ಬೀದರ್ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು ಇಲ್ಲಿನ ಸ್ಮಾರಕಗಳು, ಭಕ್ತಿ ಪರಂಪರೆ, ಶರಣರ ವಚನ ಸಾಹಿತ್ಯ, ಜೈನ ನೆಲೆಗಳು, ಸಾಂಸ್ಕೃತಿಕ ಪರಂಪರೆ, ಜಾನಪದ ಸಾಹಿತ್ಯ ಸಂಗೀತ ಮತ್ತು ತತ್ವಪದಕಾರರ ನೆಲೆವೀಡು ಬೀದರ್ ಜಿಲ್ಲೆಯಾಗಿದೆ.
ಬೀದರ್ ಜಿಲ್ಲೆಯಲ್ಲಿ ಜಗದೇವಿತಾಯಿ ಲಿಗಾಡೆಯವರ ಆದಿಯಾಗಿ ಪ್ರೊಫೆಸರ್ ವೀರೇಂದ್ರ ಸಿಂಪಿ, ದೇಶಾಂಶ ಹುಡುಗಿ, ಎಂಜಿ ದೇಶಪಾಂಡೆ, ಪಂಚಾಕ್ಷರಿ ಪುಣ ಶೆಟ್ಟಿ ಹಾಗೂ ತೀರಾ ಇತ್ತೀಚಿನ ಸಾಹಿತಿಗಳಾದ ರುಕ್ಮೊದಿನ ಇಸ್ಲಾಂಪುರ, ಶಿವಕುಮಾರ ಕಟ್ಟೆ, ಸುನಿತಾ ಪಾಟೀಲ, ಡಾಕ್ಟರ್ ಶ್ರೇಯಾ, ಬಸವರಾಜ ದಯಾಸಾಗರ, ಓಂಕಾರ ಪಾಟೀಲ ಮುಂತಾದವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇಯಾದ ಕೊಡಗೆ ನೀಡುತ್ತಿದ್ದಾರೆ. ಅಂತಹ ಸಾಹಿತಿಗಳಲ್ಲಿ ಗುರುತಿಸಿಕೊಳ್ಳುವ ಶಿಕ್ಷಣ, ಸಮಾಜ, ಹಾಗೂ ಧಾರ್ಮಿಕ ಸೇವೆಯನ್ನು ಮಾಡುತ್ತಿರುವ ಪೂಜ್ಯ ಶ್ರೀ ಮಹಾದೇವಿ ತಾಯಿಯವರು.
ಭಾಲ್ಕಿಯ ಡಾ. ಚೆನ್ನಬಸವ ಪಟ್ಟದೇವರಲ್ಲಿ ಜಂಗಮ ದೀಕ್ಷೆ ಪಡೆದ ಇವರು ಹುಮನಾಬಾದ ತಾಲೂಕಿನ ಕಂದಗೂಳ ಗ್ರಾಮದ ಪಾಟೀಲ ಪರಿವಾರದ ತಂದೆ ಶ್ಯಾಮರಾವ, ತಾಯಿ ಭಾಗಿರಥಿ ದಂಪತಿಗಳ ಮಗಳಾಗಿ ಜನವರಿ ೧. ೧. ೧೯೬೫ ರಲ್ಲಿ ಜನಿಸಿದರು.
ಶಿಕ್ಷಣ
ಮಹಾದೇವಿ ತಾಯಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೆಲ ವರುಷ ಸ್ವಗ್ರಾಮ ಕಂದಗೂಳ ಶಾಲೆಯಲ್ಲಿ ಮುಗಿಸಿ ಪಿ. ಯು. ಸಿ. ಪದವಿ ಪೂರ್ವ ಕಾಲೇಜು ಕಮಲನಗರ, ಭಾಲ್ಕಿ ತಾಲೂಕಿನಲ್ಲಿ ಮುಗಿಸಿ ಮುಂದೆ ಸಂಗೀತ ವನ್ನು ಕಲಿಯಬೇಕೆಂಬ ಹಂಬಲ ಹೆಚ್ಚಾಗಿ ಕಲ್ಬುರ್ಗಿಯಲ್ಲಿ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದರು.
ಸಾಮಾಜಿಕ, ಸಾಹಿತ್ಯ, ಮತ್ತು ಧಾರ್ಮಿಕ ಸೇವೆ
ಪ್ರತಿಯೊಬ್ಬರ ಜೀವನದಲ್ಲಿ ಏರುಪೇರುಗಳು ಬಂದೇ ಬರುತ್ತವೆ. ಸಿಹಿ ಕಹಿ ಕಷ್ಟ ಸುಖಗಳಿಂದ ತುಂಬಿದ ಜೀವನವೇ ಪರಿಪಕ್ವ ಜೀವನ. ಸುಖಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಇರುವುದು ನಿಜವಾದ ಒಬ್ಬ ಸಾಧಕ ಮನುಷ್ಯನ ಲಕ್ಷಣ. ಹಾಗಾಗಿ ತಾಯಿ ಮಹಾದೇವಿಯವರು ಕೂಡಾ ತಮ್ಮ ಬದುಕಿನಾನುಭವದಲ್ಲಿ ನೊಂದು ಬೆಂದು ಕಷ್ಟಗಳನ್ನು ಅನುಭವಿಸಿ ಬೆಳೆದವರು, ಕಾರಣ ಹುಟ್ಟಿನಿಂದ ಅವರ ಕಾಲುಗಳು ಸ್ವಾದೀನ ಕಳೆದುಕೊಂಡು ಬಾಲ್ಯದಿಂದಲೆ ಯಾತನೆ ಅನುಭವಿಸಿದವರು ಆದರೆ ಅದನ್ನು ಮೆಟ್ಟಿ ಶರೀರದಿಂದ ವಿಕಲಚೇತನಾರಾದರೂ ಮನವು ವಿಚಲಿತವಾಗದಂತೆ ಧರ್ಮ ಸುಧಾರಣೆ ಸಂಕಲ್ಪ ತೊಟ್ಟರು. ಕಮಲನಗರ ತಾಲೂಕಿನ ಖೇಡ ಸಂಗಮದಲ್ಲಿ ನೀಲಾoಬಿಕಾ ಆಶ್ರಮದ ನೇತ್ರತ್ವ ವಹಿಸಿ ತನ್ಮೂಲಕ ಸಮಾಜದ ಪ್ರಗತಿಗೆ ಕೈ ಜೋಡಿಸಿದರು. ತಮ್ಮ ಸುತ್ತಲಿನ ಗ್ರಾಮಗಳ ಮನೆಮನೆಗೆ ಹೋಗಿ ಬಸವತತ್ವವನ್ನು ಅರುಹಿದರು. ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರದ ಬಗ್ಗೆ ತಮ್ಮ ಪ್ರವಚನಗಳಿಂದ ಜನರಲ್ಲಿ ಜಾಗೃತಿ, ಮೂಡಿಸುವ ಜೊತೆಗೆ ನೈತಿಕ, ಆಧ್ಯಾತ್ಮಿಕ, ಕಾಯಕ ತತ್ವದ ಮಹತ್ವ ದುರ್ಗುಣ ದುಶ್ಚಟಗಳಿಂದ ಆಗುವ ಪರಿಣಾಮ ಕುರಿತು ದಾರಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ತಿದ್ದುವ ಕೆಲಸವನ್ನು ಮಾಡುವ ಜೊತೆಗೆ ಸಂಗೀತ ಶಿಕ್ಷಕಿಯಾಗಿ, ತಮ್ಮ ಬರಹಗಳ ಮೂಲಕ ಸಾಹಿತಿಗಳಾಗಿ ಉತ್ತಮವಾದ, ಭಕ್ತಿಗೀತೆಗಳು, ಭಾವಗೀತೆಗಳು, ಶರಣರ ವಚನಗಳನ್ನು ತಮ್ಮ ಸುಮಧುರವಾದ ಕಂಠದಿಂದ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವರು.
ನಾ ಕಂಡ ಶರಣೆಯರು ( ೩೮ಮಹಿಳಾ ಸಾಧಕಿಯರ ಜೀವನಗಾಥೇ ), ಅಕ್ಕ ಒಲಿದ ಗೀತೆಗಳು (ಭಕ್ತಿ ಮತ್ತು ಅನುಭಾವ ಗೀತೆಗಳ ಕಿರು ಹೊತ್ತಿಗೆ ), ಅನುಭಾವ ಬುತ್ತಿ (೩೦ಅನುಭಾವ ಚಿಂತನೆಗಳ ಸಂಕಲನ),ಮಮತೆಯ ಮಡಿಲು (ನಾಟಕ ಮತ್ತು ರೂಪಕಗಳ ಸಂಕಲನ ), ಹೃದಯ ಗೀತೆಗಳು (೧೧೫ ಭಜನಾಮೃತ ಮತ್ತು ತತ್ವಪದಗಳ ಸಂಕಲನ ), ಶರಣರ ಪರಿಮಳ (೩೪ ಶರಣ ಶರಣೆಯರ ಜೀವನ ಸಾಧನೆಗಳ ಕಥಾಸಂಕಲನ), ತಾಯಿಯ ನೆನಪು, (ಪೂಜ್ಯ ಚಂದ್ರಮ್ಮ ತಾಯಿಯವರ ಜೀವನ ಚರಿತ್ರೆ ), ಬಸವ ಸಂದೇಶ (೧೦೯ಗ್ರಾಮಗಳಲ್ಲಿ ಸಂಚರಿಸಿದ ಅರವಿನಾಳದ ಜ್ಯೋತಿ )ಮುಂತಾದ ೧೫ಕ್ಕೂ ಹೆಚ್ಚು ಕೃತಿಗಳು ಹಾಗು ತಂದೆ ಚೆನ್ನಬಸವ,ಬೆಳ್ಳಿಯ ಬೆಡಗು ಸ್ವರಚೀತ ಹಾಡುಗಳ ಧ್ವನಿಸುರುಳಿಗಳ ಮೂಲಕ ಮಹಾದೇವಿ ತಾಯಿಯವರು ಜನಜನಿತರಾಗಿದ್ದಾರೆ.
ಪೂಜ್ಯ ತಾಯಿಯವರು ಕರ್ನಾಟಕ ರಾಜ್ಯವಲ್ಲದೆ ನೆರೆಯ ಆಂಧ್ರ ಮಹಾರಾಷ್ಟ್ರ ಗಡಿ ಭಾಗದ ಹಳ್ಳಿಗಳಲ್ಲಿ ಸಂಚರಿಸಿ ಶರಣ ತತ್ವ, ಲಿಂಗತತ್ವ, ಸಂದೇಶ ಹೆಣ್ಣುಮಕ್ಕಳಲ್ಲಿ ಶಿಕ್ಷಣ ಮಹತ್ವ, ಸಮಾನತೆ ಕುರಿತು ಸಮ ಸಮಾಜ ನಿರ್ಮಾಣ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿರುವ ಜೊತೆಗೆ ಜಾನಪದ ಸೊಗಡಿನ ಗೀತೆಗಳು, ಕೋಲಾಟ, ಬಯಲಾಟ, ನಾಟಕ, ರೂಪಕಗಳಂತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರುವ ಇವರು ಅಪಾರ ಭಕ್ತರ ಪ್ರೀತಿಗೆ ಪಾತ್ರರಾಗಿರುವರು.
ಪ್ರಶಸ್ತಿ ಮತ್ತು ಗೌರವ ಪುರಸ್ಕಾರ
ಪೂಜ್ಯ ತಾಯಿಯವರ ಧಾರ್ಮಿಕ, ಶೈಕ್ಷಣಿಕ, ಮತ್ತು ಅಧ್ಯಾತ್ಮಿಕ ಅವಿರತ ಸೇವೆಗಾಗಿ ಇವರಿಗೆ ವಿವಿಧ ಸಂಘ ಸಂಸ್ಥೆಗಳು ಪುರಸ್ಕಾರ ನೀಡಿ ಗೌರವಿಸಿವೆ.
೧)ಸರ್ವಾಧ್ಯಕ್ಷರು : ಮಹಿಳಾ ವೇದಿಕೆ – ಭಾಲ್ಕಿ
೨)ಸರ್ವಾಧ್ಯಕ್ಷರು : ಜಾನಪದ ಸಮ್ಮೇಳನ – ಔರಾದ
ಪ್ರಶಸ್ತಿಗಳು
೧)ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ೨೦೧೮ರ ಸಾಲಿನ ಗೌರವ ಪ್ರಶಸ್ತಿ
೨)ಅಕ್ಕಮಹಾದೇವಿ ಪ್ರಶಸ್ತಿ
೩)ಚೆನ್ನಬಸವ ಪ್ರಶಸ್ತಿ,
೪)ವಿಶ್ವಗುರು ಬಸವಣ್ಣನವರ ಪ್ರಶಸ್ತಿ ಸೇರಿದಂತೆ ಪೂಜ್ಯ ನಾಡೋಜ ಬಸವಲಿಂಗ ಪಟ್ಟದೇವರ ಆಶಯದಂತೆ ರಘುಶಂಖ ಭಾತಂಬ್ರ ಇವರ ಸಂಪಾದಕತ್ವದಲ್ಲಿ ೫೫೦ ಪುಟಗಳ ಮಹಾದೇವಿ ಅನ್ನುವ ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಗೌರವಿಸಿ ಪೂಜ್ಯ ತಾಯಿಯವರ ಗರಿಮೆಯನ್ನು ಹೆಚ್ಚಿಸಿರುವುದು ಅದು ಕೇವಲ ಅವರಿಗೆ ಸಿಕ್ಕ ಗೌರವವಾಗದೆ ಇಡೀ ಮಹಿಳಾ ಸಮಾಜದ ಗೌರವವನ್ನು ಹೆಚ್ಚಿಸಿದ್ದು ಇಡೀ ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಮಾತೃ ಹೃದಯ ಕರುಣಾಮೂರ್ತಿಯವರಾದ ಮಹದೇವಮ್ಮ ತಾಯಿಯವರು ತಾವು ನಂಬಿದ ಸಿದ್ಧಾಂತ, ಬಸವಾದಿ ಶರಣರ ವಿಚಾರಧಾರೆಗಳನ್ನು ತಮ್ಮ ಬದುಕಿನುದ್ದಕ್ಕೂ ಚಾಚು ತಪ್ಪದೆ ಪಾಲಿಸಿಕೊಂಡ ಬಂದ ಪೂಜ್ಯ ತಾಯಿಯವರ ಸೇವೆ ಹೀಗೆ ಮುಂದುವರೆಯಲೆಂದು ಗುರು ಬಸವಣ್ಣನವರಲ್ಲಿ ಪ್ರಾರ್ಥಿಸಿ ತಾಯಿಯವರ ಪಾದಕ್ಕೆ ಈ ನನ್ನ ಲೇಖನ ಸಮರ್ಪಣೆ ಮಾಡುತ್ತೇನೆ.
- ಓಂಕಾರ ಪಾಟೀಲ
ಕಾರ್ಯದರ್ಶಿಗಳು – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್, ಮೊ :೬೩೬೦೪೧೩೯೩೩
