
ಕೊಪ್ಪಳ : ಜಿಲ್ಲೆಯಲ್ಲಿ ಸುಡುಬಿಸಿಲು ಜನರ ನೆತ್ತಿ ಸುಡುತ್ತಿದೆ. ಮಧ್ಯಾಹ್ನ ಬೆಂಕಿಯುಗುಳುವ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಮನುಷ್ಯರ ಸ್ಥಿತಿ ಹೀಗಾದ್ರೆ ಇನ್ನು ಪ್ರಾಣಿ- ಪಕ್ಷಿಗಳ ಸ್ಥಿತಿ ಹೇಳೋದೇ ಬೇಡ. ಬಿಸಿಲಿನ ತಾಪ ಪ್ರಾಣಿ -ಪಕ್ಷಿಗಳ ಜೀವಕ್ಕೆ ಸಂಚಕಾರ ತಂದಿದೆ. ಪಕ್ಷಿಗಳಿಗೆ ನೀರು ಉಣಿಸುವ ವಿಶೇಷ ಪ್ರಯತ್ನ ಜಿಲ್ಲೆಯ ಬೆಟಗೇರಿಗೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಹವ್ಯಾಸ ಬೆಳೆಸುವ ಜತೆಗೆ ಪಕ್ಷಿಗಳ ಕುರಿತು ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಬೆಟಿಗೇರಿಗೆಯ
ಸರ್ಕಾರಿ ಪ್ರೌಢಶಾಲೆಯಲ್ಲಿ ʼಚಿಂವ್ ಚಿಂವ್ʼ ಅಭಿಯಾನ ನಡೆದಿದೆ.
ಕಾರ್ಯಕ್ರಮದ ಸಂಚಾಲಕ ಭೌತವಿಜ್ಞಾನ ಶಿಕ್ಷಕರಾದ ಮರ್ದಾನಲಿ ಗಡಾದ ಮಾತನಾಡಿ ಪ್ರಾಣಿ-ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳು ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತವಾಗಿವೆ. ನಾವು ಆರೋಗ್ಯದಿಂದ ಬದುಕಲು ಪ್ರಾಣಿ ಪಕ್ಷಿ ಗಿಡಮರಗಳು, ಕಾಡುಗಳು ಅತ್ಯಾವಶ್ಯಕವಾಗಿವೆ. ಈ ವರ್ಷ ಏಪ್ರಿಲ್ ಗೂ ಮೊದಲೇ ಬಿಸಿಲಿನ ಝಳ ಹೆಚ್ಚಾಗುತ್ತಿದೆ ಇದರಿಂದ ನೀರಿನ ಮೂಲಗಳು ಬತ್ತಿ ಹಳ್ಳ ಸೇರಿ ಎಲ್ಲಿಯೂ ನೀರು ಸಿಗದ ಇಂತಹ ಪರಿಸ್ಥಿತಿಯಲ್ಲಿ ಗುಬ್ಬಚ್ಚಿ, ಗಿಣಿ, ಪಾರಿವಾಳ ಕಾಗೆ ,ಹದ್ದು ಅಳಿಲು, ನವಿಲು, ಗುಟುರು ಹಕ್ಕಿಗಳೂ ಸೇರಿದಂತೆ ಇನ್ನೂ ಹಲವಾರು ಪಕ್ಷಿಗಳಿಗೆ ನೀರು ಸಿಗದಂತಾಗಿ ಜೀವ ಕಳೆದುವಂತಾಗಿದೆ. ಮನುಷ್ಯರಿಗೆ ನೀರಿನ ದಾಹವಾದರೆ ಎಲ್ಲಿಯಾದರೂ ಹೋಗಿ ನೀರು ಕುಡಿಯಬಹುದು ಆದರೆ ಪಕ್ಷಿಗಳು ಎಲ್ಲಿಗೆ ಹೋಗಬೇಕು ಅವುಗಳ ಮೂಕರೋದನೆ ಕೇಳುವವರ್ಯಾರು ಆದ್ದರಿಂದ ಶಾಲಾ ಮಕ್ಕಳಿಗೆ ಇದರ ಕುರಿತು ಅರಿವು ಮೂಡಿಸುವ ಸಲುವಾಗಿ ‘ಗುಟುಕು ನೀರಿನ ಅರವಟಿಕೆ’ ಗಳ ಅಳವಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ, ಪಕ್ಷಿಪ್ರೇಮಿಗಳು ಹಾಗೂ ಮಕ್ಕಳು ನಿಮ್ಮ ಮನೆಯ ಮುಂದಿನ, ಹಿತ್ತಲಿನ ಕೈತೋಟ, ಹೊಲಗದ್ದೆ, ದೇವಸ್ಥಾನ ಬಳಿ ಇರುವ ಶಾಲೆಯ ಮೈದಾನದಲ್ಲಿರುವ ಗಿಡಮರಗಳ ಟೊoಗೆಗಳಿಗೆ ನೀರಿನ ಅರವಟಿಗೆಗಳನ್ನು ಕಟ್ಟಿ ಅವುಗಳಿಗೆ ನಿರುಣಿಸುವ ಕಾರ್ಯ ಮಾಡಬೇಕು. ಇದು ಪುಣ್ಯದ ಕೆಲಸಗಳಲ್ಲಿ ಒಂದಾಗಿದೆ ಎಂದರು. ಹಿರಿಯ ಶಿಕ್ಷಕ ಗಿರಿಯಪ್ಪ ಹಾರನಹಳ್ಳಿ ಮಾತನಾಡಿ ನೀರು ಅಮೂಲ್ಯವಾಗಿದ್ದು ಎಲ್ಲಾ ಜೀವಿಗಳಿಗೂ ಮೂಲಧಾರವಾಗಿದೆ.ಪಕ್ಷಿಗಳಿಗೆ ನೀರಿನ ಅರವಟಿಗೆಗಳನ್ನುತಯಾರಿಸಿ ಮಕ್ಕಳಿಗೆ ವಿತರಣೆ ಮಾಡುತ್ತಿರುವವುದು ಶ್ಲಾಘನೀಯ ಕಾರ್ಯ ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಖ್ಯ ಗುರುಗಳಾದ ಪರಶುರಾಮ ಸಾಲ್ಮನಿ ಮಾತನಾಡಿ ಗುಟುಕು ನೀರಿನ ಅರವಟಿಕೆಗಳನ್ನು ಅಳವಡಿಸಿ ಪಕ್ಷಿಗಳ ನೀರಿನ ದಾಹವನ್ನು ಕಡಿಮೆ ಮಾಡಬಹುದು. ಮಕ್ಕಳು ತಮ್ಮ ಮನೆಯ ಮುಂದೆ ಇರುವ ಮರಗಳ ಟೊoಗೆಗಳಿಗೆ ಕಟ್ಟಿ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಶಾಂತಂವೀರಯ್ಯ ಕಳ್ಳಿಮಠ, ರವಿಕಿರಣ್ ಟಿಕಾರೆ ರಾಜಾಸಾಬ ಬಳಿಗೇರ್, ಪ್ರಕಾಶರೆಡ್ಡಿ ಗೋವಿಂದರೆಡ್ಡಿ ಸುನೀತಾ ಯಾಳಗಿ ಸೋಮಣ್ಣ ತಳಕಲ್, ಪರಶುರಾಮ್ ಯಡವಟ್ಟಿ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















