16.04.2025 ಜಾತ್ರಾ ನಿಮಿತ್ಯ ಲೇಖನ
ಪ್ರತಿಯೊಂದು ಗ್ರಾಮವು ತನ್ನದೇ ಆದ ಗ್ರಾಮದ ಆರಾಧ್ಯದೈವ, ದೇವರನ್ನು ಹೊಂದಿರುವುದು ವಾಡಿಕೆ. ಅದರ ಮೂಲಕವೇ ಉತ್ಸವ, ಜಾತ್ರೆಗಳನ್ನು ಹಮ್ಮಿಕೊಂಡು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಾರೆ.” ಜಾತ್ರೆ” ಅಂದರೆ ಕೇವಲ ತೊಟ್ಟಿಲು ತೂಗುವುದು, ಗೊಂಬೆ ಮಾರಾಟ ಮಾಡುವುದು, ಬಲೂನ್ ಮಾರಾಟ ಮಾಡುವುದು, ರಥೋತ್ಸವಕ್ಕೆ ಕಬ್ಬು, ಕಾರಿಕಾಯಿ, ಚುರುಮರಿ ಹಾರಿಸುವುದು, ಜೈ ಜೈ ಕಾರ ಮಾಡುವುದು, ಮೈಯಲ್ಲಿ ದೆವ್ವ ಬಂದವರಂತೆ ಹಾರಾಡುವುದು ಅಲ್ಲ !
ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಜನಗಳು ಸೇರಿ ಒಂದಾಗಿ, ಚೆಂದಾಗಿ, ಜಾತಿ, ಧರ್ಮ, ಮತ-ಪಂಥಗಳ ಗೋಡೆ ಕೆಡವಿ, ನಾವೆಲ್ಲರೂ ಒಂದು ಎಂಬ ಭಾವದಿಂದ ಶ್ರೀಮಂತ-ಬಡವ ಭೇದ ಭಾವ ಕಳಚಿ ಹಾಕಿ,ರಾಜಕೀಯ ಸೋಂಕಿನ ಹಮ್ಮು- ಬಿಮ್ಮುಗಳನ್ನು ತೊಡೆದು ಹಾಕಿ ” ಮಾನವ ಕುಲಂ ತಾನೊಂದೆ ವಲಂ ” ಎಂದು ಆದಿ ಕವಿ ಪಂಪ ಹೇಳಿದಂತೆ ಮನುಕುವೆಲ್ಲವೂ ಒಂದೆ ಎಂಬ ಸಮತಾ ಸಮಾಜವನ್ನು ನಿರ್ಮಾಣ ಮಾಡುವುದು, ಸಹೋದರತೆ ,ಜನರಲ್ಲಿ ಸಾಮರಸ್ಯ ಉಂಟು ಮಾಡುವುದು ಹಾಗೂ ಗ್ರಾಮೀಣ ಜನರಿಗೆ ಮನರಂಜನೆಯನ್ನು ನೀಡುವುದು ಕೂಡಾ ಇದರ ಉದ್ದೇಶಗಳಲ್ಲಿ ಒಂದು ಪ್ರತಿ ವರ್ಷ ಬೀಗರು, ಬಂಧು- ಬಾಂಧವರು ಮನೆತುಂಬಾ ಸೇರಿಕೊಂಡು ತಮ್ಮ ತಮ್ಮ ಸಂಬಂಧಗಳನ್ನು ರೀಚಾರ್ಜ್ ಮಾಡಿಕೊಂಡು ಹಳೆಯ ನೆನೆಪುಗಳ ಮೆರವಣಿಗೆಯ ಜೊತೆಗೆ ಹೊಸ ಕನಸುಗಳನ್ನು ಹೊಸೆಯುವ ಕಾರ್ಯದಲ್ಲಿ ತೊಡಗಿಕೊಂಡು ಸಂಭ್ರಮಿಸುವುದಾಗಿದೆ.
ಹೀಗೆಯೇ ಇದಕ್ಕೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ನಿಡಸನೂರು ಪವಾಡ ಪುರುಷ , ಆರಾಧ್ಯದೈವ ಶ್ರೀ ಗಂಗಾಧರೇಶ್ವರ ಜಾತ್ರೆಯು ಹೊರತಾಗಿಲ್ಲ !
ಈ ವರ್ಷ ನಿಡಸನೂರು ಶ್ರೀ ಗಂಗಾಧರೇಶ್ವರ ಜಾತ್ರೆಗೆ ದಶಮಾನೋನೋತ್ಸವ ಸಂಭ್ರಮ ಗ್ರಾಮದ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ಮನೆಮಾಡಿದೆ.
ಎಪ್ರಿಲ್ ೧೬ ರಂದು ೨೦೨೫ ರಂದು ಶ್ರೀ ಗಂಗಾಧರೇಶ್ವರ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಕಳಸಾರೋಹಣ, ಧರ್ಮಸಭೆ, ಸಾಯಂಕಾಲ ೬.೩೦ ಗಂಟೆಗೆ ಮಹಾರಥೋತ್ಸವ ಜರುಗುವುದು.
ಸತೂರಮರಿ, ತಾರಿವಾಳ, ಮಲಗಿಹಾಳ, ಬೂದಿಹಾಳ (SK) ಬೆನಕನಡೋಣಿ, ಹೆಮ್ಮವಾಡಗಿ, ಕರಡಿ, ಗೊರೇಬಾಳ, ಚಟ್ನಿಹಾಳ, ಜಂಬಲದಿನ್ನಿ, ಪಾಲತಿ, ಕೊಣ್ಣೂರು ಮುಂತಾದ ಗ್ರಾಮದ ಸದ್ಭಕ್ತರು ರಥವನ್ನು ಎಳೆಯಲು ಹಗ್ಗ, ಬಾಳೆದಿಂಡು, ಕಳಸ, ರುದ್ರಾಕ್ಷಿ ಸರ, ಇತರೆ ರಥದ ಸೃಂಗಾರಕ್ಕೆ ವಿವಿಧ ಗ್ರಾಮಗಳ ಸದ್ಭಕ್ತರು ಕಾತರರಾಗಿದ್ದಾರೆ.
ಹಿನ್ನಲೆ :
ಈ ಮೊದಲು “ನಿಡಸನೂರು” ಹುನಗುಂದ ತಾಲೂಕಿನ ಅಲಕ್ಷಿತ ಗ್ರಾಮ. ಇವತ್ತು ಆರ್ಥಿಕ,ಸಾಮಾಜಿಕ, ಧಾರ್ಮಿಕ,ರಾಜಕೀಯವಾಗಿ ಗುರುತಿಸಿಕೊಂಡ ಗ್ರಾಮ.
ಆರ್ಥಿಕ ವ್ಯವಸ್ಥೆಯಲ್ಲಿ ಹುನಗುಂದ ತಾಲೂಕಿನಲ್ಲಿಯೇ ಶ್ರೀಮಂತ ಹಳ್ಳಿ, ಇದು ಹುನಗುಂದ ತಾಲೂಕಿನ “ವ್ಯಾಟಿಕನ್ “ಸಿಟಿ ಅಂದರೂ ತಪ್ಪಲ್ಲ ! ಆರ್ಥಿಕವಾಗಿ ಹಿಂದುಳಿದವರು ಇರುವುದು ಕೈ ಬೆರಳಿನಷ್ಟು ಮಾತ್ರ.!
ಶ್ರೀ ಗಂಗಾಧರೇಶ್ವರಕ್ಕೆಹೇಳಿಕೊಳ್ಳುವಂತ ದೇವಸ್ವಥಾನ ವಿರಲಿಲ್ಲ. ಮಣ್ಣಿನ ಹೆಂಟೆಯ ಮಾರುದ್ದ ಅಗಲದ ಗೋಡೆಗಳಿದ್ದವು. ಕಳಸವಂತೂ ಇರಲಿಲ್ಲ. ಆದರೆ ಶ್ರೀ ಗಂಗಾಧರೇಶ್ವರ ಸ್ಥಾನ ಜಾಗೃತ ಮಠ. ನಾಡಿನ ತುಂಬಾ ಭಕ್ತರನ್ನು ಹೊಂದಿದೆ. ಈ ಮಠಕ್ಕೆ ಯಾರು ಭಕ್ತಿ,ನಂಬಿಕೆ,ಶ್ರದ್ಧೆಯಿಂದ ನಡೆದುಕೊಂಡವರಿಗೆ ಅವರ ಸಂಕಲ್ಪ ಫಲ ದೊರಕಿದೆ ಎಂದು ಭಕ್ತರು ಶ್ರೀ ಗಂಗಾಧರೇಶ್ವರರನ್ನು ಸ್ಮರಿಸುತ್ತಾರೆ.
ಇಂಥ ಜಾಗೃತ ದೇವಸ್ಥಾನದ ಗರ್ಭ ಗುಡಿಗೆ ಕಳಸವಿಲ್ಲದೆ ಇತ್ತು. ಅದಕ್ಕೆ ಹಲವಾರು ಕಟ್ಟುಕತೆಗಳನ್ನು ಹುಟ್ಟುಹಾಕಿದ್ದರು. ಶ್ರೀ ಗಂಗಾಧರೇಶ್ವರರು ಸನ್ಯಾಸಿ ಮಠಕ್ಕೆ ಕಳಸ ಏರಿಸಬಾರದು ಎಂಬ ನಂಬಿಕೆ ಜನರ ಬಾಯಿಂದ ಬಾಯಿಗೆ ಹರಿದು ಬಂದಿತ್ತು. ಹಲವು ದಶಕಗಳವರೆಗೆ ಕಳಸವೇ ಇರಲಿಲ್ಲ ಎಂಬುದು ಸೋಜಿಗದ ಸಂಗತಿ.!
ಕಾಲ ಬದಲಾದಂತೆ ವಿಚಾರಗಳು, ಚಿಂತನೆಗಳು, ಆಲೋಚನೆಗಳು ಬದಲಾದವು ಅಂದು ರಾಜಕೀಯದಲ್ಲಿ ಚಲಾವಣೆಯಲ್ಲಿದ್ದ ಶಿವಶಂಕರಪ್ಪ ಆರ್.ಕಾಶಪ್ಪನವರ ಟಿಡಿಬಿ ಪ್ರೆಸಿಡೆಂಟ್ ಆಗಿದ್ದ ಕಾಲದಲ್ಲಿ ೧೯೯೦ ಮಠದ ಜೀಣೋದ್ದಾರ ಕಾರ್ಯಕ್ಕೆ ಹಣ ಮಂಜೂರಾಯಿತು. ಶ್ರೀ ದೊಡ್ಡಲಿಂಗಪ್ಪನವರು ಅವರು ಹಣ ಬಿಡುಗಡೆ ಮಾಡಿದರು ಬಳಿಕ ಸರ್ಕಾರದ ಸಹಾಯವಿಲ್ಲದೆ ದೇವಸ್ಥಾನ ನಿರ್ಮಾಣವನ್ನು ಭಕ್ತರೇ ಮಾಡಿದ್ದು ಹತ್ತಾರು ಗ್ರಾಮಗಳಲ್ಲಿ ನಿಡಸನೂರು ಮಾದರಿ ಕೆಲಸವಾಗಿದೆ.
ಕಳಸವಿಲ್ಲದ ದೇವಸ್ಥಾನ ಕಳಸ ಏರಿಸಬೇಕು ಎಂಬ ಸಂಕಲ್ಪ ಭಕ್ತರ ಮನಸ್ಸಿಲ್ಲಿತ್ತು. ಅವರ ಸಂಕಲ್ಪವನ್ನು ಬಿಜಾಪುರದ ಇಂಜಿನಿಯರ ಅವರು ಮಠದ ಪರಮಭಕ್ತರು, ಅವರು ದೇವಸ್ಥಾನಕ್ಕೆ ಕಳಸ ಕೊಡಿಸಿದರು. ೨೬ ಡಿಸೆಂಬರ್ ೧೯೯೪ ರಲ್ಕಿ ಚಳಗೇರಿ ಶ್ರೀ ಗಳ ಸಾನಿಧ್ಯದಲ್ಲಿ ಕಳಾಸಾರೋಹಣ ಆರಂಭವಾಯಿತು. ಅಂದಿನಿಂದ ಗ್ರಾಮದಲ್ಲಿಯ ಜನರ ಆರ್ಥಿಕ ಸ್ಥಿತಿ-ಗತಿಗಳೇ ಬದಲಾದವು, ಮನೆ ಮನೆಯಲ್ಲಿ ಸಾಕ್ಷರತಾ ಪ್ರಜ್ಞೆ ಬೆಳೆಯಿತು. ಕೃಷಿ ಕ್ಷೇತ್ರಗಳಲ್ಲಿ ತೀವ್ರವಾಗಿ ಬದಲಾವಣೆ ಕಂಡುಬಂದವು ಇದರಿಂದ ಜನರು ನೆಮ್ಮದಿ,ಶಾಂತಿ.ಹಸಿವಿನಿಂದ ಮುಕ್ತಿ ಪಡೆದರು.
ಹತ್ತು ವರ್ಷಗಳ ಹಿಂದೆ ಕರಡಿಯ ಶ್ರೀ ನವಲಿ ಹಿರೇಮಠ ಅವರು ನಿಡಸನೂರು ಶ್ರೀ ಗಂಗಾಧರೇಶ್ವರ ದೇವಸ್ಥಾನಕ್ಕೆ ರಥ ಮಾಡಿಸಿಕೊಳ್ಳಲು ಆರ್ಥಿಕ ಸಹಾಯ ಮಾಡಿದರು. ಈಗ ಒಂಬತ್ತು ವರ್ಷಗಳು ಗತಿಸಿ, ಈ ವರ್ಷ ದಶಮಾನೋತ್ಸವದ ಸಂಭ್ರಮ ಮನೆಮನೆಗಳಲ್ಲಿ ಮನೆ ಮಾಡಿದೆ. ಭಕ್ತರು ತಾವೇ ಮಠಕ್ಕೆ ಬಂದು ತಮ್ಮಲ್ಲಿರುವ ಭಕ್ತಿಕಾಣಿಕೆ ಸಮರ್ಪಣೆ ಮಾಡುತ್ತಿದ್ದಾರೆ. ೧೬ ಎಪ್ರಿಲ್ ಮುಂಜಾನೆ ಶ್ರೀ ಗಂಗಾಧರೇಶ್ವರ ಮೂರ್ತಿ ಹಾಗೂ ಕಳಸಗಳ ಗಂಗಾಸ್ನಾನ ಪೂಜೆ ಮಾಡಿ,ಮಹಿಳೆಯರು ಆರತಿ,ಕಳಸದೊಂದಿಗೆ ಮೆರವಣಿಗೆಯ ಮೂಲಕ ಗುಡಿಗೆ ಕರೆತರಲಾಗುವುದು. ಮಧ್ಯಾಹ್ನ ಧರ್ಮಸಭೆ,ಅನ್ನ ಪ್ರಸಾದ ವಿತರಣೆ ಸಂಜೆ ರಥೋತ್ಸವ ಭಕ್ತಿ ಭಾವದೊಂದಿಗೆ ಭಕ್ತರ ಹರ್ಷೋಧ್ಘಾರ ದೊಂದಿಗೆ, ವಿವಿಧ ಮಂಗಳ ವಾದ್ಯಮೇಳಗಳ ಮೆರವಣಿಗೆಯ ಮೂಲಕ ರಥೋತ್ಸವ ಜರುಗುವುದು.
ಹೀಗೆ ಭಾರತೀಯ ಧಾರ್ಮಿಕ ಪರಂಪರೆಯು
ಗ್ರಾಮೀಣ ಪ್ರದೇಶಗಳಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸುತ್ತೀರುವುದು ಮನಸ್ಸಿನಲ್ಲಿ ಭಕ್ತಿಯ ರಸವನ್ನು ಜಂಗಮಶೀಲಗೊಳಿಸುವುದು.ಎಂದರೆ ತಪ್ಪಾಗಲಾರದು.
- ಗಂಗಾಧರ ಅವಟೇರ, ಅಧ್ಯಾಪಕರು,
ಶ್ರೀ ಮಹೇಶ್ವರ ಪ.ಪೂ.ಕಾಲೇಜು ಇಟಗಿ.
9449416279
