ಬೆಂಗಳೂರು :ಸಾರ್ವಜನಿಕರ ಭೇಟಿ ವೇಳೆ ಅಧಿಕಾರಿಗಳ ಸಭೆ ನಡೆಸುವಂತಿಲ್ಲ
ಬೆಂಗಳೂರು: ಸಾರ್ವಜನಿಕರಿಗೆ ಭೇಟಿಗೆ ಅವಕಾಶ ಇರುವ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಸಭೆ ನಡೆಸದೆ ಕುಂದುಕೊರತೆಗಳನ್ನು ನಿವಾರಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನಾಗರೀಕರು ಅವರ ಅಹವಾಲುಗಳೊಂದಿಗೆ ಬರುತ್ತಿದ್ದಾರೆ. ಇದನ್ನು ಗಮನಿಸಿದರೆ ಹಿರಿಯ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಇದನ್ನು ಕಡಿಮೆ ಮಾಡಲು ಅಧಿಕಾರಿಗಳು ಎಲ್ಲ ಹಂತಗಳಲ್ಲಿ ಅರ್ಜಿದಾರರ ದೂರುಗಳನ್ನು ನಿಯಮಿತವಾಗಿ ಆಲಿಸಿದರೆ ಕುಂದುಕೊರತೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇತರ ಕ್ಷೇತ್ರ ಅಧಿಕಾರಿಗಳು ಮಧ್ಯಾಹ್ನ 3.30 ಗಂಟೆಯಿಂದ 5.30 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಸಮಯವನ್ನು ಕಲ್ಪಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಎಲ್ಲಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಪ್ರತಿ ದಿನ (ಸಾರ್ವಜನಿಕ ರಜೆ ಹೊರತುಪಡಿಸಿ) ಮಧ್ಯಾಹ್ನ 3.30 ಗಂಟೆಯಿಂದ 5.00 ಗಂಟೆಯವರೆಗೆ ಯಾವುದೇ ಸಭೆಗಳನ್ನು ನಿಗದಿಪಡಿಸದೆ (ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ) ಸಾರ್ವಜನಿಕರನ್ನು ಭೇಟಿ ಮಾಡುವುದು ಹಾಗೂ ಅವರ ಕುಂದುಕೊರತೆಗಳನ್ನು ಜನಸ್ಪಂದನಾ ತಂತ್ರಾಂಶದಲ್ಲಿ ದಾಖಲಿಸಿ ಹಾಗೂ ನಿವಾರಿಸಲು ಕ್ರಮ ತೆಗೆದುಕೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದಾರೆ.ಸೂಚಿಸಿದ್ದಾರೆ.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ