ಬೀದರ್:ತಾಲೂಕಿನ ಕೊಳ್ಳೂರು ಗ್ರಾಮದ ಪರಿಸರ ಪ್ರೇಮಿ ರಿಯಾಜ್ ಪಾಶಾ ಅವರಿಗೆ ಕರ್ನಾಟಕ ಸರ್ಕಾರ ಪ್ರಸಕ್ತ ಸಾಲಿನ ಜೀವ ವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಜರುಗಿದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಿದರು.
ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ರಿಯಾಜ್ ಅವರು ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದು, ವಿವಿಧ ಅವಘಡದಿಂದ ಗಾಯಗೊಂಡ ಪಕ್ಷಿ, ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ರಕ್ಷಿಸುವ ಮೂಲಕ ಜೀವ ವೈವಿಧ್ಯತೆಯ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಕೊಡುಮಾಡುವ 2023ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಿಯಾಜಪಾಶಾ ಅವರು ಸಹಬಾಳ್ವೆ ಸಂಸ್ಥೆಯ ಸದಸ್ಯರಾಗಿ ಪರಿಸರ ಹಾಗೂ ಜೀವ ಸಂಕುಲ ಉಳುವಿಗಾಗಿ ಎಲೆಮರೆ ಕಾಯಿಯಂತೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಿದ್ದು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಸಹಬಾಳ್ವೆ ಸಂಸ್ಥೆ ಅಧ್ಯಕ್ಷ ವಿಶ್ವನಾಥ್ ಸ್ವಾಮಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಮಾರಂಭದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಬ್ರೀಜೇಶ್ ಕುಮಾರ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಜಗತ್ ರಾಮ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು.
ವರದಿ:ರೋಹನ್ ವಾಘಮಾರೆ