ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಬೀದಿ ನಾಯಿ ಜುಲೈ ತಿಂಗಳಲ್ಲಿ ರೋಹಿತ್ ಎಂಬ ಶಾಲಾ ಬಾಲಕನಿಗೆ ಕಚ್ಚಿ ಘಾಸಿಗೊಳಿಸಿದ್ದು ಗ್ರಾಮದಲ್ಲಿ ಶಾಲಾ ಮಕ್ಕಳು ಶಾಲೆಗೆ ಬರುವ ರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಶಾಲೆಗೆ ಬರುವಾಗ ಮಕ್ಕಳು ಹೆದರಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ
ಶಾಲಾ ಎಸ್ ಡಿ ಎಂ ಸಿ ಕಮಿಟಿ ಮತ್ತು ಗ್ರಾಮಸ್ಥರು ಸಂಬಂಧಪಟ್ಟ ಹರಳಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜುಲೈ 30ನೇ ತಾರೀಕಿನಂದು ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿಯನ್ನು ನೀಡಿ ಇಂದಿಗೆ ನಾಲ್ಕು ತಿಂಗಳು ಗತಿಸಿದರೂ ಸಹ ಎಸ್ ಡಿ ಎಂ ಸಿ ಕಮಿಟಿ ಮತ್ತು ಗ್ರಾಮಸ್ಥರ ಮನವಿಗೆ ಕಿವಿಗೊಡದೆ ಮೌನ ವಹಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಯವರು ಇವರಿಗೆ ಗ್ರಾಮಸ್ಥರು ನೀಡಿರುವ ಮನವಿ ನೆನಪಿದೆಯೋ ಇಲ್ಲವೋ ಯಾವುದಾದರೂ ಕಸದ ಬುಟ್ಟಿಗೆ ಎಸೆದಿದ್ದಾರೋ ಎಂಬ ಅನುಮಾನ ಮೂಡುತ್ತಿದೆ.
ಸಂಜೆ ಸಮಯದಲ್ಲಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ನಂದಿನಿ ಹಾಲಿನ ಕೇಂದ್ರಕ್ಕೆ ಹಾಲನ್ನು ಹಾಕಲು ಮಕ್ಕಳು,ಮಹಿಳೆಯರು ಬರುತ್ತಾರೆ ಅಲ್ಲಂತೂ ನಾಯಿಗಳ ಕಿತ್ತಾಟ ಕೂಗಾಟ ದ್ವಿಚಕ್ರ ವಾಹನಗಳಿಗೆ ಅಡ್ಡಾದಿಡ್ಡಿ ಬಂದು ದ್ವಿಚಕ್ರ ಸವಾರರು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿಡಗೂರಿನಲ್ಲಿ ಈ ಬೀದಿ ನಾಯಿಗಳ ಹಾವಳಿಗೆ ಕೊನೆ ಎಂದು?
ಹಾಗೆಯೇ ಗ್ರಾಮದ ಸ್ಮಶಾನ 5 ಎಕರೆ ಇದ್ದು ,ಅದರ ಅಭಿವೃದ್ಧಿಗೆ ಮತ್ತು ಸ್ಮಶಾನದ ಜಾಗವನ್ನು ಗುರುತು ಮಾಡಿ ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗವೆಂದು ಒಂದು ನಾಮಫಲಕವನ್ನು ಹಾಕುವಂತೆ ತಾಲೂಕು ದಂಡಾಧಿಕಾರಿಗಳು ನಿರ್ದೇಶನ ನೀಡಿದರು ಸಹ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದಿಲ್ಲ.
ಗ್ರಾಮಸ್ಥರು ಮನವಿಯನ್ನು ನೀಡಿದರೂ ಇಲ್ಲಿಯವರೆಗೂ ಸ್ಮಶಾನದ ಜಾಗವನ್ನು ಗುರುತಿಸಿ ಒಂದು ನಾಮಫಲಕವನ್ನು ಅಳವಡಿಸದೆ ಬೇಜವಾಬ್ದಾರಿತನ ತೋರಿದ್ದಾರೆ.
ಇನ್ನಾದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಯವರು ಇದರ ಕಡೆ ಗಮನ ಹರಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ ಎಂದು ಎಸ್ ಎನ್, ಸಿದ್ದೇಶ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹನುಮಂತಪ್ಪ ಟಿ, ಎಸ್ ಡಿ ಎಮ್ ಸಿ ಕಮಿಟಿ ಅಧ್ಯಕ್ಷರು ಮಲ್ಲೇಶ್ ಪತ್ರಿಕೆಗೆ ತಿಳಿಸಿದರು ಇನ್ನು ಮುಂದೆ ಶಾಲಾ ಮಕ್ಕಳಿಗೆ ಅಥವಾ ಗ್ರಾಮಸ್ಥರಿಗಾಗಲಿ ನಾಯಿಗಳು ಕಚ್ಚಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ನೇರ ಹೊಣೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
-ಪ್ರಭಾಕರ ಡಿ ಎಂ