ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಈ ಹಾಡನ್ನು ಗುನುಗದವರೇ ಇಲ್ಲ. ವರ್ಷದ ಮೊದಲ ಹಬ್ಬ. ಈ ಹಬ್ಬ ಏನು? ಎತ್ತ? ತಿಳಿಯೋಣ ಬನ್ನಿ. ಯುಗಾದಿ ಎಂದರೆ ಕೇವಲ ಹಬ್ಬವಲ್ಲ. ಅದೊಂದು ಭಾವನೆ. ಭಾರತದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದೂ ಕರೆಯುತ್ತೇವೆ. ಈ ಯುಗಾದಿ ಹಬ್ಬವನ್ನು ಕರ್ನಾಟಕದಲ್ಲಿ ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹಾಗೆಯೇ ಆಂಧ್ರ ಪ್ರದೇಶ, ತಮಿಳುನಾಡು ಸೇರಿ ಹಲವು ಭಾಗಗಳಲ್ಲಿ ಆಚರಣೆ ಮಾಡುತ್ತಾರೆ. ಕರ್ನಾಟಕದಲ್ಲಿ ಯುಗಾದಿ ಹೊಸ ಆರಂಭ, ಶುದ್ಧತೆ, ಹೊಸ ನಿರೀಕ್ಷೆ, ಶುಭಾಶಯ ಮತ್ತು ಸಮೃದ್ಧಿ ಯ ಸಂಕೇತವಾಗಿದೆ. ಯುಗಾದಿ ಸೃಷ್ಟಿಯ ಆರಂಭಕಾಲ. ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ‘. ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ. ಈ ವರ್ಷ ಶ್ರೀ ವಿಶ್ವಾವಸು ನಾಮ ಸಂವತ್ಸರ, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯ ದಿನ, ಯುಗಾದಿ ಹಬ್ಬವನ್ನು ವಸಂತ ಋತುವಿನ ಆರಂಭ ದೊಂದಿಗೆ ಆಚರಿಸುತ್ತಾರೆ. ಪ್ರತಿ ಹಬ್ಬ ಹುಣ್ಣಿಮೆಗಳನ್ನು ‘ಪ್ರಕೃತಿ’ ಯನ್ನು ಮೂಲವಾಗಿಟ್ಟುಕೊಂಡು ಆಚರಿಸುವುದರಿಂದ ಹಬ್ಬಗಳು ವಿಶೇಷವಾಗುತ್ತದೆ.
ಯುಗಾದಿ ಪೌರಾಣಿಕ ಹಿನ್ನೆಲೆ :
ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆಯು ಈ ರೀತಿ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು, ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿ, ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾಮಾತೆ, ಲಕ್ಷ್ಮಣನೂಂದಿಗೆ ಸಂತೋಷದಿಂದ ಅಯೋಧ್ಯೆಗೆ ಬಂದ ದಿನವೆಂದು, ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕದ್ದೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ, ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ಸ್ಯಾವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು, ಆನಂತರ ಬ್ರಹ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದನೆಂದು, ಇಂಥ ಹಲವು ಶುಭಾರಂಭಗಳಿಂದ ‘ಯುಗಾದಿ’ ಆಚರಣೆ ಬಂದಿದೆ ಎಂದು ತಿಳಿಸಲಾಗಿದೆ.
ಹಿಂದೂಗಳಿಗೆ ವರ್ಷದಲ್ಲಿ ಬರುವ ಮೂರೂವರೆ ದಿನಗಳು ಬಹಳ ಮುಖ್ಯವಾದವು. ಯುಗಾದಿ, ದೀಪಾವಳಿ, ವಿಜಯದಶಮಿ, ಮತ್ತು ಅಕ್ಷಯ ತದಿಗೆಯ ಅರ್ಧ ದಿನ ಈ ಮೂರೂವರೆ ದಿನಗಳು. ಮೂರು ವರೆ ವಜ್ರದಷ್ಟೇ ಪವಿತ್ರವಾದ ದಿನ. ನಾವು ಉತ್ಸವ ಪ್ರಿಯರು, ನಾವು ಸಂತೋಷವಾಗಿರಲು ಶ್ರಮಿಸುತ್ತೇವೆ. ಅದಕ್ಕಾಗಿ ಹಬ್ಬ ಹರಿ ದಿನಗಳು, ಹೊಸ ಉಡುಗೆ ತೊಡುಗೆ ಆಭರಣ, ಸಿಹಿ ಭಕ್ಷ ಭೋಜ್ಯಗಳ ಭೋಜನ ಸವಿಯಲು ಸಿದ್ದರಾಗಿರುತ್ತೇವೆ. ನಮಗೆ ನಮ್ಮ ಪೂರ್ವಿಕರಿಂದ ಬಂದಂಥ ಕೊಡುಗೆಯಾಗಿದೆ. ಪೂರ್ವ ಕಾಲದಲ್ಲಿದ್ದ ಋಷಿ ಮುನಿಗಳೆಲ್ಲ, ಭಾರತದಲ್ಲಿ ಪರ್ವತ ತಪ್ಪಲುಗಳಲ್ಲಿ, ನದಿ ತೀರಗಳಲ್ಲಿ, ಕುಟೀರಗಳನ್ನು ಕಟ್ಟಿಕೊಂಡು ತಪಸ್ಸನ್ನು ಆಚರಿಸುತ್ತಿದ್ದರು. ಅಂಥ ಮಹಾಮಹಿಮ ಋಷಿಮುನಿಗಳ ಆಶೀರ್ವಾದ ಪಡೆಯಲು ದೇವಲೋಕದಿಂದ ಇಂದ್ರಾದಿ ದೇವತೆಗಳು, ನವಗ್ರಹಗಳು, ಅಷ್ಟದಿಕ್ಪಾಲಕರು ಬರುತ್ತಿದ್ದರು. ಭೂಮಿಯ ಜೊತೆ ಅವರು ಸಂಪರ್ಕ ಇಟ್ಟುಕೊಂಡಿದ್ದರು. ಆದುದರಿಂದ ನಮ್ಮ ಭಾರತ ಕರ್ಮಭೂಮಿ, ದೇವಭೂಮಿ, ಇಂದ್ರಾದಿ ದೇವತೆಗಳು, ಗಂಧರ್ವರು ಯಕ್ಷರು, ನಾಗರು, ಕಿನ್ನರು, ಹಾಗೂ ದೇವ ಲೋಕದ ಸ್ತ್ರೀಯರಿಗೆ ವಿಹಾರ ಭೂಮಿ ಆಗಿದೆ.
ಯುಗಾದಿ ಪವಿತ್ರವಾದ ದಿನ :
ನಮಗೆ ಎರಡು ಶಕೆಗಳಿವೆ. ಶಾಲಿವಾಹನ ಶಕೆ, ವಿಕ್ರಮ ನಾಮ ಶಕೆ, ಎರಡು ರೀತಿಯ ಶಕೆಗಳನ್ನು ಉಪಾಸನೆ ಮಾಡುತ್ತೇವೆ. ನಾವು ಸಂಕಲ್ಪ ಮಾಡುವಾಗ, ಪ್ರವರದಲ್ಲಿ, ‘ ಶುಭೆ -ಶೋಭನೇ- ಮುಹೂರ್ತೇ ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೇ- ಶ್ವೇತ ವರಾಹ ಕಲ್ಪೇ -ವೈವಸ್ವತ ಮನ್ಮಂತರೇ- ಕಲಿಯುಗೇ, ಪ್ರಥಮಪಾದೇ, ಜಂಬೂದ್ವೀಪೇ, ಭಾರತವರ್ಷೇ, ಭರತಖಂಡೇ, ದಂಡ ಕಾರಣ್ಯೇ, ಗೋದಾವರ್ಯಾ: ದಕ್ಷಿಣ ತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರಮಾನೇನ ಪ್ರಭವಾದಿ ಷಷ್ಠಿಸಂವತ್ಸರೇ, ಈ ರೀತಿ ಸಂಕಲ್ಪ ಪ್ರವರಗಳಲ್ಲಿ, ಪೂಜೆ ಶುಭ ಕಾರ್ಯಗಳಲ್ಲಿ ಹೇಳಿಕೊಂಡೇ ಮಾಡುತ್ತೇವೆ. ಮೊದಲ ಐತಿಹಾಸಿಕ ಸಾಮ್ರಾಜ್ಯದ ಅರಸ ‘ಶಾಲಿವಾಹನ’ ತನ್ನ ಆಡಳಿತಾವಧಿಯಲ್ಲಿ ಧರ್ಮವನ್ನು ರಕ್ಷಣೆ ಮಾಡಿ ಸನಾತನ ಧರ್ಮವನ್ನು ಸ್ಥಾಪನೆ ಮಾಡಿದಂಥ ಮಹಾಪುರುಷ. ಶಾತ ಎಂದರೆ ಕುದುರೆ ಎಂದು ಕುದುರೆಯನ್ನು ವಾಹನವಾಗಿ ಉಳ್ಳವರೆಂದು ಹೇಳುತ್ತಾರೆ. ಶಾತವಾಹನರು ಬ್ರಾಹ್ಮಣ ಜಾತಿಗೆ ಸೇರಿದ್ದು, ವಿಷ್ಣು ಮತ್ತು ಮತ್ಸ್ಯ ಪುರಾಣಗಳಲ್ಲಿ ಮಾಹಿತಿ ದೊರೆಯುತ್ತದೆ.
ಕಾಲಮಾನ ತಿಳಿಯಲು ಬ್ರಹ್ಮನು ನಮಗೆ ಪಂಚಾಂಗ ಮಾಡಿಕೊಟ್ಟ ದಿನವೇ ಯುಗಾದಿಯಾಗಿದೆ. ಮಹಾಭಾರತದ ಕಾಲದಲ್ಲೂ ಶ್ರೀ ಕೃಷ್ಣ ಯುಗಾದಿ ಹಬ್ಬದ ಆಚರಣೆ ಮಾಡಿದ್ದನು. ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕೆಂದು ಬೇವು ಬೆಲ್ಲವನ್ನು ಭಗವಂತನಿಗೆ ಅರ್ಪಿಸಿ ಸೇವನೆ ಮಾಡಿ ಸಂತೋಷದಿಂದ ಹಬ್ಬವನ್ನು ಆಚರಿಸಿದರೆ ಆ ವರ್ಷವೆಲ್ಲ ಎಂತಹದೇ ಕಷ್ಟ ಬರಲಿ ಧೃತಿಗೆಡದೆ ಎದುರಿಸಿ ಸಂತೋಷದಿಂದ ಇರುತ್ತಾರೆ ಎಂಬುದು ‘ಯುಗಾದಿ’ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಹಬ್ಬದ ದಿನ ಮುಂಜಾನೆ ಎಣ್ಣೆ ಹಚ್ಚಿಕೊಂಡು ಅಭ್ಯಂಗನ ಸ್ನಾನ ಮಾಡಬೇಕು. ಎಣ್ಣೆ ಲಕ್ಷ್ಮಿಯಾದರೆ, ನೀರು ಗಂಗೆ, ಹೊಸ ಬಟ್ಟೆ ಧರಿಸಿ ಮನೆಯಲ್ಲಿ ಹಿರಿಯರು ಮಾಡುವ ಪೂಜೆಗಳಲ್ಲಿ ಭಾಗಿಯಾಗಿ ತೀರ್ಥ ಪ್ರಸಾದ ಸೇವನೆ ಮಾಡಿ, ಸುಗ್ರಾಸ ಭೋಜನವನ್ನು ಸವಿದು ಆನಂದದಿಂದ ಕಳೆಯುತ್ತಾರೆ. ಪಂಚಾಂಗ ಶ್ರವಣ ಕೇಳುವುದು ಪ್ರಮುಖ ಉದ್ದೇಶ. ಈ ರೀತಿ ಹಬ್ಬದ ಆಚರಣೆಯನ್ನು ಮಾಡುತ್ತಾರೆ.
ಯುಗಾದಿಯನ್ನು ಹೇಗೆ ಆಚರಿಸಲಾಗುತ್ತದೆ?
ಜನರು ಯುಗಾದಿ ಹಬ್ಬದ ತಯಾರಿಯನ್ನು ಒಂದು ವಾರ ಮುಂಚಿತವಾಗಿಯೇ ಪ್ರಾರಂಭಿಸುತ್ತಾರೆ ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು, ಹೊಸ ಬಟ್ಟೆಗಳನ್ನು ಖರೀದಿಸುವುದು ಮುಂತಾದ ಸಂಪ್ರದಾಯಗಳನ್ನು ಇದು ಒಳಗೊಂಡಿರುತ್ತದೆ. ಯುಗಾದಿಯಂದು ಜನರು ಬೆಳಗಾಗುವ ಮೊದಲು ಎದ್ದೇಳುತ್ತಾರೆ, ನಂತರ ಅಭ್ಯಂಗ ಸ್ನಾನ ಎಂದರೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿದ ನಂತರ ತಲೆ ಸ್ನಾನ ಮಾಡುತ್ತಾರೆ. ಯುಗಾದಿ ವಸಂತ ಮತ್ತು ಬೆಚ್ಚಗಿನ ಹವಾಮಾನದ ಬರುವಿಕೆಯನ್ನು ಸೂಚಿಸುತ್ತದೆ. ಈ ಹಬ್ಬವು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಆದ್ದರಿಂದ, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಈ ದಿನವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು.
ಬೇವು-ಬೆಲ್ಲದ ವಿಶೇಷತೆ ಏನು? :
ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ. ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ. ಮಾನವ ವಜ್ರದ್ರೇಹಿಯಾಗುತ್ತಾನೆ. ಸಂಪತ್ತು ಉಂಟಾಗುತ್ತದೆ. ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.
ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡುವ ಎಲ್ಲಾ ಧಾನ್ಯಗಳ ಮಾದರಿಯ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿಯ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ಧ ಎಂದರ್ಥ. ಸೌರಮಾನ ಯುಗಾದಿಯನ್ನು ಸೌರಮಾನದ ರೀತಿಯಲ್ಲಿ ಆಚರಿಸುವವರು. ಸೂರ್ಯ ಮೇಷ ಸಂಕ್ರಾಂತಿ ವೃತ್ತವನ್ನ ಪ್ರವೇಶಿಸುವ ದಿನ. ಈ ಹಬ್ಬದ ಆಚರಣೆ ಸಹ ಚಂದ್ರಮಾನ ಯುಗಾದಿಯಂತೆಯೇ ನಡೆಯುತ್ತದೆ. ಯುಗಾದಿಯ ದಿನ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ವಾಡಿಕೆ.
ಯುಗಾದಿ ಕಾಲದ ಹಬ್ಬ ಹೇಗೋ, ಹಾಗೇ ಪ್ರಕೃತಿಯ ಹಬ್ಬವೂ ಹೌದು. ಚೈತ್ರ ಮಾಸದಲ್ಲಿ ನಮ್ಮ ಭೂಭಾಗ ಹೊಸ ಚಿಗುರಿಗೆ ಮುನ್ನುಡಿ ಬರೆಯುತ್ತದೆ. ಮನುಷ್ಯನ ಮನಸ್ಸು ನಿಸರ್ಗದ ಕನ್ನಡಿಯಂತೆ. ಪ್ರಕೃತಿಯ ಹೊಸ ಚಿಗುರು, ಮನುಷ್ಯರ ಮನಸ್ಸಿನಲ್ಲೂ ಹೊಸ ಆಶಾ ಆಭವನೆಯನ್ನು ತುಂಬಿ ಉಲ್ಲಸಿತರನ್ನಾಗಿಸುತ್ತದೆ. ಶಿವರಾತ್ರಿಯ ವೇಳೆಗೆ ಕರಗುತ್ತ ಹೋಗುವ ಚಳಿ, ಚೈತ್ರದ ಹೊಸ್ತಿಲಲ್ಲಿ ಸಂಪೂರ್ಣ ಇಲ್ಲವಾಗಿ ಸೂರ್ಯನ ಕಿರಣಗಳು ಪ್ರಖರವಾಗುತ್ತ ಸಾಗುವ ಹೊತ್ತು. ಬೇಸಿಗೆಯಾದರೂ, ಬಿಸಿಲೆಂದರೆ ಲವಲವಿಕೆ. ಈ ಲವಲವಿಕೆಯ ಸಂಕೇತವೂ ಹಬ್ಬವಾಗುತ್ತದೆ. ಒಟ್ಟಿನಲ್ಲಿ ಯುಗಾದಿ ಹಬ್ಬ ಹೊಸ ಆರಂಭ, ಸಂತೋಷ, ಶುದ್ಧತೆ ಮತ್ತು ಜೀವನದ ಎಲ್ಲಾ ಅನುಭವಗಳನ್ನು ಸಮಾನವಾಗಿ ಸ್ವೀಕರಿಸುವ ಧ್ಯೇಯವನ್ನು ಪ್ರತಿನಿಧಿಸುತ್ತದೆ. ಇದು ಭಾರತೀಯ ಸಂಸ್ಕೃತಿಯ ಒಂದು ಮಹತ್ವದ ಭಾಗವಾಗಿದ್ದು, ಭಕ್ತಿ, ಹಬ್ಬ, ಸಾಂಪ್ರದಾಯಿಕ ಆಹಾರ ಹಾಗೂ ಕುಟುಂಬದ ಒಗ್ಗಟ್ಟನ್ನು ಉತ್ತೇಜಿಸುತ್ತದೆ.
ಸರ್ವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.
- ಡಾ. ಪ್ರಸನ್ನ ದೇವರ ಮಠ ಅನಿಲಕುಮಾರ್, ಮಾಗಳ
ಪದವೀಧರ ಪ್ರಾಥಮಿಕ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದೇನೂರು,
ಹೂವಿನಹಡಗಲಿ, ವಿಜಯನಗರ ಜಿಲ್ಲೆ.

















