ಭದ್ರಾವತಿ: ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು.ಪ್ರತಿದಿನ ಪರಿಸರದ ಬಗ್ಗೆ ಕಾಳಜಿ ಹೊಂದಿರಬೇಕು ಎಂದು ನಗರ ಸಭೆಯ ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ವತಿಯಿಂದ ತರಿಕೆರೆ ರಸ್ತೆಯ ನಗರಸಭಾ ಕಚೇರಿ ಮುಂಭಾಗದ ವಿನೋಬಾ ಬಾವೆ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಭೂಮಿಯು ಜಗತ್ತಿನ ಸಕಲ ಜೀವಿಗಳು ವಾಸಿಸುವ ವಿಶಾಲವಾದ ಮನೆ ಎಂದರೂ ತಪ್ಪಾಗಲಿಕ್ಕಿಲ್ಲ.ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಭೂಮಿತಾಯಿಯು ನಮ್ಮ ಬದುಕಿಗೆ ಅವಶ್ಯವಿರುವ ಎಲ್ಲವನ್ನೂ ನೀಡುತ್ತಾಳೆ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಪರಿಸರ ಅಭಿಯಂತರ ಪ್ರಭಾಕರ್ ಮಾತನಾಡಿ, ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ.ಆದರೆ ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ನಿರ್ದಯವಾಗಿದ್ದಾನೆ.ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ಹಾಳುಗೆಡುವುತ್ತಿದ್ದಾರೆ ಕಾಡುಗಳನ್ನು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಂತೂ ಪರಿಸರ ಹಾನಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ವರ್ಷದ ಬಿಸಿಲಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ.
ಕಂದಾಯಾಧಿಕಾರಿ ಎಂ.ಎಸ್.ರಾಜಕುಮಾರ್ ಮಾತನಾಡಿ ಪ್ರತಿ ವರ್ಷ ಹವಾಮಾನ ಬದಲಾವಣೆಯಿಂದ,ಜಾಗತಿಕ ತಾಪಮಾನ ಏರಿಕೆಯಿಂದ ಅರಣ್ಯನಾಶದವರೆಗೆ ತಕ್ಷಣದ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ಉದ್ದೇಶದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.
1972ರಲ್ಲಿ ಜೂನ್ 5 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರ ಸಂಬಂಧದ ಕುರಿತು ವಿಶ್ವಸಂಸ್ಥೆಯು ಸಮ್ಮೇಳನವೊಂದನ್ನು ನಡೆಸಿತ್ತು.ಈ ದಿನವನ್ನು ಗೌರವಿಸಿ 1973ರಲ್ಲಿ ಪ್ರಪಂಚದಾದ್ಯಂತದ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ.ಭೂಮಿಯು ಈಗಾಗಲೇ ಶೇ 40 ರಷ್ಟು ಕ್ಷೀಣಿಸಿದೆ ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬರಗಾಲದ ಅವಧಿಯು 2000ನೇ ಇಸವಿಯಿಂದ ಶೇ. 29 ರಷ್ಟು ಹೆಚ್ಚಾಗಿದೆ.ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಸಂಸ್ಥೆ ಅಭಿಪ್ರಾಯಪಟ್ಟಿದೆ.ಇನ್ನಾದರೂ ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ,ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ,ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ,ಮರಗಳನ್ನು ಉಳಿಸೋಣ ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಎನ್ ಬಾಬು ಮಾತನಾಡಿ, ನಗರೀಕರಣ ಮತ್ತು ವೇಗದ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಮರಗಳ ಮಾರಣಹೋಮವಾಗಿದೆ. ಗಿಡ-ಮರ ನಾಶ ಮಾಡಿ ಕೈಗಾರಿಕೆ,ಮನೆ ಅಥವಾ ನಗರಗಳ ನಿರ್ಮಾಣ ಮಾಡಲಾಗಿದೆ.ಇದು ನೀರಿನ ಸಾಮರ್ಥ್ಯ ನಷ್ಟದ ಜೊತೆಗೆ ಪ್ರಮುಖ ಪರಿಸರ ಸಮಸ್ಯೆಯಾಗಿದೆ.ಈ ಹಿನ್ನೆಲೆ ಭೂಮಿಯ ಗುಣಮಟ್ಟ ರಕ್ಷಣೆ ಮತ್ತು ಆಮ್ಲಜನಕದ ಉದ್ದೇಶದಿಂದ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ ರವರು ಮಾತನಾಡಿದರು.ವ್ಯವಸ್ಥಾಪಕರು, ಅರೋಗ್ಯ ನಿರೀಕ್ಷಕರು,ಇಂಜಿನಿಯರ್ ಗಳು, ಅಕೌಂಟೆಂಟ್ ಸೇರಿದಂತೆ ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ