ಒಮ್ಮೆ ಮೃಷ್ಟಾನ್ನ
ಇನ್ನೊಮ್ಮೆ ಬರಿ ತಟ್ಟೆ,
ಕಲ್ಲನ್ನೂ ಕರಗಿಸುವ ಯೌವ್ವನ,
ಮೂಲೆಗೆ ಮುದುರುವ ವೃದ್ದಾಪ್ಯ
ಬದುಕೇ ಬೇವು – ಬೆಲ್ಲ,
ಅರಿತವರಿಗೆ ಇದೇ ಯುಗಾದಿ..
ಅಂತರಿಕ್ಷ ಭೇಧಿಸುವ ಛಲ
ಚಂದ್ರನ ನಿಲ್ದಾಣ ಮಾಡಿ
ಮಂಗಳನ ಏರುವ ಹಂಬಲ!
ದೂರದ ಆಗಸವ
ಮನೆಯ ಸೂರು ಮಾಡಿಕೊಳ್ಳುವ ಅತಿಯಾಸೆ,
ಮನಸಲಿ ಅನುಕ್ಷಣ ಜಾತಿ -ಧರ್ಮಗಳ ಮಂತ್ರ,
ದಿನನಿತ್ಯ ಮುಗ್ದ ಮನುಜರ ಮಾರಣ ಹೋಮ,
ಮಾನವನ ಬದುಕೇ ಬೇವು – ಬೆಲ್ಲ,
ಮಹಾಸಾಧನೆಯ ಕನಸುಗಳ ಸಿಹಿ,
ಮುಗ್ದರ ಮಾರಣಹೋಮಗಳ ಕಹಿ ಅನುಕ್ಷಣ ನಡೆಯುತಿದೆ ಜಗದಲಿ ಯುಗಾದಿ..ಯುಗಾದಿ. ಯುಗಾದಿ..
ಸತ್ಯ ಹೇಳಿದ ಬಾಪು,
ಶಾಂತಿ ಭೋದಿಸಿದ ಬುದ್ಧ,
ತ್ಯಾಗ ತೋರಿದ ಗೊಮ್ಮಟ,
ಕೊಲ್ಲುವುದೇ ಧರ್ಮ ಎಂದ ಉಗ್ರವಾದಿ,
ಆರಾಜಕತೆ ಸೃಷ್ಟಿಸ ಹೊರಟ ಪ್ರತ್ಯೇಕತಾ ವಾದಿ..
ಮಾನವಕುಲ ಏರಿಳಿಯುತ್ತಿದೆ
ಪ್ರತಿ ಕ್ಷಣ ಬೇವು ಬೆಲ್ಲಗಳ ಹಾದಿ..
ಅನುಭವಿಸುತ್ತಿದೆ ಅನುದಿನ ಯುಗಾದಿ..
ಸತ್ಯ, ಶಾಂತಿ, ಅಹಿಂಸೆ,
ತ್ಯಾಗ, ಸಹೋದರತೆಗಳ
ಬೆಲ್ಲ ಉಳಿಯಲಿ,
ಹಿಂಸೆ, ಭಯೋತ್ಪಾದಕತೆ,
ಸ್ವಾರ್ಥ, ಮೋಸಗಳೆoಬ ಬೇವು ಅಳಿಯಲಿ,
ಮಾನವ ಮಾನವನ ಗೌರವಿಸುವ
ಮಾನವೀಯ ಧರ್ಮವೇ ಅನುದಿನದ ಯುಗಾದಿಯಾಗಲಿ..

- ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೆ. ಆರ್. ನಗರ,
ಮೈಸೂರು ಜಿಲ್ಲೆ
ಮೊಬೈಲ್ -6363172368

















