ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿ
ಕವನ ಸಂಕಲನ
ಕವಿ: ಶ್ರೀ ಕೊಟ್ರೇಶ ಜವಳಿ, ಪ್ರಕಟವಾದ ವರ್ಷ. ೨೦೨೪.
ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ.
“ಸತ್ವ ಪೂರ್ಣ, ಮತ್ತು ಅರ್ಥ ಪೂರ್ಣ ಕವನಗಳ ಗುಚ್ಛ – ಕಾವ್ಯ ಕಲ್ಪ ವಲ್ಲರಿ”.
ಕೊಟ್ರೇಶ ಜವಳಿ, ಕೃಷಿ ಕುಟುಂಬದಿಂದ
ಹೊರಹೊಮ್ಮಿದ , ಗ್ರಾಮೀಣ ಪ್ರತಿಭೆ. ಮೂಲತಃ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದವರು.
ಓದಿದ್ದು,ಬಹಳ ಕಡಿಮೆಯಾದರೂ, ಸಾಹಿತ್ಯದ ಬಗ್ಗೆ , ಅಪಾರ ಆಸಕ್ತಿ,ಹೊಂದಿ ತಾನೂ ಏಕೆ ಬರೆಯಬಾರದು, ಎಂದುಕೊಂಡು, ಬರವಣಿಗೆ ಆರಂಭಿಸಿದ ಜವಳಿಯವರು ವಾಟ್ಸಪ್ ಮೂಲಕವೇ,ನನಗೆ ಪರಿಚಯವಾಗಿದ್ದು,ಅವರು ಸಾಕಷ್ಟು, ಚುಟುಕು, ಹಾಯ್ಕು, ಟಂಕಾಗಳನ್ನು ಬರೆದಿರುವರು, ಆದರೆ ಇತ್ತೀಚೆಗೆ ಅವರೇ ಬರೆದಿರುವ ಕವನಗಳು “ಕಾವ್ಯ ಕಲ್ಪ ವಲ್ಲರಿ” ಯಾಗಿ ಕಾವ್ಯ ಧಾರೆಯಾಗಿ ಹರಿಯುತಿದೆ. ಇದು ಕೊಟ್ರೇಶ ಜವಳಿ ಅವರ ಪ್ರಥಮ ಕವನ ಸಂಕಲನವಾಗಿದ್ದರೂ, ಸಂಂಕಲನದ ಹಲವು ಕವಿತೆಗಳು ಶಕ್ತಿಯುತ, ಮತ್ತು
ಅರ್ಥ ಗರ್ಭಿತವಾಗಿರುವುದರಿಂದ, ಗಮನಾರ್ಹ ಕವನ ಸಂಕಲನ, ಆಗಿ ಸಹೃದಯಿ ಓದುಗರ ಮೆಚ್ಚುಗೆಗೆ ಪಾತ್ರವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.
ಕಾವ್ಯ ಕಲ್ಪವಲ್ಲರಿಯು ಅರವತ್ತು ಕವನಗಳನ್ನು ಒಳಗೊಂಡ, ಕವನ ಸಂಕಲನವಾಗಿದ್ದು, ಸಂಕಲನದ ಬಹುತೇಕ ಕವನಗಳು,ವಿಷಯ ವೈವಿಧ್ಯತೆಯಿಂದ ಕೂಡಿವೆ. ಪುಸ್ತಕದ ಅವಲೋಕನ, ಮಾಡುವ ಪ್ರಯತ್ನ ನನ್ನದು.
“ಕಾವ್ಯ ಕಲ್ಪ ವಲ್ಲರಿ ” ಯು ಆರಂಭವಾಗುವುದು,
“ಮಂಗಲ ಮೂರುತಿ”ಎಂಬ ಶಿರ್ಷಿಕೆಯ ಮಣಿಕಂಠನ ಮಹಿಮೆಯನ್ನು ಸಾರುವ ಕವನವಾಗಿದೆ.
ಎಳ್ಳು ಬೆಲ್ಲ ಸವಿದು, ಒಳ್ಳೆಯ ಮಾತುಗಳನ್ನಾಡಿ, ಭೂ ತಾಯಿಯ ಸೇವೆ ಮಾಡಿ, ನೆಮ್ಮದಿಯ ಬದುಕು ಬದುಕೋಣ ಎನ್ನುತ್ತಾರೆ, ‘ಸಂಕ್ರಾಂತಿ ‘ ಕವನದಲ್ಲಿ.
ಮುರುಕು ಜಯಂತಿ, ಎನ್ನುವ ಕವನದಲ್ಲಿ,
” ಆರು ಮೂರರ ಮುರುಕು ಜಂತಿ, ಬಹಳ ಮುರುಕಾ ಮಾಡತ್ತೈತಿ, ಎಲ್ಲಾ ನಂದೇ
ಅನತೈತಿ,ನನ್ನಿಂದಲೇ ಅನ್ನೋ
ಅಹಂ ಐತಿ,
ಎಂದು ಹೇಳುವ ಈ ಕವನವು ಮನುಷ್ಯನಲ್ಲಿರುವ ಸ್ವಾರ್ಥ, ಮತ್ತು ಅಹಂಕಾರ ಗುಣಗಳನ್ನು ನೈಜವಾಗಿ ಚಿತ್ರಿಸಿದೆ.
ಮನುಷ್ಯ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅಂಶಗಳನ್ನು , “ಬೆಳೆಯಬೇಕು ತೆಂಗಿನಂತೆ, ಬಾಗಬೇಕು ಬಳ್ಳಿಯಂತೆ.” ಕವನದಲ್ಲಿ ತುಂಬಾ ಸಹಜವಾಗಿ, ಚಿತ್ರಿಸಿದ್ದಾರೆ. ಆ ಕವನದ ಸಾಲುಗಳು ಗಮನಿಸಿದಾಗ,
” ಬೆಳೆಯಬೇಕು ತೆಂಗಿನಂತೆ
ಬಾಗಬೇಕು ಬಳ್ಳಿಯಂತೆ
ಹಾರಬೇಕು ಹಕ್ಕಿಯಂತೆ
ಮಧು ಹೀಗಿರಬೇಕು ದುಂಬಿಯಂತೆ,…..
ಮುಂದುವರಿದು ಹೇಳುವ ಕವಿಯ ಸಾಲುಗಳು ಸರಳತೆಯಿಂದಾಗಿ, ಗಮನಾರ್ಹವೆನಿಸುತ್ತವೆ.
ಯಾರಿಗುಂಟು ಯಾರಿಗಿಲ್ಲ
ಭವದ ನಂಟು,ನೋವು,ಮರೆತು ನೋವು,ಬೆರೆತು ನೋಡು,
ಅಂತ್ಯವಿಹುದು ನಾಳೆಗೆ,
ಅರಸ ಬೇಡ ಬಾಹ್ಯ ಸುಖವ,
ಒಳಗೆ ಇರುವುದು ಸಂತಸ,
ಬಿಚ್ಚಿ ನೋಡು ಮನದ ಬುತ್ತಿ
ಹಂಚಿ ತಿನ್ನು ಈಗಲೇ” ಎಂದು ಹೇಳಿರುವ ಈ ಕವನದಲ್ಲಿ ಜೀವನ ದರ್ಶನದ ಸಂದೇಶವಿದೆ.
ವರಕವಿ ಬೇಂದ್ರೆ ಯವರ
ಸಾಹಿತ್ಯ ವನ್ನು ಆಸ್ವಾದಿಸುವ ನೆಪದಲ್ಲಿ ಅವರನ್ನು ಸ್ಮರಿಸಿ, ಬೇಂದ್ರೆ ಮುತ್ಯಾ,ಎಂಬ ಕವನ ಬರೆದಿದ್ದಾರೆ.
‘ಅರಿತು ನಡೆ,’ ಎನ್ನುವ ಕವನದಲ್ಲಿ ಪರರಿಗೆ ಪೀಡಕನಾಗಿ ಬಾಳಬೇಡ,
ಅರಿತು ನಡೆದರೆ ನೀ ನಿಜ ಮಾನವನಾಗುತ್ತೀ, ಎನ್ನುತ್ತಾರೆ.
ಇಲ್ಲಿ ಆಧ್ಯಾತ್ಮದ ಸುಳಿವು ನೀಡಿದ್ದಾರೆ.
ನಾನು ಪುಸ್ತಕ ಅವಲೋಕನ ಮಾಡುವ ಆರಂಭ ದಲ್ಲಿ ಹೇಳಿದಂಂತೆ, ಈ ಕವನ ಸಂಕಲನದ ಅನೇಕ ಕವನಗಳು, ವಿಷಯ ವೈವಿಧ್ಯತೆಯಿಂದ ಕೂಡಿವೆ,ಅಂತಹ ಕೆಲವು ಕವನಗಳನ್ನು ಹೆಸರಿಸುವುದಾದರೆ, ‘ಮುಗ್ಧ ಭಾವ, ಬಾಳೆಂಬ ಕಡಲು,ಜೀವಜಲ, ಭವದ ಸಂತೆ, ನಾ ಬರಬಾರದಿತ್ತು,
ಬದುಕೊಂದು ಬಂಡಿ,ಕನಕ, ಪರಿವರ್ತನೆ, ನನ್ನವ್ವ, ಭವದ ಅಗುಳಿ, ಹೀಗೆ ಅನೇಕ ಕವನಗಳಲ್ಲಿ,ಜೀವನ ಅಂದರೆ ಏನು?,ಜೀವನದಲ್ಲಿ ಯಾವೆಲ್ಲಾ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಯಾವೆಲ್ಲಾ ದುರ್ಗುಣಗಳನ್ನು ಬಿಡಬೇಕು, ಎನ್ನುವ ಸಂದೇಶವನ್ನು ,ಕವನಗಳ ಮೂಲಕ ಸಾರಿದ್ದಾರೆ.
ಕವನಸಂಕಲನದ ಕೆಲವು ಕವನಗಳು ಓದುಗರನ್ನು ಸೆಳೆಯವಲ್ಲಿ ಯಶಸ್ವಿಯಾಗಿವೆ ಎನ್ನಬಹುದು. ಅಂತಹ ಕೆಲವು ಕವನಗಳನ್ನು ನೊಡುವುದಾದರೆ, ಸಂಗಾತಿ, ಚಟದ ದಾಸಯ್ಯ,ಪರೀಕ್ಷೆ, ಯುರೇಕಾ, ಕೋಳಿ ಕತ್ತು, ಗೋಡೆ, ಸಾಲ ಶೂಲ, ಮೊದಲಾದ ಕವನಗಳು, ಸತ್ವಪೂರ್ಣ ಕವನಗಳಾಗಿ ಹೊರಹೊಮ್ಮಿವೆ.
ಇನ್ನು ಪ್ರೀತಿ ಪ್ರೇಮ,ಪ್ರಣಯ ಕುರಿತು ಬರೆದ ಕವನಗಳು,ಕವಿ ರಸಿಕನಾಗಿರುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿ, ‘ಅನುರಾಗದ ಕರೆಯೋಲೆ, ದ್ರೌಪದಿ, ಸಂಗಾತಿ, ಮಮತೆಯ ಉಸಿರು, ಒಲವೇ ಜೀವನ, ಅನುರಾಗದಂತಹ ಕವನಗಳಲ್ಲಿ, ಪ್ರಣಯದ ಮಧುರ ಭಾವನೆಗಳನ್ನು ಸುಂದರವಾಗಿ
ಅಭಿವ್ಯಕ್ತಿಸಿದ್ದಾರೆ.
ಕಾವ್ಯ ಕಲ್ಪವಲ್ಲರಿಯಲ್ಲಿ
ವ್ಯಕ್ತಿ ಗುಣಗಾನದ ಕೆಲವು ಕವನಗಳೂ ಸೇರಿವೆ, ಅವುಗಳೆಂದರೆ,
ಪುಟ್ಟ ರಾಜರು, ನಡೆದಾಡುವ ದೇವರು, ಕನಕದಾಸರು,ಕಲಾವಿದ ಕಮ್ಮಾರ, ಬೇಂದ್ರೆ ಮುತ್ಯಾ,ಕವನಗಳು ಎನ್ನಬಹುದು.
‘ ಕಾವ್ಯ ಕಲ್ಪ ವಲ್ಲರಿ ‘ಯಲ್ಲಿ
ನಾಡು ನುಡಿಗೆ ಸಂಬಂಧಿಸಿದ ಕೆಲವು ಕವನಳು,ಕವಿಯ ದೇಶಪ್ರೇಮದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿವೆ, ಅಂತಹ ಕೆಲವು ಕವನಗಳನ್ನು ಹೆಸರಿಸುವುದಾದರೆ, ಕನ್ನಡ ಕಲಿಯೋ ನೀ ಬೇವರ್ಸಿ, ನಮ್ಮಮ್ಮ ಕನ್ನಡಮ್ಮ,ನೀಡೆನಗೆ
ಸುಕೃತವ, ಎನ್ನುವ ಕವನಗಳಲ್ಲಿ
ಕೊಟ್ರೇಶ ಜವಳಿ ಯವರ ಭಾಷಾ ಪ್ರೇಮ, ದೇಶಪ್ರೇಮದ
ಗುಣಗಳ ಪರಿಚಯವಾಗುತ್ತದೆ.
ಒಟ್ಟಾರೆಯಾಗಿ ಕಾವ್ಯ ಕಲ್ಪ ವಲ್ಲರಿ, ಕವನ ಸಂಕಲನದ ಕವನಗಳು, ಸತ್ವಪೂರ್ಣ ಮತ್ತು ಅರ್ಥ ಪೂರ್ಣ ಕವನಗಳಾಗಿ
ಓದುಗರನ್ನು ತನ್ನತ್ತ ಸೆಳೆಯುವಲ್ಲಿ , ಯಶಸ್ವಿಯಾಗಿದೆ, ಎನ್ನಬಹುದು, ಕೊಟ್ರೇಶ ಜವಳಿ ಅವರಿಂದ ಇನ್ನೂ ಉತ್ತಮ ಕವನಗಳು ರಚನೆಯಾಗಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರಿಗೂ ಒಂದು ಸ್ಥಾನ ಸಿಗಲಿ, ಎಂದು ಆಶಿಸುತ್ತಾ ನನ್ನ
ಬರಹಕ್ಕೆ ವಿರಾಮ ನೀಡುವೆ….
- ಶಿವಪ್ರಸಾದ್ ಹಾದಿಮನಿ, ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಕೊಪ್ಪಳ.
