ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹಿನ್ನಲೆ ಮತ್ತು ಆಚರಣೆಯ ಮಹತ್ವ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹಿನ್ನಲೆ ಮತ್ತು ಆಚರಣೆಯ ಮಹತ್ವವನ್ನೂ ಇಂದಿನ ಯುವ ಸಮುದಾಯ ಅರಿತುಕೊಳ್ಳಬೇಕಿದೆ ಡಾ. ದಿವ್ಯಾ (ಕೆ) ವಾಡಿ ಡಾ ರಾಮಕೃಷ್ಣ (ಬಿ) ಅಭಿಮತ

“ಹೈದರಾಬಾದ ಕರ್ನಾಟಕ ವಿಮೋಚನಾ ದಿನ ಹಿನ್ನೆಲೆ ಮತ್ತು ಆಚರಣೆಯ ಹಿನ್ನಲೆಯನ್ನು ಇಂದಿನ ಯುವ ಸಮುದಾಯ ಅರಿತುಕೊಳ್ಳಬೇಕಿದೆ
ಡಾ. ದಿವ್ಯಾ ಕೆ ವಾಡಿ ಮತ್ತು ಡಾ. ರಾಮಕೃಷ್ಣ. ಬಿ
ಸಹಾಯಕ ಪ್ರಾಧ್ಯಾಪಕರು
ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿಂಚೋಳಿ, ಕಲಬುರಗಿ. ಅವರು ಇಂದಿನ ಯುವ ಸಮುದಾಯಕ್ಕೆ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.
ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಎಲ್ಲರಿಗೂ ಗೊತ್ತು ಹೈದರಾಬಾದ ವಿಮೋಚನೆ ಇತಿಹಾಸ ಯಾರಿಗಾದರೂ ಗೊತ್ತೇ ? ಇಲ್ಲ. ಹೈದರಾಬಾದ ವಿಮೋಚನೆಯ ಹೋರಾಟವೂ ಒಂದು ರೋಚಕ ಇತಿಹಾಸ. ಇದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲಾಗುತ್ತದೆ.
1947 ಆಗಸ್ಟ್‌ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಹಠಮಾರಿತನದಿಂದ ಹೈದರಾಬಾದ್‌ ಪ್ರಾಂತ್ಯದ ರಾಜ‌ ನಿಜಾಮ (ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್), ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದರು. ಇದರಿಂದಾಗಿ ಹೈದರಾಬಾದ್‌ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು‌. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಇಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ (ಹೈದರಾಬಾದ ಕರ್ನಾಟಕ) ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ.
ಈ ಭಾಗದ ಬಹುತೇಕರು ಭಾರತದ ಒಕ್ಕೂಟ ಸೇರುವ ಬಯಕೆ ಹೊಂದಿದ್ದರು. ಹೋರಾಟ ಕೂಡಾ ನಡೆಸಿದ್ದರು. ಅವರ‌ ಕೂಗು ಹತ್ತಿಕ್ಕಲು, ಹೋರಾಟ ಬಗ್ಗು ಬಡಿಯಲು ನಿಜಾಮ ತನ್ನ ಖಾಸಗಿ ಸೈನ್ಯ ರಜಾಕಾರಪಡೆ ಸಜ್ಜುಗೊಳಿಸಿದನು. ವಿಮೋಚನಾ ಹೋರಾಟ ಹತ್ತಿಕ್ಕಲು ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎಂಬ ಮತಾಂಧನಿಗೆ ನಿಜಾಮ‌‌ ಸಂಪೂರ್ಣ ಸ್ವತಂತ್ರ ನೀಡಿದ 1947 ಜುಲೈ ತಿಂಗಳಲ್ಲಿ ನಿಜಾಮ, ಹೋರಾಟ ನಿರತರ ಬಂಧನಕ್ಕೆ ಆದೇಶ ಹೊರಡಿಸಿದ. ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿ ನಿಜಾಮನ ಸಾರ್ವಭೌಮತ್ವ ಸಂರಕ್ಷಿಸುವ ಜವಾಬ್ದಾರಿ ಹೊತ್ತ ರಜಾಕಾರರು ಮೂರು ಸಾವಿರಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿದರು.‌ ಜೈಲುಗಳು ತುಂಬಿ ಹೋದವು. ನಿಜಾಮನ ಈ ನಿರ್ಧಾರ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಯ್ತು. ಆಗ ಸಮರೋಪಾದಿಯಲ್ಲಿ ಜನರು ವಿಮೋಚನಾ ಚಳುವಳಿಗೆ ಧುಮುಕಿದರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಚಳವಳಿಗಳು ನಡೆದವು.
ನಂತರ ನಿಜಾಮನ ರಜಾಕಾರ ಪಡೆ ವಿರುದ್ಧ ಹೋರಾಟ ತೀವ್ರ ಗತಿಯಾಯಿತು. ಕಲಬುರಗಿಯ ಕೊಲ್ಲೂರು ಮಲ್ಲಪ್ಪ, ಚಂದ್ರಶೇಖರ್ ಪಾಟೀಲ ಹಾಗೂ ಯಡ್ರಾಮಿ ತಾಲೂಕಿನ ಡಾ.ಸರ್ದಾರ್ ಶರಣಗೌಡ ದುಮ್ಮದ್ರಿ,ಚನ್ನಬಸಪ್ಪ ಕುಳಗೇರಿ , ಡಿ.ಆರ್.ಅವರಾದಿ, ಜಗನ್ನಾಥ್ ರಾವ್ ಚಂಡ್ರಕಿ, ಚಟ್ನಹಳ್ಳಿ ವೀರಣ್ಣ, ಬೀದರ ಜಿಲ್ಲೆಯ ಎಸ್.ಬಿ.ಅವದಾನಿ, ಯಾದಗಿರಿಯ ವಿಶ್ವನಾಥ ರೆಡ್ಡಿ ಮುದ್ನಾಳ, ಕೊಪ್ಪಳದ ಜೆ. ಕೆ. ಪ್ರಾಣೇಶಾಚಾರ್, ಬಂಗಾರಶೆಟ್ಟಿ, ಚಿಟಗುಪ್ಪದ ಹಕೀಕತರಾವ್ ಸೇರಿದಂತೆ ಮೊದಲಾದವರು ಹೋರಾಟ ನಡೆಸಿದರು. ಸಾಕಷ್ಟು ಬಾರಿ ಬಂಧನಕ್ಕೊಳಗಾಗಿ ಜೈಲು ಸೇರಿ ರಜಾಕಾರರಿಂದ ಏಟು ತಿಂದರು. ಆದರೆ ಹೋರಾಟ ಮಾತ್ರ ಕೈಬಿಡಲಿಲ್ಲ. ಅಲ್ಲದೇ ಗಣೇಶೋತ್ಸವ, ವಿಜಯ ದಶಮಿ ಹಬ್ಬಗಳ ನೇಪದಲ್ಲಿ ಜನರನ್ನು ಒಂದಡೆ ಸೇರಿಸಿ ವಿಮೋಚನೆಯ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು.
ತದನಂತರ ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿರೋದು 1948 ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ ಪಾಟೀಲ ಹಾಗೂ ವಿಠೋಬಾ ನಿರೋಡೆ, ಗೋರ್ಟಾ ಗ್ರಾಮದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದರು. ಈ ವೇಳೆ ರಜಾಕಾರರ ಸಹವರ್ತಿ ಆ ಧ್ವಜ ಇಳಿಸಿದ್ದಲ್ಲದೇ ಬಾವುರಾವ ಪಾಟೀಲರಿಗೆ ಅವಮಾನ ಮಾಡಿದ್ದರು. ಅಲ್ಲದೆ ಪಾಟೀಲರ ಮನೆ ಲೂಟಿ ಮಾಡಿದರು. ಅವಮಾನ, ಮನೆ ಲೂಟಿಯಿಂದ ಆಕ್ರೋಶಗೊಂಡ ಬಾವುರಾವ ಪಾಟೀಲ, ರಜಾಕಾರರ ಸಹವರ್ತಿ ಇಸಾಮುದ್ದೀನನ್ನು ಕೊಂದು ಹಾಕಿದರು ಇಸಾಮುದ್ದೀನನ ಕೊಲೆ ರಜಾಕಾರರನ್ನು ಕೆರಳಿಸಿತು.‌ ಗೋರ್ಟಾ ಗ್ರಾಮದ ಮಹಾದೇವಪ್ಪ ಡುಮಣಿ ಎಂಬ ಸಾಹುಕಾರರ ಮನೆ ಅಬೇಧ್ಯ ಕೋಟೆಯಾಗಿತ್ತು. ಹೀಗಾಗಿ, ಅಲ್ಲಿ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳು ಆಶ್ರಯ ಪಡೆಯುತ್ತಿದ್ದರು. ರಜಾಕಾರರ ದಾಳಿ ವೇಳೆ ಅಲ್ಲಿ 800ಕ್ಕೂ ಹೆಚ್ಚು ಜನ – ಸೇನಾನಿಗಳು ಇದ್ದರು ಎನ್ನಲಾಗಿದೆ. ಇಸಾಮುದ್ದೀನನ ಕೊಲೆ ಸೇಡನ್ನು ತೀರಿಸಿಕೊಳ್ಳಲು ಆತನ ಅಣ್ಣ ಚಾಂದ ಪಟೇಲ್‍ ರಜಾಕಾರರ ಪಡೆಯ ನೇತೃತ್ವ ವಹಿಸಿ ಗೋರ್ಟಾ ಗ್ರಾಮ ಗುರಿಯಾಗಿಸಿಕೊಂಡು ದಾಳಿ ಮಾಡಿ ಎಲ್ಲರನ್ನು ಹತ್ಯೆಗೈದ ಎಂಬ ಕರಾಳ ಇತಿಹಾಸವಿದೆ. ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಿಂದ ಸಹನೆ ಕಳೆದುಕೊಂಡ‌‌ ಸೇನಾನಿಗಳು ಪ್ರತಿಕಾರವಾಗಿ ಹಲವು ರಜಾಕಾರರನ್ನು ಕೊಂದು ಹಾಕಿದರು. ಇದರಿಂದ ಮತಾಂಧನಾಗಿದ್ದ ಖಾಸಿಂ ರಜ್ವಿ ರೊಚ್ಚಿಗೆದ್ದು ರಕ್ತದೋಕುಳಿಯೇ ಹರಿಸಿಬಿಟ್ಟ, ಎಲ್ಲಡೆ ಕೊಲೆ, ಸುಲಿಗೆ, ಅತ್ಯಾಚಾರಗಳು‌ ಹೆಚ್ಚಾದವು. ಆಗ ಹೋರಾಟಗಾರರು ಅಂದಿನ ಗೃಹ ಮಂತ್ರಿ, ಭಾರತ ಏಕೀಕರಣದ ರೂವಾರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಭೇಟಿಯಾದರು. ಪಟೇಲ್ ಅವರು ಖಾಸಿಂ ರಜ್ವಿಯನ್ನು ಮಟ್ಟ ಹಾಕೋಕೆ ಪ್ಲ್ಯಾನ್ ಹಾಕಿದರು. ಇವರನ್ನು ಸೆದೆಬಡೆಯಲು ಮಿಲಿಟರಿ ಪಡೆ ಕಾರ್ಯಾಚರಣೆಗಿಳಿಸಲು ಚಿಂತಿಸಿದ್ದರು.
ಸರ್ದಾರ್ ವಲ್ಲಭಾಯಿ ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸುವ ಮೂಲಕ ನಿಜಾಮನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು. ತಾನಾಗಿಯೇ ತನ್ನ ಸೋಲು ಒಪ್ಪಿಕೊಂಡ ನಿಜಾಮ ಸೆಪ್ಟೆಂಬರ್ 17, 1948ರಲ್ಲಿ ಭಾರತ ಒಕ್ಕೂಟಕ್ಕೆ ಹೈದ್ರಾಬಾದ್‌ ರಾಜ್ಯವನ್ನು ಒಪ್ಪಿಸಿದ. ಅಂದು ಸಹಸ್ರಾರು ಜನರ ಹೋರಾಟದ ಪರಿಣಾಮ ಇಂದು ಹೈದರಾಬಾದ್‌ ಕರ್ನಾಟಕ ಪ್ರಾಂತ್ಯಕ್ಕೆ ವಿಮೋಚನೆ ಸಿಕ್ಕಿ ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಆದರೆ, ಈ ವಿಮೋಚನೆಯ ಸ್ಮರಣೆ ರಾಜಕೀಯ ಮತ್ತು ಧಾರ್ಮಿಕ ವಿವಾದಗಳಿಂದ ಪ್ರತಿಬಿಂಬವಾಗಿರುತ್ತದೆ. 1998 ರಲ್ಲಿ ಕಲಬುರಗಿಯಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಯತ್ನ ಎದುರಾಯಿತು, ಆದರೆ ಅದು ಈ ಪ್ರದೇಶದ ವಿಮೋಚನೆಯನ್ನು ಸಂಕೇತಿಸಿತು. 2006 ರಲ್ಲಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 58 ವರ್ಷಗಳ ನಂತರ ಮೊದಲ ಬಾರಿಗೆ ಕಲಬುರಗಿಯಲ್ಲಿ ವಿಮೋಚನಾ ಧ್ವಜವನ್ನು ಹಾರಿಸಿದರು, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿದರು ಮತ್ತು ನಿಜಾಮ್ ಅವರ ಸಂತಾನ, ಪ್ರಿನ್ಸ್ ಫಜಲ್ ಜಾಹ್ ಅವರನ್ನು ಉತ್ಸವಕ್ಕೆ ಆಹ್ವಾನಿಸುವ ಮೂಲಕ ಹಿಂದಿನ ಗಾಯಗಳನ್ನು ಗುಣಪಡಿಸಿದ ಮೊದಲ ನಾಯಕ ಕುಮಾರಸ್ವಾಮಿ.
ಇಂದಿನ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡ ಧೀರರ ಶೌರ್ಯ ಮತ್ತು ಧೈರ್ಯದ ಸ್ಮರಣೆಯನ್ನು ನೀಡುತ್ತದೆ, ಅವರ ಕೊಡುಗೆಗಳನ್ನು ಪೀಳಿಗೆಗಳವರೆಗೆ ಸ್ಮರಿಸಲಾಗುವುದು.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಗತಿಸುತ್ತಿವೆ. ಆದರೆ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ ಅನ್ನೋದು ಈ ಭಾಗದ ಜನರ ಅಸಮಧಾನ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೈದರಾಬಾದ್ ಕರ್ನಾಟಕ ಅಸಮತೋಲನ ಸರಿದೂಗಿಸಲು 371 (ಜೆ) ವಿಧೇಯಕ ಒದಗಿಸುವಲ್ಲಿ ಸಫಲರಾದರು. ಮಾಜಿ ಸಚಿವ ವೈಜನಾಥ ಪಾಟೀಲ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ನಾಗಲಿಂಗಯ್ಯ ಮಠಪತಿ ಸೇರಿದಂತೆ ನೂರಾರು ಜನರ ಹೋರಾಟದ ಫಲವಾಗಿ ಈಗ 371(ಜೆ) ಕಲಂ ಜಾರಿಯಾಗಿದೆ. ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಹೈದರಾಬಾದ್‌ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಲು ಕಾರಣರಾದರು ಆದ್ದರಿಂದ ಇಂದು ನಾವು ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂಬ ಹೆಸರಿನಿಂದ ಕರೆಯುತ್ತಿದ್ದೇವೆ. ಇದನ್ನು ಪ್ರತಿಯೊಬ್ಬ ಯುವ ಸಮುದಾಯ ಅರಿತುಕೊಳ್ಳಬೇಕಿದೆ ಎಂದು ಡಾ.ದಿವ್ಯಾ(ಕೆ) ವಾಡಿ ಮೇಡಂ ಹಾಗೂ ಡಾ. ರಾಮಕೃಷ್ಣ (ಬಿ) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ