ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಗೋವುಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು ಗೋವುಗಳಿಗೆ ಸೂಕ್ತ ಚಿಕಿತ್ಸೆ, ಮೇವಿನ ಕೊರತೆಯಿಂದ ಪ್ರತಿದಿನ ಒಂದಿಲ್ಲೊಂದು ಗೋವುಗಳ ಮಾರಣಹೋಮ ನಡೆಯುತ್ತಿದೆ.
ಗೋವು ಭಾರತದ ಸಂಸ್ಕೃತಿಯ ಭಾಗವಾಗಿದ್ದು ಗೋವುಗಳ ರಕ್ಷಣೆ ಮಾಡಬೇಕಾಗಿದ್ದ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನ ಆಡಳಿತ ಮಂಡಳಿ ಭಕ್ತರು ದೇವಸ್ಥಾನಕ್ಕೆ ಹರಕೆ ರೀತಿಯಲ್ಲಿ ಬಿಟ್ಟಿರುವ ಗೋವನ್ನು ರಕ್ಷಣೆ ಮಾಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಗೋವುಗಳು ರೋಗಕ್ಕೆ ತುತ್ತಾಗಿ ಮೇವು ನೀರಿಲ್ಲದೆ ಸಾವನ್ನಪ್ಪುತ್ತಿವೆ
ರೇವಗ್ಗಿ ಗೋ ಶಾಲೆಯಲ್ಲಿ ಸುಮಾರು 300 ಕ್ಕೂ ಅಧಿಕ ಗೋವುಗಳಿದ್ದು, 28 ಎಕರೆ ಸ್ವಂತ ಭೂಮಿ, ಒಂದು ಬಾವಿ, ಎರಡು ಕೊಳವೆ ಬಾವಿ, ಗೋವುಗಳಿಗೆ ಕಟ್ಟಲು ವಿಶಾಲವಾದ ಮೈದಾನ, ಟೀನ್ ಶೆಡ್ ಇದ್ದರೂ ನಿರ್ವಹಣೆಯ ಕೊರತೆಯಿಂದ ಗೋವುಗಳು ಪ್ರತಿದಿನ ಸಂಕಷ್ಟದಲ್ಲಿ ಕಳೆಯುತ್ತಿವೆ.
ಗೋ ಶಾಲೆಯಲ್ಲಿ ಗೋವುಗಳಿಗೆ ಉತ್ತಮವಾದ ಮೇವು ಶೇಖರಿಸದೆ ಜಾನುವಾರು ತಿನ್ನಲು ಯೋಗ್ಯವಲ್ಲದ ತೊಗರಿ ಕಟ್ಟಿಗೆ ಹೊಟ್ಟು, ಎರಡು ಮೂರು ವರ್ಷದ ಹಿಂದಿನ ಕಣಕಿ ಮೇವು ಪ್ರದರ್ಶನಕ್ಕೆ ಇಟ್ಟಂತೆ ಇಟ್ಟಿದ್ದಾರೆ. ಸಾಕಷ್ಟು ನೀರಿನ ಸೌಲಭ್ಯವಿದ್ದರೂ ಗೋ ಶಾಲೆಯ 28 ಎಕರೆ ಜಮೀನನಲ್ಲಿ ಯಾವುದೇ ಮೇವು ಬೆಳೆದಿಲ್ಲ. ಇದರಿಂದ ಮೇವು ಬೆಳೆಯಬೇಕಾದ ಗೋಶಾಲೆ ಭೂಮಿ ಬರುಡು ಭೂಮಿಯಾಗಿ ಮಾರ್ಪಟ್ಟಿದೆ, ಗೋಶಾಲೆಯಲ್ಲಿನ ಗೋವುಗಳನ್ನು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ರೇವಣಸಿದ್ದೇಶ್ವರ ದೇವಸ್ಥಾನ ಅರ್ಚಕರು ಮೇಯಿಸಲು ಹೋದರೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಗೋಪಾಲಕರು ಹೋಗುತ್ತಾರೆ, ಗೋ ಶಾಲೆಗೆ ಬಂದ ಗೋವುಗಳನ್ನು ಟೀನ್ ಶೆಡ್,ನಲ್ಲಿ ಕಟ್ಟದೆ ಬಿಸಿಲಿನಲ್ಲೇ ನಿಲ್ಲಿಸುತ್ತಾರೆ. ಇವುಗಳಿಗೆ ಯಾವುದೇ ಮೇವು, ನೀರು ಕೂಡಾ ಹಾಕುವುದಿಲ್ಲ. ರಾತ್ರಿ ವೇಳೆ ಗೋಶಾಲೆಯಲ್ಲಿ ಯಾರೂ ಇರುವುದಿಲ್ಲ. ಇದರಿಂದ ರಾತ್ರಿ ವೇಳೆ ಅನೇಕ ಬಾರಿ ನಾಯಿಗಳು ಗೋಶಾಲೆಗೆ ನುಗ್ಗಿ ಕರುಗಳನ್ನು ಹರಿದುಕೊಂಡು ತಿಂದಿವೆ. ಗೋಶಾಲೆಯಲ್ಲಿ ಖಾಯಂ ಪಶುವೈದ್ಯ ಇಲ್ಲದಿರುವುದರಿಂದ ಉತ್ತಮವಾದ ಮೇವಿನ ಕೊರತೆಯಿಂದ ರೋಗಕ್ಕೆ ತುತ್ತಾದ ಅನೇಕ ಜಾನುವಾರುಗಳು ಚಿಕಿತ್ಸೆಯಿಲ್ಲದೆ ಪ್ರತಿದಿನ ಎರಡು ಮೂರು ಜಾನುವಾರು ಸಾವನ್ನಪ್ಪುತ್ತಿವೆ. ಸತ್ತ ಜಾನುವಾರುಗಳನ್ನು ಯಾರಾದರೂ ನೋಡುತ್ತಾರೆ ಎಂದು ಬೆಳಿಗ್ಗೆ ಮೇವಿನ ಹೊಟ್ಟಿನಲ್ಲಿ ಮುಚ್ಚಿಟ್ಟು ರಾತ್ರಿ ವೇಳೆ ಗೋಶಾಲೆ ಭೂಮಿಯಲ್ಲಿ ಎಸೆಯುತ್ತಾರೆ. ಇದರಿಂದ ಮೇವಿನಿಂದ ಕೂಡಿರಬೇಕಾದ ಗೋಶಾಲೆಯ ಭೂಮಿ ಎಲ್ಲೆಂದರಲ್ಲಿ ಗೋವುಗಳ ಎಲುಬುಗಳಿಂದ ಕಾಣಿಸಿಕೊಂಡಿದೆ.
ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ವಾರ್ಷಿಕವಾಗಿ ಸುಮಾರು ಎರಡು ಕೊಟಿಗೂ ಅಧಿಕ ಆದಾಯವಿದ್ದರೂ ದೇವಸ್ಥಾನ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಯ ನಿರ್ಲಕ್ಷ್ಯದಿಂದಾಗಿ ಗೋಶಾಲೆ ಜಾನುವಾರುಗಳು ಪ್ರತಿದಿನ ರೋಗದಿಂದ ಸಾವನ್ನಪ್ಪುತ್ತಿವೆ. ಇದರ ಕುರಿತು ಗೋಪಾಲನ ಜಿಲ್ಲಾ ಉಪನಿರ್ದೇಶಕ ಹಾಗೂ ರೇವಣಸಿದ್ದೇಶ್ವರ ದೇವಸ್ಥಾನ ಆಡಳಿತಾಧಿಕಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ
ದೇವಸ್ಥಾನ ಕಾರ್ಯದರ್ಶಿಗೆ ಕೇಳಿದರೆ ನನಗೇನು ಕೇಳ್ತಿಯಾ ಏನ್ ಬೇಕಾದ್ರು ಮಾಡಕೋ ಎಂದು ಬೇಜವಾಬ್ದಾರಿಯಾಗಿ ಹೇಳುತ್ತಾರೆ ಎಂದು ಭೀಮಪುತ್ರಿ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜಕುಮಾರ ಚವ್ಹಾಣ, ಕಮಲಾಪೂರ ತಾಲೂಕಾಧ್ಯಕ್ಷ ಸಿದ್ದು ಕಟ್ಟಿಮನಿ, ರೇವಗ್ಗಿ ಗ್ರಾಮಸ್ಥರಾದ ನಾಗೇಶ ಬಿರಾದಾರ, ಸತೀಶ್ ಹೊಸ್ಸಳ್ಳಿ ಆರೋಪಿಸಿದರು.
*ಎರಡು ವರ್ಷಗಳ ಹಿಂದೆ ರೇವಗ್ಗಿ ಗೋಶಾಲೆಯಲ್ಲಿ 350ಕ್ಕೂ ಅಧಿಕ ಗೋವುಗಳಿದ್ದವು. ಪ್ರತಿ ವರ್ಷ ಸುಮಾರು ಭಕ್ತರು ಹರಕೆ ರೀತಿಯಲ್ಲಿ 50ಕ್ಕೂ ಹೆಚ್ಚು ಗೋವುಗಳು ಬಿಡುತ್ತಾರೆ. ಇಲ್ಲಿವರೆಗೆ ಸುಮಾರು ಗೋಶಾಲೆಯಲ್ಲಿ 450ಕ್ಕೂ ಹೆಚ್ಚು ಗೋವುಗಳಿರಬೇಕು ಆದರೆ 300 ಗೋವುಗಳಿವೆ. ದೇವಸ್ಥಾನ ಕಾರ್ಯದರ್ಶಿಗೆ ಕೇಳಿದರೆ ಯಾವುದೇ ಗೋವು ಸತ್ತಿಲ್ಲ, ಮಾರಾಟ ಮಾಡಿಲ್ಲ ಎನ್ನುತ್ತಾರೆ. ಉಳಿದ ಗೋವು ಎಲ್ಲಿಗೆ ಹೋಗಿದ್ದಾವೆ ಎಂದು ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.
- ಸಿದ್ದು ಕಟ್ಟಿಮನಿ ಗೊಣಗಿ
- ಲಕ್ಷಾಂತರ ಭಕ್ತರನ್ನು ಹೊಂದಿರುವ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನ ವರ್ಷಕ್ಕೆ 2ಕೋಟಿ ಆದಾಯ ಹೊಂದಿದೆ. ಗೋಶಾಲೆ ನಿರ್ವಹಣೆ ಹೆಸರಲ್ಲಿ ಸಾಕಷ್ಟು ಖರ್ಚು ಕೂಡಾ ಹಾಕುತ್ತಾರೆ. ಆದರೆ ಗೋವುಗಳಿಗೆ ಉತ್ತಮವಾದ ಮೇವು, ನೀರು ಕೊಡದೆ ಇರುವುದರಿಂದ ಗೋವುಗಳು ಸಾವನ್ನಪ್ಪುತ್ತಿವೆ.
- ನಾಗೇಶ ಬಿರಾದಾರ ರೇವಗ್ಗಿ. ಭಕ್ತರು ರೇವಣಸಿದ್ದೇಶ್ವರ ದೇವಸ್ಥಾನ
- ರೇವಗ್ಗಿ ರೇವಣಸಿದ್ದೇಶ್ವರ ಗೋಶಾಲೆಯಲ್ಲಿ ಗೋ ಕರುಗಳು ಸಾವನ್ನಪ್ಪುತ್ತಿರುವುದು ನನ್ನ ಗಮನಕ್ಕಿದೆ. ಹಾಲು ಕುಡಿಯುವ ಕರುವನ್ನು ಭಕ್ತರು ಹರಕೆ ರೂಪದಲ್ಲಿ ಬಿಡುವುದರಿಂದ ಮೇವು ತಿನ್ನಲು ಆಗದೆ ಕೆಲ ಕರುಗಳು ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿವೆ. ಆದ್ದರಿಂದ ಕೆಎಮ್ಎಫ್ ನಿಂದ ಕರು ತಿನ್ನಲು ಪೌಷ್ಟಿಕಾಂಶ ಬೀಜಗಳನ್ನು ತರಿಸಲಾಗುತ್ತಿದೆ. ಇನ್ನೂ ಮುಂದೆ ಕರುಗಳು ಸಾವನ್ನೊಪ್ಪದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
- ಪ್ರಭು ರೆಡ್ಡಿ ಆಡಳಿತಾಧಿಕಾರಿಗಳು, ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನ ಸಮಿತಿ ಹಾಗೂ ಸೇಡಂ ಸಹಾಯಕ ಆಯುಕ್ತರು.
ವರದಿ : ಚಂದ್ರಶೇಖರ್ ಆರ್. ಪಾಟೀಲ್
