ಶಿವಮೊಗ್ಗ:2024-25 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಗೆ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮರುವಿನ್ಯಾಸಗೊಳಿಸಲಾದ ಕಾಳುಮೆಣಸು,ಶುಂಠಿ ಹಾಗೂ ಮಾವು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.
ವಿಮೆಗೆ ಒಳಪಡುವ ಘಟಕ ಪ್ರದೇಶ :
ಅಡಿಕೆ :- ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳ ಎಲ್ಲಾ ಗ್ರಾಮ ಪಂಚಾಯತಿಗಳು.
ಕಾಳುಮೆಣಸು :- ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳ ಎಲ್ಲಾ ಗ್ರಾಮ ಪಂಚಾಯತಿಗಳು.
ಶುಂಠಿ :- ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳ ಎಲ್ಲಾ ಗ್ರಾಮ ಪಂಚಾಯತಿಗಳು.
ಮಾವು :- ಶಿವಮೊಗ್ಗ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳು.
ವಿಮೆಗೆ ನೋಂದಾಯಿಸಬಹುದಾದ ರೈತರು :
ಫಸಲು ಕೊಡುತ್ತಿರುವ ಅಡಿಕೆ, ಮಾವು, ಶುಂಠಿ ಹಾಗೂ ಕಾಳುಮೆಣಸು ಬೆಳೆಗಳನ್ನು ಬೆಳೆದಿರುವ ಎಲ್ಲಾ ರೈತರು.
ಈ ಮೇಲಿನ ಬೆಳೆಗಳಿಗೆ ಬೆಳೆಸಾಲ ಪಡೆದಿರುವ / ಪಡೆಯುವ ಹಾಗೂ ಬೆಳೆಸಾಲ ಪಡೆಯದ ಎಲ್ಲಾ ರೈತರುಗಳ ವಿಮೆಗೆ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.
ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆ ಯೋಜನೆಗಳಲ್ಲಿ ಕಡ್ಡಾಯವಾಗಿ ಒಳಪಡುತ್ತಾರೆ. ಆದರೆ, ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ವಿಮೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿವಸಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ, ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಅವಶ್ಯ ದಾಖಲಾತಿಗಳು :
ರೈತರು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರ ಇತರೆಗಳೊಂದಿಗೆ ಬ್ಯಾಂಕ್‌ಗಳಿಗೆ / ಸಮೀಪದ ಸಾರ್ವಜನಿಕ ಸೇವಾ ಕೇಂದ್ರ (Common Service Centres) / ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ, ನೊಂದಾಯಿಸಿಕೊಳ್ಳುವುದು.
ನೊಂದಾಯಿಸಿಕೊಳ್ಳಲು ಅಂತಿಮ ದಿನಾಂಕ:
ಎಲ್ಲಾ ರೈತರಿಗೂ ಅಡಿಕೆ, ಶುಂಠಿ, ಕಾಳುಮೆಣಸು ಹಾಗೂ ಮಾವು ಬೆಳೆಗಳಿಗೆ 31-07-2024 ರಂದು
ಕೊನೆಯ ದಿನವಾಗಿರುತ್ತದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಮಾ ನಷ್ಟ ಪರಿಹಾರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರವು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸಿರುವ ಮಳೆ ಮಾಪನ ಹಾಗೂ ಹವಾಮಾನ ಕೇಂದ್ರಗಳಲ್ಲಿ ದಾಖಲಾದ ಮಾಹಿತಿಯನ್ನಾಧರಿಸಿ ಅಂದಾಜಿಸಲಾಗುವುದು.
ಪರಿಹಾರದ ಮೊತ್ತವನ್ನು ನೀಡಲು ಅಧಿಸೂಚಿಸಲಾದ (ಉದಾ: ಕಡಿಮೆ ಮಳೆ. ಅಧಿಕ ಮಳೆ-ಅಧಿಕ ಆದ್ರ್ರತೆ, ಅಧಿಕ ಮಳೆ, ಸತತ ನಾಲ್ಕು ದಿನಗಳಿಂದ ಅಧಿಕ ಮಳೆಯಿಂದಾಗಿ ಬೆಳೆಗಳಿಗೆ ಆಗುವ ಪ್ರತಿಕೂಲ ಪರಿಣಾಮಗಳು) ಗಳನ್ನಾಧರಿಸಿ ಅಂದಾಜಿಸಲಾಗುವುದು.
ಅಧಿಸೂಚಿತ ಘಟಕದಲ್ಲಿ (ಗ್ರಾಮ ಪಂಚಾಯತ್) ವಿಮೆಗೆ ಒಳಪಟ್ಟ ಎಲ್ಲಾ ರೈತರಿಗೂ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಅಧಿಸೂಚಿಸಲಾದ ಬೆಳೆಗಳಿಗೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭಗಳಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಲು ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗಳಿಗೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು.
ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ ಅಥವಾ ರೈತ ಸಂಪರ್ಕ ಕೇಂದ್ರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದು ನೊಂದಾಯಿಸಿಕೊಳ್ಳಲು ಕೋರಿದೆ.
” ರೈತರೇ ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಿ”ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ