ಶಿವಮೊಗ್ಗ:అభిరుಚಿ ಮತ್ತು
ಭಾರತೀಯ ಸಾಂಸ್ಕೃತಿಕ ವೇದಿಕೆ,ಶಿವಮೊಗ್ಗ ಇವರುಗಳು ಸಾದರಪಡಿಸುತ್ತಿರುವ ವರದಪುರದ ವರದಯೋಗಿ ಶ್ರೀ ಶ್ರೀಧರಸ್ವಾಮಿಗಳ ಜೀವನಾಧಾರಿತ ದೃಶ್ಯರೂಪಕವನ್ನು ದಿನಾಂಕ 26-5-2024, ಭಾನುವಾರ,ಸಮಯ ಸಂಜೆ 5-30 ರಿಂದ ಶಿವಮೊಗ್ಗದ ಕುವೆಂಪು ರಂಗಂದಿರದಲ್ಲಿ ಆಯೋಜಿಸಲಾಗಿದೆ.
ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ (ರಿ.)ಮೇಲಿನಮಣ್ಣಿಗೆ,ಹೊನ್ನಾವರ (ಉ.ಕ.) ಇವರು ಅಭಿನಯಿಸಿ ಪ್ರಸ್ತುತಪಡಿಸುವರು.
ಶ್ರೀ ಶ್ರೀಧರಸ್ವಾಮಿಗಳ ಭಕ್ತ ಮಹಾಜನತೆಗೆ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರ ಜೀವನಾಧಾರಿತ ದೃಶ್ಯರೂಪಕವನ್ನು ಆಸ್ವಾದಿಸುವ ಸುವರ್ಣಾವಕಾಶ ಒದಗಿ ಬಂದಿದ್ದು ಕಾರ್ಯಕ್ರಮದ ರಂಗರೂಪ ರಚನೆಯನ್ನು ಶ್ರೀ ಎಂ.ಜಿ.ವಿಷ್ಣು ಮಣ್ಣಿಗೆ,ನಿರ್ದೇಶನವನ್ನು ಶ್ರೀ ಜಿ.ಡಿ.ಭಟ್, ಕೆಕ್ಕಾರ್,ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು,ಹಿರಿಯ ರಂಗ ಕಲಾವಿದರು ಇವರು ನಡೆಸಿ ಕೊಡುವರು ಸಂಪರ್ಕ,ಸಂಯೋಜನೆ ಮತ್ತು ನಿರ್ವಹಣೆ ಶ್ರೀ ಸಂತೋಷ್ ಯಾಜಿಯವರು ವಹಿಸಿಕೊಳ್ಳುವರು.
ಈ ದೃಶ್ಯ ರೂಪಕವು ಶ್ರೀ ಜಿ.ಡಿ.ಭಟ್ ಕೆಕ್ಕಾರ್ ಇವರ ನಿರ್ದೇಶನದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರು ಅಭಿನಯಿಸುವ ದೃಶ್ಯರೂಪಕ ಮತ್ತು ಅದ್ಭುತ ನೆರಳು ಬೆಳಕಿನ ಸಂಯೋಜನೆಯಾಗಿದ್ದು, ವಿಶೇಷ ರಂಗಸಜ್ಜಿಕೆ,ವಿಶಿಷ್ಟ ವಸ್ತ್ರವಿನ್ಯಾಸ,ಸುಮಧುರ ಹಾಡುಗಳನ್ನೊಳಗೊಂಡ ಸಂಗೀತ ಸಂಯೋಜನೆಯೊಂದಿಗೆ ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ದೃಶ್ಯ ರೂಪಕದಲ್ಲಿ ಮೂಡಿ ಬರಲಿದೆ.
ವರದಪುರದಲ್ಲಿ ಸದ್ಗುರು ಶ್ರೀ ಶ್ರೀಧರಾಶ್ರಮದ ಎಲ್ಲಾ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಶ್ರೀ ಶ್ರೀಧರ ಮಹಾಮಂಡಲಕ್ಕೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಡಾ.ಎ.ಶಿವರಾಮಕೃಷ್ಣ, ಅಧ್ಯಕ್ಷರು,ಅಭಿರುಚಿ-ಭಾರತೀಯ ಸಾಂಸ್ಕೃತಿಕ ವೇದಿಕೆ,ಶಿವಮೊಗ್ಗ ಮತ್ತು ಶ್ರೀ ಎಸ್.ಆರ್.ಬಾಪಟ್, ಕಾರ್ಯಕ್ರಮ ಸಂಯೋಜಕರು/ನಿರ್ದೇಶಕರು, ಅಭಿರುಚಿ ಮತ್ತು ಎಲ್ಲಾ ಸಮಸ್ತ ಅಭಿರುಚಿಯ ಸದಸ್ಯರುಗಳು ಇವರುಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.