನ್ ಶ್ರೀ ನಾಗರಾಜ ಬಡಿಗೇರ ರವರು ತರಬೇತಿ ನೀಡಿದರು.
ಶ್ರೀ ಆರ್. ಎಸ್. ಹಿಟ್ಟಣಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆಯ ಕಛೇರಿ ವ್ಯವಸ್ಥಾಪಕ ಶ್ರೀ ಎಮ್. ಆಯ್. ಕುಟ್ರಿ, ಪ್ರ.ದ.ಸ. ಶ್ರೀಮತಿ ಮಹಾದೇವಿ ನಡಕಟ್ಟಿನ, ಕಿರಿಯ ಆರೋಗ್ಯ ನಿರೀಕ್ಷಕ ಶ್ರೀ ಸುರೇಶಗೌಡ ಎನ್. ಪಾಟೀಲ, ಶ್ರೀ ಎ. ವಾಯ್. ಹೆಗಡೆ, ಶ್ರೀಮತಿ ಸೋನಾಲಿ ಬುಬನಾಳೆ, ಶ್ರೀಮತಿ ಸವಿತಾ ಹರಕುಣಿ, ಶ್ರೀಮತಿ ಮಾಧುರಿ ರಾಮಗುಂಡಿ, ಶ್ರೀಮತಿ ಜ್ಯೋತಿ ಹಿರೇಮಠ, ಶ್ರೀಮತಿ ಶಿವಲೀಲಾ ಕರಿಬಾಳೆ, ಸಿ.ಆರ್.ಪಿ. ಗಳಾದ ಕು. ರೂಪಾ ಪಾಟೀಲ, ಶ್ರೀಮತಿ ಸುರ‍್ಣಾ ಬೆಳವಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ಇದ್ದರು.
ವರದಿ ಮಂಜು ಎಂ.ಚಿಕ್ಕಣ್ಣವರ




















