ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ಕ್ರಾಂತಿದೀಪ” ಮಂಜುನಾಥ್ ರಿಗೆ ಮೊಹರೆ ಪ್ರಶಸ್ತಿ

ಶಿವಮೊಗ್ಗ :ಸ್ನೇಹಿತರ ಸುಖ ಮತ್ತು ಆಗದವರ ಕಿರುಕುಳದ ಮಧ್ಯೆಯೇ ಬೆಳೆದಿದ್ದು ಕ್ರಾಂತಿದೀಪ ಪತ್ರಿಕೆ ಮತ್ತು ಕ್ರಾಂತಿದೀಪದ ಮಂಜಣ್ಣ.

ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಮಧ್ಯದ ಕೊಂಡಿಯಂತೆ ಕಾಣುವ ಕ್ರಾಂತಿದೀಪ ದಿನಪತ್ರಿಕೆಯ ಸಂಪಾದಕ ಎನ್.ಮಂಜುನಾಥ್ (ಮಂಜಣ್ಣ) ಕಷ್ಟ- ನಷ್ಟದ ನಡುವೆಯೇ ದೀಪ ಆರದಂತೆ ನೋಡಿಕೊಂಡವರು. ಈ ದೀಪ ಆರಿಬಿಡುತ್ತಿದ್ದರೆ ಕೇವಲ ಮಂಜಣ್ಣ ಮಾತ್ರ ನೊಂದುಕೊಳ್ಳುತ್ತಿರಲಿಲ್ಲ,
ಬಹಳಷ್ಟು ಯುವ ಪತ್ರಕರ್ತರ ಪತ್ರಿಕಾ ಲೋಕದ ಕಾಲ್ದಾರಿಯೂ ಮುಚ್ಚಿ ಹೋಗುತ್ತಿತ್ತು.ಇವತ್ತು ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಕ್ರಾಂತಿದೀಪ ಹುಟ್ಟು ಹಾಕಿದ ಪತ್ರಕರ್ತರಿದ್ದಾರೆ. ಅಂತೆಯೇ, ತಮ್ಮದೇ ಪುಟ್ಟ- ಪುಟ್ಟ ಮಾಧ್ಯಮ ದ್ವೀಪಗಳನ್ನು ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡ ಪತ್ರಕರ್ತರ ದೊಡ್ಡ ಸಮೂಹವೂ ಕ್ರಿಯಾಶೀಲವಾಗಿದೆ. ಇವರಿಗೆಲ್ಲಾ ತಾಯಿಬೇರಿನಂತೆ ಉಳಿದುಕೊಂಡು, ತನ್ನ ತಾ ಬೆಳೆಸಿಕೊಂಡು ಬರುತ್ತಿದೆ ಕ್ರಾಂತಿದೀಪ.

ಶಿವಮೊಗ್ಗ ಕೇಂದ್ರವಾಗಿಸಿಕೊಂಡ ಮಲೆನಾಡಿನ ಬಹಳಷ್ಟು ಹೋರಾಟಗಳಲ್ಲಿ ಕ್ರಾಂತಿದೀಪ ಪ್ರಮುಖ ಪಾತ್ರವಹಿಸುತ್ತಲೇ ಬಂದಿದೆ. ಕ್ರಾಂತಿದೀಪದ ಪಂಜು ಹಿಡಿದ ಮಂಜಣ್ಣ ಬಹಳಷ್ಟು ಹೋರಾಟಗಳಲ್ಲಿ ತಾವು ಪಾಲ್ಗೊಂಡಿದ್ದಲ್ಲದೇ ಪತ್ರಿಕೆಯನ್ನೂ ಅದಕ್ಕೆ ವೇದಿಕೆಯಾಗಿಸುತ್ತಾ ಬಂದಿದ್ದಾರೆ. ಜನಪರ, ಪರಿಸರ ಪರ, ಜೀವಪರ ಹೋರಾಟಗಳಲ್ಲಿ ಪತ್ರಿಕೆಯೊಂದು ಹೇಗೆ ಪಾಲ್ಗೊಂಡು ಆ ಹೋರಾಟಗಳನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಕ್ರಾಂತಿದೀಪ ಪತ್ರಿಕೆ ಮತ್ತು ಮಂಜಣ್ಣ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದೆಯೇ ಇದ್ದಾರೆ.ತುಂಗಾಮೂಲ ಉಳಿಸಿ ಹೋರಾಟ ಹಾಗೂ ಕೋಮು ಸೌಹಾರ್ದದ ನಿರಂತರ ಹೋರಾಟಗಳು ಇದಕ್ಕೆಲ್ಲ ಸಾಕ್ಷಿ. ಸ್ವತಃ ಮಂಜಣ್ಣ ಕಿರಿಯ ವಯಸ್ಸಲ್ಲೇ ಗೋಕಾಕ್ ಚಳುವಳಿಯಲ್ಲಿ ಹೆಜ್ಜೆಯೂರಿದ್ದರು. ಆ ಹೋರಾಟದ ಗುಣ ಪತ್ರಿಕೆಗೂ ಮೆತ್ತಿಕೊಂಡೇ ಬಂದಿದೆ.

ತೆಂಗಿನ ಮರ ಎತ್ತರೆತ್ತರಕ್ಕೆ ಬೆಳೆದರೂ ಅದು ಕಲ್ಪವೃಕ್ಷವಾಗುತ್ತಾ ಹೋಗುತ್ತದಲ್ಲ, ಹಾಗೆ ಕ್ರಾಂತಿದೀಪ ಕೂಡಾ ವರ್ಷ ವರ್ಷವೂ ಪ್ರೌಢಿಮೆ ಮೆರೆಯುತ್ತಾ, ಪತ್ರಕರ್ತ ಆಗುವ ಕನಸು ಹೊತ್ತು ಬರುವ ಯುವ ಸಮೂಹದ ಕೈ ಹಿಡಿಯುತ್ತಾ ಬಂದಿದೆ.

ಮಲೆನಾಡಲ್ಲಿ ಹೋರಾಟಕ್ಕೆ ತೀವ್ರತರವಾಗಿ ಪಂಜು ಹಿಡಿದ ಪತ್ರಿಕೆ ಕ್ರಾಂತಿದೀಪ, ಅದರ ಲೋಗೋ ಕೂಡಾ ಪಂಜು.ಬೆಂಕಿಯನ್ನು ಬೆಳಕಾಗಿಸುವ ನಿಟ್ಟಿನಲ್ಲಿ ಪತ್ರಿಕೆ ಯಾವತ್ತಿಗೂ ಪ್ರಯತ್ನ ಕೈಬಿಟ್ಟಿಲ್ಲ ಎಂಬುದೊಂದು ಹೆಮ್ಮೆ.

ಕ್ರಾಂತಿದೀಪ ಮತ್ತು ಮಂಜಣ್ಣ ನನಗೆ ಗುರುವೇ; ಪತ್ರಿಕಾರಂಗದಲ್ಲಿ ಸುದ್ದಿ ಅರಿವು ಮೂಡಿಸಿದ ಅರಿವೇ ಗುರು. ನಾನು ಒಂದಿಷ್ಟು ವರ್ಷಗಳ ಕಾಲ ಕ್ರಾಂತಿದೀಪದಲ್ಲಿ ಪತ್ರಕರ್ತನಾಗಿದ್ದೆ. ಆಗ ಹೊಸ ಹೊಸದಕ್ಕೆ ತುಡಿಯುವ ಸಂಪಾದಕರಾಗಿ ನನಗೆ ಕಂಡಿದ್ದು ಮಂಜಣ್ಣ. ಮೊದಲ ಬಾರಿಗೆ ಆಗಿನ ಶಿವಮೊಗ್ಗ ನಗರಸಭೆಯ ಎಲ್ಲಾ ಕೌನ್ಸಿಲರ್ ಗಳ ಸಂದರ್ಶನ ಮಾಡಿದ್ದು ಈಗಲೂ ಇತಿಹಾಸವೇ. ಈಗ ಪ್ರತಿವರ್ಷ ಬಹಳಷ್ಟು ಪತ್ರಿಕೆಗಳು ಈ ಸಂಪ್ರದಾಯ ಪಾಲಿಸುತ್ತವೆ- ಆ ಮಾತು ಬೇರೆ. ರಾಜ್ಯಮಟ್ಟದ ಪತ್ರಿಕೆಗಳ ಎದೆಗೆ ಎದೆಕೊಟ್ಟು ಅರ್ಥಪೂರ್ಣ ವಿಶೇಷಾಂಕಗಳನ್ನು ಆಗ ಜಿಲ್ಲಾಮಟ್ಟದ ಪತ್ರಿಕೆಯಾಗಿದ್ದ ಕ್ರಾಂತಿದೀಪ ಹೊರ ತರುತ್ತಿತ್ತು. ಇಂಥ ಹತ್ತು ಹಲವು ಸುದ್ದಿ ಸಾಹಸಗಳಿಗೆ ನಮ್ಮಂಥವರಿಗೆ ವೇದಿಕೆಯಾಗಿದ್ದು ಕ್ರಾಂತಿದೀಪ.

ಕ್ರಾಂತಿದೀಪದ ಸಾಹಸಗಳನೇಕ‌ ಶಿವಮೊಗ್ಗ ಪತ್ರಿಕೋದ್ಯಮ ಇತಿಹಾಸದ ಮೈಲುಗಲ್ಲಾಗಿವೆ. ಕಲ್ಲೊಂದು ಮೂರ್ತಿಯಾಗುವುದೆಂದರೆ ಉಳಿಪೆಟ್ಟು ಉಣ್ಣದಿರುತ್ತದೆಯೇ! ಅಂಥ ಬಹಳಷ್ಟು ಪೆಟ್ಟುಗಳನ್ನು ತಿನ್ನುತ್ತಲೇ ಪತ್ರಿಕೆ ಮತ್ತು ಮಂಜಣ್ಣ ತಿಂದಿದ್ದಾರೆ. ಅದೂ ಕೂಡಾ ಇತಿಹಾಸದ ಭಾಗವೇ.

ಬಿ ಎ ಪೂರ್ತಿ ಮಾಡದಿದ್ದರೂ ಪತ್ರಿಕೋದ್ಯಮದ ನಿಜಪಾಠ ಹೇಳಿಕೊಟ್ಟವರು ಮಂಜಣ್ಣ. ಪೈಲ್ವಾನ್ ಪೂಜಾರಿ ನಿಂಗಪ್ಪ- ಶ್ರೀಮತಿ ಲಕ್ಷ್ಮಮ್ಮರ ಮಗ ಎನ್.ಮಂಜುನಾಥ್ ರ ಸೇವಾನುಭವ ಅಚ್ಚರಿ ಮೂಡಿಸುತ್ತೆ. ತಮ್ಮ ಸಹ ಪತ್ರಕರ್ತರ ಜೊತೆ ನಿಂತು ಪತ್ರಕರ್ತರ ಏಳಿಗೆಗಾಗಿಯೂ ಮಂಜಣ್ಣ ದುಡಿದಿದ್ದಾರೆ. 1991ರ ಸಮಯ. ಎಸ್.ಬಂಗಾರಪ್ಪ ಮುಖ್ಯಮಂತ್ರಿ, ಕಾಗೋಡು ತಿಮ್ಮಪ್ಪ ಹೌಸಿಂಗ್ ಚೇರ್ಮನ್. ಶಿವಮೊಗ್ಗದಲ್ಲಿ ಪತ್ರಕರ್ತರ ಕಾಲೋನಿಗೆ ಪ್ರಯತ್ನ ನಡೆಯಿತು. 37 ಜನ ಪತ್ರಕರ್ತರಿಗೆ ಮನೆಭಾಗ್ಯ ಸಿಕ್ಕಿತ್ತು. ಅದರ ಹಿಂದೆ ಮಂಜಣ್ಣ ಮತ್ತು ತಂಡದ ಪ್ರಯತ್ನ ಸಣ್ಣದಿರಲಿಲ್ಲ.1997 ರಲ್ಲಿ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪತ್ರಿಕಾಲಯಗಳಲ್ಲಿ ಅಚ್ಚುಮೊಳೆ ಜೋಡಿಸುತ್ತಿದ್ದ 72 ಜನರಿಗೆ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಉಚಿತ ನಿವೇಶನ ನೀಡಿಸುವಲ್ಲಿ ಮಂಜಣ್ಣ ಮತ್ತು ತಂಡದ ಶ್ರಮ ಮರೆತರೇನು ಚೆನ್ನ!
ಅಂತೆಯೇ, ರಾಜ್ಯದಲ್ಲಿಯೇ ಇತಿಹಾಸ ಬರೆದಿದ್ದು ಶಿವಮೊಗ್ಗದ ಸೋಮಿ‌ನಕೊಪ್ಪ ಬಡಾವಣೆಯ ಪ್ರೆಸ್ ಕಾಲೋನಿ. ಆಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. 227 ಜನ ಪತ್ರಕರ್ತರಿಗೆ ನಿವೇಶನ ಸಿಗುವಂತಾಯ್ತು. ಈಗ ಮತ್ತೊಂದು ಹಂತದಲ್ಲಿ 74 ಜನ ಪತ್ರಕರ್ತರಿಗೆ ನಿವೇಶನ ಸಿಗಲಿದೆ. ಇದರ ಹಿಂದೆಯೂ ಮಂಜಣ್ಣ ಮತ್ತು ತಂಡದ ಬೆವರು ಹರಿದಿದೆ.

ಹಾಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಮಂಜಣ್ಣ ಪತ್ರಕರ್ತರ ಬಗ್ಗೆಯೂ ಕಾಳಜಿವಹಿಸುತ್ತಾ ಬಂದವರು. ವ್ಯವಸ್ಥಿತ ಪತ್ರಿಕಾ ಭವನ ಶಿವಮೊಗ್ಗದವರ ನಾಲಿಗೆಯ ಮೇಲಷ್ಟೇ ನಲಿಯುತ್ತಿಲ್ಲ- ಹೊರ ಜಿಲ್ಲೆಗಳ, ರಾಜ್ಯದ ಪ್ರಮುಖರ ಗಮನವನ್ನೂ ಸೆಳೆಯುತ್ತಿದೆ. ಮಂಜಣ್ಣನ ಕಾಳಜಿಯುತ ಕೆಲಸಗಳಲ್ಲಿ ಪತ್ರಿಕಾಭವನ ಕೂಡಾ ಪ್ರಮುಖವಾದುದು.

ಅಚ್ಚುಮೊಳೆಯಿಂದ ಕ್ರಾಂತಿದೀಪ ಆರಂಭವಾಯ್ತು. ಮುಂಗಾರಿನಿಂದ(ಮುಂಗಾರು ಪತ್ರಿಕೆ) ಮಂಜಣ್ಣನ ಪತ್ರಿಕಾ ಲೋಕ ಶುರುವಾಯ್ತು.ನನಗೆ ಗೊತ್ತಿರುವ ಹಾಗೆ, ಮಂಜಣ್ಣ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಭಿವೃದ್ಧಿಗಾಗಿ ರಚಿಸಲ್ಪಟ್ಟಿದ್ದ ಪಿ.ರಾಮಯ್ಯ ಸಮಿತಿ ಸದಸ್ಯರಾಗಿ,2008ರಿಂದ ನಿರಂತರವಾಗಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾಗಿ, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾಗಿ…ಹೀಗೆ, ಬಹಳಷ್ಟು ರೀತಿಯಲ್ಲಿ ಸಂಘಟನಾತ್ಮಕವಾಗಿ ಅರಳಿದವರು ಮಂಜಣ್ಣ.

ಅಚ್ಚುಮೊಳೆಯಿಂದ ಆರಂಭವಾದ ಕ್ರಾಂತಿದೀಪ ಪತ್ರಿಕೆ ಈಗ ಪ್ರಾದೇಶಿಕ ಪತ್ರಿಕೆಯಾಗಿ 8 ಜಿಲ್ಲೆಗಳಲ್ಲಿ ಸುದ್ದಿ ಬೆಳಕು ಚೆಲ್ಲುತ್ತಿದೆ. ಮೂವತ್ತಕ್ಕೂ ಹೆಚ್ಚುಜನರಿಗೆ ಅನ್ನ ಕೊಡುತ್ತಿದೆ. 2003 ರಲ್ಲಿ ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಪತ್ರಿಕೆ ಸಂಪಾದಕರೆಂದು ಪ್ರೆಸ್ ಗಿಲ್ಡ್ ಪ್ರಶಸ್ತಿ, 2003 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಆಂದೋಲನ ಪ್ರಶಸ್ತಿ, 2013ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಗೌರವ, 2014ರಲ್ಲಿ ಕಿಡಿ ಶೇಷಪ್ಪ ಪ್ರಶಸ್ತಿ ಪಡೆದ ಕ್ರಾಂತಿದೀಪ ಮತ್ತು ಕ್ರಾಂತಿದೀಪದ ಮಂಜಣ್ಣರಿಗೆ ಇದೀಗ ಕರ್ನಾಟಕ ಪತ್ರಿಕೋದ್ಯಮದ ಅತ್ಯುನ್ನತ ಗೌರವ ದಕ್ಕಿದೆ…ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪಡೆದಿರುವ ಕ್ರಾಂತಿದೀಪದ ಮಂಜಣ್ಣ ಹೊಸ ಪತ್ರಕರ್ತರಿಗೆ ಎಂದಿಗೂ ತಮ್ಮ ಕಚೇರಿಯ ಕದ ತೆರೆದಿಟ್ಟ ಸಂಪಾದಕರು…ಹಾಗಾಗಿ ಶ್ರೀ ಎನ್. ಮಂಜುನಾಥ್ ರಿಗೆ ಈ ಪ್ರಶಸ್ತಿ ಹೇಗೆ ಅತ್ಯುನ್ನತ ಗೌರವವೋ ಈ ಪ್ರಶಸ್ತಿಗೂ ಒಂದು ಅತ್ಯುನ್ನತ ಮೌಲ್ಯವೇ ಆಗಿದೆ ಎಂದು ಜಿಲ್ಲಾ ಪ್ರೆಸ್ ಗಿಲ್ಡ್ ನಲ್ಲಿರುವ ಕೊಡಕ್ಕಲ್ ಶಿವಪ್ರಸಾದ್ ನಾಗರತ್ನ ಪ್ರಶಸ್ತಿ ವಿಜೇತ ಹಾಗೂ ಕರ್ನಾಟಕ ಸಂಘದ ಪಿ. ಲಂಕೇಶ್ ಪ್ರಶಸ್ತಿ ವಿಜೇತ ಪತ್ರಕರ್ತ ಶ್ರೀ ಶಿ. ಜು. ಪಾಶ ಅವರು ನೆನಪಿಸಿಕೊಂಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ