ಉತ್ತರ ಕನ್ನಡ/ ಹೊನ್ನಾವರ: ದಲಿತರ ಏಳ್ಗೆಗಾಗಿ ಸರಕಾರದ ಹಲವು ವಿವಿಧ ಯೋಜನೆಗಳು, ಸೌಲಭ್ಯಗಳು ಇವೆ. ಆದರೆ, ಅದ್ಯಾವ ಸೌಲಭ್ಯಗಳು, ಯೋಜನೆಗಳು ಕೂಡಾ ದಲಿತ ಫಲಾನುಭವಿಗಳಿಗೆ ಇನ್ನೂ ಸಮರ್ಪಕವಾಗಿ ತಲುಪಿಲ್ಲ. ಅವುಗಳು ದಲಿತರಿಗೆ ತಲುಪಿಲ್ಲ ಎನ್ನುವುದಕ್ಕಿಂತ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉದ್ದೇಶ ಪೂರಕವಾಗಿಯೇ ಅವರಿಗೆ ತಲುಪಿಸುವ ಕಾರ್ಯ ಮಾಡುತ್ತಿಲ್ಲ ಎನ್ನುವುದೇ ಸೂಕ್ತ ಎನಿಸುತ್ತದೆ.

ಆದ್ದರಿಂದ, ಸರಕಾರದ ಬಹುತೇಕ ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ರಾರಾಜಿಸುತ್ತಿರುವಂತೆ ತೋರುತ್ತಿರುವುದಲ್ಲದೇ, ಕಾಗದ ಪತ್ರಗಳಲ್ಲಿ ಮಾತ್ರ ಸರಕಾರದ ಪ್ರತಿ ಸೌಲಭ್ಯಗಳು ದಲಿತರನ್ನು ಸಮರ್ಪಕವಾಗಿ ತಲುಪಿರುವ, ತಲುಪುತ್ತಿರುವ ಸಾಧ್ಯತೆ ಇದೆ. ಆದರೆ ವಾಸ್ತವದಲ್ಲಿ ಖಂಡಿತಾ ಇಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಮನೆ, ಶೌಚಾಲಯ, ನೀರು, ವಿದ್ಯುತ್, ಬಾವಿ ಇವುಗಳಿಗಾಗಿ ಗ್ರಾಮೀಣ ಪ್ರದೇಶಗಳ ದಲಿತರು ಗ್ರಾಮ ಪಂಚಾಯತನ ಜನಪ್ರತಿನಿಧಿಗಳ, ಅಧಿಕಾರಿಗಳ ಕೈ-ಕಾಲು ಹಿಡಿದು ಗೋಗರಿಯುವ ಸ್ಥಿತಿ ಬಂದೊದಗಿದೆ ಅವರ ಕೈಕಾಲು ಹಿಡಿದು ಗೋಗರೆದರೂ ಸಹ ತಮ್ಮ ತಾಳಕ್ಕೆ ಕುಣಿಯುವ, ತಮ್ಮ ಲಾಭಕ್ಕೆ ಆಗುವಂತ ದಲಿತ ವ್ಯಕ್ತಿ/ಕುಟುಂಬಕ್ಕೆ ಮಾತ್ರ ಈ ಅಧಿಕಾರಸ್ಥರು ಸರಕಾರದ ಕೆಲವೇ ಕೆಲವು ಸೌಲಭ್ಯಗಳನ್ನು ಅವರಿಗೆ ನೀಡುವುದು ಬಿಟ್ಟರೆ ಇನ್ನೇನೂ ಇಲ್ಲ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಮಾತಿನಂತೆ ಸರಕಾರ ಕೊಟ್ಟರೂ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದ, ಅಲ್ಲದೇ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಸೌಲಭ್ಯ/ಯೋಜನೆಗಳನ್ನು ದಲಿತರಿಗೆ ಇನ್ನೂ ಸರಿಯಾಗಿ ನೀಡುತ್ತಿಲ್ಲ ಎನ್ನುವುದೇ ಕಟು ಸತ್ಯ. ನಾವೆಲ್ಲೋ ಕಾಡಂಚಿನ ಜನರಿಗೆ ಇನ್ನೂ ಮೂಲಭೂತ ಸೌಕರ್ಯಗಳು ಸಿಗದೇ ಅದರಿಂದ ಅವರು ವಂಚಿತರಾಗಿ ಅಸಾಯಕ ಬದುಕು ಬದುಕುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿ ಅಯ್ಯೋ ಪಾಪ ಎನ್ನುತ್ತೇವೆ.
ಸರಕಾರದ ಬಹುತೇಕ ಸೌಲಭ್ಯಗಳಿಂದ ನಮ್ಮ ದಲಿತರು ವಂಚಿತರಾಗಿ ಇನ್ನೂ ಶೋಚನೀಯ ಬುದುಕು ಬಾಳುತ್ತಿರುವ ಸಂಗತಿಗಳು ಅದೆಲ್ಲೋ ದೂರದಲ್ಲಿ ಅಲ್ಲ, ನಾವಿರುವ ಅಕ್ಕಪಕ್ಕಗಳ ಕೇರಿ, ಊರುಗಳಲ್ಲಿದೆ ಎನ್ನುವುದಕ್ಕೆ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ (ವ್ಯಾಪ್ತಿಯ) ದಿಂದ ಕೂಗಳತೆಯ ದೂರದಲ್ಲಿರುವ, ರಾಷ್ಟೀಯ ಹೆದ್ದಾರಿ(66ರ) ಯಿಂದ ಕೆಲವೇ ಕೆಲವು(6-7ಮೀಟರ್) ಅಂತರದಲ್ಲಿರುವ ನಮ್ಮ ಪರಿಶಿಷ್ಟ ಮುಕ್ರಿ ಸಮಾಜದ ಕೇರಿ ಬೇಲೆಗದ್ದೆಯಲ್ಲಿದೆ ಎಂದರೇ ನಂಬಲೇ ಬೇಕು.
ಇಲ್ಲಿನ ಪರಿಶಿಷ್ಟ ಮುಕ್ರಿ ಸಮಾಜದ ಕೇರಿ ಬಡಗಣಿ ನದಿಯಂಚಿನಲ್ಲಿದೆ. ಈ ನದಿಗೆ 5-6 ದಶಕದ ಹಿಂದೆ ಕಟ್ಟಿದ ಕಲ್ಲಿನ ತಡೆಗೋಡೆ ಇಂದು ಕೆಲವೇ ಕಲ್ಲುಗಳಿಂದ ಮಾತ್ರ ಉಳಿದಿದೆ ಇಲ್ಲಿನ ಹಲವರಿಗೆ ಜಾಗ ಸಹ ಇಲ್ಲದೇ, ಅವರ ಮನೆಯು ನದಿಯ ಪಿಚಿಂಗ್ ಮೇಲೆಯೆ ಇದ್ದು, ಯಾವ ಸಮಯದಲ್ಲಿ ತಮ್ಮ ಮನೆ, ಜೀವ ನದಿಗೆ ಆಹಾರ ಆಗುತ್ತದೆಯೋ ಎಂಬ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಈ ಹಲವರಿಗೆ ಪರ್ಯಾಯ ಜಾಗದ ಅವಶ್ಯಕತೆ ಸಹ ಇದೆ.
ಈ ಕೇರಿಗೆ ಸಮರ್ಪಕವಾದ ದಾರಿ ಸಹ ಇಲ್ಲ ರಸ್ತೆ ಇಲ್ಲದಿರುವುದನ್ನೇ ನೆಪವಾಗಿಟ್ಟುಕೊಂಡು, ನದಿಗೆ ತಡೆಗೋಡೆ ಕಟ್ಟಿ ನಮ್ಮ ಮನೆ, ಪ್ರಾಣ ಉಳಿಸಿ ಎಂದು ಇಲ್ಲಿನವರು ಸಂಬಂಧ ಪಟ್ಟವರಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ, ರಸ್ತೆ ಇಲ್ಲ, ನೀವೇ ರಸ್ತೆಯನ್ನು ನಿರ್ಮಿಸಿ ಕೊಟ್ಟರೆ ನಾವು ನದಿಗೆ ತಡೆಗೋಡೆ ಕಟ್ಟಿಕೊಡುತ್ತೇವೆ ಎಂದು ಸಬೂಬು ಹೇಳಿ ಇಲ್ಲಿನ ಬಡಜನರ ಬಾಯಿ ಮುಚ್ಚಿಸುವ ಕಾರ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ವ್ಯವಸ್ಥಿತವಾಗಿ ನಿರಂತರವಾಗಿ ಮಾಡುತ್ತಿದ್ದಾರೆ. ಈಗಾಗಲೇ, ತಾವು ಓಡಾಡಲು ಸರಿಯಾದ ರಸ್ತೆ, ನದಿಗೆ ತಡೆಗೋಡೆ ನಿರ್ಮಿಸುವಂತೆ ಸರಕಾರದ ತನಕ ಇಲ್ಲಿನವರು ಅರ್ಜಿ ಸಲ್ಲಿಸಿದ್ದೂ ಆಗಿದೆ. ಇಲ್ಲಿನವರಿಗೆ ರಸ್ತೆ ಆಗದಂತೆಯೂ ಕಡ್ಡಿ ಅಲ್ಲಾಡಿಸಿದ್ದು ಸಹ, ಇದೇ ಸ್ಥಳೀಯ ಕೆಲ ಪ್ರಮುಖ ಜನಪ್ರತಿನಿಧಿಗಳು ಎನ್ನುವುದರಲ್ಲಿ ಬೇರೆ ಮಾತಿಲ್ಲ. ಈ ಕ್ಷೇತ್ರದ ಮತ್ತು ಸ್ಥಳೀಯಾಡಳಿತದ ಜನ ಪ್ರತಿನಿಧಿಗಳು ಮನಸು ಮಾಡಿ ಇಲ್ಲಿನ ಬಡಜನರನ್ನು ಮತ್ತು ಅವರ ವಾಸ್ತವ್ಯದ ಮನೆಗಳನ್ನು ಉಳಿಸಬೇಕು ಎಂಬ ಇಚ್ಛೆ ಇವರಿಗೆ ಖಂಡಿತಾ ಇದ್ದರೆ, ರಾಷ್ಟ್ರೀಯ ಹೆದ್ದಾರಿಯಿಂದ ಕೂಗಳತೆ ಅಂತರದಲ್ಲಿರುವ ಇಲ್ಲಿನ ನದಿಯ(ಕೇರಿ) ತಟಕ್ಕೆ ಅತಿ ಸುಲಭವಾಗಿ ತಾತ್ಕಾಲಿಕ ರಸ್ತೆಯನ್ನಾದರೂ ನಿರ್ಮಿಸಿ ಶಾಶ್ವತ ತಡೆಗೋಡೆ ಇಲ್ಲಿ ನಿರ್ಮಿಸಬಹುದಿತ್ತು. ಆದರೆ, ಚುನಾವಣೆಗಳು ಬಂದಾಗ ಮಾತ್ರ ಇವರಿಗೆ ಗ್ರಾಮದ ಪ್ರತಿ ಪರಿಶಿಷ್ಟ ಮುಕ್ರಿ ಸಮಾಜದ ಕೇರಿಗಳ ದಾರಿ, ಇವರ ಅಂಧಕಾರ ತೊಲಗಿ ಕಾಣುತ್ತಿರುವುದರಿಂದ ನದಿಯ ತಡೆಗೋಡೆ, ರಸ್ತೆ ಸೇರಿದಂತೆ ಸರಕಾರದ ಹಲವು ಸೌಲಭ್ಯಗಳು ಇಲ್ಲಿನವರಿಗೆ ಇನ್ನೂ ಮರಿಚೀಕೆಯಾಗಿಯೇ ಮುಂದುವರೆಯುತ್ತಿದೆ. ಇದೇ ನದಿಯ (ಆಚೆ)ಇನ್ನೊಂದು ಪಕ್ಕದಲ್ಲಿರುವ ಮಠವೊಂದಕ್ಕೆ ಸೇರಿದ್ದು ಎನ್ನಲಾದ ಜಾಗ ಉಳಿಸಲು 7-8 ಕಿ. ಮೀ. ಸುತ್ತಿ ದೂರದ ಕುಂದಾಪುರ ಕಡೆಗಳಿಂದ ನೂರಾರು ಲಾರಿಗಳ ಮೂಲಕ ಶಿಲೆ ಕಲ್ಲುಗಳನ್ನು ತಂದು ಇಲ್ಲಿನ ಬಡಗಣಿ ನದಿಯ ಇನ್ನೊಂದು ತಟದಲ್ಲಿ ಗಟ್ಟುಮುಟ್ಟಾದ ತಡೆಗೋಡೆ ತೀರಾ ಇತ್ತೀಚೆಗೆ ನಿರ್ಮಿಸಿದ್ದಾರೆ. ಅತೀ ಹತ್ತಿರದ ಸುಲಭ ಮಾರ್ಗ ಇರುವ, ಪರಿಶಿಷ್ಟರ ಕೇರಿ ಇರುವ ನದಿಯ ಈ ಭಾಗಕ್ಕೆ ಮಾತ್ರ ತಡೆಗೋಡೆ ಕಟ್ಟಲು ಇವರಿಗ್ಯಾಕೆ ಕಷ್ಟ ಆಗುತ್ತಿದೆ ಎನ್ನುವುದು ಪ್ರಜ್ಞಾವಂತರಿಗೆ ಅರ್ಥ ಆಗದಿರುವ ವಿಷಯವೇನೂ ಅಲ್ಲ. ಇಲ್ಲಿ ಸದಾಕಾಲ ನೀರಿಗೆ ಬರವಿದೆ. ಕುಡಿಯಲು 2-3 ದಿನಗಳಿಗೊಮ್ಮೆ ಬರುವ “ನಲ್ಲಿ” ನೀರು ಹೊರತು ಪಡಿಸಿದರೆ, ಸ್ನಾನ, ಬಟ್ಟೆ, ಪಾತ್ರೆ ಎಲ್ಲದಕ್ಕೂ ಉಪ್ಪು ನೀರೇ ಇಲ್ಲಿನವರಿಗೆ ಗತಿಯಾಗಿದೆ.
ಇಲ್ಲಿನ ಬಹುತೇಕ ಮನೆಗಳಿಗೆ ಇನ್ನೂ ಶೌಚಾಲಯಗಳಿಲ್ಲ. ಹೆಂಗಸರು, ಹೆಣ್ಣು ಮಕ್ಕಳು ಇರುವ ಕೆಲ ಮನೆಗಳಲ್ಲಿ ಮಾತ್ರ, ಅವರ ಹಿತದೃಷ್ಠಿಯಿಂದ ಸಾಲ ಮಾಡಿ ಸ್ವಂತ ಶೌಚಾಲಯವನ್ನು ಕೆಲವರು ಕಟ್ಟಿಕೊಂಡಿದ್ದಾರೆ. ಒಂದೆರಡು ಮನೆಗಳಿಗೆ ಮಾತ್ರ ಪಂಚಾಯತ ಹಣದಲ್ಲಿ, ಅದೂ ಸಹ ಅರ್ಧಂಬರ್ಧ ಶೌಚಾಲಯ ಆಗಿದ್ದನ್ನು ಇಲ್ಲಿ ಕಾಣಬಹುದಾಗಿದೆ. ಆದರೆ, ಹಿಂದೊಮ್ಮೆ ಊರಿನ ವ್ಯಕ್ತಿಯೋರ್ವರು ಮಾಹಿತಿ ಹಕ್ಕಿನಡಿ ಈ ಬಗ್ಗೆ ಕೇಳಿದಾಗ, ಈ ಗ್ರಾಮದ ವ್ಯಾಪ್ತಿಗೆ ಒಳಪಡುವ ಬಹುತೇಕ ಪರಿಶಿಷ್ಟ ಮುಕ್ರಿ ಸಮಾಜದ ಮನೆಗಳಿಗೆ ಇಲ್ಲಿನ ಗ್ರಾ. ಪಂ. ಬಹಳ ಹಿಂದೆಯೇ ಶೌಚಾಲಯದ ಹಣ ಮಂಜೂರು ಮಾಡಿ ಅದನ್ನು ನಿರ್ಮಿಸಿ, ಬಯಲು ಶೌಚಮುಕ್ತ ಪರಿಶಿಷ್ಟರ ಕೇರಿ ಮಾಡಿದೆ ಎಂಬ ಮಾತು ಕೇಳಿ ಬಂದಿತ್ತು. ಇದೇನೇ ಇರಲಿ… ಇನ್ನಾದರೂ, ಜಿಲ್ಲಾಧಿಕಾರಿಯವರು ಇಲ್ಲಿನ ವಾಸ್ತವವ ಸ್ಥಿತಿಯನ್ನು ಕಣ್ಣಾರೆ ಕಂಡು ಇಲ್ಲಿನ ಪರಿಶಿಷ್ಟರಿಗೆ ಸರಕಾರದ ಪ್ರತಿ ಸೌಲಭ್ಯಗಳನ್ನು ಸಮರ್ಪಕವಾಗಿ ಸಲ್ಲುವಂತೆ, ನದಿಗೆ ತಡೆಗೋಡೆ, ರಸ್ತೆ ನಿರ್ಮಿಸಿಕೊಟ್ಟು ಇಲ್ಲಿನವರ ಮನೆ, ಪ್ರಾಣ ಉಳಿಸಬೇಕಾಗಿದೆ.
- ಕರುನಾಡ ಕಂದ
