ಬಾಗಲಕೋಟೆ/ ಬನಹಟ್ಟಿ : ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ಬನಹಟ್ಟಿ ಶಾಲೆಯ ಶಿಕ್ಷಕರಾದ ಚಿರಂಜೀವಿ ರೋಡಕರ್ ಅವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಖ್ಯಾತ ಪವಾಡ ಬಯಲು ತಜ್ಞ, ವೈಜ್ಞಾನಿಕ ಚಿಂತಕರು, ಪರಿಷತ್ತಿನ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜ್ಞಾನಿಗಳು ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎ ಎಸ್ ಕಿರಣ್ ಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಧೀಶರಾದ ಜಸ್ಟಿಸ್ ನಾಗಮೋಹನ್ ದಾಸ್ ಅವರ ಮಾರ್ಗದರ್ಶನದಲ್ಲಿ, ನಾಡಿನ ಖ್ಯಾತ ಸಾಹಿತಿಗಳು, ಶಿಕ್ಷಣ ತಜ್ಞರು, ಮನೋವೈದ್ಯರು, ಸಾಮಾಜಿಕ ಹೋರಾಟಗಾರರು, ಶರಣ ತತ್ವ ಪರಿಪಾಲಕರು, ಪ್ರಗತಿಪರರನ್ನು ಒಳಗೊಂಡ ಪರಿಷತ್ತು ಇದಾಗಿದ್ದು ನಾಡಿನ ಉದ್ದಗಲಕ್ಕೂ ವೈಜ್ಞಾನಿಕ ಸಮ್ಮೇಳನ, ವಿಚಾರಗೋಷ್ಠಿ, ಸಂಸ್ಕೃತಿ ಚಿಂತನೆ, ಸಂವಾದ, ರಂಗ ನಾಟಕಗಳು, ಪುಸ್ತಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ತರಬೇತಿಗಳು, ನಾಯಕತ್ವ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು ಜನರಲ್ಲಿರುವ ಮೂಢನಂಬಿಕೆ ತೊಲಗಿಸಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಚಿರಂಜೀವಿ ರೋಡಕರ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರಗತಿಪರ ಸಾಹಿತ್ಯದಲ್ಲಿ ಒಲವುಳ್ಳವರಾಗಿದ್ದು ಕಾವ್ಯ ರಚನೆ, ಬರವಣಿಗೆಯಲ್ಲಿ ತೊಡಗಿದ್ದು, ವಿಜ್ಞಾನ ಸಿರಿ ಮಾಸಪತ್ರಿಕೆಯ ಸಂಪಾದಕರು ಕೂಡಾ ಆಗಿದ್ದಾರೆ .ಈಗಾಗಲೇ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ 4 ವರ್ಷ ಸೇವೆ ಸಲ್ಲಿಸಿ, ಉತ್ತಮವಾಗಿ ಸಂಘಟನೆ ಕಟ್ಟಿ ಪರಿಷತ್ತಿನ ಮೂರನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಲೋಕೋಪಯೋಗಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರ ಸರ್ವಾಧ್ಯಕ್ಷತೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮತ್ತು ಸಚಿವರಾದ ಮಾನ್ಯ ಶ್ರೀ ಎನ್ ಎಸ್ ಬೋಸರಾಜು ಅವರ ನೇತೃತ್ವದಲ್ಲಿ ನಾಡಿನ ಖ್ಯಾತ ಸಾಹಿತಿಗಳನ್ನು, ಪ್ರಗತಿಪರ ಚಿಂತಕರನ್ನು, ಸಾಮಾಜಿಕ ಹೋರಾಟಗಾರರನ್ನು, ವೈಜ್ಞಾನಿಕ ವೈಚಾರಿಕ ಚಿಂತಕರನ್ನು ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಸೇರಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
