ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದುಷ್ಟ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಬಂದ ಎಸ್.ಪಿ. ಡಾ. ಸುಮನ್ .ಡಿ. ಪನ್ನೇಕರ್

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್

ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಬಳ್ಳಾರಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದ್ದಾರೆ. ಇನ್ನೂ ಕೆಲವು ಎಸ್ ಪಿ ಗಳು ತಮ್ಮ ಪಾಡಿಗೆ ತಾವು ಹೀಗೆ ಬಂದು ಹಾಗೆ ಹೋಗಿದ್ದಾರೆ. ಇದೀಗ ಬಳ್ಳಾರಿ ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಡಾ.ಸುಮನ್ .ಡಿ. ಪನ್ನೇಕರ್ ಅವರು ಇದಕ್ಕೆ ಪರ್ಯಾಯವಾಗಿ ಬಂದಿದ್ದಾರೆ. ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿಗಾಗಿ ಎಲ್ಲಾ ದುಷ್ಟ ಶಕ್ತಿಗಳು ಸುಮ್ಮನಿದ್ದರೆ ಸುಮನ್ ಡಿ. ಪನ್ನೇಕರ್ ಶಾಂತವಾಗಿರುತ್ತಾರೆ. ಬಾಲ ಬಿಚ್ಚಿದರೆ ಮಾತ್ರ ಬೆಂಕಿ ಬಿರುಗಾಳಿಯಾಗುತ್ತಾರೆ. ಇದು ಅವರ ಕರ್ತವ್ಯ ಪ್ರಜ್ಞೆಗೆ ನಾಡಿನ ಜನತೆ ನೀಡಿದ ಅಭಿಪ್ರಾಯ ವಿಶೇಷವಾಗಿದೆ.

ಬಾಲ್ಯ, ಆರಂಭಿಕ ಜೀವನ :

ಜುಲೈ 30. 1985. ರಂದು ಜನಿಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಿಡಿ ಅನ್ನುವ ಗ್ರಾಮ ಇವರ ಹುಟ್ಟೂರು. ಇವರ ತಂದೆಯವರು ಶಾಲಾ ಶಿಕ್ಷಕರಾಗಿದ್ದರು, ತಂದೆ ದಿನಾಲೂ ದಿನಪತ್ರಿಕೆಗಳನ್ನು ತರುತ್ತಿದ್ದರು ಅದನ್ನು ಸುಮನ್ ರವರು ಓದುತ್ತಿದ್ದರು, ಆಗ ಬೆಳಗಾವಿಯಲ್ಲಿ ಒಬ್ಬ ಮಹಿಳಾ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದರು ಅವರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ತಂದೆಯವರು ಕೂಡ ಇವರ ಹಾಗೆ ನೀನು ಆಗಬೇಕು ಎಂದು ಸ್ಪೂರ್ತಿ ತುಂಬುತ್ತಿದ್ದರು, ಹೀಗೆ ಸ್ಪೂರ್ತಿ ಪಡೆದು ಜೀವನದಲ್ಲಿ ಏನಾದರೂ ಮಾಡಲೇಬೇಕು ಎಂಬ ಪಣತೊಟ್ಟರು. ಓದಿನಲ್ಲಿ ಮುಂದೆ ಇದ್ದ ಸುಮನ್ 2009ರಲ್ಲಿ ಆಯುರ್ವೇದ ಡಾಕ್ಟರಾದರು. ವೈದ್ಯೆಯಾಗಿ ಜನರ ಸೇವೆ ಮಾಡಬೇಕೆಂಬ ಹಂಬಲ ಇದ್ದಾಗ ಕುಟುಂಬದವರು ಸುಮನ್ ರವರಿಗೆ ವಿವಾಹ ಮಾಡಿದರು. ನಂತರ ಯುಪಿಎಸ್ ಸಿ ಪರೀಕ್ಷೆ ಬರೆದು ಕುಟುಂಬದ ಸಹಕಾರದೊಂದಿಗೆ ಐಪಿಎಸ್ ಅಧಿಕಾರಿಯಾದರು.

ಬಳ್ಳಾರಿಗೆ ಬಂದ ದಕ್ಷ ಅಧಿಕಾರಿ :

ಬಿಸಿಲೂರಿನ ಬಳ್ಳಾರಿಯಲ್ಲಿ ಜನವರಿ 2026 ರ 1 ರಿಂದಲೇ ದೊಡ್ಡ ಮಟ್ಟದ ದಾಂಧಲೆ ನಡೆದಿತ್ತು. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬ್ಯಾನರ್ ಅಳವಡಿಸಲು ಮುಂದಾದಾಗ ಬಿಜೆಪಿಯ ರೆಡ್ಡಿ, ರಾಮುಲು ಮತ್ತು ಕೈ ಪಕ್ಷದ ಶಾಸಕ ನಾರಾಭರತ್ ರೆಡ್ಡಿ ನಡುವೆ ದೊಡ್ಡ ಮಟ್ಟದ ಕಾಳಗ ನಡೆಯಿತು. ಆಗ ತಾನೆ ಡಾ. ಶೋಭಾರಾಣಿ ವಿ. ಜೆ. ಮಂಡ್ಯ ಜಿಲ್ಲೆಗೆ ವರ್ಗಾವಣೆ ಆಗಿದ್ದರು. ಅವರ ಸ್ಥಾನಕ್ಕೆ ಪವನ್ ನೆಜ್ಜುರ್ ಎನ್ನುವ ಎಸ್.ಪಿ. ಕಾಲಿರಿಸಿದ್ದರು. ಅಷ್ಟರೊಳಗೆ ಬಳ್ಳಾರಿಯಲ್ಲಿ ಗುಂಪು ಘರ್ಷಣೆ ನಡೆದು ಹೋಗಿ, ಓರ್ವ ಕಾರ್ಯಕರ್ತ ಗುಂಡಿಗೆ ಬಲಿಯಾಗಿ ಬಿಟ್ಟ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಘಟನೆಯನ್ನು ನಿಭಾಯಿಸುವಲ್ಲಿ ವಿಫಲವಾದ ಹೊಸ ಎಸ್.ಪಿ. ಯನ್ನು ಕೂಡಲೇ ಅಮಾನತ್ತು ಮಾಡಿ ಉಸ್ತುವಾರಿ ಎಸ್. ಪಿ. ಯಾಗಿ ರಂಜಿತ್ ಕುಮಾರ್ ಬಂಡಾರುವರನ್ನು ನೇಮಿಸಿತು. ಇದರ ಹಿಂದೆಯೇ ಐಜಿಪಿ ವರ್ತಿಕಾ ಕಟಿಯಾರ್ ಅವರನ್ನೂ ಸಹ ವರ್ಗಾವಣೆ ಮಾಡಿತು. ಬಳಿಕ ಬಳ್ಳಾರಿ ಘಟನೆಯನ್ನು ನಿಭಾಯಿಸಲು ತನಿಖೆ ನಡೆಸಲು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು ನೂತನ ಎಸ್. ಪಿ. ಯಾಗಿ ಡಾ. ಸುಮನ್ ಡಿ. ಪನ್ನೇಕರ್ ಅವರನ್ನು ರಾಜ್ಯ ಸರ್ಕಾರ ಬಳ್ಳಾರಿ ಎಸ್. ಪಿ. ಯಾಗಿ ನಿಯೋಜಿಸಿತು. ಅಷ್ಟೇ ಅಲ್ಲ, ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಅಲ್ಲಿನ ವಾಸ್ತವ ಅರಿತು. ಘರ್ಷಣೆಗೆ ಕಾರಣರಾದ ಯಾರೇ ಇರಲಿ, ಅವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಖುದ್ದು ಸಿ. ಎಂ. ಸಿದ್ದರಾಮಯ್ಯ ಅವರೆ ಡಾ.ಸುಮನ್ ಡಿ ಪೆನ್ನೇಕರ್ ಅವರಿಗೆ ಹೇಳಿ ಬಳ್ಳಾರಿಗೆ ಕಳುಹಿಸಿಕೊಟ್ಟಿದ್ದಾರೆ. ಬಳ್ಳಾರಿಗೆ ಬಂದ ವೀರನಾರಿ ಇದೀಗ ಇಲ್ಲಿನ ಸಮಾಜಘಾತುಕ ಶಕ್ತಿಗಳನ್ನು ಒಂದೊಂದಾಗಿ ಫುಟ್ಬಾಲ್ ಆಡುತ್ತಿದ್ದಾರೆ.

ಹೌದು… ಡಾ. ಸುಮನ್.ಡಿ.ಪೆನ್ನೇಕರ್ ಅವರು ಕರ್ನಾಟಕ ಕೇಡರ್‌ನ 2013 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಈಗಾಗಲೇ 2018 ರಿಂದ ಕೊಡಗು ಜಿಲ್ಲೆಯ ಎಸ್. ಪಿ. ಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಮಾಜ ಸೇವೆ ಮತ್ತು ಪೊಲೀಸ್ ಆಡಳಿತದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದಕ್ಷತೆ, ನಿಷ್ಠುರತೆ, ಕರ್ತವ್ಯ ನಿಷ್ಠೆಗೆ ಮತ್ತು ಮಾನವೀಯ ಆಡಳಿತಕ್ಕೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕೊಡಗು-ಮಡಿಕೇರಿಯಲ್ಲಿ ಪ್ರವಾಹ ಉಂಟಾದಾಗ ಡಾ. ಸುಮನ್ ಪನ್ನೇಕರ್ ಅಕ್ಷರಶಃ ನಿದ್ದೆ ಮಾಡದೇ ಇರುವ ದಿನಗಳು ಅವು ಹಗಲೂ ರಾತ್ರಿ ಸಂತ್ರಸ್ಥರಿಗಾಗಿ ಮಿಡಿಯುತ್ತಾ, ಪೊಲೀಸ್ ಇಲಾಖೆಯ ಸಮಗ್ರ ಶಕ್ತಿಯನ್ನು ಬಳಸಿ. ಅಲ್ಲಿನ ಜನತೆಗೆ ಸ್ಪಂದಿಸಿದ್ದಾರೆ.

ಅಪ್ಪಟ ಕನ್ನಡತಿ :

ಡಾ. ಸುಮನ್ ಪನ್ನೇಕರ್ ಅಪ್ಪಟ ಕನ್ನಡತಿ.
ಅವರು ಸಪ್ತಮಾತೃಕೆಯರಲ್ಲಿ ಓರ್ವಳಾದ ಸವದತ್ತಿಯ ಸರ್ವಶಕ್ತಿ ಶ್ರೀ ರೇಣುಕಾ ಎಲ್ಲಮ್ಮ ನೆಲೆಸಿರುವ ಬೆಳಗಾವಿ ಜಿಲ್ಲೆಯ ಮಣ್ಣಿನವರು. ಹೇಳಿ ಕೇಳಿ ಕ್ರಾಂತಿಕಾರಿಗಳ ಹಳ್ಳಿ ಸೊಗಡಿನಿಂದ ಬಂದಿರುವ ಡಾ.ಸುಮನ್ ಪನ್ನೇಕರ್ ಮೊದಲು ಎಸ್. ಪಿ. ಯಾಗಿದ್ದೇ ಕೊಡಗು ಜಿಲ್ಲೆಗೆ.
2018 ರಲ್ಲಿ ಮಡಿಕೇರಿ ಅತಿವೃಷ್ಟಿಯ ಪ್ರವಾಹ, ಪ್ರಕೃತಿಯ ಅವಾಂತರಗಳನ್ನು ಎನ್‌ಡಿಆರ್ ಎಫ್ ನೊಂದಿಗೆ ಶ್ರಮ ವಹಿಸಿ, ನಿರ್ವಹಿಸಿ ಬಂದವರು.

ಉತ್ತರ ಕನ್ನಡಕ್ಕೆ:
ಸರ್ಕಾರಿ ನೌಕರರಿಗೆ ಸಹಜವಾಗಿ
ವರ್ಗಾವಣೆ ಇರುವಂತೆ ಇವರಿಗೆ ಕೊಡಗಿನಿಂದ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿತ್ತು. ಇಲ್ಲಿ ಇವರಿಗೆ ಎದುರಾದ ಸವಾಲುಗಳು ಒಂದೆರಡಲ್ಲ. ಕೊಡಗಿನ ಪ್ರಕೃತಿ, ರಮಣೀಯತೆಯ ನಡುವೆ ಮಳೆಯ ಅವಾಂತರದಿಂದ ರೌದ್ರಾವತಾರ ತಾಳಿದ ಪ್ರಕೃತಿಯನ್ನು ಮಣಿಸಿ, ಜನರನ್ನು ಪಾಲಿಸಿ ಬಂದಿದ್ದ ಡಾ.ಸುಮನ್ ಪನ್ನೇಕರ್ ಅವರಿಗೆ ಕಾರವಾರದ ಪರಿಸ್ಥಿತಿ ಮತ್ತೊಂದು ರೀತಿಯ ಅನುಭವ ನೀಡಿತ್ತು. ಆಗ ಬಿಜೆಪಿ ಸರ್ಕಾರದ ಅವಧಿ, ಕಾರವಾರ ಅಂದರೆ ಕರಾವಳಿ ತೀರದ ನಿಲ್ದಾಣ. ಗೋವಾ ಗಡಿ ಭಾಗ ಮತ್ತು ಮಹಾರಾಷ್ಟ್ರದ ಹತ್ತಿರ ಇರುವ ಕಾರವಾರದಲ್ಲಿ ಸಮಾಜ ಘಾತುಕ ಚಟುವಟಿಕೆಗಳು ಧಾರಾಳವಾಗಿ ನಡೆಯುತ್ತಿರುವುದನ್ನು ಗಮನಿಸಿದರು. ಅಲ್ಲಿನ ರಾಜಕಾರಣಿಗಳ ಹಿಡಿತ, ಪ್ರಭಾವದಿಂದ ನಡೆಯುತ್ತಿರುವ ಎಲ್ಲಾ ಬಗೆಯ ಸಮಾಜ ಘಾತುಕ ಚಟುವಟಿಕೆಗಳನ್ನು ಹತ್ತಿಕ್ಕಲು ಮುಂದಾದರು. ಮಟಕಾ, ಗಾಂಜಾ, ಅಫೀಮು, ಇಸ್ಪೀಟ್, ಜೂಜಾಟ, ಗ್ಯಾಂಬ್ಲಿಂಗ್ ಸೇರಿದಂತೆ ಹಲವು ಬಗೆಯ ದುಷ್ಕೃತ್ಯಗಳು ನಡೆಯುತ್ತಿದ್ದವು. ಇವುಗಳನ್ನು ಹಂತ ಹಂತವಾಗಿ ಸದೆ ಬಡಿದ ಡಾ.ಸುಮನ್ ಪನ್ನೇಕರ್ ಅವರಿಗೆ ಸಹಜವಾಗಿ ಅಲ್ಲಿನ ರಾಜಕಾರಣಿಗಳೇ ಕೆಂಡಕಾರತೊಡಗಿದರು. ರೌಡಿ ಪಟಾಲಂಗಳು ಇವರ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ನಾನಾ ಬಗೆಯ ರಾಜಕಾರಣ ಮಾಡಿದರು. ಯಾರೇ ಏನೇ ಮಾಡಿದರೂ ಇವರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ಎಲ್ಲಾ ಸಮಾಜ ಘಾತುಕ ಚಟುವಟಿಕೆಗಳನ್ನು ಮಟ್ಟ ಹಾಕಿದರು. ಪ್ರಾಮಾಣಿಕ ಅಧಿಕಾರಿಗೆ ಅಪ್ರಾಮಾಣಿಕ ರಾಜಕಾರಣಿಗಳು ಇನ್ನೇನು ಮಾಡಲು ಸಾಧ್ಯ? ಇವರನ್ನು ವರ್ಗಾವಣೆ ಮಾಡಿಸಿಯೇ ಬಿಟ್ಟರು. ಅನೇಕ ಪ್ರತಿಭಟನೆ ಪತ್ರಿಕಾಗೋಷ್ಠಿಗಳು ನಡೆದು ಇವರ ವರ್ಗಾವಣೆಗೆ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮಂಡ್ಯಕ್ಕೆ ಬಂದ ಗಂಡೆದೆಯ ಎಸ್ ಪಿ ಮೇಡಂ : ಮಂಡ್ಯ ಜಿಲ್ಲೆಯದ್ದು ಇನ್ನೊಂದು ಕಥೆ. ಇಲ್ಲಿ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಇರದಷ್ಟು ರಾಜಕೀಯ ನಾಯಕರು ಇಲ್ಲಿ ಬಲಿಷ್ಠವಾಗಿ ಬೆಳೆದಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ರಾಜಕಾರಣಿಗಳ ನಡುವೆ ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗಿಂತ ಅಲ್ಲಿನ ರಾಜಕಾರಣಿಗಳ ಜೊತೆ ಹೆಣಗಾಡುವುದೇ ದೊಡ್ಡ ಸವಾಲು. ಬಹಳ ಕ್ಲಿಷ್ಟಕರ ಕೆಲಸ. ಕಾರವಾರದಿಂದ ನೇರವಾಗಿ ಮಂಡ್ಯಕ್ಕೆ ಬಂದ ಡಾ. ಸುಮನ್ ಪನ್ನೇಕರ್ ಅವರಿಗೆ ಪೋಸ್ಟಿಂಗ್ ಆದರೂ ಕರ್ತವ್ಯಕ್ಕೆ ಸಾಧ್ಯವಾಗಲಿಲ್ಲ. ಆ ದಿನಗಳನ್ನು ಖಾಲಿಯಾಗಿಯೇ ಕಳೆದರು, ಒಬ್ಬ ಎಸ್ ಪಿ ಗೆ ಸರಕಾರ ಪೊಸ್ಟಿಂಗ್ ಕೊಟ್ಟರೂ ಸ್ಥಳೀಯ ರಾಜಕಾರಣದಿಂದಾಗಿ ಡ್ಯೂಟಿಗೆ ರಿಪೋರ್ಟ್ ಮಾಡಲಾಗಲಿಲ್ಲ. ಅಲ್ಲಿನ ರಾಜಕಾರಣಿಗಳಿಗೆ ಸುಮನ್ ರವರ ಬಗ್ಗೆ ಮಾಹಿತಿ ಇತ್ತು. ಸುಮನ್‌ರವರಿಗೆ ಬೆದರಿದ ಅಲ್ಲಿನ ರಾಜಕಾರಣಿಗಳು ಮಂಡ್ಯದಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡುವ ಮುಂಚೆಯೇ ಸುಮನ್‌ ವರ್ಗಾವಣೆ ಆದೇಶ ತಂದರು.

ಪ್ರಜ್ವಲ್ ರೇವಣ್ಣ ಕೇಸ್‌ನ ಎಸ್‌ಐಟಿ ತಂಡದಲ್ಲಿ ಸುಮನ್ ಡಿ. ಪನ್ನೇಕರ್‌ರವರು :

ರಾಜ್ಯ ಹಾಗೂ ದೇಶಾದ್ಯಂತ ಸದ್ದು ಮಾಡಿದ್ದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎಸ್‌ಐಟಿಗೆ ವಹಿಸಿತ್ತು ಈ ತಂಡದಲ್ಲಿ ಸುಮನ್ ಡಿ. ಪನ್ನೇಕರ್‌ರವರು ಪ್ರಮುಖ ಪಾತ್ರವಹಿಸಿ ದಿಟ್ಟತನದಿಂದ ಕರ್ತವ್ಯ ನಿರ್ವಹಿಸಿ, ತನಿಖೆ ನಡೆಸಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಎಸ್‌ ಐಟಿ ಟೀಂನಲ್ಲಿ ಕೆಲಸ ಮಾಡಿದ ಖ್ಯಾತಿ ಸುಮನ್ ಡಿ ಪೆನ್ನೇಕರ್‌ರವರಿಗೆ ಇದೆ.

ಬಳ್ಳಾರಿ ಗಲಭೆಗೆ ಎಂಟ್ರಿ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಅಡಿ ಇರಿಸಿದ್ದೇ ರೆಡ್ಡಿ, ರಾಮುಲು ನಿವಾಸ ಬಳಿ ನಡೆದಿದ್ದ ಗಲಭೆಯ ಪ್ರದೇಶಕ್ಕೆ. ಕಾರ್ಯಕರ್ತನ ಹತ್ಯೆಯ ಕೇಸಿನ ಜಾಡು ಹಿಡಿದು ಬಳ್ಳಾರಿ ನಗರದಲ್ಲಿನ ಸೂಕ್ಷ್ಮತೆಯನ್ನು ಅರಿತರು. ತಡಮಾಡದೆ ಗಲಭೆಗೆ ಕಾರಣರಾದ ಎರಡೂ ಕಡೆಯ ಕಾರ್ಯಕರ್ತರನ್ನು ವಿಚಾರಣೆಗೊಳಪಡಿಸಿ 60ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಕೆಲವರನ್ನು ವಿಚಾರಣೆಗೆ ಕರೆದರು. ಬಿಡುವಿಲ್ಲದ ಚಟುವಟಿಕೆಗಳಲ್ಲಿ ಭಾಗವಹಿಸಿ ಬಳ್ಳಾರಿ ಗಲಭೆಯನ್ನು ಶೋಧಿಸಲು ತನಿಖಾ ಸಂಸ್ಥೆ (ಸಿಐಡಿ)ಯೊಂದಿಗೆ ಸಹಕರಿಸುತ್ತಿದ್ದಾರೆ. ಜ.17 ರಂದು ನಡೆದ ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುತುವರ್ಜಿ ವಹಿಸಿ ನೈತಿಕ ನಡವಳಿಕೆಯಿಂದ ನಡೆದುಕೊಂಡರು. ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಬಿಡಿಎ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪೊಲೀಸರ ಸಭೆ ಆಯೋಜಿಸಿ ಜಿಲ್ಲೆಯ ಸಮಗ್ರ ಆಡಳಿತ, ಕಾನೂನು ಸುವ್ಯವಸ್ಥೆ ಕುರಿತು ಎಲ್ಲಾ ಠಾಣೆಗಳ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದರು. ಬಳ್ಳಾರಿ ನಗರ, ಗ್ರಾಮಾಂತರ, ಸಿರುಗುಪ್ಪ, ತೆಕ್ಕಲಕೋಟೆ, ಕಂಪ್ಲಿ, ಸಂಡೂರು, ಕುರುಗೋಡು, ತೋರಣಗಲ್ಲು ಠಾಣೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, 10 ದಿನಗಳೊಳಗೆ ನಿಮ್ಮ ನಿಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲಾ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ, ಸಮಾಜಘಾತುಕ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಇಲ್ಲದೇ ಹೋದರೆ ನಿಮ್ಮನ್ನೇ ಗುರಿಮಾಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದರ ಪರಿಣಾಮ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಸಮಾಜ ಘಾತುಕ ಕ್ರಿಯೆಗಳು ತಹ ಬದಿಗೆ ಬಂದು ನಿಂತಿವೆ.

ಎಲ್ಲಾ ಠಾಣೆಗಳಿಗೆ ಭೇಟಿ:
ಇದಾದ ಬಳಿಕ ಡಾ. ಸುಮನ್ ಪನ್ನೇಕರ್ ಆಂಧ್ರದ ಗಡಿ ತಾಲೂಕು ಕೇಂದ್ರವಾದ ಸಿರುಗುಪ್ಪ ಪಟ್ಟಣಕ್ಕೆ ತೆರಳಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದ್ದಾರೆ. ತೆಕ್ಕಲಕೋಟೆಗೂ ತೆರಳಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಗಡಿ ಭಾಗದಲ್ಲಿ ಏನೇ ಅಪರಾಧ ಚಟುವಟಿಕೆಗಳು ನಡೆದರೂ ಕೂಡಲೇ ನನ್ನ ನಂಬರಿಗೆ ತಿಳಿಸಿ ಎಂದು ಖುದ್ದು ತಮ್ಮ ಮೊಬೈಲ್ ನಂಬರನ್ನು ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರಾದರೂ ಪ್ರಭಾವಿಗಳು, ರಾಜಕಾರಣಿಗಳು ತಮ್ಮ ಶಕ್ತಿ, ಸಾಮರ್ಥ್ಯ ಬಳಸಿ ಕಾನೂನು ವಿರುದ್ಧದ ಚಟುವಟಿಕೆಗಳನ್ನು ನಡೆಸಿದರೆ ಆಸ್ಪದ ನೀಡಬೇಡಿ ನಿಮ್ಮ ಮೇಲೆ ರಾಜಕೀಯ ಒತ್ತಡ ಹೇರಿದರೆ ನನ್ನ ಗಮನಕ್ಕೆ ತನ್ನಿ ಎಂದು ಖಡಕ್ ಎಚ್ಚರಿಕೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಗಳಿಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಹಳಿ ತಪ್ಪುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಎಚ್ಚರಗೊಂಡಿದ್ದಾರೆ. ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಶೇ.75 ರಷ್ಟು ಅಪರಾಧ ಚಟುವಟಿಕೆಗಳು ಕಡಿಮೆ ಆಗಿವೆ.

ಡಾ. ಸುಮನ್ ಪನ್ನೇಕರ್ ವಿಶೇಷತೆ :

ಡಾ. ಸುಮನ್ ಪನ್ನೇಕರ್ ಅವರಿ ಕಾರ್ಯ ದಕ್ಷತೆ, ಸಮಯ ನಿರ್ವಹಣೆ, ಶ್ರಮ, ವಸ್ತು, ಶಕ್ತಿ ಬಳಸಿ ಗರಿಷ್ಠ ಫಲಿತಾಂಶವನ್ನು ಸಾಧಿಸುವ ಸಾಮರ್ಥ್ಯ ಇವರಲ್ಲಿದೆ. ಕಡಿಮೆ ಇನ್‌ಪುಟ್‌ನಿಂದ ಹೆಚ್ಚಿನ ಔಟ್‌ಪುಟ್ ಪಡೆಯುವುದು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೊಲೀಸ್, ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವುದರಲ್ಲಿ ಇವರು ಸಿದ್ಧಹಸ್ತರು, ನ್ಯಾಯ, ನೀತಿ, ಮತ್ತು ಧರ್ಮವು ಸಮಾಜದ ಸುಸ್ಥಿರತೆ, ನೈತಿಕ ನಡವಳಿಕೆ ಮತ್ತು ಸತ್ಯದ ಹಾದಿಯನ್ನು ಸೂಚಿಸುವ ಮೂಲಭೂತ ತತ್ವಗಳಾಗಿವೆ ಎನ್ನುವುದನ್ನು ನಂಬಿಕೊಂಡವರು. ಸರಿ, ತಪ್ಪುಗಳನ್ನು ವಿವೇಚಿಸಿ ಸಮಾನತೆ ನೀಡುವುದು. ನೀತಿ, ಸನ್ನಡತೆ ಮತ್ತು ಸರಿಯಾದ ದಾರಿಯಲ್ಲಿ ನಡೆಯುವರಿಗೆ ಅಭಯ, ಮೀರಿದರೆ ರಣಭಯಂಕರಿ ಇವರು.
” ಕಾನೂನು ” ಧರ್ಮದ ಹಾದಿ ಹಿಡಿದಿಟ್ಟುಕೊಳ್ಳುವ ಪರಮೋಚ್ಚ ಕರ್ತವ್ಯ ಮತ್ತು ನಿಯಮವಾಗಿದೆ ಎಂದು ನಂಬಿಕೊಂಡವರು, ತರ್ಕಬದ್ಧವಾಗಿ ಸತ್ಯವೇನೆಂದು ನಿರ್ಧರಿಸುವುದು, ಅನ್ಯಾಯವನ್ನು ಪ್ರಶ್ನಿಸುವುದು ಮತ್ತು ಸಮಾನತೆಯನ್ನು ಎತ್ತಿ ಹಿಡಿಯವುದು, ತಾರ್ಕಿಕವಾಗಿ ಸರಿ ಮತ್ತು ತಪ್ಪನ್ನು ಬೇರ್ಪಡಿಸಿ ತಪ್ಪಿತಸ್ಥರಿಗೆ ಕಾನೂನು ರುಚಿ ತೋರಿಸುವುದು ಇವರ ಜಾಯಮಾನ. ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸನ್ನಡತೆ, ಪ್ರಾಮಾಣಿಕತೆ ಮತ್ತು ಸರಿಯಾದ ನಡವಳಿಕೆಯನ್ನು ಅನುಸರಿಸುವುದು ಎಲ್ಲರ ನೀತಿಯಾಗಿದೆ. ಇದು ನೈತಿಕ ಕರ್ತವ್ಯಗಳನ್ನು ಸೂಚಿಸುತ್ತದೆ. ಇದನ್ನು ಮೀರಿದರೆ ಯಾರನ್ನೂ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಇದೀಗ ಡಾ.ಸುಮನ್ ಪೆನ್ನೇಕರ್ ಎಲ್ಲಾ ರಾಜಕಾರಣಿಗಳಿಗೆ ರವಾನಿಸಿದ್ದಾರೆ.
ಜಿಲ್ಲಾ ಎಸ್.ಪಿ.ಕಚೇರಿಗೆ ಅಥವಾ ಅವರ ನಿವಾಸಕ್ಕೆ ಹೆಜ್ಜೆ ಇಡಬೇಕೆಂದರೆ ಪ್ರಭಾವಿಗಳೆಲ್ಲಾ ಹತ್ತತ್ತು ಬಾರಿ ಯೋಚಿಸುವಂತಾಗಿದೆ. ಬಂದ ಕೆಲವೇ ದಿನಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ದಕ್ಷತೆಯ ಛಾಯೆ ಮೂಡಿಸಿರುವ ಡಾ. ಸುಮನ್ ಪನ್ನೇಕರ್ ಅವರು ಇದೇ ವಾಸ್ತವಾಂಶಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆನ್ನುವ ವಿಶ್ವಾಸವನ್ನು ಬಳ್ಳಾರಿ ಜಿಲ್ಲೆಯ ಜನತೆ ಹೊಂದಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!