ಶಿಲಾಯುಗದಿಂದ ಈ ಜಗತ್ತು ಕಾಲಾಂತರದಲ್ಲಿ ಏಳು ಬೀಳುಗಳನ್ನು ಕಂಡಿದೆ ಪುರಾಣಗಳನ್ನು ಅಧ್ಯಯನ ಮಾಡಿದರೆ ಈ ವಿಶ್ವ ದೇವತೆಗಳು ಮತ್ತು ರಾಕ್ಷಸರು ಎಂಬ ಪರಿಕಲ್ಪನೆಯಲ್ಲಿ ಹಾದು ಬಂದಿದ್ದು, ದೇವತೆಗಳು ಮತ್ತು ರಾಕ್ಷಸರ ಮದ್ಯೆ ಅಧಿಕಾರಕ್ಕಾಗಿ ಸದಾ ಹೋರಾಟ ನಡೆಯುತ್ತಲೇ ಇತ್ತು.ದೇವರಾಜ ಇಂದ್ರನ ಪಟ್ಟಕ್ಕೆ ಸದಾ ರಾಕ್ಷಸರು ಲಗ್ಗೆ ಇಡುತ್ತಾ ಸ್ವರ್ಗದ ಅಧಿಕಾರಕ್ಕಾಗಿ ಯುದ್ಧ ಮಾಡುತ್ತಿದ್ದರು. ಇಂದ್ರನಿಗೆ ಯಾವತ್ತೂ ಕಿರಿ ಕಿರಿ ತಪ್ಪುತ್ತಿರಲಿಲ್ಲ. ಈ ಎಲ್ಲಾ ಕಿರಿ ಕಿರಿಗಳ ಮಧ್ಯೆ ಆ ಇಂದ್ರ ತನ್ನ ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದ, ರಂಭೆ,ಊರ್ವಶಿ,ಮೇನಕೆ ಸದಾ ಇಂದ್ರನ ಉತ್ಸಾಹ ಕುಗ್ಗದಂತೆ ಹುರಿದುಂಬಿಸಿ ಚಟುವಟಿಕೆಯಲ್ಲಿ ಇಡುತ್ತಿದ್ದರು.
ಇಷ್ಟೆಲ್ಲ ಐಷಾರಾಮ ಇದ್ದರೂ ಈ ಇಂದ್ರನಿಗೆ ತನ್ನ ಪಟ್ಟದ ಚಿಂತೆ ಹಾಗಾಗಿ ಭೂ ಲೋಕದಲ್ಲಿ ಅಥವಾ ವಿಶ್ವದಲ್ಲಿ ಯಾರಾದರೂ ತಪಸ್ಸು ಮಾಡಿ ವರ ಪಡೆಯುತ್ತಿದ್ದರೆ, ಪ್ರಾಮಾಣಿಕರು ತಮ್ಮ ನಿಷ್ಠೆಯಿಂದ ಭಗವಂತನನ್ನು ಒಲಿಸಿಕೊಂಡರೆ, ಸತ್ಕಾರ್ಯಗಳನ್ನು ಮಾಡಿ ಕೀರ್ತಿವಂತರಾದರೆ ಆ ಇಂದ್ರನಿಗೆ ಸಹಿಸಲು ಆಗದೆ ನಾರದರನ್ನು ಷಡ್ಯಂತ್ರ ಮಾಡಲು ನಿಯೋಜಿಸುತ್ತಿದ್ದರು. ಇಂದ್ರನ ಪಟ್ಟ ಬಹು ಪ್ರಭಾವಿ ಆದರೆ ಪ್ರತಿ ಕ್ಷಣ ರಾಕ್ಷಸರು ಆಕ್ರಮಣ ಮಾಡಿ ಪಟ್ಟ ಕಿತ್ತುಕೊಳ್ಳುವ ಭಯ.
ಆ ದೇವಲೋಕದ ಇಂದ್ರನ ಪಟ್ಟ ಮತ್ತು ಆಧುನಿಕ ಯುಗದ ಮಂತ್ರಿ ಮಹಾಶಯರ ಪಟ್ಟ ಕೂಡ ತುಲನಾತ್ಮಕ. ಪ್ರಜಾಪ್ರಭುತ್ವದ ಈಗಿನ ಆಧುನಿಕ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿ ಇರುವ ಮಂತ್ರಿ ಮಂಡಲ ಮತ್ತು ಮುಖ್ಯ ನಾಯಕ ಇಂದ್ರನ ಆಸ್ಥಾನಕ್ಕೆ ಸರಿಸಮಾನ ಹಾಗೂ ವಿರೋಧ ಪಕ್ಷದಲ್ಲಿರುವ ಮುಖ್ಯ ನಾಯಕ ಮತ್ತು ಅವನ ಪರಿವಾರ ರಾಕ್ಷಸ ಸಮುದಾಯ ಇದ್ದಂತೆ. ಈ ರಾಕ್ಷಸ ಸಮುದಾಯದಲ್ಲೂ ವಿಭೀಷಣ, ಪ್ರಹ್ಲಾದರಂತ ಬೆರಳೆಣಿಕೆಯ ಆದರ್ಶ ನಾಯಕರು ಕಾಣ ಸಿಗುತ್ತಾರೆ.
ನಮ್ಮ ದೇಶ ಭಾರತದ ರಾಜಕಾರಣಿ ಪರಂಪರೆಯ ಬಗ್ಗೆ ಹೇಳುವುದಾದರೆ ನಮ್ಮ ಇತಿಹಾಸ ಪ್ರಸಿದ್ಧ ರಾಜ ಮಹಾ ರಾಜರು ಸರ್ವಾಧಿಕಾರಿ ರಾಜಕಾರಣಿಗಳಾಗಿದ್ದರು, ಅವರ ಮಂತ್ರಿ ಮಂಡಲವನ್ನು ಅವರೇ ರೂಪಿಸಿ ಮಂತ್ರಿ ಗಳನ್ನು ನೇಮಕ ಮಾಡುತ್ತಿದ್ದರು. ಅವರ ವಿರೋಧಿಗಳು ಅವರ ನೆರೆ ಹೊರೆಯ ರಾಜರಾಗಿದ್ದರು. ಒಬ್ಬ ಪ್ರಭಾವಿ ರಾಜನಿಗೆ ರಾಜ್ಯ ವನ್ನು ವಿಸ್ತರಿಸುವ ಚಿಂತೆ ಯಾದರೆ, ದುರ್ಬಲ ರಾಜರಿಗೆ ಪ್ರಭಾವಿ ರಾಜನ ಆಕ್ರಮಣದ ಚಿಂತೆ. ಆಗಿನ ರಾಜ್ಯ ವಿಸ್ತರಣೆಯ ಪರಿಕಲ್ಪನೆಯಿಂದಾಗಿ ಯಾವತ್ತೂ ರಾಜರು ಸಕಲ ವೈಭೋಗಗಳಿದ್ದರೂ ಪರಸ್ಪರ ಆಕ್ರಮಣದ ಬೆದರಿಕೆಯಿಂದ ಪೂರ್ವಗ್ರಹ ಪೀಡಿತರಾಗಿದ್ದರು. ಆಗಿನ ರಾಜರ ಪರಸ್ಪರ ಜಗಳದಿಂದಾಗಿ ಹೊರಜಗತ್ತಿನ ಆಕ್ರಮಣಕಾರರಿಗೆ ನಮ್ಮ ದೇಶವನ್ನು ಹಂತ ಹಂತವಾಗಿ ವಶಪಡಿಸಿಕೊಂಡು ಮೊಘಲ ಸಾಮ್ರಾಜ್ಯ ಸ್ಥಾಪಿಸಿ ಹಲವಾರು ಶತಮಾನಗಳವರೆಗೆ ಆಡಳಿತ ಮಾಡಿದರು ಮತ್ತು ಇವತ್ತಿಗೂ ಬಳುವಳಿಯಾಗಿ ಅವರ ಸಂತತಿಯನ್ನು ತಳವೂರುವಂತೆ ಮಾಡಿದರು. ಆ ಸಂತತಿಯೇ ಇವತ್ತಿಗೂ ದೇಶ ಸಮಾಜದಲ್ಲಿ ಸ್ಪಷ್ಟ ಪರ ಮತ್ತು ವಿರೋಧಿ ಬಣ ಹುಟ್ಟುಹಾಕಿದೆ.
ಮೊಘಲರ ಸಾಮರ್ಥ್ಯ ಕ್ಷೀಣಿಸಿದಾಗ ಒಳ ನುಸಿಳಿದವರೇ ಆಂಗ್ಲರು. ಆಂಗ್ಲರು ರಾಜಕಾರಣದ ಆಧುನಿಕ ಪಿತಾಮಹರು. ಅವರು ಶಸ್ತ್ರ, ಸೈನ್ಯ ತಂದಿರಲಿಲ್ಲ. ವ್ಯಾಪಾರಕ್ಕೆಂದು ಬಂದವರು ನಮ್ಮ ಬೌಗೋಳಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಿ ವಿಶಾಲವಾಗಿ ಹರಡಿದ್ದ ತುಂಡರಸರನ್ನು ಪರಸ್ಪರ ಹೋರಾಡುವಂತೆ ಉತ್ತೇಜಿಸಿ, ತುಂಡರಸರು ಅದಪತನ ಹೊಂದುವಂತೆ ಮಾಡಿ ಅಧಿಕಾರವನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿ ಎರಡು ಶತಮಾನ ಈ ದೇಶವನ್ನು ಆಡಳಿತಮಾಡಿ, ಸಂಪತ್ತನ್ನು ಕೊಳ್ಳೆಹೊಡೆದು ಗುಲಾಮರನ್ನು ಸೃಷ್ಟಿಸಿದ್ದರು.
ಇನ್ನು ಕೊಳ್ಳೆಹೊಡೆಯಲು ಹೆಚ್ಚಿಗೆ ಇಲ್ಲ, ಆಡಳಿತ ಮುಂದುವರಿಸಲು ಬ್ರಿಟನ್ ನಿಂದ ಸಂಪತ್ತು ವಾಪಸು ವ್ಯಯಿಸಬೇಕಾಗಿ ಬಂದಾಗ, ಸ್ವತಂತ್ರ ಹೋರಾಟದ ನೆಪ ಒಡ್ಡಿ, ತಮ್ಮ ಸನ್ನೆಗೆ ತಲೆದೂಗುವ ತಥಾಕಥಿತ ಅಹಿಂಸಾವಾದಿಗಳನ್ನು ಸೃಷ್ಟಿಸಿ, ಪೋಷಿಸಿ ಅಧಿಕಾರ ಹಸ್ತಾಅಂತರಿಸುವ ವೇದಿಕೆ ನಿರ್ಮಿಸಿ, ಮುಂದೆ ಯಾವತ್ತೂ ಪರಸ್ಪರ ಜಗಳ ಗಂಟಿಗಳಾಗಿರಲು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಇವತ್ತಿಗೂ ನಮ್ಮ ಅವಸ್ಥೆ ನೋಡಿ ಖುಷಿಪಡುತ್ತಾರೆ.
ಸ್ವತಂತ್ರ ಭಾರತದಲ್ಲಿ ಆಂಗ್ಲರು ಪಟ್ಟ ಕಟ್ಟಿದ ಅನುಯಾಯಿಗಳು ತಮ್ಮ ಪ್ರಜಾ ಪ್ರಭುತ್ವದ ಹೆಸರಲ್ಲಿ ವಂಶಾಭಿವೃದ್ಧಿ ರಾಜಕೀಯದಲ್ಲಿ ತೊಡಗಿ ದೊಡ್ಡ ಸಂಖ್ಯೆಯಲ್ಲಿ ಗುಲಾಮಿ ಮನಸ್ಥಿತಿಯ,ಅವರ ಸನ್ನೆಗೆ ಕುಣಿಯುವ ಹಿಂಬಾಲಕರನ್ನು ರಾಜಕಾರಣಿಗಳಾಗಿ ಸೃಷ್ಟಿಸಿ ಅರಾಜಕತೆ ಮೆರೆಸಿದರು. ಸಾಲದೆಂಬಂತೆ ದೇಶವನ್ನು ಧರ್ಮ, ಜಾತಿ, ಉಪಜಾತಿಯಲ್ಲಿ ವಿಭಜಿಸಿ ಸಂಹಿದಾನದ ಮಾನ್ಯತೆ ಕೊಡಿಸಿ ಇವತ್ತಿಗೂ ಪರಸ್ಪರ ಕಚ್ಚಾಡುತ್ತಾ ಇರುವಂತೆ ಮಾಡುವುದರಲ್ಲಿ ಯಶಸ್ವಿ ಆದರು. ಈಗಿನ ತುಂಡು ನಾಯಕರು ಅದೇ ಬೀಳನ್ನು ಮುಷ್ಟಿಯಲ್ಲಿ ಬಿಗಿ ಹಿಡಿದಿಟ್ಟುಕೊಂಡು ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಅದು ಬಿಟ್ಟರೆ ಇನ್ನಿರುವುದು ಧರ್ಮದ ಆಧಾರದಲ್ಲಿ ದೊಡ್ಡ ರಾಜಕೀಯ.
ರಾಜಕಾರಣಿಯಾಗಲು ಒಂದು ಜಾತಿ, ಇನ್ನೊಂದು ಧರ್ಮ, ಇವೆರಡು ಪ್ರಭಲ ಆಗಿದ್ದಲ್ಲಿ ಬೇಳೆ ಬೇಯಿಸುವುದು ಅನಾಯಾಸಕರ. ವಾಸ್ತವವಾಗಿ ರಾಜಕಾರಣಿ ಹೇಗೆ ಆಗುವುದು ಎಂಬುದಕ್ಕೆ ಪಂಚಾಯತಿ ಮಟ್ಟಕ್ಕೆ ಇಳಿಯುವ. ಹಿಂದೊಮ್ಮೆ ಗ್ರಾಮದಲ್ಲಿ ಸಭ್ಯ, ಪ್ರಾಮಾಣಿಕ, ಉಪಕಾರಿ ವ್ಯಕ್ತಿ ಗಳನ್ನು ಜನ ತಮ್ಮ ವಾರ್ಡ್ ನ ಸದಸ್ಯನಾಗಿ ಆರಿಸುತ್ತಿದ್ದರು, ಕಾಲಕ್ರಮೇಣ ಮೀಸಲಾತಿ ಅನ್ವಯಿಸಲಾಗಿ, ಮೀಸಲಾತಿಯ ಅರ್ಹ ಅಭ್ಯರ್ಥಿಯನ್ನು ಪಕ್ಷ ಟಿಕೆಟ್ ಕೊಟ್ಟು ಕಣಕ್ಕೆ ಇಳಿಸುತ್ತಿದೆ. ಹಾಗಾಗಿ ಮೀಸಲಾತಿ ಕ್ಷೇತ್ರವನ್ನು ಗುರುತಿಸಿ ರಾಜಕೀಯಕ್ಕೆ ಪ್ರವೇಶಿಸುವ ಅಭ್ಯರ್ಥಿ ಆರಂಭದಲ್ಲಿ ಆ ಪರಿಸರದಲ್ಲಿ ಮನೆ ಕಟ್ಟಬೇಕು ಅಥವಾ ಬಾಡಿಗೆ ಮನೆ ಹೊಂದಿದ್ದು ವಿಳಾಸ ಗುರುತು ಚೀಟಿಯಲ್ಲಿ ಮುದ್ರಿತವಾಗಬೇಕು. ಗ್ರಾಮದ, ವಾರ್ಡ್ ನ ಜನರಲ್ಲಿ ಸ್ನೇಹ ಬೆಳೆಸಿ ದುಷ್ಟನಾಗಿದ್ದರೂ ಅತಿ ವಿನಯನಂತೆ ವರ್ತಿಸಬೇಕು. ಸಭೆ ಸಮಾರಂಭಗಳಲ್ಲಿ ಟೊಂಕ ಕಟ್ಟಿ ಮುಂದೆ ಮುಂದೆ ಹೋಗಿ ನಾಯಕತ್ವ ಪ್ರದರ್ಶಿಸಬೇಕು, ಏರು ಧ್ವನಿಯಲ್ಲಿ ಮಾತನಾಡಿ ಎದುರಿನವರು ಸರಿ ಹೇಳುತ್ತಿದ್ದರೂ ಅವರ ಬಾಯಿ ಮುಚ್ಚಿಸಿ ತನ್ನ ಮೇಲುಗೈ ಸಾಧಿಸಬೇಕು. ತನ್ನ ಬಳಿ ಸಮಸ್ಯೆ ಹೇಳಿಕೊಂಡು ಬರುವವರಿಗೆ ಸಮಸ್ಯೆ ಬಗೆಹರಿಸುವ ಎಲ್ಲ ಭರವಸೆ ಕೊಟ್ಟು , ಸಮಸ್ಯೆ ಇರುವ ವ್ಯಕ್ತಿ ಸತತ ತನ್ನ ಬಳಿ ಬಂದು ಅಂಗಲಾಚುವಂತೆ ಮಾಡಬೇಕು, ಪ್ರತಿ ಭಾರಿ ಸಮಸ್ಯೆ ಬಗೆ ಹರಿಯುತ್ತದೆಂಬ ಭರವಸೆ ಕೊಟ್ಟು ಹೊಸ,ಹೊಸ ಕಾರಣಗಳನ್ನು ಹೇಳಿ, ನಿಮ್ಮ ಮನವಿ ಈಗ ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರ ಬಳಿ ಇದೆ,ಈಗ ಮನವಿ ಬೆಂಗಳೂರು ವಿಧಾನ ಸಭೆ ತಲುಪಿದೆ ಮತ್ತೆ ಈಗ ಕೇಂದ್ರದಲ್ಲಿ ಲೋಕ ಸಭೆ ತಲುಪಿದೆ, ಇನ್ನೇನು ಆದೇಶ ಬರುವುದೊಂದೇ ಬಾಕಿ ಎಂದು ಹೇಳುತ್ತಾ ಜನರನ್ನು ತನ್ನ ಬಳಿ ಬರುತ್ತಾ ಇರುವಂತೆ ಮಾಡಿ ತನ್ನ ಸುತ್ತ ಮುತ್ತ ಬೆಂಬಲಿಗರು ಸುತ್ತುತ್ತಿರುವಂತೆ ಮಾಡ ಬೇಕು.ಚುನಾವಣೆಯಲ್ಲಿ ಈ ಬಡಪಾಯಿಗಳ ಮತ ತನಗೆ ಹಾಕುವುದನ್ನು ಖಚಿತ ಪಡಿಸಿಕೊಳ್ಳಬೇಕು. ಪರಿಸರದ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸದಸ್ಯತನ ಪಡೆದು ಸಂಘದ ಸಭೆ, ಸಮಾರಂಭಗಳಲ್ಲಿ ಎಲ್ಲರಿಗಿಂತ ಮುಂದಿದ್ದು ಏರು ಧ್ವನಿಯಲ್ಲಿ ಮಾತಾಡಬೇಕು. ವೇದಿಕೆಯಮೇಲೆ ಮೈಕ್ ಹಿಡಿದು ಸಭೆ ಯನ್ನು ನಿರ್ವಹಿಸಿ ತನ್ನ ಪ್ರತಿಸ್ಪರ್ದಿಗಳನ್ನು ಮುಂದೆ ಬಾರದಂತೆ ಮಾಡಿ ಮೇಲುಗೈ ಸಾಧಿಸಬೇಕು. ಶಾಸಕರನ್ನು, ಪಾರ್ಟಿ ನಾಯಕರನ್ನು ಸದಾ ಸಂಪರ್ಕಿಸುತ್ತಾ ತನ್ನ ಗ್ರಾಮದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ, ಇಡೀ ಗ್ರಾಮ ತನ್ನಿದಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿಕೊಳ್ಳಬೇಕು. ವಿರೋಧ ಪಕ್ಷದವರೊಂದಿಗೆ ಮಿತ್ರತ್ವ ಬೆಳೆಸಿ ಅವರನ್ನು ತನ್ನ ಜಾಲದಲ್ಲಿ ಹಾಕಿಕೊಂಡು ಹಿಡಿತದಲ್ಲಿಡಬೇಕು. ತನ್ನಿ0ದಾಗಿ ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತಿದೆ ಎಂದು ಹೇಳಿ ಸ್ವ ಪ್ರಶಂಸೆ ಮಾಡಿಕೊಳ್ಳುತ್ತ,ಗ್ರಾಮದ ಉಳಿದೆಲ್ಲ ಸಭ್ಯರನ್ನು ನಗಣ್ಯ ಮಾಡಬೇಕು.
ಪಂಚಾಯತ್ ಚುನಾವಣೆಯ ನಂತರ ತನಗೆ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷದ ಸದಸ್ಯರಿಗೆ ಲಕ್ಷ್ಮಣ ರೇಖೆ ಎಳೆಯಬೇಕು, ಮತ ಕಡಿಮೆ ಬರಬಹುದೆಂಬ ಸಂದೇಹ ವಿದ್ದರೆ ವಿರೋಧಿ ಬಾಣದಿಂದ ಅಭ್ಯರ್ಥಿಗಳನ್ನು ಹಣದ ಲಾಲಸೆ ತೋರಿಸಿ ತನ್ನ ಪರ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ಅಧ್ಯಕ್ಷ ಸ್ಥಾನ ಅಲಂಕರಿಸಬೇಕು. ತನ್ನ ಅಧ್ಯಕ್ಷ ಸ್ಥಾನ ಅವಧಿ ಪೂರ್ತಿ ಸುರಕ್ಷಿತ ಆಗಿರಲು ಹೊರ ಗ್ರಾಮದ ಗೂಂಡಾಗಳನ್ನು ಬೆಂಬಲಕ್ಕೆ ತೆಗೆದುಕೊಂಡು ತನ್ನ ರಕ್ಷಣೆಗೆ ಬಳಸಿಕೊಳ್ಳಬೇಕು.
ಹಳೆ ಉಡುಪುಗಳನ್ನು ಧರಿಸಿ ಅಸಹಾಯಕನಂತೆ ವರ್ತಿಸಿ ಜನರ ಕರುಣೆಗೆ ಪಾತ್ರ ಆಗಬೇಕು.ಗ್ರಾಮದ ಅಭಿವೃದ್ಧಿಗೆ ಬರುವ ಅನುಧಾನವನ್ನು ತನ್ನ ಪರ ಗುತ್ತಿಗೆ ದಾರರಿಗೆ ಕೊಡಿಸಿ ತನ್ನ ಪಾಲಿನ ಕಮಿಷನನ್ನು ಬೇರೆ ಗ್ರಾಮದಲ್ಲಿರುವ ಆಪ್ತ ಗೆಳೆಯನಿಗೆ ಕೊಡುವಂತೆ ನಿರ್ದೇಶಿಸಿ, ಜನರ ಮುಂದೆ ತಾನು ಪ್ರಾಮಾಣಿಕನೆಂದು ಸಾಭೀತು ಪಡಿಸಬೇಕು. ಆರ್ಥಿಕವಾಗಿ ಸಧೃಢನಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸ ಬೇಕು ಹಳೆಯದಾದ, ಸೈಕಲ್, ಮೋಟರ್ ಬೈಕ್ ನಲ್ಲಿ ಸಂಚರಿಸಿ ತಾನು ಬಡವನಂತೆ ವರ್ತಿಸಬೇಕು. ಕೆಟ್ಟ ಚಟಗಳಿದ್ದರೆ ದೂರದೂರಿಗೆ ಹೋಗಿ ಚಟ ತೀರಿಸಿಕೊಂಡು ಬರಬೇಕು, ಜನರಮುಂದೆ ಪ್ರಾಮಾಣಿಕ, ಸಭ್ಯ, ಸತ್ಯವಂತನಂತೆ ನಟಿಸಬೇಕು. ಮುಂದೊಂದು ದಿನ ತನ್ನ ಬಂಡವಾಳ ಹೊರಬಿದ್ದು ಅಪರಾಧಿ ಸಾಭೀತಾದರೆ ಸೆರೆಮನೆ ಹೋಗಲು ಸಿದ್ಧನಿರಬೇಕು, ತನ್ನಪರ ಪ್ರಭಲ ವಕೀಲನನ್ನು ನೇಮಿಸಿ ನಿರಪರಾಧಿ ಎಂದು ಸಾಭೀತು ಪಡಿಸಿ ಮತ್ತೆ ಜನ ವಿಷಯ ಮರೆತಾಗ ಪುನಃ ಸಕ್ರಿಯ ರಾಜಕಾರಣಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಿಲ್ಲಾ ಪಂಚಾಯತ್, ವಿಧಾನ ಸಭೆ,ಲೋಕಸಭೆ ಸದಸ್ಯನಾಗಿ, ರಾಜ್ಯದಲ್ಲಿ, ಕೇಂದ್ರದಲ್ಲಿ ಮಂತ್ರಿಯಾಗಿ ತಥಾಕಥಿತ ಪ್ರಭಾವಿ ರಾಜಕಾರಣಿಯಾಗಿ ಮೆರೆಯಬೇಕು, ಮೇಲುಗೈ ಸಾಧಿಸಬೇಕು.