ಯಾದಗಿರಿ: ಸೆ.2- ರೈತರ ಪಂಪ್ ಸೆಟ್ ಗಳ ಮೋಟರ್ ಸ್ಟಾರ್ಟರ್, ಕಾಪರ್ ವೈರ್, ಕೇಬಲ್ ಇತ್ಯಾದಿಗಳನ್ನು ಕಳುವು ಮಾಡುವ ವ್ಯವಸ್ಥಿತ ಜಾಲ ವಡಗೇರಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ತಕ್ಷಣ ಕಳ್ಳಕಾಕರಿಗೆ ಮಟ್ಟ ಹಾಕುವಂತೆ ಸಾಮಾಜಿಕ ಹೋರಾಟ ಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಹೇಳಿಕೆ ನೀಡಿದ ಅವರು, ಬೆಳ್ಳಿ ಬಂಗಾರ, ಹಣ ಕಳುವು ಮಾಡುವುದು ಸರ್ವೇ ಸಾಮಾನ್ಯ ಆದರೆ ವಡಗೇರಿ ತಾಲ್ಲೂಕಿನ ಗುರುಸುಣಿಗಿ ಮತ್ತು ನಾಯ್ಕಲ್ ಮದ್ಯದಲ್ಲಿರುವ ಭೀಮಾನದಿ ತೀರದ ರೈತರಿಗೆ ಈದೀಗ ಈ ವಿದ್ಯುತ್ ಉಪಕರಣಗಳ ಕಳುವು ತಲೆನೋವಾಗಿ ಪರಿಣಮಿಸಿದೆ.
ಇಡಿ ರಾತ್ರಿ 16 ಮೋಟರ್ ಗಳ ಪೈಕಿ ಸುಮಾರು 11 ರೈತರ ಪಂಪ್ ಸೆಟ್ ಮೋಟರ್ ಕಾಪರ್ ವೈರ್ ಗಳನ್ನು ಬಿಚ್ಚಿ ಕಳುವು ಮಾಡಿದ್ದಾರೆ. ಮೊದಲೇ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು ಕೇವಲ 7 ತಾಸು ವಿದ್ಯುತ್ ನೀಡುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಇದರಲ್ಲಿ ಈ ಕಳುವು ಪ್ರಕರಣಗಳಿಂದ ರೈತರು ರೋಸಿಹೋಗಿದ್ದಾರೆ ಎಂದು ಅವರು ದೂರಿದರು.
ಸ್ಥಳಕ್ಕೆ ಆಗಮಿಸಿದ ವಡಗೇರಿ ಅಪರಾಧ ವಿಭಾಗದ ಪಿ.ಎಸ್.ಐ. ಹಣಮಂತ ಮುಂಡರಗಿ ಸ್ಥಳಪರಿಶೀಲನೆ ನಡೆಸಿದರು ಆದರೆ ಇದು ಕಾಟಾಚಾರದ ಭೇಟಿ ಆಗಬಾರದು, ಕಳ್ಳರ ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರು ಈ ಕಳುವು ಪ್ರಕರಣಗಳಿಂದಾಗಿ ನಿದ್ದೆ ಮಾಡದಂತೆ ರಾತ್ರಿಯೆಲ್ಲ ಎಚ್ಚರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೆಮ್ಮದಿ ಹಾಳಾಗಿದೆ.
ನಾಡಿನ ಅನ್ನದಾತನಾಗಿರುವ ರೈತರು ದೇಸದ ಬೆನ್ನೆಲುಬು ಎನ್ನಲಾಗುತ್ತದೆ ಆದರೆ ರೈತರಿಗೆ ಸಂಕಷ್ಟದಲ್ಲಿಯೇ ಬದುಕುತ್ತಿರುವಾಗ ಬೆಲೆ ಏರಿಕೆ ಸಮಸ್ಯೆ ಮದ್ಯೆಯೇ ಸಾಲ ಮಾಡಿ ನಾಡಿನ ಹೊಟ್ಟೆ ತುಂಬಿಸುತ್ತಾನೆ.
ಇಂತಹ ಸಂದರ್ಭದಲ್ಲಿ ಪಂಪ್ ಸೆಟ್ ಕಾಪರ್ ವೈರ್, ಸ್ಟಾರ್ಟರ್, ಕೇಬಲ್ ಗಳನ್ನು ಕಳುವು ಮಾಡುವ ಜಾಲ ಹರಡಿಕೊಂಡು ಸಂಕಷ್ಟು ಜಾಸ್ತಿ ಮಾಡಿದೆ. ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕು. ಅವರಿಂದಲೇ ನಷ್ಟ ಭರಿಸಿಕೊಡಬೇಕು ಮತ್ತು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.
ಅನ್ನ ಬೆಳೆಯುವ ರೈತರಿಗೆ ಅಗುಳಿನ ಬೆಲೆ ಗೊತ್ತಿರುತ್ತದೆ ಆದರೆ ಆತನಿಗೆ ಭಾರಿ ಬೆಲೆ ತೆರುವಂತಾಗಬಾರದು ಕೇವಲ ವಿದ್ಯುತ್ ಸಾಮಗ್ರಿ ಕಳುವು ಮಾಡಿದರೆಯೂ ಸಹ ರೈತರು ಮತ್ತೆ ಇಡಿ ಸೆಟ್ ಕೊಳ್ಳಬೇಕೆಂದರೆ ಸುಮಾರು 10-11 ಸಾವಿರ ರೂ. ಬೇಕಾಗುತ್ತದೆ ಇದು ರೈತರಿಗೆ ಸಮಸ್ಯೆ ಉಂಟಾಗಿದೆ ಎಂದು ಅವರು ದೂರಿದರು. ತಕ್ಷಣ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ರೈತರಿಗೆ ನೆಮ್ಮದಿ ತಂದುಕೊಡಬೇಕೆAದು ಅವರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ನಾಯ್ಕಲ್ ಗುರುಸುಣಿಗಿ ಮದ್ಯೆ ಬರುವ ವಿಜಯಾಪುರ-ಹೈದ್ರಾಬಾದ್ ಹೆದ್ದಾರಿ ಬಂದ್ ಮಾಡಿ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ರೈತರಾದ ಮಲ್ಲಿಕಾರ್ಜುನರೆಡ್ಡಿ ನಾಯ್ಕಲ್, ನಿಂಗಪ್ಪ ಮಳ್ಳಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.