ಸಿಂಧನೂರು:ದೇಶದ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಮೆರಗು ತರಲು ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಇದರಲ್ಲಿ ಯುವಕ-ಯುವತಿಯರ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದು ರಾಯಚೂರು ಜಿಲ್ಲಾ ಇ.ಎಲ್.ಸಿ ಕ್ಲಬ್‌ಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರೌಢಶಾಲಾ ಶಿಕ್ಷಕರಾದ ವೀರೇಶ ಗೋನವಾರ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ಆರ್.ಹೆಚ್.ಕಾಲೋನಿ ನಂ-3ರಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ “ಮತದಾನ ಜಾಗೃತಿಯಲ್ಲಿ ಯುವಕರ ಪಾತ್ರ”ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುತ್ತಾ,ಇಂದಿನ ಯುವಕರು ಮತ್ತು ಪ್ರಜ್ಞಾವಂತ ನಾಗರಿಕರ ಜಾಗೃತಿಯ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳ ಮತದಾನದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ ಇಂದಿನ ವಿದ್ಯಾರ್ಥಿ-ಯುವಕರ ಮತದಾನ ಮಹತ್ವದ ಕುರಿತು ಜನಸಾಮಾನ್ಯರಿಗೆ ಮತ್ತಷ್ಟು ಅರಿವು ಮೂಡಿಸಲು ಮುಂದಾಗಬೇಕು ಯಾವುದೇ ಒತ್ತಡ ಮತ್ತು ಆಮಿಷಗಳಿಗೆ ಬಲಿಯಾಗದಂತೆ ಭಾರತ ಚುನಾವಣಾ ಆಯೋಗದ ಆಶಯದಂತೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ನಡೆಯುವಂತೆ ಪ್ರತಿಯೊಬ್ಬರೂ ಶ್ರಮಿಸಬೇಕು. ಅರ್ಹರಾಗಿರುವ ಎಲ್ಲಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸುವಂತೆ ಪ್ರೇರೇಪಿಸಬೇಕು ಚುನಾವಣಾ ಆಯೋಗವು ಈಗ ವರ್ಷಕ್ಕೆ 3-ಸಲ ಮತದಾರ ನೋಂದಣಿ ಪ್ರಕ್ರಿಯನ್ನು ನಿರ್ವಹಿಸುತ್ತಿದೆ.17-ವರ್ಷ ಪೂರ್ಣಗೊಂಡಿರುವ ವಯೋಮಾನದವರೂ ಸಹ ಹೊಸ ಸೇರ್ಪಡೆಗೆ ತಮ್ಮ ಹೆಸರುಗಳನ್ನು ತಮ್ಮ ಗ್ರಾಮ ಅಥವಾ ವಾರ್ಡಿನ ಬಿಎಲ್‌ಒ ಅವರ ಹತ್ತಿರ ಅಥವಾ ಆನ್‌ಲೈನ್ ಮೂಲಕವಾಗಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದಕ್ಕೆ ಬೇಕಾಗಿರುವ ಪ್ರಾಥಮಿಕ ತಿಳುವಳಿಕೆಯನ್ನು ತಾವುಗಳು ಪಡೆದುಕೊಂಡು ಇತರರಿಗೂ ಇದರ ಅರಿವನ್ನು ಮೂಡಿಸಬೇಕೆಂದು ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಸಲಹೆ ನೀಡುತ್ತಾ,ದೇಶದ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥಬರಬೇಕಾದರೆ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಚುನಾವಣೆಗಳನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು. ವಿದ್ಯಾರ್ಥಿ-ಯುವಕರು ದೇಶದ ವಿವಿಧ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು,ಅಭ್ಯರ್ಥಿಗಳ ಪೂರ್ವಾಪರವನ್ನು ಅರಿತುಕೊಳ್ಳಬೇಕು ಇದರಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳ ಜವಾಬ್ದಾರಿ ಬಹಳಷ್ಟು ದೊಡ್ಡದಿದೆ.ಇದನ್ನು ಸಮರ್ಥವಾಗಿ ನಿಭಾಯಿಸಬೇಕು ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಬದಲಾವಣೆಗಳನ್ನು ತರುವ ತಾಕತ್ತು ಇರುತ್ತದೆ ಅದನ್ನು ಬಳಸಿಕೊಂಡು ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಧಾನ ಪಾತ್ರವನ್ನು ಇಂದಿನ ಯುವಜನತೆ ನಿರ್ವಹಿಸಬೇಕೆಂದು ಹೇಳಿದರು.ಭಾರತ ಸ್ಕೌಟ್‌ನ ಜಿಲ್ಲಾ ಸಹಾಯಕ ಆಯುಕ್ತ ಹಾಗೂ ಶಿಕ್ಷಕ ರಾಮದಾಸ ನಾಯ್ಕ ಮಾತನಾಡುತ್ತಾ,ಇಂದಿನ ದಿನಗಳಲ್ಲಿ ನಾವುಗಳೆಲ್ಲಾ ಕೇವಲ ಅಕ್ಷರಸ್ಥರಾಗುತ್ತಿದ್ದೇವೆ ಆದರೆ ಮಾನವೀಯ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ ಆದರೆ ನಮ್ಮ ಪೂರ್ವಜರು ಇದಕ್ಕೆ ವ್ಯತಿರಿಕ್ತರಾಗಿದ್ದರು. ಇಂದಿನ ಪೀಳಿಗೆಗೆ ಮಾನವೀಯ ಮೌಲ್ಯಗಳ ಅವಶ್ಯಕತೆ ಇದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶಶಿಕಲಾ ಬಿಜಿ ಅವರು ಮಾತನಾಡುತ್ತಾ, ಎನ್‌ಎಸ್‌ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಬಾಂಧವ್ಯ,ಮಾನವೀಯ ಮೌಲ್ಯಗಳು, ವಿವಿಧ ಸಂಸ್ಕೃತಿಗಳು ಸಮ್ಮಿಲನವಾಗುತ್ತವೆ. ಕೇವಲ 2-3 ದಿನಗಳಲ್ಲಿ ಈ ಕಾಲೋನಿಯಲ್ಲಿ ವಿವಿಧ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ನಿಮ್ಮತನವನ್ನು ಮೂಡಿಸಿದ್ದೀರಿ ಎಂದರು.
ಶಿಬಿರದ ಸಂಚಾಲಕರಾದ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವೆಂಕಟನಾರಾಯಣ,ಶಿಬಿರದ ಸಹ ಸಂಚಾಲಕರಾದ ಪ್ರಾಧ್ಯಾಪಕ ಯಮನೂರು,ಗ್ರಾಮದ ಮುಖಂಡರಾದ ಬುವಿರಾಣಿ ಕಿರ್ತೋನಿಯಾ, ಮಂಜು ಮಂಡಲ್,ಪೂಲಾಮಾಲಾ ಮಂಡಲ್, ಸೈಲಾನ್ ಮಂಡಲ್ ಶಿಕ್ಷಕರಾದ ತಿರುಕಪ್ಪ,ಹೆಚ್. ಅಶೋಕ,ವಿಜಯಕುಮಾರ,ಅತಿಥಿ ಉಪನ್ಯಾಸಕರಾದ ವೀರೇಶ ಕನ್ನಾರಿ,ರಾಜೇಶ, ಬಸವರಾಜ ಕೆ.ಶಿವು ಕೆ.ದೇವೇಂದ್ರಪ್ಪ ಸೇರಿದಂತೆ ಗ್ರಾಮದ ಜನಪ್ರತಿನಿಧಿಗಳು,ಮುಖಂಡರು,ಶಿಕ್ಷಕರು ಉಪಸ್ಥಿತರಿದ್ದರು.ಶಿಬಿರಾರ್ಥಿಗಳಾದ ರೆಹಾನಾಬೇಗಂ ಪ್ರಾರ್ಥಿಸಿದರು ಶಕುಂತಲಾ ಸ್ವಾಗತಿಸಿದರು,ಯಮನೂರ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ರೇಣುಕಾ ವಂದಿಸಿದರು.ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.