ಈ ಭೂಮಿ ಜಾತಿ ವರ್ಗ ಲಿಂಗ ಭೇದವಿಲ್ಲದ ನೆಲೆಯಾಗಬೇಕು ಎಂಬ ಕನಸನ್ನು ಕಂಡಿದ್ದ ಮಹಾನ್ ಮಾನವತಾವಾದಿ ಆತ,ಜೀವನದುದ್ದಕ್ಕೂ ಅಡೆತಡೆಗಳನ್ನು ಎದುರಿಸುತ್ತಾ,ಹೋರಾಟವನ್ನೇ ಬದುಕಾಗಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕಾಗಿ ತನ್ನ ಪ್ರಾಣವನ್ನೇ ಬಿಟ್ಟ ಮಹಾನ್ ಕ್ರಾಂತಿಕಾರಿ ಆರ್ನೆಸ್ಟೋ ಚೆಗುವೆರಾ.” ಚೆಗುವೆರಾ ” ಈ ಹೆಸರು ಹೇಳುವುದೇ ಒಂದು ಅಭಿಮಾನ. ಮುಖದ ತುಂಬಾ ಗಡ್ಡ ತಲೆಯ ಮೇಲೊಂದು ಕೆಂಪು ನಕ್ಷತ್ರವಿರುವ ಕ್ಯಾಪ್ ಭಯವೆಂದರೆ ಏನು ಎಂದು ಅರಿಯದ ತೀಕ್ಷ್ಣವಾದ ಕಣ್ಣುಗಳು.ಆತನ ಮುಖವನ್ನು ನೋಡಿದಾಗ ಅನ್ಯಾಯದ ವಿರುದ್ಧ ಹೋರಾಡುವ ಹೋರಾಟಗಾರರಿಗೆ ಎಲ್ಲಿಲ್ಲದ ಉತ್ಸಾಹದ ಸ್ಪೂರ್ತಿ.ನಾನು ಯಾವತ್ತೂ ಸೋತು ಮನೆಗೆ ಹೋಗುವುದಿಲ್ಲ ಸೋಲುವುದಕ್ಕಿಂತ ಸಾವೆ ನನಗೆ ಹೆಚ್ಚು ಇಷ್ಟ ಎನ್ನುತ್ತಿದ್ದ ಚೆ ಹಲವಾರು ಹೋರಾಟಗಳ ಸ್ಫೂರ್ತಿ.ಆತನ ಹೆಸರು ಕೇಳಿದೊಡನೆ ಅದೆಷ್ಟು ಬಂಡವಾಳ ಶಾಹಿಗಳ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು.ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ಅಮೇರಿಕವನ್ನೇ ನಡುಗಿಸಿದ ಜಗದೇಕವೀರ ಆತ.
ಜೂನ್ 14 1928 ರಂದು ಅರ್ಜೆಂಟಿನಾದ ರುಸಾರಿಯೋದಲ್ಲಿ
ಆರ್ನೆಸ್ಟೋ ಗೆವರಾ ಲಿಂಚ್ ಹಾಗೂ ಶೀಲಿಯ ಡಿಲಾ ಸೆರನಾರವರ ಮೊದಲ ಮಗನಾಗಿ ಜನಿಸಿದ ಚೇ ತುಂಬಾ ಕ್ರಿಯಾಶೀಲನಾಗಿದ್ದನು.
ಫುಟ್ಬಾಲ್,ರಬ್ಗಿ,ಈಜು,ಗಾಲ್ಫ್,ಸೈಕ್ಲಿಂಗ್ ಹೀಗೆ ಎಲ್ಲ ಆಟಗಳಲ್ಲಿಯೂ ಚೇ ಮುಂದಿದ್ದ.ಚಿಕ್ಕ ವಯಸ್ಸಿನಲ್ಲಿ ಅಸ್ತಮಾ ಬಾದಿತನಾದ ಆತ ಅದನ್ನು ರೋಗವೆಂದು ಪರಿಗಣಿಸದೆ ತನ್ನ ಸಂಗಾತಿಯಂತೆ ಪರಿಗಣಿಸಿದ್ದ. ಮಗನ ಅವಿಶ್ರಾಂತ ಚಟುವಟಿಕೆಗಳನ್ನು ಕಂಡ ಗೆವಾರ ಲೀಚ್ ‘ಅವ ಹುಟ್ಟಿದ ಕೂಡಲೇ ನನಗೆ ಗೊತ್ತಾಯ್ತು ಅವನ ರಕ್ತದಲ್ಲಿ ಐರೀಷ್ ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ’ಎಂದಿದ್ದರಂತೆ. ತಂದೆ ಕಲಿಸಿದ ಚೆಸ್ ಆಟ ಆತನ ಏಕಾಗ್ರತೆಯನ್ನು ಹೆಚ್ಚಿಸಿತ್ತು.ಸಮಯ ಸಿಕ್ಕಾಗಲಿಲ್ಲ ಪುಸ್ತಕಗಳನ್ನು ಓದುತ್ತಿದ್ದ ಚೆಗುವೆರಾನ ಮನೆಯಲ್ಲಿ ಸುಮಾರು 3000 ಕ್ಕಿಂತ ಅಧಿಕ ಪುಸ್ತಕಗಳಿದ್ದು ಕಾರ್ಲ್ ಮಾರ್ಕ್ಸ್,ವಿಲಿಯಂ ಫಾಲ್ಕನರ್,ಆಡ್ರಿ ಗೈಟ್, ಇಯಿಲೋ ಸಲಾರಿ,ಜುಲ್ಸ್ ವರೆನ್ ಮತ್ತು ಜವಾಹರಲಾಲ್ ನೆಹರೂರವರ ಕೃತಿಗಳನ್ನು ಓದುತ್ತಿದ್ದನು.ಬಹುಶಃ ಆ ಪುಸ್ತಕಗಳೇ ಆತನಲ್ಲಿ ಕ್ರಾಂತಿ ಹುಟ್ಟಲು ಕಾರಣವಾಗಿರಬಹುದು.
ಚೇ ಬಾಲ್ಯದಿಂದಲೂ ತಾನೊಬ್ಬ ಡಾಕ್ಟರ್ ಆಗಬೇಕು ಬಡವರ ಸೇವೆ ಮಾಡಬೇಕು ಎಂಬ ಕನಸನ್ನು ಹೊತ್ತಿದ್ದ ಆದರೆ ಮನೆಯವರ ಒತ್ತಾಯಕ್ಕೆ ಮನಿದು ಇಂಜಿನಿಯರಿಂಗ್ ಸೇರುತ್ತಾನೆ ನಂತರ ಇಂಜಿನಿಯರಿಂಗ್ ಬಿಟ್ಟು 1948ರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬ್ಯೂನಸ್ ಐರಿಸ್ ಯೂನಿವರ್ಸಿಟಿಗೆ ಸೇರಿಕೊಳ್ಳುತ್ತಾನೆ.ನಾಲ್ಕು ಗೋಡೆಗಳ ಮಧ್ಯೆ ಬೆಂಚ್ ಮೇಲೆ ಕೂತು ಸವಿಯುವ ಪುಸ್ತಕದ ಶಿಕ್ಷಣ ಚೇ ಗೆ ರುಚಿಸಲಿಲ್ಲ. 1951 ರಲ್ಲಿ ಯುನಿವರ್ಸಿಟಿಯಿಂದ ಒಂದು ವರ್ಷದ ರಜೆ ಪಡೆದು ಗೆಳೆಯ ಅಲ್ಬರ್ಟ್ಹೋ ಗ್ರೆನಾಡೋ ಜೊತೆಗೂಡಿ ಮೋಟರ್ ಸೈಕಲ್ ಕಿಕ್ ಹೊಡೆದವನೇ ದಕ್ಷಿಣ ಅಮೆರಿಕದತ್ತ ಹೊರಡುತ್ತಾನೆ,ಚೇ ತನ್ನ ಮೋಟಾರ್ ಬೈಕಿನ ಚಕ್ರಗಳಿಗೆ ವಿಶ್ರಾಂತಿಯೇ ಕೊಡಲಿಲ್ಲ ಆತನ ಕ್ರಾಂತಿಯ ದಾಹ ತಿರಿಸೋಕೆ ನೂರಾರು ಲೀಟರ್ ಪೆಟ್ರೋಲ್ ದಹನವಾಗಿತ್ತು. ಸುಮಾರು 8,000 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಂದರ್ಭದಲ್ಲಿ ಎಲ್ಲೆಲ್ಲೂ ಇದ್ದ ಬಡತನ,ಹಸಿವು,ರೋಗ,
ಶೋಷಣೆ,ದಬ್ಬಾಳಿಕೆ ಇವೆಲ್ಲವೂ ಅವನ ಗಮನ ಸೆಳೆಯುತ್ತವೆ.ಆತನ ಹೋರಾಟದ ಹಾದಿಗೆ ರೂಪ ಕೊಟ್ಟಿದ್ದು ಇದೇ ಪ್ರವಾಸ.
ಚೇಗೆ 1955 ರಲ್ಲಿ ಕ್ಯೂಬಾದ ಮ್ಯಾಕ್ಸಿಕೋ ನಗರದ ಕೆಲವು ಕ್ರಾಂತಿಕಾರಿಗಳ ಪರಿಚಯವಾಯಿತು. ಸರ್ವಾಧಿಕಾರಿ ಬ್ಯಾಟಿಸ್ಟಾನ ಸರ್ಕಾರವನ್ನು ಕಿತ್ತೊಗೆಯಲು ಜನರನ್ನು ಸಂಘಟಿಸುತ್ತಿದ್ದ ಪೆಡಲ್ ಕ್ಯಾಸ್ಟ್ರೋ ಮತ್ತು ಸಂಗಡಿಗರ ಜೊತೆಗೂಡಿದ ಚೇ ಗೇರಿಲ್ಲಾ ಯುದ್ಧದ ತರಬೇತಿಯನ್ನು ಪಡೆದನು, ಪೆಡಲ್ ಕ್ಯಾಸ್ಟ್ರೋನ ತಂಡದಲ್ಲಿ ವೈದ್ಯನಾಗಿದ್ದ ಚೇಗೆ 1957ರಲ್ಲಿ ಕಮಾಂಡರ್ ಪಟ್ಟ ನೀಡಲಾಯಿತು.ಚೇ ತನ್ನ ವಿಶಿಷ್ಟ ಯುದ್ಧ ಕೌಶಲ್ಯದ ಮೂಲಕ 1958ರ ಡಿಸೆಂಬರ್ ನಲ್ಲಿ ಕ್ರಾಂತಿಕಾರಿಗಳ ಗುಂಪನ್ನು ಗೆಲುವಿನತ್ತ ನಡೆಸಿದ.1959 ಜನವರಿ ಒಂದರಂದು ಕ್ಯೂಬಾ ವಿಮೋಚನೆಗೊಂಡು ತನ್ನನ್ನು ಸಮಾಜವಾದಕ್ಕೆ ಸಮರ್ಪಿಸಿಕೊಂಡಿತು ಕ್ರಾಂತಿಕಾರಿಗಳ ನಾಯಕನಾದ ಕ್ಯಾಸ್ಟ್ರೋ ಕ್ಯೂಬಾದ ಅಧ್ಯಕ್ಷನಾದನು.ಆಗ ಚೇಗೆ ಕ್ಯೂಬಾದ ಪೌರತ್ವ ನೀಡಿ ಹಲವು ಜವಾಬ್ದಾರಿಗಳನ್ನು ವಹಿಸಿದರು.ಕ್ಯೂಬಾ ದೇಶದ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷನಾಗಿ ಕೈಗಾರಿಕಾ ಮಂತ್ರಿಯಾಗಿ ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷನಾಗಿ ಚೇ ಸೇವೆ ಸಲ್ಲಿಸುತ್ತಾನೆ.
1964 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತನ್ನ ತೀಕ್ಷ್ಣವಾದ ಹಾಗೂ ಸ್ಪಷ್ಟವಾದ ಮಾತುಗಳಿಂದ ಅಮೆರಿಕಾದ ವರ್ಣಭೇದ ನೀತಿಯನ್ನು ಮತ್ತು ಅಲ್ಲಿ ಕರಿಯರಿಗಾಗುತ್ತಿರುವ ಅನ್ಯಾಯವನ್ನು ತೀವ್ರವಾಗಿ ಖಂಡಿಸುತ್ತಾನೆ.ನಿಮ್ಮ ದೇಶದ ಕರಿಯರಿಗೆ ಸ್ವಾತಂತ್ರ್ಯ ನೀಡದ ನೀವು ಬೇರೆ ದೇಶಗಳ ಸ್ವತಂತ್ರ ರಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತೀರಿ ಎಂದು ಪ್ರಶ್ನೆಸುತ್ತಾನೆ ಮುಂದೆ ಚೆಗುವೆರಾನ ಕ್ರಾಂತಿಕಾರಿ ಮನಸ್ಸು ತೀವ್ರ ಶೋಷಣೆಗೆ ಒಳಗಾಗಿದ್ದ ಆಫ್ರಿಕಾದ ಕಾಂಗೋ ಹಾಗೂ ಲ್ಯಾಟಿನ್ ಅಮೆರಿಕಾದ ಬೊಲಿವಿಯಾದತ್ತ ಹೊರಳುತ್ತದೆ ಗೆರಿಲ್ಲಾ ಯುದ್ಧ ತಂತ್ರದಿಂದ ಮತ್ತು ಬುದ್ಧಿಶಕ್ತಿಯಿಂದ ತನ್ನ ಜೀವವನ್ನೇ ಪಣಕಿಟ್ಟು ಬೋಲಿವಿಯನ್ನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿದ್ದ ಚೇ.
ತನ್ನ ಅದಮ್ಯ ಇಚ್ಛಾಶಕ್ತಿಯಿಂದ,ಕ್ರಾಂತಿಕಾರಿ ಮನಸ್ಸಿನಿಂದ ಅದೆಷ್ಟೋ ಶೋಷಿತರ ಮನಸ್ಸಿನಲ್ಲಿ ಚೇ ನೆಲೆಯುರಿದ್ದ.ತಮ್ಮನ್ನು ಉಳ್ಳವರ ದಾಸ್ಯದಿಂದ ಮುಕ್ತಗೊಳಿಸಲು ಚೇ ಬಂದೇ ಬರುವನು ಎಂದು ನಂಬಿದ್ದರು.ಅಷ್ಟೊತ್ತಿಗೆ ಆಗಲೇ ಅಮೇರಿಕಾ ಚೆಗುವಿರಾನ್ ವಿರುದ್ಧ ಕತ್ತಿ ಮಸಿಯುತ್ತಿತ್ತು ಆತನನ್ನು ಕೊಂದಾದರೂ ಸರಿ ಜೀವಂತವಾದರೂ ಸರಿ ಅವನನ್ನು ಸೆರೆಹಿಡಿದು ತನ್ನಿ ಅಂತ ಸಿಐಎ ಮೇಲೆ ಒತ್ತಡ ಹೇರಿತ್ತು.ಅಕ್ಟೋಬರ್ 8 1967 ರಂದು ಕೇವಲ 17 ಜನ ಸಂಗಡಿಗರೊಂದಿಗೆ ಇದ್ದ ಚೇನನ್ನು 1800 ಜನರಿಂದ ಸಿಐಎ ಪಡೆ ಸುತ್ತುವರೆದಿತ್ತು ಅಕ್ಟೋಬರ್ 9ರಂದು ಆತನಿಗೆ ಮರಣದಂಡನೆಯನ್ನು ವಿಧಿಸಲಾಯಿತು.ಚೇ ಸತ್ತ ನಂತರ ಅವನ ಮುಖವನ್ನು ಪಡೆಯಚ್ಚು ತೆಗೆದರು ಆತನ ಮುಂಬೈ ಕತ್ತರಿಸಿ ಆಲ್ಕೋಹಾಲಿನಲ್ಲಿ ರಕ್ಷಿಸಿದ್ದರು.ಉಳಿದ ದೇಹವನ್ನು ಎಲ್ಲೆಂದು ತಿಳಿಸದೆ ಹೂತರು.1997ರಲ್ಲಿ ಗುರುತಿಸಿದ ಗೋರಿಯಲ್ಲಿ ಬೋಲಿವಿಯಾದಲ್ಲಿದ್ದ ಚೇ ದೇಹವನ್ನು ಹೊರ ತೆಗೆದು ಕ್ಯೂಬಾಗೆ ತಂದು ಸಮಾಧಿ ನಿರ್ಮಿಸಿದರು.
ಚೇ ನಮ್ಮನ್ನು ಅಗಲಿ 55 ವರ್ಷಗಳಾದರೂ ಈಗಲೂ ಆತನನ್ನು ಪ್ರಾಣ ಬಿಡುವಷ್ಟು ಪ್ರೀತಿಸುವವರಿದ್ದಾರೆ ಟೀ-ಶರ್ಟ್,ಬುಕ್, ಬ್ಯಾಗ್,ಸಿನಿಮಾಗಳಲ್ಲಿ ಚೇನನ್ನು ಕಾಣುತ್ತೇವೆ. ಆತನನ್ನು ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ ಎಂದರೆ ತಪ್ಪಾಗಲಾರದು.ನನ್ನ ಪ್ರಕಾರ ಚೇ ಎಂದರೆ ಕ್ರಾಂತಿ,ಚೇ ಎಂದರೆ ಆತ್ಮವಿಶ್ವಾಸ,ಚೇ ಎಂದರೆ ಸ್ಫೂರ್ತಿ,ಚೇ ಎಂದರೆ ಕನಸು.”ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸಿದರೆ ನಾನು ನಿನ್ನ ಸಂಗಾತಿ” ಎಂದಿದ್ದ ಚೇ ನನ್ನ ಸಂಗಾತಿ,ಆತ ನನ್ನ ಸಂಗಾತಿ
-ದೇವರಾಜ ವನಗೇರಿ,ಇಲಕಲ್
ಪತ್ರಿಕೋದ್ಯಮ ವಿದ್ಯಾರ್ಥಿ
ಮೈಸೂರು ವಿಶ್ವವಿದ್ಯಾಲಯ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
One Response
Superb writing devu keep going.