ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನವು ಕೇವಲ ಮಠವಾಗಿರದೆ, ಅಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳ ಮೂಲಕ ತನ್ನದೇ ಆದ ಹಿರಿಮೆ ಮತ್ತು ಗರಿಮೆಯನ್ನು ಹೊಂದಿರುವಂತ ಈ ಮಠವು ಶಿಕ್ಷಣ ದಾಸೋಹ ಕೇಂದ್ರವಾಗಿದ್ದು ಅನಾಥ ಮಕ್ಕಳ, ಅಬಲೆಯರ, ಆಶ್ರಯ ತಾಣವಾಗಿದೆ.
ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವತತ್ವದ ಮಠ, ಜನತೆಯ ಮಠ ಮಠಗಳ ಪರಂಪರೆಯಲ್ಲಿ ಬೀದರ ಜಿಲ್ಲೆಯ ಹೆಮ್ಮೆಯ ಭಲ್ಕಿ ಅಪ್ಪನ ಮಠವೆಂದು ಜನಜನಿತವಾಗಿದೆ.
ಹಿರೇಮಠ ಸಂಸ್ಥಾನದ ರೂವಾರಿಗಳು ಪೂಜ್ಯರು, ಶಿಕ್ಷಣ ಪ್ರೇಮಿಗಳು, ಕಾರುಣ್ಯ ಮೂರ್ತಿಗಳಾದ ಡಾ ಮ ಘ ಚ ಚನ್ನಬಸವ ಪಟ್ಟದೇವರ ಪರಿಶ್ರಮದ ಫಲವಾಗಿ ಸಂಸ್ಥಾನ ಮಠವು ಇಂದು ಕೇವಲ ಮಠವಾಗಿರದೆ ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳ ಆಶಾಕಿರಣವಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಪೂಜ್ಯ ಅಪ್ಪಾಜಿಯವರ ಹಲವಾರು ಶಿಷ್ಯ ವೃoದದಲ್ಲಿ ಗುರುತಿಸಿಕೊಂಡ ಶಿಷ್ಯರಲ್ಲಿ ಇಂದಿನ ಮಠದ ಪೀಠಾಧಿಪತಿಗಳಾದ ನಾಡೋಜ ಶ್ರೀ ಬಸವಲಿಂಗಪಟ್ಟದೇವರು.
ಅಂದಿನ ಅಂದ್ರಪ್ರದೇಶ ಇಂದಿನ ತೆಲಂಗಾಣದಲ್ಲಿ ಜನಸಿದ ಶ್ರೀಗಳು ಪ್ರಾಥಮಿಕ ಶಿಕ್ಷಣವನ್ನು (ನಾಲ್ಕನೇ ತರಗತಿವರೆಗೆ ) ಹುಟ್ಟೂರಲ್ಲಿ ಮುಗಿಸಿ ಬಡತನದ ಕಾರಣದಿಂದಾಗಿ 1969ರ ಜೂನ್ ತಿಂಗಳಲ್ಲಿ ಭಾಲ್ಕಿ ಮಠಕ್ಕೆ ಬಂದು ಶಿಕ್ಷಣದ ಜೊತೆ ಜೊತೆಗೆ ಪೂಜ್ಯ ಚೆನ್ನಬಸವ ಪಟ್ಟದೇವರ ವಿಶ್ವಾಸಕ್ಕೆ ಪಾತ್ರರಾಗಿ ಮುಂದೆ ಶ್ರೀ ಮಠದ ಪೀಠಾಧಿಪತಿಗಳಾಗಿ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರು.
ಒಂದು ಸಂಧರ್ಭದಲ್ಲಿ ಪೂಜ್ಯ ಚೆನ್ನಬಸವ ಪಟ್ಟದೇವರು ಕಟ್ಟಿದ ಶಿಕ್ಷಣ ಸಂಸ್ಥೆಯೊಂದು ರಾಜಕೀಯವಾಗಿ ಇನ್ನೊಬ್ಬರ ಪಾಲಾದಾಗ ಎದೆಗುಂದದ ಶ್ರೀಗಳು 1992ರಲ್ಲಿ ಹಿರೇಮಠ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ತನ್ಮೂಲಕ ಸುಮಾರು ಮೂವತೈದು ಅಂಗ ಸಂಸ್ಥೆಗಳು ತೆರೆದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬೆಳಕಾಗಿದ್ದಾರೆ.
ಕಡ್ಯಾಳ ಗ್ರಾಮಕ್ಕೆ ಹೊಂದಿಕೊಂಡು ಶ್ರೀ ಗಳು ಚೆನ್ನಬಸವೇಶ್ವರ ವಸತಿ ಶಾಲೆ ಹಾಗೂ ಕಾಲೇಜು ಸ್ಥಾಪಿಸಿ ಇಲ್ಲಿ ಎಲ್ ಕೆ ಜಿ ಯಿಂದ ಪಿ ಯೂ ಸಿ ವರೆಗೂ ಶಿಕ್ಷಣ ನೀಡುತ್ತಿದ್ದಾರೆ.
ಹೀಗಾಗಿ ಈ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಡಾಕ್ಟರ್, ಇಂಜನಿಯರ ಪದವಿ ಮುಗಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮಠದ ಶ್ರೀಗಳು ಕಾರಣೀಭೂತರಾಗಿದ್ದಾರೆ.
ಅದೇ ರೀತಿ ಶ್ರೀ ಗಳು ತೆಲಂಗಾಣದ ನಾರಾಯಣಖೇಡ ಜನರ ಜೊತೆ ಒಡನಾಟ ಹೊಂದಿರುವ ಕಾರಣ ಮೂರ್ಗಿ ಮತ್ತು ಕರಾಮುಂಗಿ ಗ್ರಾಮದಲ್ಲಿ ಕನ್ನಡ ಶಾಲೆಗಳನ್ನು ತೆರೆಯುವುದರ ಮೂಲಕ ಆಂಧ್ರದ ಗಡಿ ಭಾಗಕ್ಕೆ ಕನ್ನಡ ಕಂಪು ಹರಿಸಿರುವುದು ಶ್ರೀಗಳ ಕನ್ನಡದ ಪ್ರೀತಿಯನ್ನು ತೋರಿಸುತ್ತದೆ.
“ವಿಚಾರಗಳು, ಆಚಾರಗಳು ಯಾವ ವ್ಯಕ್ತಿಯದ್ದು ಎತ್ತರವಾಗಿರುತ್ತದೆಯೋ ಅವರು ಜನರ ಹತ್ತಿರವಾಗಿರುತ್ತಾರೆ” ಅನ್ನುವ ವಾಣಿಯಂತೆ ಶ್ರೀ ಗಳು ತಮ್ಮ ಆಚಾರ ವಿಚಾರಗಳನ್ನು ಒಂದಾಗಿರಿಸಿಕೊಂಡ ಹೃದಯವಂತರು.
ತಮ್ಮ ಮಠದ ಕಾರ್ಯ ಕ್ಷೇತ್ರವನ್ನು ಕೇವಲ ಭಕ್ತರ ಮಠವಾಗಿರಿಸದೆ ಸಮಸ್ತ ಕನ್ನಡಿಗರ ಮಠ, ಬಸವ ತತ್ವವನ್ನು ಭಕ್ತಗಣoಗಳಲ್ಲಿ ಬಿತ್ತಿದ ಮಠವಾಗಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
ಇವನಾರವ ಇವನಾರವ? ಎನ್ನದೆ ಎಲ್ಲರೂ ನಮ್ಮವರು ಎನ್ನುವ ಸಾರದಂತೆ ಕಲ್ಯಾಣ ಕರ್ನಾಟಕ ರಾಯಭಾರಿ ಯಾದ ಶ್ರೀಗಳು ಸಾಹಿತ್ಯ ಸಂಸ್ಕೃತಿ ಕೃಷಿ ಪರಂಪರೆಗೆ ಮಹತ್ತರ ಸೇವೆ ನೀಡುವ ನಿಟ್ಟಿನಲ್ಲಿ ಗೋಶಾಲೆ, ಬಡವರ ಮಕ್ಕಳಿಗೆ ದಲಿತರಿಗೆ ಅನಾಥ ಮಕ್ಕಳಿಗೆ, ನಿರ್ಗತಿಕರಿಗೆ,ಕಲಾವಿದರಿಗೆ ಪ್ರಸಾದ ನಿಲಯಗಳು ಮತ್ತುಕಲ್ಯಾಣ ಕರ್ನಾಟಕ ಭಾಗದ ಜನರ ಅಭಿವೃದ್ಧಿಗಾಗಿ ಸಹಕಾರ ಸಂಘಗಳು ತೆರೆಯುವ ಮೂಲಕ ಜನ ಮೆಚ್ಚುಗೆ ಪಡೆದಿದ್ದಾರೆ.
ಶ್ರೀ ಮಠದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮವಾಗಿ ಪ್ರತಿ ವರುಷ ಶ್ರಾವಣ ಮಾಸದ ಮಾಸಿಕ ಬಸವ ಚಿಂತನೆ, ಶರಣರ ತತ್ವ ಪಾಲನೆ, ಅನುಭಾವ ಗೋಷ್ಠಿ ಮುಂತಾದ ಕಾರ್ಯಕ್ರಮ ನಡೆಸಿಕೊಡುತ್ತಾರಲ್ಲದೆ ಅನುಭವ ಮಂಟಪದ ಭವ್ಯ ಪರಂಪರೆ ಸಂಸ್ಕೃತಿಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ದಿಶೆಯಲ್ಲಿ ಅನುಭವ ಮಂಟಪ ಉತ್ಸವ ಕಾರ್ಯಕ್ರಮ ಮಾಡುವ ಮೂಲಕ ಬಸವ ಪ್ರಜ್ಞೆಯ ಜ್ಯೋತಿಯನ್ನು ಎಲ್ಲಡೆ ಪಸರಿಸುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಮಾತೃ ಹೃದಯದ ಶ್ರೀಗಳು ಧರ್ಮ ಮತ್ತು ಸಮಾಜ ಎರಡು ಕಣ್ಣುಗಳು ದ್ರಷ್ಟಿ ಒಂದೇ ಯಂದು ಭಾವಿಸಿರುವರಾಗಿದ್ದು, ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಅನ್ನ ಅಕ್ಷರ ದಾಸೋಹ ಮಾಡುತ್ತಿರುವರಲ್ಲದೆ ಬೀದರನಲ್ಲಿ ಕೂಡಾ ಡಾ. ಚೆನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಅನಾಥ ಮತ್ತು ಬಡು ಕುಟುಂಬದ ಮಕ್ಕಳಿಗೆ ವಸತಿ ಸೌಕರ್ಯ ಕಲ್ಪಿಸಿರುವ ಶ್ರೀ ಗಳು ಅಲ್ಲಿ ಪ್ರತಿ ತಿಂಗಳ ಹನ್ನೊಂದನೇ ದಿನಾಂಕಕ್ಕೆ ಭಕ್ತರಿಗಾಗಿ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳುವುದು
ವಿಧುವೆ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಮಾಡಿ ಹೆಣ್ಣುಮಕ್ಕಳಿಗೆ ಗೌರವಿಸಿದ್ದಾರಲ್ಲದೆ ಯಾವುದೋ ಒಂದು ಕಾರಣದಿಂದ ಹೆತ್ತವರು ತನ್ನ ಮಕ್ಕಳಿಗೆ ಚರಂಡಿ ಗಟಾರದಲ್ಲಿ ಬಿಟ್ಟುಹೋದ ಮಕ್ಕಳನ್ನು ಹಾಗೂ ಅನಾಥ ಕೇಂದ್ರ ಮಕ್ಕಳನ್ನು ತಂದು ಅವರನ್ನು ಬಸವನ ಮಕ್ಕಳೆoದು ಸ್ವೀಕರಿಸಿ ಅವರಿಗೆ ಆಶ್ರಯ ನೀಡಿ ಒಳ್ಳೆ ಶಿಕ್ಷಣ ಕೊಟ್ಟು ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡುತ್ತಿರುವುದು ಪೂಜ್ಯ ಶ್ರೀಗಳ ಮಾನವೀಯತೆ, ಪ್ರೇಮ ವಾತ್ಸಲ್ಯವನ್ನು ಎತ್ತಿ ತೋರಿಸುತ್ತದೆ.
2012ರಲ್ಲಿ ಬಸವ ಜಯಂತಿ ಶತಮಾನೋತ್ಸವ ನಿಮಿತ್ಯ ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ಹಾಗೂ 2019ರಲ್ಲಿ ತೆಲಂಗಾಣದ 30 ಜಿಲ್ಲೆಗಳಲ್ಲಿ ಬಸವ ಸಂದೇಶ ಯಾತ್ರೆ ಕೈಗೊಳ್ಳುವ ಮೂಲಕ ಅಲ್ಲಿರುವ ಜನ ಮಾನಸದಲ್ಲಿ ಬಸವಣ್ಣನವರ ಆಚಾರ ವಿಚಾರಗಳನ್ನು ಬಿತ್ತುವ ಪ್ರಯತ್ನ ಮಾಡಿರಿವ ಶ್ರೀಗಳದ್ದು ಇತಿಹಾಸದಲ್ಲಿಯೇ ಮಹತ್ತರ ಸಾಧನೆಯಾಗಿದೆ.
ಶ್ರೀಗಳು ಸಾಹಿತ್ಯಕವಾಗಿ ಸೃಜನಶೀಲ ಬರಹಗಾರರಾಗಿದ್ದು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ.
ಶ್ರೀಗಳು ಪ್ರಕಟಿಸಿರುವ ಕೃತಿಗಳು
1:-ಬಸವನೇ ವೈದ್ಯ.
2:-ಧರ್ಮಗುರು ಬಸವಣ್ಣ ಮತ್ತು ಅಷ್ಟಾವರಣ
3:-ಶರಣ ಸಾಹಿತ್ಯ ದರ್ಪಣ
4:-ಚೆನ್ನಬಸವ ಪಟ್ಟದೇವರು
5:-ಬಸವ ತತ್ವ ಆಚರಣೆ ಮತ್ತು ನಾವು
6:-ಇಷ್ಟ ಲಿಂಗ ಪೂಜಾ ವಿಧಾನ
8:-ಬಸವ ಚಿಂತನ
9:-ದಿನಕೊಮ್ಮೆ ಶರಣರ ನೆನೆದೆನ.
10:-ಬಸವ ಸಂತತಿ
11:-ಬಸವ ಧರ್ಮ ದರ್ಪಣ
12:-ಬಸವಾದಿ ಶರಣ ಶರಣೆಯರ ವಚನಗಳು.
13:-ಶರಣರು ನಿಮಗೆಷ್ಟು ಗೊತ್ತು.
14:-ಮಕ್ಕಳಿಗಾಗಿ ಅಷ್ಟಾವರಣ.
15:-ವಚನ ಬಂಧು
16:-ವ್ಯಕ್ತಿತ್ವ ವಿಕಸನಕಾಗಿ ವಚನ ಶಿಕ್ಷಣ
17:-ಬಸವಣ್ಣನ ಮೂರ್ತಿಯೇ ಧ್ಯಾನಕ್ಕೆ ಮೂಲ
18:-ಇಷ್ಟ ಲಿಂಗ ದೀಕ್ಷಾ ವಿಧಾನ
19:-ನಾ ಕಂಡ ನನ್ನ ಗುರುದೇವರು
20:-ಶರಣರ ಐದು ಆಚರಗಳು
21:-ಮಕ್ಕಳಿಗಾಗಿ ಷಟಸ್ಥಲ.
22:-ವಚನ ಕಲ್ಯಾಣ.
23:-ಷಟಸ್ಥಲ ದರ್ಶನ
24:-ವಚನ ಸಂಜೀವಿನಿ.
25:-ವಚನ ಸ್ಫೂರ್ತಿ
26:-ವಚನ ಪರಿಮಳ
27:-ವಚನ ಸಂಪತ್ತು
28:-ಬಸವಣ್ಣನಿಂದ ಬದುಕ್ಕಿತ್ತು ಈ ಲೋಕ.
29:-ಶರಣ ಮೆದಾರ ಕೇತಯ್ಯ
30:-ಬಸವ ಜ್ಯೋತಿ
ಮುಂತಾದ ಶರಣರ ಕುರಿತು ಪುಸ್ತಕಗಳು ಪ್ರಕಟಿಸಿರುವರಲ್ಲದೆ ಪೂಜ್ಯ ಶ್ರೀಗಳ ಮಠದ ಭಕ್ತರು ಗಡಿ ಪ್ರದೇಶವಾದ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ನೆಲೆಯೂರಿರುವರಿಂದ ಅವರಿಗಾಗಿ ಬಸವ ಜ್ಯೋತಿ, ಶಿವಶರಣರ ವಚನಗಳು,ವಚನ ಪ್ರಸಾದ, ಬಸವ ನೈವೇದ್ಯ,ಡಾ. ಚೆನ್ನಬಸವ ಪಟ್ಟದೇವರು, ಧರ್ಮಗುರು ಬಸವಣ್ಣ ಅಷ್ಟಾವರಣ ಗುರು ಲಿಂಗ ಜಂಗಮ, ವಿಭೂತಿ ರುದ್ರಾಕ್ಷಿ ಮಂತ್ರ, ಪಾದೂದಕ ಪ್ರಾಸದ, ಷಟಸ್ಥಲ ದರ್ಶನ, ಮುಂತಾದ ಕೃತಿಗಳು ತೆಲುಗು ಮತ್ತು ಮರಾಠಿ ಭಾಷಿಕರಿಗೆ ಓದಲು ಅನುಕೂಲ ಮಾಡಿಕೊಟ್ಟಿರುವರು. ಅದೇ ರೀತಿ ಇಷ್ಟಲಿಂಗ ಪೂಜಾ ವಿಧಾನವೆಂಬ ಕೃತಿಯನ್ನು ಹಿಂದಿ ಭಾಷೆಗೆ ತರ್ಜುಮೆ ಗೊಳಿಸಿರುವರಲ್ಲದೆ ತಾವು ಒಬ್ಬ ಸೃಜನಶೀಲ ಬರಹಗಾರರಾಗಿದ್ದು ಕೃತಿಗಳು ಬರೆದು ಪ್ರಕಟಿಸಿಸುವದು ಎಷ್ಟು ಕಷ್ಟವೆಂದು ಅರಿತ ಶ್ರೀಗಳು ಅನೇಕ ಸಾಹಿತಿಗಳು ಬರೆದ ಎರಡು ನೂರಕ್ಕೂ ಹೆಚ್ಚು ಕೃತಿಗಳನ್ನು ಮಠದ ಮೂಲಕ ಪ್ರಕಟಿಸಿರುವರಲ್ಲದೆ ಅವರಿಗೆ ಗೌರವ ಸನ್ಮಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವರು.
ಪೂಜ್ಯ ಬಸವಲಿಂಗ ಪಟ್ಟದೇವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದು ಕರ್ನಾಟಕ ಸರ್ಕಾರದಿಂದ ನಿರ್ಮಿಸಲ್ಪಡುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ಕೂಡಾ ತಮ್ಮ ಅವಿರತ ಶ್ರಮ
ವಹಿಸುತಿದ್ದು ಪೂಜ್ಯರ ಆಧ್ಯಾತ್ಮಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯ ಗುರುತಿಸಿ ಇತ್ತೀಚಿಗೆ ಹಂಪಿ ವಿಶ್ವವಿದ್ಯಾಲಯ ಶ್ರೀಗಳಿಗೆ ನಾಡೋಜ ಪ್ರಶಸ್ತಿನೀಡಿ ಗೌರವಿಸಿದೆ, ಅದೇ ರೀತಿ ಕಲಬುರಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಪೂಜ್ಯರಿಗೆ ಇನ್ನೂ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಲ್ಲದೆ ಕರ್ನಾಟಕ ಸರ್ಕಾರದ ಸುವರ್ಣ ಏಕೀಕರಣ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಕ್ಕಳ ಕಲ್ಯಾಣ ಪ್ರಶಸ್ತಿ, ಹಾಗೂ ಬಸವ ರಾಷ್ಟ್ರಿಯ ಪ್ರಶಸ್ತಿ, ಮತ್ತು ಡಾ. ತೋoಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟೀಯ ಪ್ರಶಸ್ತಿ ಸಂದಿರುವುದು ಹಾಗೂ ಇವರ ಅವಿಸ್ಮರಣೀಯ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರೀಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದೂ
ನಾಡಿನ ಜನತೆಗೆ ಹರ್ಷವನ್ನುoಟು ಮಾಡಿದ್ದೂ ಶ್ರೀ ಗಳಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಗುರು ಬಸವಣ್ಣ ಇನ್ನೂ ಹೆಚ್ಚಿನ ಶಕ್ತಿ ಕೊಡಲೆಂದು ಈ ಲೇಖನ ಬರೆಯಲು ಸಹಾಯ ಮಾಡಿದ್ದ ಡಾ. ಬಸವರಾಜ ಬಲ್ಲೂರ, ರಾಜಶೇಖರ ಜುಬ್ರೆ ಮತ್ತು ಶ್ರೀಕಾಂತರವರಿಗೂ ಹಾಗೂ ನನ್ನ ಸಾಹಿತ್ಯ ಬಳಗಕ್ಕೂ ವಂದಿಸುತ್ತಾ ಈ ನನ್ನ ಬರಹವನ್ನು ಗುರುಗಳ ಚರಣ ಕಮಲದಲ್ಲಿ ಇಡುತ್ತೇನೆ.

- ಓಂಕಾರ ಪಾಟೀಲ.
ಕಾರ್ಯದರ್ಶಿಗಳು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.
ಮೊ :-6360413933
