ಬಜೆಟ್ ಇಂದು ಪ್ರತಿಯೊಬ್ಬ ವ್ಯಕ್ತಿಯೂ ಬಳಸುವ ಶಬ್ದವಾಗಿದ್ದು ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬಗಳು ತಮ್ಮದೇ ಬಜೆಟ್ ಆಧಾರದ ಮೇಲೆ ಜೀವನವನ್ನು ನಡೆಸುತ್ತಿವೆ. ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇಂದಿಗೂ ಬಜೆಟ್ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಹಾಗಾದರೆ ಬಜೆಟ್ ಎಂದರೇನು? ಇದರಿಂದ ಆಗುವ ಉಪಯೋಗವೇನು? ಯಾರಾದರು ಉತ್ತರಿಸುತ್ತೀರಾ?
ಹಾಗಾದರೆ ಬಜೆಟ್ ಎಂದರೇನು? ಪ್ರತಿ ತಿಂಗಳು ಬರುವ ಆದಾಯ ಮತ್ತು ಖರ್ಚುಗಳ ಕುರಿತು ಮೊದಲೇ ತಯಾರಿಸುವ ಅಂದಾಜು ಪಟ್ಟಿಯನ್ನು ಬಜೆಟ್ ಎನ್ನುವರು. ಅದೇ ರೀತಿ ಬಜೆಟ್ ನಲ್ಲಿ ಮೂರು ವಿಧಗಳಿವೆ.
೧) ಸಮತೋಲನ ಬಜೆಟ್: ಬರುವ ತಿಂಗಳ ಆದಾಯ ಮತ್ತು ಖರ್ಚು ಸಮ ಪ್ರಮಾಣದಲ್ಲಿದ್ದರೆ ಅದನ್ನು ಸಮತೋಲನ ಬಜೆಟ್ ಎನ್ನುವರು.
೨) ಹೆಚ್ಚುವರಿ ಬಜೆಟ್: ಬರುವ ತಿಂಗಳ ಆದಾಯಕ್ಕಿಂತ ಖರ್ಚು ಕಡಿಮೆ ಪ್ರಮಾಣದಲ್ಲಿದ್ದರೆ ಅದನ್ನು ಹೆಚ್ಚುವರಿ ಬಜೆಟ್ ಎನ್ನುವರು.
೩) ಕೊರತೆ ಬಜೆಟ್: ಬರುವ ತಿಂಗಳ ಆದಾಯಕ್ಕಿಂತ ಖರ್ಚು ಹೆಚ್ಚು ಪ್ರಮಾಣದಲ್ಲಿದ್ದರೆ ಅದನ್ನು ಕೊರತೆ ಬಜೆಟ್ ಎನ್ನುವರು.
ಪ್ರಸ್ತುತ ಹೆಚ್ಚು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಈ ಕೊರತೆ ಬಜೆಟ್ ಎನ್ನುವ ಸಮಸ್ಯೆಯನ್ನು ಎದುರಿಸುತ್ತಿವೆ.
ಹಾಗಾದರೆ ಬಜೆಟ್ ಯೋಜನೆ ಅನಿವಾರ್ಯವೇ? ನನ್ನ ದೃಷ್ಟಿಯಲ್ಲಿ ಆಲೋಚಿಸಿದಾಗ ಬಜೆಟ್ ಯೋಜನೆ ಹಾಕಿಕೊಳ್ಳುವುದು ಅನಿವಾರ್ಯಕ್ಕಿಂತ ಸಮಂಜಸವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕುಟುಂಬ ಪೋಷಣೆಗೆ, ವೈಯಕ್ತಿಕ ಕೆಲಸ ನಿರ್ವಹಣೆಗೆ, ಇನ್ನಿತರ ಕೆಲಸಗಳಿಗೆ ಎಷ್ಟು ಹಣವಿದ್ದರೂ ಸಾಲುವುದಿಲ್ಲ. ಕಾರಣ ಬರುವ ಅನಿರೀಕ್ಷಿತ ಖರ್ಚುಗಳಿಂದ ಖರ್ಚಿನ ಲೆಕ್ಕ ತಪ್ಪುತ್ತಲ್ಲದೆ ಕುಟುಂಬದ ನಿರ್ವಹಣೆ ಕೂಡ ಕಷ್ಟವಾಗುತ್ತದೆ. ಆದ್ದರಿಂದ ಅನಿರೀಕ್ಷಿತವಾಗಿ ಬರುವ ಖರ್ಚುಗಳಿಗೆ ಹಣ ಹೊಂದಿಸಲು ತಮ್ಮ ದಿನ ನಿತ್ಯದ ಖರ್ಚು ವೆಚ್ಚಗಳ ಅಂದಾಜು ಪಟ್ಟಿಯನ್ನು ಮೊದಲೇ ತಯಾರಿಸಿಕೊಂಡರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಬಜೆಟ್ ಯೋಜನೆ ಅನಿವಾರ್ಯ ಮತ್ತು ಸಮಂಜಸವಾಗಿದೆ.
ಹಣವನ್ನು ಉಳಿತಾಯ ಮಾಡುವ ವಿಧಾನಗಳು.
೧) ಕೊಡಬೇಕಾದ ಮೊದಲ ಆದ್ಯತೆ ಬಜೆಟ್ ಯೋಜನೆ. ನಿಮ್ಮಲ್ಲಿರುವ ಹಣವನ್ನು ಖರ್ಚು ಮಾಡುತ್ತಿರುವ ಕಾರಣದ ಸ್ಪಷ್ಟತೆ ನಿಮಗಿರಬೇಕು. ಕಾರಣ ಅನಾವಶ್ಯಕ ಖರ್ಚು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಸಿಲುಕಿಸುತ್ತದೆ.
೨) ಹಣದ ವಿಚಾರದಲ್ಲಿ ನಿಮ್ಮ ನಿಲುವು ಎಷ್ಟು ಬಲವಾಗಿರುತ್ತದೆಯೊ ಅಷ್ಟು ಸಂತೋಷವಿರುತ್ತದೆ. ನಮ್ಮಲ್ಲಿರುವ ಹಣವನ್ನು ಖರ್ಚು ಮಾಡುವುದು ಸುಲಭವಾದರೂ ಅದೇ ಹಣವನ್ನು ಪುನಃ ಗಳಿಸಬೇಕಾದಾಗ ಆಗುವ ಕಷ್ಟವನ್ನು ಒಂದು ಸಲ ನೆನಪಿಸಿಕೊಂಡರೆ ಸಾಕು. ಮತ್ತು ಉಳಿತಾಯದ ದೃಷ್ಟಿಯಿಂದ ಆದಷ್ಟು ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಬೇಕು.
೩) ಕಡಿಮೆ ಸಂಭಳಯಿದ್ದರೂ ಸಂತೋಷದಿಂದ ಬದುಕಲು ಸಾಧ್ಯವಿದೆ. ನಮಗೆ ಹಣ ಇದ್ದರೂ ಇಲ್ಲವಾದರೂ ಒತ್ತಡ ಇದ್ದೇ ಇರುತ್ತದೆ. ಆದ್ದರಿಂದ ಹಣವನ್ನು ಮಿತವಾಗಿ ಬಳಸಿ ಉಳಿಸುತ್ತ ಹೋದಂತೆ ನಮ್ಮಲ್ಲಿ ಹಣದ ಸಂಗ್ರಹಣೆ ಹೆಚ್ಚುತ್ತ ಹೋಗುತ್ತದೆ.
೪) ವಿಪರೀತವಾಗಿ ಹೆಚ್ಚುತ್ತಿರುವ ವಿದ್ಯುತ್ ಬಿಲ್ ನ್ನು ನಿಯಮಿತವಾಗಿ ವಿದ್ಯುತ್ ಬಳಸುವುದರ ಮೂಲಕ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಲು ಸಾಧ್ಯವಿದೆ.
೫) ಇದು ತುಂಬ ಪ್ರಮುಖವಾದ ವಿಷಯವಾಗಿದ್ದು ಕೆಲಸ ಮಾಡುವವರು ಮಧ್ಯಾಹ್ನದ ಊಟಕ್ಕೆ ಮನೆಯಿಂದ ಲಂಚ್ ಬಾಕ್ಸ್ ತರುವ ಅಭ್ಯಾಸ ಮಾಡುವುದರಿಂದ ಹೊರಗಡೆಯ ಅನಾವಶ್ಯಕ ಖರ್ಚು ತಪ್ಪುತ್ತದೆ.
೬) ಇದೇ ರೀತಿ ಪ್ರತಿ ಸಲ ಹೊರಗೆ ನೀರಿನ ಬಾಟಲ್ ಖರೀದಿಸುವ ಬದಲು ಮನೆಯಿಂದಲೇ ಆರೋಗ್ಯಕರ ನೀರನ್ನು ತಂದು ಕುಡಿಯುವುದರಿಂದಲೂ ಹಣವನ್ನು ಉಳಿತಾಯ ಮಾಡಬಹುದು.
೭) ಟೀವಿ ವೀಕ್ಷಣೆಗೆ ಕೇಬಲ್ ಬದಲಾಗಿ ಡಿ.ಟಿ.ಎಚ್ ಬಳಸುವುದರಿಂದ ನೀವು ವೀಕ್ಷಿಸುವ ಚಾನಲ್ ಗಳಿಗೆ ಮಾತ್ರ ಹಣವನ್ನು ಪಾವತಿಸುವುದರ ಮೂಲಕ ಹಣವನ್ನು ಉಳಿತಾಯ ಮಾಡಬಹುದು. ಆದರೆ ಇದು ಕೇಬಲ್ ನಲ್ಲಿ ಸಾಧ್ಯವಿಲ್ಲ.
೮) ನೀವು ಆನ್ ಲೈನ್ ಶಾಪಿಂಗ್ ಮಾಡುವವರಾಗಿದ್ದರೆ ಡಿಜಿಟಲ್ ಉತ್ಪನ್ನಗಳು ಮುಖ್ಯವಾಗಿ ಸಾಫ್ಟವೇರ್ ಮತ್ತು ಡೌನ್ಲೋಡ್ ಮಾಡುವ ಸಾಮಗ್ರಿಗಳನ್ನು ಹೊಂದಿರುವುದರಿಂದ ಇವುಗಳನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾದರೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
೯) ಇಂದಿನ ದಿನಗಳಲ್ಲಿ ನಿಮ್ಮ ಮೊಬೈಲ್ ಯೋಜನೆ ಬಳಕೆ ಸರಿಯಾಗಿದ್ದರೆ ಪ್ರತಿ ತಿಂಗಳು ಕನಿಷ್ಠ ನೂರು ರೂಪಾಯಿಯನ್ನು ಉಳಿಸಬಹುದು.
೧೦) ಇಂದಿನ ದಿನಗಳಲ್ಲಿ ಪೆಟ್ರೋಲ್ ದರ ರೂ ೧೦೦ ದಾಟಿರುವುದರಿಂದ ಹೆಚ್ಚಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಅಭ್ಯಾಸ ಮಾಡಬೇಕು. ಪುನಃ ಪುನಃ ಬರುವ ಚಿಕ್ಕ ಕೆಲಸಗಳಿಗೆ ಬೈಕ್, ಕಾರನ್ನು ಅವಲಂಬಿಸಿದರೆ ಖರ್ಚನ್ನು ನಿಯಂತ್ರಿಸಲು ತೊಂದರೆಯಾಗುತ್ತದೆ.
ಇಷ್ಟೆಲ್ಲ ಅದ್ಭುತ ಇರುವ ಪ್ರಪಂಚದಲ್ಲಿ ಮನುಷ್ಯನ ಜೀವನ ಹೇಗಿದೆ ಗೊತ್ತಾ?
ಹನಿಗವನ ರೂಪದಲ್ಲಿ ಈ ರೀತಿಯಾಗಿದೆ.
ಪ್ರಪಂಚದಲ್ಲಿ ಹಣವಿದ್ದರೆ ಹೌ ಆರ್ ಯು? ಅದೇ
ಪ್ರಪಂಚದಲ್ಲಿ ಹಣವಿಲ್ಲದಿದ್ದರೆ ಹೂ ಆರ್ ಯು? ಇಷ್ಟೇ ಪ್ರಪಂಚ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.