ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಬ್ರಹ್ಮಚಾರಿ ರತನ್ ಟಾಟಾ ಅವರ ದೇಶಭಕ್ತಿ

ಟಾಟಾ ಸಮೂಹ ಸಂಸ್ಥೆಗಳ ರತನ್ ಟಾಟಾ ಅವರು ಕೊರೊನಾ ತಡೆ ಕಾರ್ಯಗಳಿಗಾಗಿ 1,500 ಕೋಟಿ.ರೂ. ದೇಣಿಗೆ ನೀಡಿದರು. ಇದಕ್ಕಿಂತ ಹೆಚ್ಚಾಗಿ ಅಗತ್ಯ ಬಿದ್ದರೆ ನನ್ನೆಲ್ಲಾ ಆಸ್ತಿ ಮಾರಿಯಾದರೂ ದೇಣಿಗೆ ನೀಡಿ ನನ್ನ ದೇಶದ ಜನರ ಹಿತ ಕಾಯುವೆ ಎಂದು ಭರವಸೆಯ ನುಡಿಗಳನ್ನಾಡಿದರು. ಎಂತಹ ದೇಶಭಕ್ತಿ, ಭಾರತೀಯರ ಮೇಲಿನ ಅದಮ್ಯವಾದ ಪ್ರೀತಿ. ಇಂತಹ ಜನಪ್ರೀತಿ ಇವರಿಗೆ ದಿಢೀರ್ ಬಂದುದಲ್ಲ. ಅದು ಕುಟುಂಬದಿಂದ ಬಂದ ಸಂಸ್ಕಾರ.
ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್‌ನ ಸ್ಥಾಪಕರಲ್ಲೊಬ್ಬರಾದ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಟಾಟಾ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೆಲಸ ಕೊಡುವುದಿಲ್ಲ ಎಂದು ನಿರಾಕರಣೆಗೆ ಒಳಗಾದಾಗ ರತನ್ ಟಾಟಾ ಅವರಿಗೇ ಪತ್ರ ಬರೆದಿದ್ದರಂತೆ. ಮಹಿಳೆಯರಿಗೆ ಉದ್ಯೋಗ ನಿರಾಕರಿಸಿದರೆ ಶೇ.50ರಷ್ಟು ಕೌಶಲವನ್ನು ನಿರುಪಯುಕ್ತಗೊಳಿಸಿದಂತಾಗುತ್ತದೆ ಎಂದು. ಈ ಪತ್ರ ನೋಡಿಯೇ ಟಾಟಾ ಸಂಸ್ಥೆ ಉದ್ಯೋಗ ನೀಡಿ ಮಹಿಳಾ ಉದ್ಯೋಗಿಗಳ ನೇಮಕ ಪ್ರಾರಂಭಿಸಿತು ಎಂದಿದ್ದರು ಝೀ ಟಿವಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ.

ಜಾಗ್ವಾರ್‌ನಂತಹ ದುಬಾರಿ ಕಾರುಗಳನ್ನು ನೀಡುವ ಈ ಸಂಸ್ಥೆ ನ್ಯಾನೋದಂತಹ ಜನಸಾಮಾನ್ಯರ ಬಳಕೆಯ ಕಾರುಗಳನ್ನೂ ನೀಡಿದೆ. ಮೂರು ಚಕ್ರದ ಗೂಡ್ಸ್ ಅಟೊ ಚಾಲಕರಿಗೂ ಪುಟ್ಟ ಲಾರಿ ‘ಏಸ್’ ಮೂಲಕ ನಾಲ್ಕು ಚಕ್ರ ಮತ್ತು ಸ್ಟೀರಿಂಗ್ ಇರುವ ವಾಹನ ಒದಗಿಸಲೂ ರತನ್ ಟಾಟಾ ಅವರ ಕನಸೇ ಪ್ರೇರಣೆ. ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡೇ ಹುಟ್ಟಿದ ಆಗರ್ಭ ಶ್ರೀಮಂತ ರತನ್ ಟಾಟಾ ಅವರಿಗೆ ದೊರೆತ ಸಂಸ್ಕಾರವೇ ಅವರಿಗೆ ಜನಸಾಮಾನ್ಯರ ಕುರಿತು ಕಾಳಜಿ ಮೂಡಿಸಲು ಕಾರಣ.

ಎಳವೆಯಲ್ಲೇ ಬದುಕುವ ಪಾಠ:
ಟಾಟಾ ಸಮೂಹ ಸಂಸ್ಥಾಪಕ ಜೆಮ್‌ಷೆಡ್ ಜಿ ಅವರ ಮರಿಮೊಮ್ಮಗನಾಗಿ ದತ್ತು ಸ್ವೀಕರಿಸಲ್ಪಟ್ಟ ರತನ್ ಮತ್ತು ಸಹೋದರ ಜಿಮ್ಮಿಯನ್ನು ಸಲಹಿದವರು ಅಜ್ಜಿ ಲೇಡಿ ನವಜ್ ಬಾಯಿ,ರತನ್‌ಗೆ 10 ವರ್ಷ ತುಂಬಿದಾಗ ಅವರ ತಂದೆ ತಾಯಿ ವಿಚ್ಛೇದನ ಪಡೆದುಕೊಂಡರು. ತಾಯಿ ಮರುಮದುವೆಯಾದಾಗ ಓರಗೆಯ ಸಹಪಾಠಿಗಳು ಚುಚ್ಚುನುಡಿಗಳ ಮೂಲಕ ಹೀಯಾಳಿಸಿದರು. ಇಂತಹ ಸಂದರ್ಭದಲ್ಲಿ ಘನತೆ, ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅಜ್ಜಿ ಕಲಿಸಿದ್ದರು. ಈ ಜೀವನ ಮೌಲ್ಯ ಇಂದಿಗೂ ನಾನು ಪಾಲಿಸುತ್ತಿದ್ದೇನೆ. ನಮ್ಮಿಬ್ಬರನ್ನು ಒಮ್ಮೆ ಬೇಸಗೆ ರಜೆಗೆಂದು ಅಜ್ಜಿ ಲಂಡನ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಇಬ್ಬರಿಗೂ ಹೇಗಿರಬೇಕೆಂದು ಹೇಳಿಕೊಟ್ಟಿದ್ದರು. ಗೌರವದಿಂದ ಬಾಳುವುದೇ ಮುಖ್ಯ ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದರು. ಅಜ್ಜಿ ಸದಾ ನಮ್ಮೊಂದಿಗಿರುತ್ತಾರೆ ಎನ್ನುತ್ತಾರೆ ಟಾಟಾ.

ಆಸಕ್ತಿಗೆ ಬೆಂಬಲ ನೀಡಿದ ಅಜ್ಜಿ ನನಗೆ ವಯೋಲಿನ್ ಕಲಿಯಬೇಕೆಂದು ಆಸೆ ಇತ್ತು. ಅಪ್ಪ ಪಿಯಾನೋ ಕಲಿ ಎಂದಿದ್ದರು. ನಾನು ಅಮೇರಿಕಾದಲ್ಲಿ ಕಾಲೇಜಿಗೆ ಹೋಗಲು ಬಯಸಿದ್ದೆ. ತಂದೆ ಲಂಡನ್‌ನಲ್ಲಿ ಕಾಲೇಜಿಗೆ ಹೋಗುವಂತೆ ಸೂಚಿಸಿದ್ದರು. ನಾನು ಆರ್ಕಿಟೆಕ್ಟ್ ಆಗಬೇಕೆಂದು ಕನಸು ಕಂಡಿದ್ದೆ. ತಂದೆ ಎಂಜಿನಿಯರ್ ಆಗು ಎಂದು ಹೇಳಿದ್ದರು. ಒಂದೊಮ್ಮೆ ಆಗ ಅಜ್ಜಿ ನನ್ನ ಜತೆಗಿಲ್ಲದೇ ಇದ್ದ್ದರೆ ನಾನು ಯುಎಸ್‌ನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಅಜ್ಜಿಯ ಕಾರಣದಿಂದಲೇ ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆಂದು ಸೇರಿದ್ದರೂ ವಾಸ್ತುಶಿಲ್ಪದಲ್ಲಿ ಪದವಿ ಪಡೆದೆ. ಇದರಿಂದ ತಂದೆಗೆ ಬೇಸರವಾಗಿತ್ತು. ಆದರೆ ಧೈರ್ಯದಿಂದ ಮಾತನಾಡುವುದನ್ನು ಅಜ್ಜಿ ನಮಗೆಲ್ಲಾ ಕಲಿಸಿಕೊಟ್ಟಿದ್ದರು. ಮೃದುವಾಗಿ ಮತ್ತು ಘನತೆಯಿಂದ ಧೈರ್ಯದಿಂದ ಮಾತನಾಡಲು ಕಲಿಸಿದ್ದರು ಎನ್ನುತ್ತಾರೆ.

ಪ್ರೀತಿ ಮೂಡಿತು:
ತಲ್ಲಣಗಳಿಗೆ, ಬದಲಾವಣೆಗಳಿಗೆ ತತ್‌ಕ್ಷಣ ಸ್ಪಂದಿಸುವ ದೇಶವಾಸಿಗಳಿಗೆ ಕಷ್ಟ ಬಂದಾಗ ಕಳವಳಗೊಳ್ಳುವ ೮೩ರ ಹರೆಯದ ರತನ್ ಟಾಟಾ ಅವರು ಅವಿವಾಹಿತ. ಇದಕ್ಕೆ ಕಾರಣ ಅವರು ಭಗ್ನಪ್ರೇಮಿಯಾದುದು!. ಕಾಲೇಜು ಮುಗಿದ ಮೇಲೆ ಲಾಸ್ ಏಂಜಲೀಸ್‌ನ ಆರ್ಕಿಟೆಕ್ಚರ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಎರಡು ವರ್ಷ ಕೆಲಸ ಮಾಡಿದರು. ಜೀವನ ತುಂಬಾ ಸುಂದರವಾಗಿತ್ತು. ಸ್ವಂತ ಕಾರು, ಇಷ್ಟಪಟ್ಟ ಕೆಲಸದಿಂದ ಮನಸ್ಸಿನಲ್ಲಿ ನೆಮ್ಮದಿ ತುಂಬಿತ್ತು. ಲಾಸ್ ಏಂಜಲೀಸ್‌ನಲ್ಲಿ ಪ್ರೀತಿಯ ಬಲೆಗೆ ಬಿದ್ದ ಟಾಟಾ ಹಾಗೂ ಪ್ರೇಯಸಿ ಮದುವೆಯ ಹಂತಕ್ಕೆ ತಲುಪಿದ್ದರು. ಆದರೆ ಅದೇ ಸಂದರ್ಭದಲ್ಲಿ ತುಂಬಾ ವರ್ಷದಿಂದ ಅಜ್ಜಿಯಿಂದ ದೂರವೇ ಇದ್ದೆ. ಅನಾರೋಗ್ಯದ ದಿನಗಳಲ್ಲಿ ಸ್ವಲ್ಪ ದಿನದ ಮಟ್ಟಿಗಾದರೂ ಅಜ್ಜಿಯ ಜತೆಗಿರೋಣ ಎಂದು ಭಾರತಕ್ಕೆ ಬಂದರು. ಟಾಟಾ ಮದುವೆಯಾಗಲು ಬಯಸಿದ್ದವರು ಜತೆಗೇ ಭಾರತಕ್ಕೆ ಬರುತ್ತಾರೆಂದು ಭಾವಿಸಿದ್ದರು. 1962ರ ಇಂಡೋ ಚೀನಾ ಯುದ್ಧದ ಪರಿಣಾಮ ಆಕೆಯ ಹೆತ್ತವರು ಮಗಳನ್ನು ದೇಶದಿಂದ ಹೊರಗೆ ಕಳುಹಿಸಲಿಲ್ಲ. ಪರಿಣಾಮ ಸಂಬಂಧ ಮುರಿದು ಬಿತ್ತು. ಮದುವೆ ಕನಸಾಗಿಯೇ ಉಳಿಯಿತು.

ಸಾಮಾನ್ಯ ಉದ್ಯೋಗಿಯಾಗಿ 1962ರಲ್ಲಿ ಟಾಟಾ ಸಾಮ್ರಾಜ್ಯದಲ್ಲಿಯೇ ಸಾಮಾನ್ಯ ನೌಕರನಂತೆ ವೃತ್ತಿ ಬದುಕು ಆರಂಭಿಸಿದರು ರತನ್ ಟಾಟಾ. ಮೊದಲಿಗೆ ‘ಟಾಟಾ ಸ್ಟೀಲ್’ ಕಂಪೆನಿಯ ‘ಷಾಪ್ ಫ್ಲೋರ್’ನಲ್ಲಿ ಸುಣ್ಣದ ಕಲ್ಲು ಪುಡಿ ಮಾಡುವ, ಬ್ಲಾಸ್ಟ್ ಫರ್ನೇಸ್ ಕೆಲಸ ನಿರ್ವಹಿಸುವ ವಿಭಾಗದಲ್ಲಿ ದುಡಿದರು. 1971ರಲ್ಲಿ ‘ನ್ಯಾಷನಲ್ ರೇಡಿಯೊ ಅಂಡ್ ಎಲೆಕ್ಟ್ರಾನಿಕ್ಸ್’(ನೆಲ್ಕೊ) ನಿರ್ದೇಶಕರಾಗಿ ನೇಮಕಗೊಳ್ಳುವ ಮೂಲಕ ಉದ್ಯಮದ ಜವಾಬ್ದಾರಿಯ ಮೊದಲ ಹೊರೆ ಹೊತ್ತರು. ನೆಲ್ಕೊ ಶೇ. 2ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಶೇ. 40ರಷ್ಟು ನಷ್ಟದಲ್ಲಿದ್ದ ಸಂಸ್ಥೆಯನ್ನು ಸತತ ಶ್ರಮದ ಮೂಲಕ ಶೇ. 25ರಷ್ಟು ಮಾರುಕಟ್ಟೆ ಪಾಲು ದೊರಕಿಸಿಕೊಟ್ಟಿದ್ದರು. 1977ರಲ್ಲಿ ಎರಡನೇ ದೊಡ್ಡ ಜವಾಬ್ದಾರಿಯಾಗಿ ನಷ್ಟದಲ್ಲಿದ್ದ ‘ಎಂಪ್ರೆಸ್ ಮಿಲ್’ ಹೊಣೆಗಾರಿಕೆ. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸದ್ಯ ವರಮಾನ, ವಿಸ್ತಾರ, ಸಾಮರ್ಥ್ಯ, ಸಿಬಂದಿ ಸಂಖ್ಯೆ ಎಲ್ಲದರಿಂದಾಗಿ ಭಾರತದ ನಂ. 1 ‘ಮಾಹಿತಿ ತಂತ್ರಜ್ಞಾನ’ ಕಂಪನಿ ಎನಿಸಿಕೊಂಡಿರುವ ‘ಟಿಸಿಎಸ್’ ನೆರೆಯ ಚೀನಾದಲ್ಲೂ ಪ್ರಾಬಲ್ಯ ತೋರಿದೆ.

1868ರಲ್ಲಿ ಜೆಮ್‌ಶೆಡ್‌ಜಿ ಟಾಟಾ ಅವರಿಂದ ಟಾಟಾ ಸಂಸ್ಥೆಗಳ ಸ್ಥಾಪನೆಯಾಯಿತು. ಬ್ಯಾಂಕಿಗೆ ಸಾಲ ಮರುಪಾವತಿಸಲು ಸಾಧ್ಯವಾಗದೇ ಏಲಂ ಹಂತ ತಲುಪಿದ ಎಣ್ಣೆ ಸಂಸ್ಕರಣ ಸಂಸ್ಥೆಯನ್ನು 21 ಸಾವಿರ ರೂ.ಗೆ ಖರೀದಿಸಿ ಅದನ್ನು ಹತ್ತಿ ಉದ್ಯಮವಾಗಿಸಿ ಎರಡೇ ವರ್ಷದಲ್ಲಿ ಲಾಭದಲ್ಲಿ ಮಾರಾಟ ಮಾಡಿದರು. ನಂತರ ಉಪ್ಪಿನಿಂದ ಉಕ್ಕಿನ ತನಕ, ಸಾಫ್ಟ್‌ವೇರ್, ಅಟೊಮೊಬೈಲ್, ಚಹಾ, ವಿಮಾನಯಾನ, ವಿದ್ಯುತ್ ಉಪಕರಣಗಳು, ಗೃಹೋಪಯೋಗಿಗಳು, ರಾಸಾಯನಿಕ, ದೂರಸಂಪರ್ಕ ಹೀಗೆ ಸಾಗುತ್ತದೆ ಟಾಟಾ ಸಮೂಹ ಉದ್ಯಮದ ಪಟ್ಟಿ.

ಈಗ ಟಾಟಾ ಸಮೂಹದ ಒಟ್ಟು ವರಮಾನ 13 ಬಿಲಿಯನ್ ಡಾಲರ್ (8.6 ಲಕ್ಷ ಕೋ.ರೂ.)ಗೂ ಅಧಿಕ. ಉದ್ಯೋಗಿಗಳ ಸಂಖ್ಯೆ 7,22,281. ಟಾಟಾ ಬ್ರಾಂಡ್‌ನಡಿ ಬರುವ ಕಂಪೆನಿಗಳ ಸಂಖ್ಯೆ 12. ವಹಿವಾಟು ಹೊಂದಿರುವ ದೇಶಗಳು 80ಕ್ಕೂ ಹೆಚ್ಚು . ವಿವಿಧ ಷೇರುಪೇಟೆಗಳಲ್ಲಿ ನೊಂದಾಯಿತವಾದ ಸಮೂಹದ ಸಂಸ್ಥೆಗಳು ಒಟ್ಟು 31.

ಇಷ್ಟಿದ್ದರೂ ಜನಸಾಮಾನ್ಯರಿಗಾಗಿ ಮಿಡಿಯುವ ಉದ್ಯಮಿಯೊಳಗಿನ ತುಡಿಯುವ ಮನಸ್ಸು ಇದೆಯಲ್ಲ ಅವರಿಗೆ. ನನ್ನ ಜನರ ಬೇಗುದಿಯನ್ನು ಕಾಣಲಾರೆ ಎಂಬ ತಹತಹ. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಹಪಹಪಿ. ನನ್ನದು ಎನ್ನುವುದು ಏನಿಲ್ಲ ನಮ್ಮದು ಎನ್ನುವುದೇ ಈ ಎಲ್ಲ ಎಂಬ ಎಲ್ಲರನ್ನೂ ಒಳಗೊಳ್ಳುವ, ದೇಶದ ಜನರೆಲ್ಲರೂ ಒಂದೇ ಕುಟುಂಬದವರು ಎನ್ನುವ ಗುಣ. ಆಗಾಗ ಅವರು ನೆರವಿನ ಹಸ್ತ ಚಾಚುತ್ತಲೇ ಇರುತ್ತಾರೆ. ಅದು ಗ್ರೇಟ್. ನಮ್ಮ ದೇಶದಲ್ಲಿ ಇರುವ ಮಲ್ಟಿನ್ಯಾಷನಲ್ ಕಂಪನಿಗಳಿಗೆ ಈ ಮಟ್ಟದ ದೇಶಪ್ರೇಮ ಮಾದರಿಯಾಗಲಿ.
ಅಂದಹಾಗೆ ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ಗೌರವಗಳಾದ 2008ರಲ್ಲಿ ಪದ್ಮಭೂಷಣ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಂದಿವೆ.

ಲೇಖನ ಕೃಪೆ : ಲಕ್ಷ್ಮೀ ಮಚ್ಚಿನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ