ಭದ್ರಾವತಿ:ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುಧ್ದ ಮತ್ತು ಕುಟುಂಬ ರಾಜಕಾರಣದ ವಿರುಧ್ದ ಸಿಡಿದೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಭದ್ರಾವತಿ ನಗರಕ್ಕೆ ಆಗಮಿಸಲಿದ್ದಾರೆ.
ಕೇಸರಿ ಕಟ್ಟಾಳು ಎಂದು ಕೇಸರಿ ಪಕ್ಷದಲ್ಲಿ ಹಾಗೂ ಸಂಘ ಪರಿವಾರದ ಮೂಲಕ ಬಿಜೆಪಿ ಪಕ್ಷವನ್ನು ಬೆಳೆಸಿದ ಹಲವು ನಾಯಕರಲ್ಲಿ ಪ್ರಮುಖರಾಗಿರುವ ಕೆ ಎಸ್ ಈಶ್ವರಪ್ಪ ಸ್ವತಂತ್ರ್ಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಅಖಾಡಕ್ಕೆ ಇಳಿಯಲು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಅವರು ಭದ್ರಾವತಿ ನಗರಕ್ಕೆ ಮಂಗಳವಾರ ಸಂಜೆ ಆಗಮಿಸಲಿದ್ದು ಅವರ ಸ್ವಾಗತಕ್ಕೆ ಕೆ ಎಸ್ ಈಶ್ವರಪ್ಪ ಅಭಿಮಾನಿಗಳು,ಕಾರ್ಯಕರ್ತರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ 4-3 0ಕ್ಕೆ ಹುತ್ತಾ ಬಸ್ ನಿಲ್ದಾಣದಿಂದ ಬೈಕ್ ರ್ಯಾಲಿಯಲ್ಲಿ ಹೊರಟು ಕೆ ಎಸ್ ಆರ್ ಟಿ ಸಿ ಮುಖ್ಯ ಬಸ್ ನಿಲ್ದಾಣ, ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತ, ಬಿ.ಹೆಚ್ ರಸ್ತೆ, ಮಾಧವಾಚಾರ್ ವೃತ್ತ, ಡಾ. ರಾಜ್ ಕುಮಾರ್ ರಸ್ತೆ, ರಂಗಪ್ಪ ವೃತ್ತ, ತಾಲ್ಲೂಕು ಕಚೇರಿ ರಸ್ತೆ ಮೂಲಕ ಹೊಸ ಸೇತುವೆ ರಸ್ತೆಯ ಮೂಲಕ ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ನಂತರ ಧರ್ಮಶ್ರೀ ಸಭಾಭವನದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಕೆ ಎಸ್ ಈಶ್ವರಪ್ಪ ಅವರು ಮಾತನಾಡಲಿದ್ದಾರೆ.
ವರದಿ : ಕೆ ಆರ್ ಶಂಕರ್ ಭದ್ರಾವತಿ