ಸಾಮಾನ್ಯರ ಸ್ವತ್ತಾಗಿ ಮತ್ತು ಬಸವಾದಿ ಶರಣರ ತತ್ವ ಪ್ರಚಾಕರಾಗಿ ತಮ್ಮ ಇಡೀ ಜೀವನ ತ್ಯಾಗ ಮಾಡಿ ಶರಣರ ತತ್ವ ಪ್ರಚಾರ ಮಾಡಿದ ಪ್ರಥಮ ಮಹಿಳಾ ಜಗದ್ಗುರು ಸಾಧ್ವಿ ಮಾತಾಜಿ ಅಮ್ಮನವರು.
ಮಾತಾಜಿ ಒಬ್ಬ ಹೆಣ್ಣು ಮಗಳಾಗಿ ಹುಟ್ಟಿ ಜಗತ್ತಿನಲ್ಲಿ ಆಗದೇ ಇರುವಂತಹ ಐತಿಹಾಸಿಕ ಕ್ರಾಂತಿಕಾರಿ ಬದಲಾವಣೆಗಳನ್ನು ಈ ನಾಡಿನಲ್ಲಿ ತಂದು,ಪ್ರಗತಿಪರ ವಿಚಾರಧಾರೆಯನ್ನು ಬಿತ್ತಿ ಹೋಗಿದ್ದಾರೆ.
ಎಷ್ಟೇ ಅವಹೇಳನ ,ಟೀಕೆ, ನಿಂದೆ ಬಂದರೂ ಅಂಜದೇ, ಅಳುಕದೆ, ಧೃತಿಗೆಡದೆ, ಹೋರಾಟದ
ಮೂಲಕ ಬಸವ ತತ್ವವನ್ನು ಜನಮಾನಸದಲ್ಲಿ ಬಿತ್ತಿದ ಕೆಚ್ಚೆದೆಯ ಧೀಮಂತ ಶರಣೆ ಬಸವಾದಿ ಶರಣರು ಕಂಡ ಕನಸನ್ನು ಈಡೇರಿಸಲು ಹಗಲಿರುಳು ದುಡಿದ ಧೀಮಂತೆ. ವೈಚಾರಿಕ ಪ್ರಜ್ಞೆಯ ಸಂತೆ. ಸಮಾನತೆ, ಸೌಹಾರ್ದತೆಯನ್ನು ಮತ್ತು ಸ್ವಾತಂತ್ರ್ಯ ವನ್ನು ಸಮಾಜಕ್ಕೆ ಧಾರೆಯೆರೆದ ಶರಣೆ ಈ ಮೂಲಕ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ತನು ಮನದಿಂದ ದುಡಿದ ತ್ಯಾಗಮಯಿ ಅಮ್ಮ.
ಹೆಣ್ಣು ಮಕ್ಕಳಿಗೆ ಸನ್ಯಾಸವೇ ನೀಡದೆ ಅವಹೇಳನ ಮಾಡುತ್ತಿದ್ದ ಈಗಿನ ಕಾಲದಲ್ಲಿ ಸ್ತ್ರೀ ಜಗದ್ಗುರು ಪೀಠ ಸ್ಥಾಪನೆ ಮಾಡಿ, ಭಾರತದ ಧಾರ್ಮಿಕ ಇತಿಹಾಸದಲ್ಲಿಯೇ ಅನನ್ಯ ಕಾರ್ಯ ಮಾಡಿರುವುದು ಯಾರೂ ಮರೆಯುವಂತಿಲ್ಲ.
ಇಂದಿಗೂ ಅವರವರ ಮಠಗಳಿಗೆ ಅವರವರ ಜಾತಿಯವರೇ ಸ್ವಾಮಿಗಳಾಗುತ್ತಾರೆ ಆದರೆ ಮಾತಾಜಿ ಸಮಾನತೆ ಸಾಮಾಜ ಕಟ್ಟುವ ದಿಸೆಯಲ್ಲಿ ಜಾತಿಯ ಹಂಗನ್ನು ತೊರೆದು ಸರ್ವರಿಗೂ ಸ್ವಾಮಿಜೀ ದೀಕ್ಷೆ ನೀಡಿ, ಕ್ರಾಂತಿ ಕಾರಿ ಹೆಜ್ಜೆ ಇಟ್ಟ ವಿಶ್ವ ಶ್ರೇಷ್ಠ ಶಿವಶರಣೆ ಹೀಗೆ ಜಾತಿಯ ಹಂಗನ್ನು ಹೋಗಲಾಡಿಸಿದ ಮಹಾ ತಾಯಿ ಬಸವ ಧರ್ಮ ಪೀಠವನ್ನು ಸ್ಥಾಪಿಸಿ ಸರ್ವ ಜನಾಂಗಕ್ಕೂ ಸಮಾನತೆಯ ಭಾಗ್ಯ ಕಲ್ಪಿಸಿದ ಮೇಧಾವಿ.
ಹೀಗೆ ಬಸವ ಧರ್ಮ ಪೀಠ ಒಂದು ಜಾತ್ಯಾತೀತ ಲಿಂಗಾಯತ ಧರ್ಮದ ವೈಚಾರಿಕ ಸೌಹಾರ್ದತೆ ತತ್ವ ಸಾರುವ ಜನಪರ ಪೀಠವಾಗಿದೆ.
ಹಾಗೆಯೇ ಇಂದಿನ ದಿನಮಾನಗಳಲ್ಲಿ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಈಗಿನ ಕಾಲದ ಮಧ್ಯೆ…ಸಮಾಜಕ್ಕೆ ,ದೇಶಕ್ಕೆ ,ನಾಡಿಗೆ ಒಳ್ಳೆಯದಾಗಲಿ, ಅಭಿವೃದ್ಧಿಯಾಗಲೆಂದು ಆಶಿಸಿ ಪೀಠ ಸ್ಥಾಪಿಸಿ, ಸರ್ವರಿಗೂ ಮಾದರಿಯಾಗಿದ್ದಾರೆ.
ಹಾಗೆಯೇ ಅನಾಥಾಶ್ರಮ,ವೃದ್ದಾಶ್ರಮಗಳನ್ನು ತೆರೆದು ನೊಂದವರಿಗೆ ಅನ್ನ ಅರಿವು ಆಶ್ರಯ ನೀಡಿದ ಮಾನವೀಯತೆಯ ಹರಿಕಾರರು ಮಾತಾಜಿ ಅಮ್ಮನವರು ಎಂಬುದು ಅಷ್ಟೇ ಸತ್ಯ. ಬಡವರ ಅನಾಥರ ನಿರ್ಗತಿಕರ ಸೇವೆಯೇ ಶ್ರೇಷ್ಠ ಜೀವನವೆಂದು ಅರಿತು,ಬದುಕಿನ ಉದ್ದಕ್ಕೂ ಹೆಜ್ಜೆ ಹಾಕಿ,
ಅಂತರಜಾತಿ ವಿವಾಹಗಳನ್ನು, ಸಾಮೂಹಿಕ ವಿವಾಹಗಳನ್ನು, ಸರಳವಿವಾಹಗಳನ್ನು ಮಾಡಿಸಿದ ಸಮಾಜ ಸುಧಾರಕ ಮಾತಾಜಿ, ಈ ಅವರ ನಡೆ ಇಂದಿನ ಆಧುನಿಕ ಸಮಾಜಕ್ಕೆ ಪ್ರೇರೇಪಣೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಇನ್ನು ಕೂಡಲಸಂಗಮ, ಬಸವಕಲ್ಯಾಣ ಕ್ಷೇತ್ರಗಳನ್ನು ಪ್ರಮುಖ ಯಾತ್ರಾ ಕ್ಷೇತ್ರಗಳನ್ನಾಗಿಸುವಲ್ಲಿ ಮಾತಾಜಿಯವರ ಪಾತ್ರ ಅತ್ಯಂತ ದೊಡ್ಡದು ಅಲ್ಲದೇ
ಬಸವ ತತ್ವ ಪ್ರಚಾರವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ ಇವರ ಸೇವೆ ಅನುಪಮ, ಅಪ್ರತಿಮವಾಗಿದೆ.
ಅಂದಹಾಗೇ ಮಾತಾಜಿ ಯವರು ನಮಗೆಲ್ಲರಿಗೂ ಧಾರ್ಮಿಕ ಶೋಷಣೆಯಿಂದ ಮುಕ್ತವಾದ ಸಮಾಜವನ್ನು ಕಟ್ಟಿಕೊಟ್ಟಿರುವುದು ಇಂದಿನ ಸಮಾಜ ಅವರನ್ನು ಎಂದೆಂದಿಗೂ ಮರೆಯಬಾರದು.
ಮಾತಾಜಿ ಕಳಕಳಿಯ ಆಶಯ:
ಕಲ್ಯಾಣ ನಾಡಿನಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಸಮಾನತೆಗಾಗಿ ಸಮಸ್ತ ಶರಣ ಸಂಕುಲ ಹೋರಾಟ ಮಾಡುವ ಮೂಲಕ ಅವರ ಜೀವನವನ್ನು ನಮ್ಮಗಾಗಿ ತ್ಯಾಗ ಮಾಡಿದ್ದಾರೆ. ಆ ಕಾರಣದಿಂದಲೇ ಈ ಭೂಮಿಗೆ,ಪುಣ್ಯ ನೆಲ, ಪವಿತ್ರ ಭೂಮಿ ಎಂದು ಕೆರೆಯುತ್ತಾರೆ.ಇಷ್ಟೆಲ್ಲಾ ನಮ್ಮ ಹಿತಕ್ಕಾಗಿ ತಮ್ಮ ಜೀವನವನ್ನು ಧಾರೆಯೆರೆದ ಶರಣರ ಆದರ್ಶ ನೀತಿಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರೆ ಇಲ್ಲ.(ಅಂದರೆ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದರೆ ಇಲ್ಲವೇ ಇಲ್ಲ ಎಂದೇ ಖಂಡಿತಾ ಹೇಳಬಹುದು.)ಇಂದಿಗೂ
ಬಸವಕಲ್ಯಾಣ ಸೇರಿದಂತೆ ದೇಶಾದ್ಯಂತ ಬಸವ ತತ್ವ ಬೆಳೆಸುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಖಡಕ್ಕಾಗಿ ಹೇಳಬಹುದಾಗಿದೆ.
ಬಸವಾದಿ ಶರಣರ ವೈಚಾರಿಕ ವಿಚಾರಗಳನ್ನು ತಿಳಿದುಕೊಂಡು ಬದಲಾವಣೆ ಆಗುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲವಾದಲ್ಲಿ ಬದಲಾಗದಿದ್ದರೆ ಏಳ್ಗೆಯಿಲ್ಲ ಎನ್ನುವುದು ನಾವೆಲ್ಲರೂ ಅರ್ಥ ಮಾಡಿಕೊಳ್ಳುವುದು ಉತ್ತಮ ಎನ್ನಬಹುದು.
ಅಂದು ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿ ನಡೆಸಿ, ಲಿಂಗಾಯತ ಧರ್ಮ ಕಟ್ಟಿದ್ದರು ಜೊತೆಗೆ ವೈದಿಕ ಸಮಾಜದ ವಿರುದ್ಧ ಚಳವಳಿ ನಡೆಸಿದರು. ಆದರೆ ಇಂದಿಗೂ ಈ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಚಳವಳಿ ಹಾಗೂ ವಚನ ಸಾಹಿತ್ಯದ ಚಳವಳಿ ಆಶಯಗಳನ್ನು ಇನ್ನು ಕಾಣದೇ ಇರುವುದು ವಿಪರ್ಯಾಸ ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ.
ಹಾಗೆ ನಮ್ಮಲ್ಲಿ ಜಾತಿ, ಮಥ, ಪಂಥಗಳಿಗೆ ಕೊರತೆ ಇಲ್ಲ, ಆದರೆ ಶರಣರ ಮೌಲ್ಯಗಳು ಎತ್ತಿ ಹಿಡಿದಾಗ ಮಾತ್ರ ಎಲ್ಲಾ ವರ್ಗಕ್ಕು ಸಮಾನತೆಯ ಸಿಗಲು ಸಾಧ್ಯ ಎನ್ನಬಹುದು. ಹಾಗಾಗಿ ಇಂದು ವ್ಯಾಪಕವಾಗಿ ಬಸವ ತತ್ವ ಪ್ರಚಾರ, ಪ್ರಸಾರ ಆದಾಗ ಮಾತ್ರ ಇವುಗಳಿಂದ ಮುಕ್ತಿ ಪಡೆಯಬಹುದು. ಬಸವ ತತ್ವ ಆಚಾರ-ವಿಚಾರಗಳು ಇನ್ನು ಎತ್ತರಕ್ಕೆ ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು. ಅಂದಾಗಲೇ ನಾವೆಲ್ಲರೂ ಬಸವಾಭಿಮಾನಿಗಳು ಎಂದು ಎದೆ ತಟ್ಟಿಕೊಂಡು ಹೇಳಲು ಸಾಧ್ಯ.
ಲಿಂಗಾಯತ ಧರ್ಮ ವಿರೋಧಿ ಹೀನ ಪದ್ಧತಿಗಳಿಗೆ ತಿಲಾಂಜಲಿ ನೀಡುವ ಕಾರ್ಯಕ್ಕೆ ನಾವೆಲ್ಲರೂ ಬದ್ಧರಾಗಿ, ಶರಣ ತತ್ವಕ್ಕೆ ಕೈಜೋಡಿಸಿ ಶರಣರ ಸದಾಶಯಗಳನ್ನು ಜಾರಿಗೆ ತರುವ ಕೆಲಸ ಸೇರಿದಂತೆ ಧರ್ಮದಲ್ಲಿ ಈಗ ಏಕತೆ ಇಲ್ಲದಂತಾಗಿ,ಮಾನವೀಯ ಮೌಲ್ಯಗಳು ಕುಸಿದಾಗಿದೆ. ಅದಕ್ಕಾಗಿ ಈಗಲಾದರೂ ಎಲ್ಲರೂ ಒಂದಾಗಿ ಬಸವಣ್ಣನವರ ಧರ್ಮಪರ ನಿಲುವು ತಳೆಯಬೇಕಾಗಿದೆ. ಹಾಗೂ ಧರ್ಮ
ವಿರೋಧ ನಿಲುಗಳನ್ನು ಹೋಗಲಾಡಿಸುವ ಕೆಲಸ ಪ್ರಮಾಣಿಕವಾಗಿ ಮಾಡಬೇಕಾಗಿರುವುದು ಸಧ್ಯ ಎದುರಾಗಿದೆ, ಅನಿವಾರ್ಯವಾಗಿದೆ. ಅದಕ್ಕಾಗಿಯೇ
ಮಹಾ ಮಾನವತಾವಾದಿ ಬಸವಣ್ಣನವರ ವಚನ ಸಾಹಿತ್ಯದ ಸಂದೇಶಗಳಲ್ಲಿ ನಂಬಿಕೆ ಇಟ್ಟು ಬದುಕುವ ಬಸವಭಕ್ತರು,ಬಸವ ತತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಈ ಕಲ್ಯಾಣ ಪರ್ವಕ್ಕೆ ಹಾಗೂ ಶರಣ ಮೇಳಕ್ಕೆ ಬಂದು ಹೋಗುವ ಮೂಲಕ ನಮ್ಮಲ್ಲಿ ನಾವು ಬಸವ ತತ್ವ ಜಾಗೃತಿ ಮೂಡಿಸಬೇಕು ಹಾಗೂ ತತ್ವ ಬೆಳೆಯಲು ಮತ್ತು ಬೆಳೆಸಲು ತನುಮನದಿಂದ ದುಡಿಯಬೇಕೆಂದು ಮಾತಾಜಿ ಯುವರ ಕಳಕಳಿಯ ಅಂತರಾಳದ ಸದಾಶಯವಾಗಿತ್ತು.
ಮಾತಾಜಿಗೊಂದು ನಮನ:
ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಗಣ ಪರ್ವಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ ಬಸವಣ್ಣನವರ ಗಡಿಪಾರಾಗಿ ಕಲ್ಯಾಣದಲ್ಲಿ ಗಣ ಪರ್ವ ನಿಂತಿದ್ದವು. ಆದರೆ 21ನೇ ಶತಮಾನದಲ್ಲಿ ಮತ್ತೆ ಕಲ್ಯಾಣ ಪರ್ವದ ಮೂಲಕ ಗಣ ಪರ್ವಗಳು ಕೂಡಲ ಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಹಾಜಗದ್ಗುರು ನೇತೃತ್ವದ ಪ್ರಾರಂಭವಾಗಿವೆ.ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಕಿಚ್ಚನ್ನು ಮಾತಾಜಿ ನಾಡಿನ ಮೂಲೆ ಮೂಲೆಗಳಲ್ಲಿ ಪಸರಿಸಿದ್ದ ಕೀರ್ತಿ ಮತ್ತು ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಎದೆ ತಟ್ಟಿ ಹೇಳುವೆ. ಇಡೀ ಲಿಂಗಾಯತ ಹೋರಾಟದ ಪ್ರಮುಖ ಕಾರಣೀಕರ್ತರು ಇವರಾಗಿದ್ದರು ಎಂದರೆ ತಪ್ಪಾಗದು. ಬಸವ ತತ್ವದ ಆಳವಾದ ಅಧ್ಯಯನವನ್ನು ಮಾಡಿದ್ದ ಅವರು, ಬಸವ ತತ್ವದ ವಿಶ್ವಕೋಶವೇ ಆಗಿದ್ದರು.
ಬಸವಣ್ಣನ ಕರ್ಮಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ 108 ಅಡಿ ಎತ್ತರದ ಪ್ರತಿಮೆಯನ್ನು 2001ರಲ್ಲಿ ನಿರ್ಮಿಸುವ ಮೂಲಕ ಡಾ. ಮಾತೆ ಮಹಾದೇವಿಯವರು ದೇಶ ಎಂದೂ ಮರೆಯದ ಐತಿಹಾಸಿಕ ಕೆಲಸ ಮಾಡಿದ್ದಾರೆ. ಪ್ರತಿ ವರ್ಷ ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ, ಕೂಡಲಸಂಗಮದಲ್ಲಿ ಶರಣ ಮೇಳ ಕಾರ್ಯಕ್ರಮಗಳನ್ನು ನಡೆಸಿ ಬಸವಣ್ಣನವರನ್ನು ಸ್ಮರಿಸುವ ಕೆಲಸ ಮಾಡಿಕೊಂಡು ಬಂದಿದ್ದರು. ಇದೀಗ ಬಸವಕಲ್ಯಾಣ ಹಾಗೂ ಕೂಡಲಸಂಗಮದಲ್ಲಿ ಇವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಬಸವಕಲ್ಯಾಣದ ಬಸವ ಧರ್ಮ ಪೀಠದ ಆವರಣದಲ್ಲಿ ಕುಳಿತ ಭಂಗಿಯಲ್ಲಿರುವ ಬಸವಣ್ಣನವರ ಹಸನ್ಮುಖಿಯ 108 ಅಡಿ ಪ್ರತಿಮೆ ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದ್ದು, ಪ್ರಮುಖ ಧಾರ್ಮಿಕ, ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ ಬಂಧುಗಳೆ ಜೊತೆಗೆ 21ನೇ ಶತಮಾನದಲ್ಲಿ ಮತ್ತೆ ನವ ಕಲ್ಯಾಣ ನಿರ್ಮಾಣವಾಗಿದೆ.ಜಗತ್ತಿನ ಜನತೆ,ಕಲ್ಯಾಣಕ್ಕೆ ಬಂದು ನೋಡುವಂತಾಗಿದೆ. ಇಷ್ಟೆಲ್ಲ ಬಸವ ತತ್ವ ಬೆಳೆಸುವಲ್ಲಿ ತಮ್ಮ ಇಡೀ ಜೀವನ ತ್ಯಾಗ ಮಾಡಿದ ತ್ಯಾಗಮಯಿ ಮಾತಾಜಿಯವರ ಅಂತಃಕರಣಕ್ಕೆ ಶಿರಬಾಗಿ ಬಾಗಿ, ಭಕ್ತಿಯಿಂದ ನಮನಗಳು ಸಲ್ಲಿಸುವೆ.
ಲೇಖಕರು -ಸಂಗಮೇಶ ಎನ್ ಜವಾದಿ
ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತ