ತುಮಕೂರು:ಜಿಲ್ಲೆಯ ವೈ.ಎನ್.ಹೊಸಕೋಟೆ ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯು 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಂಡಿದೆ ಎಂದು ಮಂಡಲಿಯ ಅಧ್ಯಕ್ಷ ಎ.ಓ.ನಾಗರಾಜು ತಿಳಿಸಿದರು.
ಶನಿವಾರದಂದು ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡಶ್ರೀ ಪ್ರಶಸ್ತಿಯ ಸ್ಪರ್ಧಾತ್ಮಕ ಪರೀಕ್ಷೆಯ ವೇಳೆ ಮಾತನಾಡಿದ ಅವರು, ಮಂಡಲಿಯು ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡಶ್ರಿ ಪ್ರಶಸ್ತಿ ನೀಡುತ್ತಿದ್ದು, ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಈ ವರ್ಷ 200 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ನವೆಂಬರ್ 26 ರಿಂದ 29 ರವರೆಗೆ ಮಂಡಲಿಯು ಹಮ್ಮಿಕೊಂಡಿರುವ 67ನೇ ಕನ್ನಡ ರಾಜ್ಯೋತ್ಸವ ಮತ್ತು ಮಂಡಲಿಯ 37ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರಲ್ಲಿ ಕನ್ನಡಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
ಸಿನಿಮಾ ನಟರಾದ ಕೆ.ಜಿ.ಎಪ್ ತಾತ ಎಂದು ಪ್ರಸಿದ್ದಿ ಪಡೆದಿರುವ ಇದೇ ಗ್ರಾಮದ ಕೃಷ್ಣೋಜಿರಾವ್ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಟಕೋತ್ಸವದಲ್ಲಿ ಬೆಂಗಳೂರು, ದಾರವಾಡ, ಬಳ್ಳಾರಿ ಇನ್ನಿತರೆ ಸ್ಥಳಗಳ ತಂಡಗಳು ಭಾಗವಹಿಸುತ್ತಿದ್ದು, ಸ್ನಿಗ್ಧ, ಬುದ್ಧ ಪ್ರಬುದ್ಧ, ಬೂಟುಕಾಲಿನ ಸದ್ದು, ತ್ಯಾಗಿ, ಕುಡಿತಾಯಣ, ಅಕ್ಕನಾಗಲಾಂಬಿಕೆ, ಪ್ರೀತಿಸಿದವಳ ಕೈಬಿಡಬೇಡ ಇನ್ನಿತರೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.