ಹೊನ್ನಾಳಿ:
ಎಲ್ಲೆಡೆ ಬೇಸಿಗೆ ಧಗೆ ಹೆಚ್ಚಾಗುತ್ತಿದ್ದು,ದೇಹದಾಹ ತಣಿಸಲು ಜನರು ವಿವಿಧ ಹಣ್ಣು,
ತಂಪುಪಾನೀಯಗಳ ಮೊರೆತೆ ಹೋಗುತ್ತಿದ್ದಾರೆ.
ದೇಹಕ್ಕೆ ತಂಪು ನೀಡುವ ಹಣ್ಣುಗಳಲ್ಲಿ ಬನಸ್ಪತ್ರೆ ಹಣ್ಣಿಗೆ ಅಗ್ರಸ್ಥಾನ. ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಈ ಹಣ್ಣಿನದ್ದೇ ಕಾರುಬಾರು.
ಕೆಜಿ ಬನಸ್ಪತ್ರೆ ಹಣ್ಣಿಗೆ 40 ರಿಂದ 50 ರೂ. ಇದೆ. ಒಂದೊಂದು ಹಣ್ಣು ಕನಿಷ್ಠ ಒಂದು ಕೆಜಿಯಿಂದ 10 ಕೆಜಿವರೆಗೂ ತೂಕ ಹೊಂದಿರುತ್ತವೆ.ಕರಬೂಜ ಕೆಜಿಗೆ 35ರಿಂದ 40 ರೂ., ಕಲ್ಲಂಗಡಿ 30ರಿಂದ 40 ರೂ. ದರವಿದೆ.ಪ್ರತಿದಿನ ಹೊನ್ನಾಳಿ ನಗರದ 11 ಅಂಗಡಿಗಳಿಂದ ಹಣ್ಣಿನ ವ್ಯಾಪಾರವೇ 8 ರಿಂದ 10 ಲಕ್ಷ ರೂ.ಆಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.
ತುಂಗಭದ್ರಾ ನದಿ ತೀರದ ಮರಳು ಮಣ್ಣಿನಲ್ಲಿ ತೇವಾಂಶ ಆಧರಿಸಿ ಬೆಳೆಯುವ ದೇಸಿ ತಳಿಯ ಬನಸ್ಪತ್ರೆ,ಕರಬೂಜ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ.
ಭದ್ರಾವತಿ,ಕಡೂರು,ಬೀರೂರು,ಹೊನ್ನಾಳಿ ನಗರದ ಹಣ್ಣಿನ ಅಂಗಡಿಯಲ್ಲಿ ತರೀಕೆರೆ,ಶಿವಮೊಗ್ಗ, ಶಿರಾಳಕೊಪ್ಪ,ಚಿತ್ರದುರ್ಗ,ಹಾವೇರಿ,ಬಂಕಾಪುರ, ರಾಣೆಬೆನ್ನೂರು ಮುಂತಾದ ಕಡೆಗಳಿಂದ ವ್ಯಾಪಾರಸ್ಥರು ಹೊನ್ನಾಳಿಗೆ ಪ್ರತಿದಿನ ಆಗಮಿಸಿ ಬನಸ್ಪತ್ರೆ ಹಣ್ಣು ಖರೀದಿಸುತ್ತಾರೆ.ಹೊನ್ನಾಳಿ ನದಿ ತೀರದಲ್ಲಷ್ಟೆ ಅಲ್ಲದೆ ಮಹಾರಾಷ್ಟ್ರದ ಔರಂಗಬಾದ್, ನಾಗಪುರ ಪ್ರದೇಶದಲ್ಲೂ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ,ಹೊನ್ನಾಳಿಯಲ್ಲಿ ಬೆಳೆಯುವ ಹಣ್ಣು ಹೆಚ್ಚು ಸಿಹಿ,ತೆಳುವಾದ ಸಿಪ್ಪೆ,ದಪ್ಪನೆಯ ತಿರುಳು,ಸುಮಧುರ ಪರಿಮಳ ಹೊಂದಿರುತ್ತದೆ ಎಂದು
ವಿಶ್ಲೇಷಿಸುತ್ತಾರೆ ಹಣ್ಣು ಮಾಡುವ ವ್ಯಾಪಾರಿ ಕಲ್ಕೇರಿ ನಾಗರಾಜ್ ಮಾರಾಟಗಾರರು
ಬನಸ್ಪತ್ರೆ ಹಣ್ಣನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಳೆಯಲಾಗುತ್ತದೆ.ಹಣ್ಣು ಕಿತ್ತ 15 ದಿನಗಳ ಒಳಗೆ ಮಾರಾಟ ಮಾಡಬೇಕು.ಇಲ್ಲದಿದ್ದರೆ ಹಣ್ಣು ಕೆಡುತ್ತದೆ.
ತಾಲೂಕಿನ ತುಂಗಭದ್ರಾ ನದಿ ನೀರು ಹರಿಯುವ ಪ್ರದೇಶ ಹಾಗೂ ಇಬ್ಬನಿ ಮತ್ತು ಶೀತಗುಣ ಹೊಂದಿರುವ ಪ್ರದೇಶಗಳಾದ ಹೊಳೆಮಾದಾಪುರ, ದೇವನಾಯಕನಹಳ್ಳಿ, ಬೇಲಿಮಲ್ಲೂರು,ಹರಳಹಳ್ಳಿ ಸೇರಿದಂತೆ ಇತರ ಕಡೆಗಳಲ್ಲಿ ಬನಸ್ಪತ್ರೆ ಹಾಗೂ ಕರಬುಜ ಬೆಳೆಯುತ್ತಿದ್ದಾರೆ.
ಎಲ್ಲ ಹಣ್ಣುಗಳಂತೆ ಈ ಹಣ್ಣಿಗೂ ರೋಗಬಾಧೆ ಹೆಚ್ಚು. ಕೊಳೆರೋಗ,ಖಡಕ್ ರೋಗ,ಬುಟ್ರಿರೋಗ ಕಾಣಿಸಿಕೊಂಡಾಗ ಸಕಾಲಕ್ಕೆ ಔಷಧ ಸಿಂಪಡಿಸುತ್ತೇವೆ. ಕಡಿಮೆ ಖರ್ಚು ಹೆಚ್ಚು ಲಾಭ ಹೊಂದಿರುವುದರಿಂದ ಹೆಚ್ಚಾಗಿ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ರೈತ ಮಾರುತಿ.
ಬಹುಪಯೋಗಿ ಹಣ್ಣು
ಸರ್ವಕಾಲದಲ್ಲಿಯೂ ಆರೋಗ್ಯಕ್ಕೆ ಒಳ್ಳೆಯದು. ಸೀಕರಣೆ,ಜ್ಯೂಸ್ ಮಾಡಿ ಸೇವಿಸುವ ಜತೆಗೆ ಮಧುಮೇಹ ಇರುವವರು,ಬಾಣಂತಿಯರು ಸಹ ಸೇವಿಸಬಹುದು.ಬೇಸಿಗೆ ಕಾಲದಲ್ಲಿ ಈ ಹಣ್ಣು ದೇಹಕ್ಕೆ ರಾಮಬಾಣವಿದ್ದಂತೆ ಎನ್ನುತ್ತಾರೆ ಸ್ಥಳೀಯ ವೈದ್ಯರು.
ಪ್ರಭಾಕರ ಡಿ ಎಂ ಹೊನ್ನಾಳಿ