ಚಾಮರಾಜನಗರ:ಮಲೆ ಮಹದೇಶ್ವರ ಬೆಟ್ಟದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಅನಾನುಕೂಲ ಉಂಟಾದ ಹಿನ್ನೆಲೆಯಲ್ಲಿ ಭಕ್ತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಬೆಳಗ್ಗೆ ಕನಕಪುರ ಮೂಲದಿಂದ ಸುಮಾರು 200 ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿದ್ದರು,ಮಾದಪ್ಪನ ದರ್ಶನ ಪಡೆದ ಬಳಿಕ ತಮ್ಮ ಊರುಗಳಿಗೆ ವಾಪಸ್ಸಾಗಲು ಮಂಗಳವಾರ ಮುಂಜಾನೆಯಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪರದಾಡಿದರು.
ಬಸ್ ಗಾಗಿ ಕಾದು ಕಾದು ಬೇಸತ್ತ ಭಕ್ತಾದಿಗಳು ಮಲೆ ಮಹದೇಶ್ವರಬೆಟ್ಟದ ಪ್ರವೇಶದ್ವಾರದ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆಗೆ ಮುಂದಾದರು,ಭಕ್ತರ ದಿಢೀರ್ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಲೆ ಮಹದೇಶ್ವರ ಬೆಟ್ಟದ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಣಗೊಳಿಸಲು ಹರಸಾಹಸ ಪಟ್ಟು ಭಕ್ತರ ಮನವೊಲಿಸಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಮನವಿ ಮಾಡಿದ ಬಳಿಕ ಭಕ್ತರು ಪ್ರತಿಭಟನೆ ಕೈಬಿಟ್ಟರು.
ವರದಿ ಉಸ್ಮಾನ್ ಖಾನ್