ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶೈಕ್ಷಣಿಕ ಪಯಣದ ನಾವಿನ್ಯ ಹೆಜ್ಜೆಗಳು

ನಮ್ಮೆಲ್ಲಾ ಶಿಕ್ಷಕ ಬಂಧುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳೊಂದಿಗೆ…

ಮಲೆನಾಡಿನಿಂದ ಬಿಸಿಲು ನಾಡಿಗೆ

ಭಾಗ -ಒಂದು :ಸಂಜೆ 4 ಕ್ಕೆ ಸಿಕ್ಕ ಶಾಲೆ

ತಗಡು ಸೀಟುಗಳ ಉರಿ ಶಕೆ ಸೂಸುವ ಮೂರು ಕೊಠಡಿಗಳು, ಮೂರು ಕಬ್ಬಿಣದ ಹಳೆ ಕುರ್ಚಿ, ಕಿತ್ತಿರುವ ಚಪ್ಪಡಿ ಕಲ್ಲುಗಳ ನೆಲದಲ್ಲಿ ಕೂತ ಮಕ್ಕಳ ಶಾಲೆಗೆ ಹೊಸದಾಗಿ ಶಿಕ್ಷಕನಾಗಿ 2008 ಮೇ -29 ಕ್ಕೆ ಹೋಗಿ ಕಾಲಿಟ್ಟಾಗ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಕಂಡು ಆದ ಸಂಕಟ-ದಿಗ್ಭ್ರಮೆಗಳ ಜೊತೆಗೆ, ಇಂತಹ ಹಲವು ಸವಾಲುಗಳ ನೆಲದಲ್ಲಿ ವಿಶೇಷವಾಗಿ ಏನಾದರೂ ಮಾಡಬೇಕು ಎಂದು ಕನಸಿಟ್ಟುಕೊಂಡು ಶಿಕ್ಷಕ ವೃತ್ತಿಗೆ ಶ್ರದ್ದೆಯಿಂದಲೇ ಮುಂದುವರಿದೆ. ಉನ್ನತ ಶಿಕ್ಷಣದ ಜೊತೆಗೆ ಹಲವು ಕಲಾ ಹವ್ಯಾಸ, ಪ್ರವೃತ್ತಿಗಳ ಜೊತೆಗೆ ನನಗೆ ಬೇರೆ ವೃತ್ತಿಗೆ ಸೇರಲು ಹಲವು ಅವಕಾಶಗಳು ಇದ್ದರೂ ಶಿಕ್ಷಕ ವೃತ್ತಿಯಲ್ಲಿಯೆ ಮುಂದುವರಿದಿದ್ದು ಕಲಿಸುವ ಕಲಿಯುವ ವೃತ್ತಿ ಬಗ್ಗೆ ನನಗಿದ್ದ ಗೌರವ, ಹೆಮ್ಮೆಯೇ ಕಾರಣ.

ಮುಂದೆ ಅದೇ ಊರಲ್ಲಿ 16 ವರ್ಷಗಳ ಸೇವೆ ಜೊತೆಗೆ ಅದೇ ಊರಲ್ಲಿ ಮನೆ ಮಾಡಿ ಉಳಿದು ನನ್ನ ಮಗನನ್ನು ಅದೇ ಶಾಲೆಗೆ ದಾಖಲಿಸುವ ಹಂತಕ್ಕೆ ನನ್ನನ್ನು ಸೆಳೆದದ್ದು ಅಲ್ಲಿ ಸಿಕ್ಕ ಪ್ರೀತಿ, ವಿಶ್ವಾಸದ ಜೊತೆಗೆ ನಮ್ಮ ಶಾಲೆಯ ಮೇಲೆ ನನಗಿದ್ದ ವಿಸ್ವಾಸ, ಕಾಳಜಿಯೇ ನನಗರಿವಿಲ್ಲದೆ ಅಲ್ಲಿಯೇ ಉಳಿಸಿತು.

ನಮ್ಮ ಶಾಲಾ ಶಿಕ್ಷಣದಲ್ಲಿ ಕಲಾಂತರ್ಗತ ಪ್ರಯೋಗಗಳು, ಶೈಕ್ಷಣಿಕ ಚಟುವಟಿಕೆಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಸಂಘ ಸಂಸ್ಥೆಗಳ ಬೆಂಬಲ, ಶಾಲೆಗೆ ಹಲವು ದಾನಿಗಳ ಬೆಂಬಲ
ದೊರೆಯುವ ವಿಸ್ವಾಸ ಗಳಿಸಿದ್ದು ಎಲ್ಲರ ನಿಸ್ವಾರ್ಥ ಪ್ರೀತಿಯ ಹಾರೈಕೆ, ಒಳ್ಳೆ ಕೆಲಸಗಳನ್ನು ಬೆಂಬಲಿಸುವ ಹೂ ಮನಸುಗಳ ಪ್ರೀತಿಯ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು.

ಮಕ್ಕಳ ಬರಹಗಳ ಮಕ್ಕಳ ಮಂದಾರ, ಸಮುದಾಯದ ಒಳಗೊಳ್ಳುವಿಕೆಗೆ ಸಮುದಾಯದ ಜಾನಪದಗಳ ಪಠ್ಯಂತರ್ಗತ ಪ್ರಯೋಗ, ಪರಿಸರ ಚಟುವಟಿಕೆಗಳು, ನಿರಂತರ ಸೃಜನಶೀಲ, ಸಾಹಿತ್ಯ ಚಟುವಟಿಕೆಗಳು, ಮಕ್ಕಳ ನಾಟಕಗಳು, ಕಲೆ ಮತ್ತು ವಿಜ್ಞಾನ ಚಟುವಟಿಕೆಗಳು, ಹಸೆ ಚಿತ್ತಾರ ಪಠ್ಯಂತರ್ಗತ ಕಲಿಕೆ,ನಿಮ್ಮ ಕಸ ನಿಮ್ಮದು, ನಾಳೆಗಳು ನಮ್ಮವು ಅಭಿಯಾನ , ಮಂದಾರ ಮಾಲೆ, ಮಕ್ಕಳ ಬರಹಗಳ ಕೃತಿ ಪ್ರಕಟಣೆ, ಮಕ್ಕಳ ಮಂದಾರ ಪತ್ರಿಕೆ ಪ್ರಕಟಣೆ ನಿರಂತರ 60 ಸಂಚಿಕೆ ತಲುಪಿದ್ದು ಹಲವು ಯಶಸ್ವಿ ಚಟುವಟಿಕೆಗಳಿಂದ ಹಲವು ಬಗೆಯಲ್ಲಿ ಮಕ್ಕಳು ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಿ ಇಂದು ಹಲವು ಹಳೆ ವಿದ್ಯಾರ್ಥಿಗಳು ಆಗೀಗ ಕರೆಮಾಡಿ ನೆನಪು ಮಾಡಿದಾಗ ಆಗುವ ಸಂತೋಷ, ಆತ್ಮ ತೃಪ್ತಿ ಜೊತೆಗೆ ಮತ್ತಷ್ಟು ಶ್ರಮಿಸುವ ಉತ್ಸಾಹ ಮೂಡುತ್ತದೆ.

ಆದರೆ ಈ ದಾರಿಯಲ್ಲಿ ಎದುರಿಸಿದ ಸವಾಲುಗಳು,ಶಾಲೆ ವ್ಯವಸ್ಥೆ ಕುರಿತು ನನಗೆ ಅನಿಸಿದ್ದ ಸಾದ್ಯತೆಗಳು, ಎಲ್ಲಾ ಭ್ರಮೆಗಳು ಹಲವು ಸಲ ಕಳಿಚಿಬಿದ್ಧ ಆ ದಿನಗಳು ಹಲವು ಸಂಗತಿಗಳನ್ನು ಕಲಿಸಿದ್ದು ಸಹ ಗಮನಾರ್ಹ ಸಂಗತಿ.ಹಂತ ಹಂತವಾಗಿ ನಾನಂದುಕೊಂಡ ಶೈಕ್ಷಣಿಕ ಪ್ರಯೋಗಗಳನ್ನು, ಚಟುವಟಿಕೆಗಳನ್ನು ಯಶಸ್ವಿಗೊಳಿಸುತ್ತಾ, ನಾನು ಅಲ್ಲಿಂದ ಹಲವು ಹೊಸತುಗಳನ್ನು ಕಲಿಯುತ್ತಾ ಕಲಿಸುತ್ತಾ ಸಾಗಿದ ಹಲವು ಸಂಗತಿಗಳನ್ನು , ಸವಾಲುಗಳನ್ನು ಒಂದಿಷ್ಟು ಪ್ರಸ್ತಾಪಿಸುತ್ತಾ ‘ಕಪ್ಪು ಮೋಡವೊಂದು ಮಳೆ ಸುರಿಸಿ ಹಗುರಾಗುವಂತೆ’ ನಾನು ಒಂದಿಷ್ಟು ಹಗುರಾಗುವೆ. ಜೊತೆಗೆ ಹಲವರಿಗೆ ಹಲವು ಬಗೆಯಲ್ಲಿ ನನ್ನ ಅನುಭವಗಳು ಮಾರ್ಗದರ್ಶಿಯಾಗಬಲ್ಲವು ಎಂಬುದೂ ಸಹ ನನ್ನ ಆಶಾಭಾವನೆ ,ನಂಬಿಕೆ.

ಮೇ -29-2008 ರಂದು ಅಧಿಕೃತವಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಆದೇಶ ಪತ್ರ ಪಡೆದು ರಾಯಚೂರಿನ ಮಾನ್ವಿ ತಾಲೂಕಿನ ಮಲ್ಕಾಪುರ ಶಾಲೆಗೆ ಹೆಜ್ಜೆ ಇಟ್ಟೆನು. ಮಲೆನಾಡಿನ ನಿತ್ಯಹರಿದ್ವರ್ಣ ಕಾಡುಗಳ ವರದಾ ನದಿ ತೀರದ ಮಳೆಗಾಲದ ದ್ವೀಪ ಪ್ರದೇಶವೇ ಆಗಿರುವಲ್ಲಿ ಮಂಡಗಳಲೆಯಲ್ಲಿ ಬೆಳೆದ ನಾನು ಅದೇ ವರದಾ ನದಿ ಮುಂದೆ ಸಾಗಿ ತುಂಗಭದ್ರ ನದಿ ಸೇರಿ ರಾಯಚೂರಿನತ್ತಲೇ ಹರಿಯುವಂತೆ ನನ್ನ ವೃತ್ತಿ ಬದುಕಿನ ಹೆಜ್ಜೆಗಳು ಅತ್ತಲೇ ಹರಿದದ್ದು ವಿಶೇಷ.

ಹಾಗಂತ ಅದೇನು ಅದೃಷ್ಟವೂ ಅಲ್ಲ, ವಿಧಿ ಕೃಪೆಯು ಅಲ್ಲ. ,2007 ರಿಂದ ಮೈಸೂರಿನಲ್ಲಿ ನಾಟಕ , ಸಿನಿಮಾ, ಪತ್ರಿಕೆ ಬರಹ ಜೊತೆಗೆ ಹೊಟ್ಟೆಪಾಡಿಗೆ ಒಂದು ಕೆಲಸ ನನ್ನ ಹಲವು ಹುಡುಕಾಟಗಳು, ಹವ್ಯಾಸ, ಕನಸು, ಪ್ರವೃತ್ತಿಗಳ ಬೆನ್ನೇರಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡ ನನಗೆ ಅದೆಲ್ಲ ಸದ್ಯ ಸೇಪ್ ಜೋನ್ ಅಲ್ಲ ಅನಿಸಿ ಮತ್ತೆ ವಿದ್ಯಾಭ್ಯಾಸದತ್ತ ಗಮನಹರಿಸಿ ನಾನೇ ಸ್ವತಃ ರಾಯಚೂರಿಗೆ ಅಪ್ಲಿಕೇಶನ್ ಹಾಕಿ, ಎರಡು ತಿಂಗಳು ಪಟ್ಟಾಗಿ ಕುಳಿತು ಶಿಕ್ಷಕನಾಗಲು ಪರೀಕ್ಷೆ ಬರೆದು ಆಯ್ಕೆ ಆದದ್ದು. ರಾಯಚೂರಿನಲ್ಲಿ ಹೆಚ್ಚು ಶಿಕ್ಷಕ ಪೋಸ್ಟ್ಗಳು ಇದ್ದದ್ದರಿಂದ ಆ ಬಿಸಿಲೂರನು ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೆ ಆಗಿತ್ತು. ಆದರೆ ಆ ಮಲ್ಕಾಪುರ ಶಾಲೆಗೆ ಕಾಲಿಟ್ಟ ಮೇಲೆ ಶಾಲೆ ಎಂದರೆ ಹೇಗೆಲ್ಲ ಇರಬೇಕು ಎಂದುಕೊಂಡಿದ್ದೆನೋ ಅದ್ಯಾವ ಭೌತಿಕ ಲಕ್ಷಣಗಳು ಆರಂಭದಲ್ಲಿಯೇ ಕಾಣಿಸದೆ ನನ್ನ ಹಲವು ಭ್ರಮೆಗಳು ಕಳಿಚಿ ಬಿದ್ದವು. ಮೂರು ಕೊಠಡಿಗಳ , ತಗಡು ಸೀಟುಗಳ , ಸುತ್ತೆಲ್ಲೂ ಒಂದು ಗಿಡ ಮರ ಇಲ್ಲದ ಬಯಲು ಶಾಲೆಯ ಹಲವು ಇಲ್ಲಗಳ ಕೊರತೆಗಳ ನಡುವೆ 16 ವರ್ಷಗಳ ಕಾಲ ಅದೇ ಊರಲ್ಲಿ ಸೇವೆ ಸಲ್ಲಿಸಿ ಕೊನೇಯ ಮೂರು ವರ್ಷ ಅದೇ ಊರಲ್ಲಿ ಮನೆ ಮಾಡಿ ವಾಸ ಮಾಡಿ ನನ್ನ ಮಗನನ್ನು ಅದೇ ಶಾಲೆಗೆ ದಾಖಲಿಸುವ ಹಂತಕ್ಕೆ ನಾನು ಆ ಊರಿನ ಮಕ್ಕಳೊಂದಿಗೆ ಒಂದಿಷ್ಟು ಕಲಿತು , ಒಂದಿಷ್ಟು ಕಲಿಸಿ, ನನ್ನದೇ ಆದ ಕಲಾಂತರ್ಗತ ಹಾಗೂ ನಾವಿನ್ಯ ಶೈಕ್ಷಣಿಕ ಪ್ರಯೋಗಗಳ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ನನಗೊಂದು ವಿಶೇಷ ಸ್ಥಾನಮಾನವೂ ದೊರಕಿತು. ಸಾಹಿತ್ಯ ಕ್ಷೇತ್ರದಲ್ಲಿ ಹಲವು ಹಿರಿಯರು ನಿಸ್ವಾರ್ಥವಾಗಿ ಮೆಚ್ಚಿ ಕೈ ಹಿಡಿದು ನಡೆಸಿದ ದಿನಗಳು, ಹಲವು, ಸಂಘ ಸಂಸ್ಥೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀಡಿದ ಪುರಸ್ಕಾರಗಳು, ಆಹ್ವಾನಿಸಿದ ಉಪನ್ಯಾಸಗಳು , ಸಂತಸದ ಕ್ಷಣಗಳು, ಎದುರಾದ ಸವಾಲುಗಳ ಕಥೆಯೂ ಸಹ ರೋಚಕವಾಗಿದೆ.

ಮಲ್ಕಾಪುರ ಶಾಲೆ ನೋಡಲು ಹೋದ ಮೊದಲ ದಿನ:

ಮಾನವಿಯಲ್ಲಿ ಹಲವರ ಬಳಿ ವಿಚಾರಿಸಿದರೂ ಸಹ ಮಲ್ಕಾಪುರದ ಸರಿಯಾದ ಮಾರ್ಗ ಆರಂಭದಲ್ಲಿ ತಿಳಿಯಲಿಲ್ಲ. ಎಲ್ಲರೂ ಸಿಂಧನೂರಿನ ಮಲ್ಕಾಪುರದ ಸುದ್ದಿಯನ್ನೇ ಹೇಳುತ್ತಿದ್ದರು. ಮಾನ್ವಿ ತಾಲೂಕಲ್ಲಿ ಮಲ್ಕಾಪುರ ಇಲ್ಲ ಎನ್ನುತ್ತಿದ್ದರು. ಕೊನೆಗೂ ವಿಳಾಸ ತಿಳಿದು ಪೋತ್ನಾಳ್ ದಾರಿ ಮಾರ್ಗ ತಲುಪಿ ಅಲ್ಲಿಂದ ಆಟೋ ಹಿಡಿದು ನಾನು ಮಲ್ಕಾಪುರ ಶಾಲೆಗೆ ತಲುಪುವ ವೇಳೆಗೆ ಸಂಜೆ 4 ಆಗಿತ್ತು. ಶಾಲಾ ಆರಂಭದ ಮೊದಲ ದಿನ ಅದಾಗಿದ್ದರಿಂದ ಕೆಲವೇ ಮಕ್ಕಳು ಹಾಜರಿದ್ದರು.ಮಕ್ಕಳೆಲ್ಲಾ ಹೊರಡುವ ಆತುರದಲ್ಲಿ ಇದ್ದರು. ಮುಖ್ಯ ಶಿಕ್ಷಕರಿಗೆ ಒಂದು ಹಳೆ ಕುರ್ಚಿ,ಕಬ್ಬಿಣದ ಟೇಬಲ್ ಹೊರತುಪಡಿಸಿ ಸಹ ಶಿಕ್ಷಕರು ಕುಳಿತುಕೊಳ್ಳಲು ಒಂದು ಚೇರು ಸಹ ಇರಲಿಲ್ಲ. ಅದೆಲ್ಲೋ ಮೂಲೆಯಲ್ಲಿದ್ದ ಧೂಳು ಹಿಡಿದಿದ್ದ ತುಕ್ಕು ಹಿಡಿದಿದ್ದ ಯಾವುದೂ ಕಾಲದ ಕಬ್ಬಿಣದ ಕುರ್ಚಿ ಒಂದನ್ನು ಹಾಕಿದರು.
ನನಗೆ ಅದರ ಮೇಲೆ ಕೂರಬೇಕು ಅನಿಸಲಿಲ್ಲ. ಆ ಶಾಲೆಯ ಮುಖ್ಯ ಶಿಕ್ಷಕರು ,ಎಸ್ ಡಿ ಎಂ ಸಿ ಉಪಾಧ್ಯಕ್ಷರು ನನ್ನ ಊರು ಹಿನ್ನೆಲೆ ವಿಚಾರಿಸಿದರು. ಆ ಶಾಲೆಯ ಹಾಜರಾತಿ ಪುಸ್ತಕದಲ್ಲಿ ನನ್ನ ಹೆಸರು ಸೇರ್ಪಡೆ ಮಾಡಲು ಆದೇಶ ಪ್ರತಿ ಕೇಳಿದರು. ನಾನು ಆದೇಶ ಪ್ರತಿಯನ್ನು ನೀಡಲಿಲ್ಲ. ನಾನು ಶಾಲೆಗೆ ಈಗಲೇ ಜಾಯಿನ್ ಆಗುವುದಿಲ್ಲ. ನನಗೆ ಸ್ವಲ್ಪ ಸಮಯ ಬೇಕಿದೆ. ಸ್ವಲ್ಪ ದಿನಗಳ ನಂತರ ಬರುತ್ತೇನೆ ಎಂದು ಹೇಳಿ ಆ ಕೋಣೆಯಿಂದ ಹೊರಗೆ ಬಂದೆ.

ಹೊರಗೆ ಬಂದ ಪಾಲಕರೊಬ್ಬರು ನೀವು ಯಾವ ಜನ ಸರ್ ಎಂದರು. ನನಗೆ ಇದೆಂಥ ಪ್ರಶ್ನೆ ಅರ್ಥ ಆಗಲಿಲ್ಲ. ಅವರು ನನ್ನನ್ನೇ ದುರುಗುಟ್ಟಿ ನೋಡಿದರು. ಅದೇ ಸರ್ ನೀವು ಯಾವ ಮಂದಿ, ಯಾವ ಜಾತಿ ಅಂದೆ ಎಂದರು.

ಶರಣರ ನಾಡು,ದಾಸರ ನಾಡು ರಾಯಚೂರು ಅಂತಾರೆ ,ನೀವೇನ್ರೀ ಬರ್ತಿದ್ದಾಗೆ ನನ್ನ ಜಾತಿ ಹೆಸರು ಕೇಳುತ್ತೀರಿ ಎಂದೆ.

ಹೋಂ ,ಅಂದರೆ ನೀವು ನಮ್ಮ ಮಂದೀನೆರೀ…

ಹೌದು… ನಾನು ನಿಮ್ಮ ಮಂದೀನೆ ಕಂಡ್ರಿ ಅಂದೆ..

ಹೌದಾ..ಯಾವ ಜನ ಬರತ್ತೇರೀ.. ನಿಮ್ಮ ಕಡೇನೂ ನಮ್ಮ ಜನಾ ಬಾಳಾ ಅದಾರೇನ್ರೀ ಅಂದರು…

ಜಾತಿ ಕುರಿತಾಗಿ ಮತ್ತೆ ಮತ್ತೆ ಕೇಳಿದ ಅವರ ಪ್ರಶ್ನೆಗೆ ನನಗೆ ತಕ್ಷಣ ಕೋಪ ಬಂತಾದರೂ ತೋರಿಸಿಕೊಳ್ಳಲಿಲ್ಲ. ನಾನು ಉತ್ತರಿಸಲಿಲ್ಲ. ಅವರು ನನ್ನಿಂದ ಉತ್ತರ ಬರಬಹುದೆಂದು ಮತ್ತೆ ನನ್ನನ್ನೆ ದಿಟ್ಟಿಸಿ ನಿರೀಕ್ಷಿಸಿದರು. ಬರ್ರನೆ ಬಂದ ಆಟೋ ಹೊತ್ತು ತಂದ ಕಪ್ಪು ಮಣ್ಣಿನ ದೂಳು ಇಡೀ ಮೈಗೆ ಅಭಿಷೇಕ ಮಾಡಿಸಿತು.
ನಾನು ಮೂಗು ಕಟ್ಟಿಕೊಂಡೆ.

ಅದೇನ್ ಆಗಲ್ಲ ಬಿಡ್ರಿ, ನಮ್ಮ ಕಡೇ ಹಿಂಗೆ…ಈ ಟಾಂ ಟಾಂ ತೋಳದಿನ್ನಿ ತನಕ ಹೋಕತಿ, ನಡೀರಿ ಅಂದರು.
ಅವರು “ನಡೀರಿ” ಅಂದಮಾತಿನ ಶೈಲಿ ಕಂಡು ಮತ್ತೆ ಕೋಪ ಬಂತು. ನಮಗೆ ಅವರ ಮಾತಿನ ಶೈಲಿ ಒರಟು , ಆದರೆ ಅವರು ಮುಗ್ದರು ಮತ್ತು ಹೃದಯವಂತರು ಎಂದು ಹಿರಿಯರು ಹೇಳಿ ಕಳಿಸಿದ್ದರು. ಹಾಗಾಗಿ ಕೇಳಿಸಿಕೊಂಡು ಸುಮ್ಮನಾದೆ. ಮುಂದೆ ನಡೆದದ್ದು ನನಗೆ ಇತಿಹಾಸ.

ಮುಂದುವರಿಯುವುದು…

-ರವಿರಾಜ್ ಸಾಗರ್.ಮಂಡಗಳಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ