ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದ ಯುವ ಗಾಯಕಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಶ್ರೀಮತಿ ವಚನಶ್ರೀ ಬೀರಪ್ಪ ಪೂಜಾರಿ ಕೂಡಲಗಿ ರವರಿಗೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಸುಗಮ ಸಂಗೀತ ಪ್ರಸ್ತುತಿಗೆ ವಲಿದ ಬಂದ ಅವಕಾಶ ನಮ್ಮ ಕಲಬುರಗಿ ಜಿಲ್ಲೆಯ ಯುವ ಪ್ರತಿಭೆ ನಮ್ಮ ಹೆಮ್ಮೆ ಕೂಡಲಗಿ ಗ್ರಾಮದ ಸರ್ವ ಸದಸ್ಯರೆಲ್ಲರೂ ಹರ್ಷ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚಿಕ್ಕಗ್ರಾಮ ಕೂಡಲಗಿಯ ಯುವ ಪ್ರತಿಭೆಯು ಗ್ರಾಮದ ಭಜನೆಯ ಕಲಾವಿದರಾಗಿದ್ದ ದಿವಂಗತ ಶ್ರೀ ಶರಣಪ್ಪ ಪೂಜಾರಿ ಕೂಡಲಗಿ ರವರ ಸೊಸೆಯಾಗಿದ್ದು ನಾಡಿನ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಕಲಾವಿದರಾದ ಕೆಂಭಾವಿಯ ಶ್ರೀ ಬಸವರಾಜ ಭಂಟನೂರ ರವರ ಶ್ರೇಷ್ಠ ಸುಪುತ್ರಿ ಶ್ರೀಮತಿ ವಚನ ಶ್ರೀ ರವರು ತಮ್ಮ ತಂದೆಯ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದು ಸಂಗೀತದಲ್ಲಿ ವಿದ್ವತ್ ಹಾಗೂ ಶರಣಬಸವ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಸಂಗೀತ ಪದವಿಯನ್ನು ಪಡೆದಿದ್ದಾರೆ. ವಚನಶ್ರೀ ಅವರು ಗಾಯನ,ಸುಗಮ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಚನ ಗಾಯನ, ದಾಸವಾಣಿ, ಜನಪದ ಸಂಗೀತದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಈ ಬಾರಿಯ 2024 ರ ಮೈಸೂರು ದಸರಾ ಉತ್ಸವದಲ್ಲಿ ಇದೇ ಅಕ್ಟೋಬರ್ 9 ರಂದು “ಗಾನಭಾರತಿ ವೇದಿಕೆಯ” ಮೂಲಕ ಸುಗಮ ಸಂಗೀತಕ್ಕೆ ಧ್ವನಿಯಾಗಲಿದ್ದಾರೆ. ವಚನಶ್ರೀ ರವರ ಸಂಗೀತ ಗಾಯನಕ್ಕೆ ಪ್ರೇರಣೆ ಮತ್ತು ಸಾಧನೆಗೆ ತಂದೆ ಶ್ರೀ ಬಸವರಾಜ ರವರೆ ಸಾಕ್ಷಿಯಾಗಿದ್ದಾರೆ.
ಮನೆಯ ವಾತಾವರಣದಿಂದ ಬಳುವಳಿಯಾಗಿ ಈ ಸಂಗೀತದ ಒಲವು ಬೆಳೆಸಿಕೊಂಡ ವಚನಶ್ರೀ ರವರಿಗೆ ಪತಿಯಾದ ಶ್ರೀ ಬಿರಪ್ಪ ಪೂಜಾರಿ ಕೂಡಲಗಿ ಸಹ ಶಿಕ್ಷಕರು ಇನ್ನಷ್ಟು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾದದ್ದು. ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತಿರುವ ಯುವ ಪ್ರತಿಭೆ ತಮ್ಮ ಸುಮಧುರ ಸ್ವರಕಂಠದ ಮೂಲಕ ಗಾನ ಮಾಧುರ್ಯವನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಾ ಇದೀಗ ಮೈಸೂರು ದಸರಾ ಉತ್ಸವದಲ್ಲಿ ಆಯ್ಕೆ ಆಗಿರುವುದಕ್ಕೆ ಕುಟುಂಬಸ್ಥರು ಸಂಗೀತ ಕಲಾವಿದರು ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಚನ ಶ್ರೀರವರ ಸಂಗೀತ ಪ್ರಸ್ತುತಿಗೆ ಸಾಕ್ಷಿಯಾದ ವೇದಿಕೆಗಳು ಹೀಗಿವೆ:
ವಚನಶ್ರೀ ರವರು ಬೆಂಗಳೂರು, ಯಾದಗಿರಿ, ಕಲಬುರಗಿ, ವಿಜಯಪುರ ಹೀಗೆ ಹತ್ತಾರು ಹೊರ ಜಿಲ್ಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಯುವ ಸೌರಭ, ಮಹಿಳಾ ಸಾಂಸ್ಕೃತಿಕ ಉತ್ಸವ, ಸಾಂಸ್ಕೃತಿಕ ಸೌರಭ ಹಾಗೂ ಹೈದರಾಬಾದ್ ಕರ್ನಾಟಕ ವಿಭಾಗ ಮಟ್ಟದ ಜಾನಪದ ಸಮಾವೇಶ, ಜಿಲ್ಲಾ ಮಹಿಳಾ ಉತ್ಸವ ಸೇರಿದಂತೆ ಸರ್ಕಾರಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಸಾಂಸ್ಕೃತಿಕ ವೇದಿಕೆಗಳಲ್ಲಿ ವಚನ ಗಾಯನ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ದಾಸವಾಣಿ,ಜನಪದ ಗೀತೆಗಳು ಮೂಲಕ ತಮ್ಮ ಸ್ವರ ಪರಿಚಯಿಸಿದ ಶ್ರೇಯಸ್ಸು ವಚನಶ್ರೀ ಅವರದ್ದಾಗಿದೆ.
ವರದಿ: ಚಂದ್ರಶೇಖರ ಪಾಟೀಲ್