ಬದುಕಲು ಕಲಿಸು ಗುರುದೇವ ನಿನ್ನಂತೆ
ರಾಗ ದ್ವೇಷಕೆ ಸಿಲುಕದೆ
ಭೋಗ ಭಾಗ್ಯವ ಬಯಸದೆ
ಕಾಮ ಕ್ರೋಧಕೆ ಸಿಲುಕದೆ
ಲೋಭ ಮೋಹಕೆ ಮನಸೋಲದೆ
ಮಧ ಮತ್ಸರಗಳಿಗೆ ಮಣಿಯದೆ
ಶಾಂತಿ ಸಹನೆಯಿಂದ ಬದುಕಲು
ಕಲಿಸು ಗುರುದೇವ ನಿನ್ನಂತೆ
ಆವ ಜಾತಿ ಮತ ಪಂಥಗಳಿಗಂಟದೆ
ದೇವರನು ಜಡದಲ್ಲಿ ಹುಡುಕದೆ
ಭಾವ ಶುದ್ಧವಿರದೆ ಕಾಯಕವ ಮಾಡದೆ
ಜೀವ ಜಂತುಗಳಲ್ಲಿ ಬೇಧವನು ತೋರದೆ
ಸೇವೆಯಲಿ ಸ್ವಾರ್ಥವನು ಬೆರೆಸದೆ
ಸ್ವಚ್ಚ ಸುಂದರವಾಗಿ ಬದುಕಲು
ಕಲಿಸು ಗುರುದೇವ ನಿನ್ನಂತೆ
ಹಿರಿದು ಕಿರಿದೆಂಬ ತಾರತಮ್ಯವಿಲ್ಲದೆ
ಮೇಲು ಕೀಳು ಎಂಬ ಸಂಕಲ್ಪ ಬಾರದೆ
ಬಡವ ಬಲ್ಲಿದನೆಂಬ ಒಲವು ಸುಳಿಯದೆ
ಹೆಣ್ಣು ಗಂಡೆಂದು ಎರಡನೆಣೆಸದೆ
ಪಂಡಿತ ಪಾಮರನೆಂಬ ಪದರು ಕಾಣದೆ
ಸಮ ಚಿತ್ತದಿಂದ ಬದುಕಲು
ಕಲಿಸು ಗುರುದೇವ ನಿನ್ನಂತೆ
ಮಸಣ ಮಂದಿರ ಶ್ರೇಷ್ಠ ಕನಿಷ್ಠಗಳ ನೆಚ್ಚದೆ
ರಾಹು ಗುಳಿ ಶುಭ ಅಶುಭ ಕಾಲವನರಿಯದೆ
ಪೂರ್ವ ಪಶ್ಚಿಮ ಸ್ವರ್ಗ ನರಕಗಳ ಪರಿವಿರದೆ
ಆರ್ಯ ದ್ರಾವಿಡ ಮೂಲ ವಲಸಿಗರು ಎಂದು ಹೆಸರಿಡದೆ
ಭಾಷೆ ವೇಷ ಗಡಿ ದೇಶಗಳಿಗೆ ನಿಲುಕದೆ
ಮಾನವ ಕುಲ ಒದೆಂದು ಬದುಕಲು
ಕಲಿಸು ಗುರುದೇವ ನಿನ್ನಂತೆ
ಶಿವಪುತ್ರ ಜಿ. ನೆಲ್ಲಗಿ
ಕವಿಗಳು ಜೇವರ್ಗಿ.
ವರದಿ: ಚಂದ್ರಶೇಖರ ಎಸ್ ಪಾಟೀಲ್